05 ಮಾರ್ಚ್ 2023, ಮಂಗಳೂರು: ಯಕ್ಷಗಾನ ಒಂದು ವಿಶ್ವವಿಖ್ಯಾತ ಕಲೆ. ಗಾನ-ನೃತ್ಯ-ಮಾತುಗಾರಿಕೆ-ವೇಷ ಭೂಷಣಗಳ ಮೇಳೈಕೆ ಈ ಯಕ್ಷಗಾನ. ಇದರಲ್ಲಿ ಪದ್ಯ ಹೇಳುವ ಭಾಗವತರದ್ದು ನಿರ್ದೇಶಕರ ಕೆಲಸ. ನಿರ್ದೇಶನ – ಸಮಯಪ್ರಜ್ಞೆ – ಸೃಜನಶೀಲತೆ ಮುಂತಾದ ಗುಣಗಳು ಇದ್ದಲ್ಲಿ ಮಾತ್ರ ಒಬ್ಬ ಯಶಸ್ವೀ ಭಾಗವತರಾಗುವುದಕ್ಕೆ ಸಾಧ್ಯ. ನಮ್ಮ ನಡುವೆ ಇಂತಹ ನೂರಾರು ಭಾಗವತರಿದ್ದಾರೆ. ಅವರಲ್ಲಿ ಕೆಲವರು ಪ್ರಸಿದ್ಧಿಯನ್ನು ಪಡೆದರೆ, ಇನ್ನೂ ಕೆಲವರು ಎಲೆ ಮರೆಯ ಕಾಯಿಯಂತೆ ಯಕ್ಷಕಲಾ ಸೇವೆಯಲ್ಲಿ ತೊಡಗಿದ್ದಾರೆ. ಅಂತವರಲ್ಲಿ ಒಬ್ಬರು ಶ್ರೀ ಸಂತೋಷ್ ಕುಮಾರ್ ಆರ್ಡಿ.
19 .061984ರಂದು ಲಕ್ಷ್ಮಿ ಹಾಗೂ ಶ್ಯಾಮ ಪೂಜಾರಿ ಇವರ ಮಗನಾಗಿ ಜನನ. ೫ ನೇ ತರಗತಿವರೆಗೆ ವಿದ್ಯಾಭ್ಯಾಸ. ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಅದರ ಪ್ರಭಾವದಿಂದ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದರು. ಪ್ರಾಚಾರ್ಯ ಕೆ.ಪಿ.ಹೆಗಡೆ ಹಾಗೂ ಎನ್.ಜಿ ಹೆಗಡೆ ಇವರ ಯಕ್ಷಗಾನದ ಗುರುಗಳು.
ಗೋಳಿಗರಡಿ ಮೇಳದಲ್ಲಿ 1 ವರ್ಷ ಶ್ರುತಿ ಪೆಟ್ಟಿಗೆ ಕೆಲಸ ಮಾಡಿ, ಮಡಾಮಕ್ಕಿ ಮೇಳದಲ್ಲಿ ಸಂಗೀತಗಾರರಾಗಿ 1 ವರ್ಷ, ಸಿಗಂದೂರು ಮೇಳದಲ್ಲಿ ಸಹ ಭಾಗವತನಾಗಿ ಸೇರ್ಪಡೆಯಾಗಿ ಅದೇ ವರ್ಷ ಪ್ರಧಾನ ಭಾಗವತರಾದ ಹೊಡಬಟ್ಟೆ ವೆಂಕಟರಾಯರು ಅರೋಗ್ಯ ಸಮಸ್ಯೆಯಿಂದ ಹೊರ ಉಳಿದ ಕಾರಣ ಅವರ ಅನುಪಸ್ಥಿಯಲ್ಲಿ ಪ್ರಧಾನ ಭಾಗವತ ಸ್ಥಾನವನ್ನು ಸತತ 5 ವರ್ಷಗಳ ಕಾಲ ಸಮರ್ಥವಾಗಿ ನಿರ್ವಹಿಸಿ, ನಂತರ ಮಡಾಮಕ್ಕಿ ಮೇಳದಲ್ಲಿ 6 ವರ್ಷ, ಶನೀಶ್ವರ ಮೇಳದಲ್ಲಿ 3ವರ್ಷ, ಹಾಲಾಡಿ ಮೇಳದಲ್ಲಿ 1 ವರ್ಷ, ನೀಲಾವರ ಮೇಳದಲ್ಲಿ 1 ವರ್ಷ ತಿರುಗಾಟ ಮಾಡಿ ಯಕ್ಷಗಾನ ರಂಗದಲ್ಲಿ ಒಟ್ಟು 22 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ನೆಚ್ಚಿನ ಪ್ರಸಂಗಗಳು:- ಚಂದ್ರಹಾಸ ಚರಿತೆ, ಬ್ರಹ್ಮ ಕಪಾಲ, ಪಾಪಣ್ಣ ವಿಜಯ ಗುಣಸುಂದರಿ, ಶನೀಶ್ವರ ಮಹಾತ್ಮೆ, ಚೆಲುವೆ ಚಿತ್ರಾವತಿ, ಸತಿ ಸುಶೀಲೆ, ನಾಗಶ್ರೀ, ಭಸ್ಮಾಸುರ ಮೋಹಿನಿ, ಬೇಡರ ಕಣ್ಣಪ್ಪ, ಮಣಿಕಂಠ ವಿಜಯ, ಚತುರ್ಜನ್ಮ ಮೋಕ್ಷ ಇತ್ಯಾದಿ.
ಮೋಹನ, ಸಾವೇರಿ, ತೋಡಿ, ಕಲ್ಯಾಣಿ, ಕಾಂಬೋದಿ, ಸಿಂಧೂ ಭೈರವಿ ಇವರ ನೆಚ್ಚಿನ ರಾಗಗಳು. ಕಾಳಿಂಗ ನಾವುಡ, ಕೆ.ಪಿ ಹೆಗಡೆ, ಪರಮೇಶ್ವರ ನಾಯ್ಕ್ ಕಾನುಗೋಡು, ಬಲಿಪ ನಾರಾಯಣ ಭಾಗವತರು, ಪದ್ಯಾಣ ಗಣಪತಿ ಭಟ್ ಇವರ ನೆಚ್ಚಿನ ಭಾಗವತರು. ಚೆಂಡೆಯಲ್ಲಿ ದಿವಂಗತ ಚಂದ್ರಯ್ಯ ಆಚಾರ್ಯ ಹಾರೆಕೊಪ್ಪ, ಹೊಸಪಟ್ಟಣ ಶಾಂತಾರಾಮ ಭಂಡಾರಿ. ಮದ್ದಳೆಯಲ್ಲಿ ಕೃಷ್ಣ ಕುಮಾರ್ ಸಂತೆಕಟ್ಟೆ ಹಾಗೂ ಪ್ರಸ್ತುತ ಈಗಿನ ಎಲ್ಲಾ ಹಿರಿಯ ಕಿರಿಯ ಚೆಂಡೆ ಮದ್ದಳೆ ವಾದಕರು ಇವರು ನೆಚ್ಚಿನವರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:- ಯಕ್ಷಗಾನಕ್ಕೆ ಒಳ್ಳೆಯ ಪ್ರೋತ್ಸಾಹವಿದೆ, ವಿಶ್ವ ವ್ಯಾಪಿಯಾಗಿ ಯಕ್ಷಗಾನ ಪಸರಿಸಿದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:- ಪುರಾಣ ಪ್ರಸಂಗ ಅಧ್ಯಯನ ಹಾಗೂ ಹೊಸತನದಲ್ಲಿ ರಂಗ ಪ್ರಸ್ತುತಿ.
ಸಂಗೀತಗಾರನಾಗಿದ್ದಾಗಲೇ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಿಕ್ಕ ಗೌರವ ಸಮ್ಮಾನ, ಗೆಜ್ಜೆಗಿರಿ ಕ್ಷೇತ್ರದಲ್ಲಿ ದೊರೆತ ಗೌರವ ಸಮ್ಮಾನ, ಬೆಂಗಳೂರು ಕಲಾಕ್ಷೇತ್ರದಲ್ಲಿ ಹಾಗೂ ಹತ್ತು ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ನೋಡಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಯಕ್ಷಗಾನ ಕುರಿತ ಚಿಂತನೆ, ಅಧ್ಯಯನ, ಕೃಷಿ ಕೆಲಸ ಇವರ ಹವ್ಯಾಸಗಳು.
ಎಂಟು ವರ್ಷಗಳ ಕಾಲ ಕಾರಣಾಂತರಗಳಿಂದ ಯಕ್ಷಗಾನ ರಂಗದದಿಂದ ದೂರ ಇದ್ದೆ. ಈಗ ಪುನಃ ಯಕ್ಷಗಾನ ರಂಗಕ್ಕೆ ಬಂದಿದ್ದೇನೆ. ಭಾಗವತಿಕೆ ಮಾಡುವಾಗ ಏನೇ ತಪ್ಪು ಇದ್ದರೂ ಅದನ್ನು ನನ್ನ ಬಳಿ ಬಂದು ಹೇಳಿ, ಸರಿ ಪಡಿಸಿ ರಂಗದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಹಾಗೂ ಕಲಾಭಿಮಾನಿಗಳ ಮತ್ತು ನಿಮ್ಮೆಲ್ಲರ ಸಲಹೆ ಸಹಕಾರವು ಯಾವತ್ತೂ ಇರಲಿ ಎಂದು ಹೇಳುತ್ತಾರೆ ಸಂತೋಷ್ ಕುಮಾರ್ ಆರ್ಡಿ.
Photos by:- Sumanth Photography
- ಶ್ರವಣ್ ಕಾರಂತ್ ಕೆ, ಶಕ್ತಿನಗರ, ಮಂಗಳೂರು.