ಬದಿಯಡ್ಕ : 2024ನೇ ಸಾಲಿನ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಧನ್ಯಶ್ರೀ ಸರಳಿ ಇವರು ಬರೆದ ‘ಜೀವನ ಅಮೃತ ಸಮಾನ’ ಎಂಬ ಕತೆಗೆ ಪ್ರಶಸ್ತಿ ಲಭಿಸಿದ್ದು, ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ ಮಹಿಳಾ ಘಟಕದ ನೇತೃತ್ವದಲ್ಲಿ ಹವ್ಯಕ ಭಾಷೆಯಲ್ಲಿ ನಡೆಯುತ್ತಿರುವ ಕಥಾ ಸ್ಪರ್ಧೆ ಇದಾಗಿದೆ. ಒಟ್ಟು 18 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಕಥಾ ಸ್ಪರ್ಧೆಯನ್ನು ಹಿರಿಯ ಲೇಖಕಿ, ಸಾಹಿತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಇವರು ಕಳೆದ 24 ವರ್ಷಗಳಿಂದ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕಥಾವೇದಿಕೆಯ ಅಧ್ಯಕ್ಷೆಯಾಗಿ ಈಶ್ವರಿ ಬೇರ್ಕಡವು ನೇತೃತ್ವ ವಹಿಸಿದ್ದು, ಅಧ್ಯಾಪಕ ನಾರಾಯಣ ಹೆಗಡೆ ಕುಂಬಳೆ, ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಹರಿಕೃಷ್ಣ ಭರಣ್ಯ, ನಿವೃತ್ತ ಅಧ್ಯಾಪಕ ಬಾಲ ಮಧುರಕಾನನ ಇವರುಗಳು ಮೌಲ್ಯಮಾಪನಗೈದಿರುತ್ತಾರೆ.
ಪ್ರಶಸ್ತಿ ಪುರಸ್ಕೃತರಾದ ಧನ್ಯಶ್ರೀ ಸರಳಿ :
ಕಾಸರಗೋಡು ಜಿಲ್ಲೆಯ ಬದಿಯಡ್ಕ ಕುಂಟಿಕಾನ ಸರಳಿ ಮನೆಯ ಛಾಯಾಗ್ರಾಹಕ, ಪತ್ರಕರ್ತ ಶ್ಯಾಮಪ್ರಸಾದ ಸರಳಿ ಇವರ ಪತ್ನಿಯಾಗಿರುವ ಧನ್ಯಶ್ರೀ ಇವರು ಕವಿತೆ, ಕತೆಗಳನ್ನು ಬರೆಯುವ ಹವ್ಯಾಸವಿರಿಸಿಕೊಂಡಿದ್ದಾರೆ. ವಿವಿಧ ದಿನಪತ್ರಿಕೆಗಳಲ್ಲಿ ಇವರು ಬರೆದ ಲೇಖನಗಳು, ಪುಸ್ತಕ ಅವಲೋಕನಗಳು ಪ್ರಕಟವಾಗಿದ್ದು, ಅನೇಕ ಕವಿಗೋಷ್ಠಿಗಳಲ್ಲೂ ಇವರು ಭಾಗವಹಿಸಿದ್ದಾರೆ.
ಸುಳ್ಯ ತಾಲೂಕು ಐವರ್ನಾಡು ನಿಡುಬೆ ಮನೆಯ ಚೈತನ್ಯ ಬಿ. ಇವರು ಬರೆದ ‘ಅಬ್ಬೆಕಥೆ’ ದ್ವಿತೀಯ ಬಹುಮಾನವನ್ನು ಹಾಗೂ ವೇಣೂರು ಅಂಡಿಂಜೆ ಕುಂಡ್ಯಡ್ಕ ಸರಸ್ವತಿ ಆರ್.ಜಿ. ಭಟ್ ಬರೆದ ‘ಹುಣ್ಣಿಮೆ ಚಂದ್ರ’ ಕತೆಗೆ ತೃತೀಯ ಬಹುಮಾನ ಪಡೆದಿರುತ್ತದೆ.