21 ಮಾರ್ಚ್ 2023, ಮಂಗಳೂರು: ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸುತ್ತಿರುವ ಸಂಗೀತ ಪರಿಷತ್ತಿನ ಹೆಮ್ಮೆಯ ಸದಸ್ಯರು ಹಾಗೂ ಕಲಾಪೋಷಕರಾದ ಪ್ರಭಾಚಂದ್ರಮಯ್ಯರು ಈ ತಿಂಗಳಲ್ಲಿ ಅಪರೂಪ ಎಂಬಂತೆ “ಯಕ್ಷಗಾನ ಹಾಡುಗಳ” ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ 18-03-2023ರಂದು ಕದ್ರಿ ಕಂಬಳದ ಗೋಕುಲ ರೆಸಿಡೆನ್ಸಿಯಲ್ಲಿ ಆಯೋಜಿಸಿದರು.
ಗೊತ್ತು ಗುರಿ ಇಲ್ಲದ ಧೀರ್ಘ ಆಲಾಪನೆಗಳು, ಪುನರಾವರ್ತನ, ಯಕ್ಷಗಾನ ಹಾಡುಗಳ ಹೆಸರಿನಲ್ಲಿ ಜಾನಪದ, ಸಿನೆಮಾ, ಭಾವಗೀತೆಗಳನ್ನು “ಗಾನ ವೈಭವ” ಎಂಬ ಹೆಸರಿನಲ್ಲಿ ಕೇಳಿ ಕೇಳಿ ರೋಸಿ ಹೋದ ಮನಸ್ಸಿಗೆ ಪುತ್ತಿಗೆ ಹೊಳ್ಳರ ಪರಂಪರೆಯ ಯಕ್ಷಗಾನಯ ಶೈಲಿಯ ಹಾಡುಗಳ ಸಿಂಚನ ಮನಸ್ಸಿಗೆ ಮುದ ನೀಡಿತು. ಹಾಡುಗಳ ನಡುವೆ ಆ ಹಾಡಿನ ತಾಳ ಹಾಗೂ ರಾಗದ ಔಚಿತ್ಯದ ಬಗ್ಗೆ ಕೊಟ್ಟ ವಿವರಣೆ ಶ್ರೋತ್ರುಗಳ ಜ್ಞಾನ ಭಂಡಾರವನ್ನು ಹೆಚ್ಚಿಸಿತು. ಹೊಳ್ಳರು, ಅಗರಿ, ಬಲಿಪ, ಕಡತೋಕರ ಶೈಲಿಯನ್ನು ಉದಾಹರಣೆ ಸಹಿತ ಹಾಡಿತೋರಿಸಿದರು. ಉಳಿತ್ತಾಯರು ಭಾಗವತರ ಮನೋಧರ್ಮಕ್ಕೆ ತಕ್ಕಂತೆ ಮದ್ದಳೆ ನುಡಿಸಿ ರಸಿಕರ ಮನಸ್ಸು ಗೆಲ್ಲುವ ಜತೆ, ಹಿತಮಿತವಾದ ಮಾತುಗಳ ಮೂಲಕ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿ ಸಹಾ ಹೊತ್ತುಕೊಂಡರು.
ಹೆಚ್ಚಿನ ಶ್ರೋತ್ತುಗಳು ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿರುವುದರಿಂದ, ಶಾಸ್ತ್ರೀಯ ಸಂಗೀತದ ರಾಗ ಪ್ರಸ್ತುತಿ ಹಾಗೂ ಯಕ್ಷಗಾನ ಹಾಡುಗಳ ರಾಗ ಪ್ರಸ್ತುತಿಗೂ ಇರುವ ಸಾಮ್ಯತೆ ಹಾಗೂ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಯಿತು.
ಶ್ರೋತ್ರುವರ್ಗದಲ್ಲಿ ಡಾ.ಜೋಶಿ, ವಿದುಷಿ ಪ್ರತಿಭಾ ಸಾಮಗ, ಕುಕ್ಕವಳ್ಳಿ ಮುಂತಾದ ವಿದ್ವಾಂಸರ ಜತೆ ತುಂಬಾ ಕಲಾವಿದರೂ ಇದ್ದುದರಿಂದ, ಪುತ್ತಿಗೆ/ಉಳಿತ್ತಾಯರು ತುಂಬಾ ಮುತುವರ್ಜಿಯಿಂದ (They were at their best) ಕಾರ್ಯಕ್ರಮ ನಡೆಸಿ ಕೊಟ್ಟರು.
ಒಟ್ಟಿನಲ್ಲಿ ಪರಂಪರೆಯ ಯಕ್ಷಗಾನ ಹಾಡುಗಳು, ನಡುನಡುವೆ ವಿವರಣೆ, ಸಂವಾದವಿದ್ದುದರಿಂದ ಒಂದು ವಿಧದ ಆತ್ಮೀಯ ವಾತಾವರಣ ನಿರ್ಮಾಣವಾಗಿ, ಈ ಕಾರ್ಯಕ್ರಮ ತುಂಬಾ ದಿನ ನೆನಪಿನಲ್ಲಿ ಇರುವಂತೆ ನಡೆಯಿತು. ಯಕ್ಷಗಾನದ ಕೆಲವು ಅಪೂರ್ವ ಹಾಡುಗಳಿಂದ ರಸಿಕರ ಮನಸ್ಸನ್ನು ತಣಿಸುವ ಜತೆ, ಪುಷ್ಕಳ ಉಪಹಾರದ ವ್ಯವಸ್ಥೆ ಮಾಡಿ ಮಯ್ಯರು ಸಭಿಕರ ಹೊಟ್ಟೆಯನ್ನು ತಣಿಸಿ ತಮ್ಮ ಧಾರಾಳ ಮನಸ್ಸನ್ನು ಅನಾವರಣ ಮಾಡಿದರು.
ಪ್ರಭಾಚಂದ್ರ ಮಯ್ಯ ದಂಪತಿಗಳು ಹಾಗೂ ಅವರ ಕುಟುಂಬದವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಅಭಿವಂದನೆಗಳು.
- ಪಿ.ವಿ. ಶೆಣೈ, ಸಂಗೀತ ಪರಿಷತ್ ಸದಸ್ಯರು