ಉಡುಪಿ : ಹಿರಿಯ ಸಾಹಿತಿ, ರಂಗಕರ್ಮಿ ಹಾಗೂ ವಿಮರ್ಶಕಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಇವರು 2025ನೇ ಸಾಲಿನ ಶ್ರೀಯುತ ಈಶ್ವರಯ್ಯ ಅನಂತಪುರ ಇವರ ಹೆಸರಿನಲ್ಲಿ ಕೊಡಲ್ಪಡುವ ‘ಕಲಾ ಪ್ರವೀಣ’ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
‘ಕಲಾವಿಹಾರಿ’ ಶ್ರೀಯುತ ಎ. ಈಶ್ವರಯ್ಯ ಅವರ ಹೆಸರನಲ್ಲಿ ಅವರ ಕುಟುಂಬವು ರಾಗ ಧನ ಉಡುಪಿ ಸಂಸ್ಥೆಯ ಮೂಲಕ ವರ್ಷಪ್ರತಿ ಕೊಡಮಾಡುವ ‘ಕಲಾ ಪ್ರವೀಣ’ ಪ್ರಶಸ್ತಿಗೆ ಈ ಬಾರಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಇವರು ಆಯ್ಕೆಯಾಗಿರುತ್ತಾರೆ ಎಂದು ಶ್ರೀ ಈಶ್ವರಯ್ಯ ಅನಂತಪುರ ಅವರ ಸಹೋದರ ಶ್ರೀಕೃಷ್ಣಯ್ಯ ಅನಂತಪುರ, ಮಗ ಶೈಲೇಂದ್ರ ಅನಂತಪುರ ಮತ್ತು ಕುಟುಂಬದವರು ತಿಳಿಸಿರುತ್ತಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.
ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ :
ಕನ್ನಡ ಸಾಹಿತ್ಯ ಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ ನಾಟಕಗಳ ಖ್ಯಾತ ವಿಮರ್ಶಕಿಯೂ ಕೂಡ. ಮಾತ್ರವಲ್ಲ ಕೂಚಿಪುಡಿ ನೃತ್ಯ ಕಲಾವಿದೆ ಮತ್ತು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. ಕನ್ನಡ ಎಂ.ಎ.ಯಲ್ಲಿ ಡಿಸ್ಟಿಂಕ್ಷನ್ ಪಡೆದ ಇವರು, ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು, ಕಳೆದ 55 ವರ್ಷಗಳಿಂದ ಸಾಹಿತ್ಯ ಕೃಷಿ ನಡೆಸುತ್ತಾ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಖ್ಯಾತಿ ಇವರಿಗಿದೆ. ಜನಪ್ರಿಯ ಲೇಖಕಿಯಾದ ಇವರು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಸುಮಾರು 950ಕ್ಕೂ ಮಿಗಿಲಾದ ನಾಟಕ-ನೃತ್ಯ-ಸಂಗೀತ ವಿಮರ್ಶಾ ಲೇಖನಗಳು ಪ್ರಕಟಣೆಗೊಂಡ ಹಿರಿಮೆ ಇವರದ್ದು. ಆಕಾಶವಾಣಿ ಮತ್ತು ದೂರದರ್ಶನದಲ್ಲೂ ಮಾನ್ಯತೆ ಪಡೆದ ಕಲಾವಿದೆ ಇವರು. ಕಳೆದ 48 ವರ್ಷಗಳಿಂದ ತಮ್ಮದೇ ಆದ ‘ಸಂಧ್ಯಾ ಕಲಾವಿದರು’ ಎಂಬ ಹವ್ಯಾಸಿ ನಾಟಕ ತಂಡವನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ‘ಸಂಧ್ಯಾ ಪತ್ರಿಕೆ’ ಎಂಬ ಸಾಂಸ್ಕೃತಿಕ ಅಂತರ್ಜಾಲ ಪತ್ರಿಕೆಯನ್ನೂ ಹುಟ್ಟು ಹಾಕಿ ಮುನ್ನಡೆಸುತ್ತಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಸಂದ ಪ್ರಶಸ್ತಿಗಳು ಅನೇಕ. ಬೆಂಗಳೂರು ಮಹಾನಗರ ಪಾಲಿಕೆಯ ‘ಕೆಂಪೇಗೌಡ ಪ್ರಶಸ್ತಿ’, ‘ಆರ್ಯಭಟ’ ಅಂತರರಾಷ್ಟ್ರೀಯ ಪ್ರಶಸ್ತಿ, ‘ಅತ್ತಿಮಬ್ಬೆ ಪ್ರಶಸ್ತಿ’, ‘ಗೊರೂರು ಪ್ರಶಸ್ತಿ’, ‘ರಾಘವೇಂದ್ರ ಸದ್ಭಾವನಾ ಪ್ರಶಸ್ತಿ’, ‘ಕರ್ನಾಟಕ ದಸರಾ ಪ್ರಶಸ್ತಿ’, ‘ಕನ್ನಡ ಲೇಖಕಿಯರ ಸಂಘದ ಪುಸ್ತಕ ಪ್ರಶಸ್ತಿ’, ‘ಪಂಜೆ ಮಂಗೇಶರಾಯರ ಪ್ರಶಸ್ತಿ’, ಕೆನರಾ ಬ್ಯಾಂಕ್ ‘ ಮಹಿಳಾ ಸಾಧಕಿ’ ಪ್ರಶಸ್ತಿ, ‘ಅಬ್ದುಲ್ ಕಲಾಮ್ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲೆ ಕೊಡಮಾಡುವ ’ಕನ್ನಡ ಸೇವಾ ರತ್ನ’ ಪ್ರಶಸ್ತಿ, ಮಂಗಳೂರಿನ ಸಾಧನಾ ಸಾಂಸ್ಕೃತಿಕ ಪ್ರತಿಷ್ಟಾನದಿಂದ ‘ಸಾಧನಾ’ ಪ್ರಶಸ್ತಿ, ಚಂದ್ರಕಲಾ ಸ್ವರಲಿಪಿ ಪ್ರತಿಷ್ಟಾನ’ದ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿ, ‘ಶಿವಪ್ರಿಯ’ ಅಂತರರಾಷ್ಟ್ರೀಯ ನೃತ್ಯ ಸಂಸ್ಥೆಯ ‘’ಸಾಹಿತ್ಯ ಭಾರತಿ’’ ಮತ್ತು ‘ವಾಕ್ಸ್ವರಸ್ವತಿ’ ಪ್ರಶಸ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಸಂದಿವೆ ಮಹಾಸಭೆಯ ’ವಿಪ್ರ ಸಾಧಕಿ’’ ಪ್ರಶಸ್ತಿ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಪಂಕಜಶ್ರೀ’ ಹಾಗೂ ‘ನಾರೀಶಕ್ತಿ’ ಪ್ರಶಸ್ತಿ, ‘ವಿಶ್ವೇಶ್ವರಯ್ಯ ಜೀವಮಾನ ಸಾಧನೆ ಪ್ರಶಸ್ತಿ’, ಅಖಿಲ ಕರ್ನಾಟಕ ವಿಪ್ರ ವನಿತಾ ಸೇವಾ ಪ್ರತಿಷ್ಠಾನದಿಂದ ‘ಗಾರ್ಗಿ’ ಪ್ರಶಸ್ತಿ ಮತ್ತು ಕಲಾಸೇವೆಗೆ ‘ನಾಟ್ಯಸಂಪದ’ ಸಂಸ್ಥೆಯಿಂದ ‘ಕಲಾಭಿಸಾರಿಕೆ’ ಪ್ರಶಸ್ತಿ, ಸಂಗೀತ ಸಂಭ್ರಮ ಸಂಸ್ಥೆಯಿಂದ ‘ಸಂಭ್ರಮ’ಪ್ರಶಸ್ತಿ ಹಾಗೂ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಗಳು ದೊರಕಿವೆ. ದೂರದರ್ಶನದ ನೃತ್ಯ ಕಲಾವಿದರ ಆಯ್ಕೆ ಆಡಿಶನ್ ಸಮಿತಿ ಸದಸ್ಯರೂ ಆಗಿರುವ ಇವರು 2016ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ವಹಿಸಿದ ಗೌರವ ಪಡೆದಿದ್ದಾರೆ.