ಮಂಗಳೂರು : ಸಪ್ತಕ ಬೆಂಗಳೂರಿನ ನೇತೃತ್ವದಲ್ಲಿ ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಹಾಗೂ ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗ ಹಾಗೂ ಮಂಗಳೂರಿನ ಹತ್ತಾರು ಹಿಂದೂಸ್ಥಾನಿ ಸಂಗೀತ ಸಂಸ್ಥೆಗಳ ಸಹಕಾರದಲ್ಲಿ ದಿನಾಂಕ 13 ಏಪ್ರಿಲ್ 2025ರಂದು ಮಂಗಳೂರಿನ ರಾಮಕೃಷ್ಣ ಮಠದ ಸಭಾಭವನದಲ್ಲಿ ದೇಶ ವಿದೇಶಗಳಲ್ಲಿ ತಮ್ಮ ವಿಶಿಷ್ಟ, ವಿಶೇಷ ತಬಲಾ ವಾದನದಿಂದ ಪ್ರಖ್ಯಾತರಾದ ತಮ್ಮ ಉದಾತ್ತ ನಡೆನುಡಿಯಿಂದ ಅಜಾತ ಶತ್ರುವಾಗಿಯೂ ಅಪಾರ ಅಭಿಮಾನಿಗಳನ್ನು ಪಡೆದಿರುವ ಮಂಗಳೂರಿನವರೇ ಆದ ಪಂಡಿತ ಓಂಕಾರ ಗುಲ್ವಾಡಿ ಇವರನ್ನ ಪ್ರೀತಿ, ವಿಶ್ವಾಸ, ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಪ್ರತಿಭಾವಂತ ಯುವ ಕಲಾವಿದರಾದ ಅಂಕುಶ ನಾಯಕ ಇವರ ಸಿತಾರ್ ಹಾಗೂ ಕಾರ್ತಿಕ ಭಟ್ಟ ಇವರ ಕೊಳಲು ವಾದನ ಜುಗಲ್ಬಂದಿಗೆ ಹೇಮಂತ ಜೋಶಿಯವರ ತಬಲಾ ವಾದನ ಹಾಲು ಜೇನಿನಂತೆ ಸೇರಿ ಶೋತೃಗಳ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ನಂತರ ಧಾರವಾಡದ ಪಂಡಿತ ವೆಂಕಟೇಶಕುಮಾರ ಇವರ ಅಧ್ಯಕ್ಷತೆಯಲ್ಲಿ ಓಂಕಾರ ಗುಲ್ವಾಡಿ ಇವರನ್ನು ಹುಟ್ಟೂರಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಒಂದು ಅಭೂತಪೂರ್ವವಾದ ಸನ್ಮಾನ ಕಾರ್ಯಕ್ರಮ ಜರುಗಿತು. ಸನ್ಮಾನಿತರಾದ ಗುಲ್ವಾಡಿಯವರು ಅತ್ಯಂತ ಭಾವುಕರಾಗಿ ಇದೆಲ್ಲವೂ ನನ್ನಿಂದ ಸಾಧ್ಯ ಆದದ್ದು, ವಿದ್ಯಾ ಗುರುಗಳಾದ ಪಂಡಿತ ತಾರಾನಾಥ ಹಾಗೂ ಆಧ್ಯಾತ್ಮ ಗುರುಗಳಾದ ಪಂಡಿತ ಚಿದಾನಂದ ನಗರಕರ ಇವರು ಕಲಿಸಿದ, ಆಡಿದ ಕಿವಿಮಾತಿನಿಂದ, ತೋರಿದ ಸನ್ಮಾರ್ಗದಿಂದ ಸಾಧ್ಯ ಆಯಿತು ಎಂದು ವಿನಂಬ್ರಭಾವದಿಂದ ನುಡಿದರು.
ಸಪ್ತಕದ ಜಿ.ಎಸ್. ಹೆಗಡೆಯವರು ಈ ಕಾರ್ಯಕ್ರಮವನ್ನು ಹೀಗೆ ಏರ್ಪಡಿಸಬೇಕು ಎಂಬ ಬಹು ದಿನದ ಆಸೆ ಕೈಗೂಡಿದ್ದು ದೈವ ಕೃಪೆ ಹಾಗೂ ಸಹೃದಯದರ ಸಹಕಾರದಿಂದ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ವೆಂಕಟೇಶ ಕುಮಾರ ಇವರು ಓಂಕಾರ ಗುಲ್ವಾಡಿಯರ ತಬಲಾ ನುಡಿಸಾಣಿಕೆಯ ವಿಶೇಷತೆಯನ್ನು ವಿಶ್ಲೇಷಿಸಿ, ಯಾಕೆ ಗಾಯಕರಾಗಲಿ, ವಾದಕರಾಗಲಿ ಇವರನ್ನೇ ಸಾಥ್ ಸಂಗತ್ ಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ವಿವರಿಸಿದರು. ಅಷ್ಟೇ ಸಮರ್ಥವಾಗಿ ಸ್ವತಂತ್ರ ತಬಲಾ ವಾದನದಲ್ಲಿಯೂ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುತ್ತಿರುವ ಗುರುವಾಗಿಯೂ ಗುಲ್ವಾಡಿ ಅವರು ಅಭಿನಂದನಾರ್ಹರು, ಅನುಕರಣೀಯರು ಹೌದು ಅಂತ ಹೇಳಿದರು. ಓಂಕಾರ ಗುಲ್ವಾಡಿ ಅವರ ಕುರಿತ ಚಿಕ್ಕದಾದ ಸಾಕ್ಷ್ಯಚಿತ್ರ ಪ್ರದರ್ಶನವು ನಡೆಯಿತು.
ನಂತರ ಸುಮಾರು ಎರಡು ಘಂಟೆಗಳ ಕಾಲ ನಡೆದ ಪಂಡಿತ್ ವೆಂಕಟೇಶ ಕುಮಾರ ಅವರ ಅಮೋಘ ಗಾಯನಕ್ಕೆ ಪಂಡಿತ್ ಓಂಕಾರ ಗುಲ್ವಾಡಿ ಇವರ ತಬಲಾ ಹಾಗೂ ಪಂಡಿತ್ ಸುಧೀರ ನಾಯಕ ಅವರ ಹಾರ್ಮೋನಿಯಂ ವಾದನ ಶ್ರೋತುಗಳಿಗೆ ದಿವ್ಯಾನಂದ ನೀಡಿತು. ಜೂನಿಯರ್ ಶಂಕರ ಇಂದ್ರಜಾಲ ಪ್ರವೀಣ ತೇಜಸ್ವಿ ಶಂಕರ ಇವರು ಕಾರ್ಯಕ್ರಮವನ್ನು ಆಕರ್ಷಕವಾಗಿ ನಿರ್ವಹಿಸಿ ವಂದನಾರ್ಪಣೆಯನ್ನೂ ಮಾಡಿದರು.
– ಸಂಗೀತ ಪ್ರಿಯ