ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡಮಿ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ವಾನ್ ಶ್ರೀ ಸುಬ್ರಾಯ ಮಾಣಿ ಭಾಗವತರ್ ಸಂಸ್ಮರಣಾ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 17 ಮೇ 2025ರಂದು ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶ ತೀರ್ಥ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದ ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ “ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ವಿದ್ವಾನ್ ಶ್ರೀ ಸುಬ್ರಾಯ ಮಾಣಿ ಭಾಗವತರ್ ಇವರ ಕೊಡುಗೆ ಅಪಾರವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತದ ಕಲಿಕೆಗೆ ಅವಕಾಶ ಸೃಷ್ಟಿಸಿದ ಶ್ರೇಷ್ಠ ಗುರುಗಳು” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ಮಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು “ಹಿರಿಯ ಸಂಗೀತ ವಿದ್ವಾಂಸರ ಸ್ಮರಣೆ ನಿರಂತರವಾಗಿ ನಡೆಯಬೇಕು” ಎಂದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಶುಭ ಹಾರೈಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ಡಾ. ಅರುಣ್ ಕುಮಾರ್ ಎಸ್.ಆರ್., ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ, ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀನಿವಾಸ್ ಭಾಗವತರ್ ಪಡುಬಿದ್ರೆ ಮುಂತಾದವರು ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಚಿತ್ರಾಪುರ ವಂದಿಸಿದರು. ಆತ್ರೇಯ ಕೃಷ್ಣ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ತನ್ಮಯೀ ಉಪ್ಪಂಗಳ ವಯಲಿನ್, ನಂದನ್ ಕಶ್ಯಪ್ ಮೃದಂಗದಲ್ಲಿ ಮತ್ತು ಮೇಧಾ ಉಡುಪ ತಂಬೂರದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಈ ಬಾರಿಯ ‘ಯುವಕಲಾಮಣಿ’ ವಾರ್ಷಿಕ ಪ್ರಶಸ್ತಿಯನ್ನು ಆತ್ರೇಯ ಕೃಷ್ಣ ಇವರಿಗೆ ನೀಡಲಾಗುವುದೆಂದು ಪ್ರಕಟಿಸಲಾಯಿತು.