ಉಡುಪಿ : ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಧಾರವಾಡದ ಲೇಖಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿಯು ರೂ.10,000/- ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ಡಾ. ಪ್ರಜ್ಞಾ ಮತ್ತಿಹಳ್ಳಿ ಎಂ.ಕಾಂ., ಎಂ.ಫಿಲ್., ಎಂ.ಬಿ.ಎ., ಪಿ.ಎಚ್.ಡಿ ಪದವೀಧರರಾಗಿದ್ದು, ವಾಣಿಜ್ಯಶಾಸ್ತ್ರ ಉಪನ್ಯಾಸಕಿ, ಪ್ರಾಧ್ಯಾಪಕಿಯಾಗಿ ಹಲವಾರು ಸರಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಜ್ಞಾ ಮತ್ತಿಹಳ್ಳಿ ಇವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಜನಶೀಲ ಪ್ರಯೋಗ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಥೆ, ಕಾವ್ಯದ ಜೊತೆಗೆ ಹಾಸ್ಯ ಲೇಖನಗಳನ್ನು ಬರೆದಿರುವ ಇವರಿಗೆ ನಾಟಕ ರಚನೆ ಕೂಡ ಆಸಕ್ತಿಯ ಕ್ಷೇತ್ರ. ಇವರ ಕಥೆಗಳು ಮತ್ತು ಕವನಗಳು ನಾಡಿನ ವಿವಿಧ ಪತ್ರಿಕೆಗಳ ವಿಶೇಷಾಂಕಗಳ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ನುರಿತ ಯಕ್ಷಗಾನ ಕಲಾವಿದೆಯೂ ಆಗಿರುವ ಇವರು ಅದಕ್ಕಾಗಿ ಶಾಸ್ತ್ರೀಯ ತರಬೇತಿ ಪಡೆದಿದ್ದಾರೆ. ಪ್ರಕಟಿತ ಕೃತಿಗಳು – ಹುಡುಗಿ ನಕ್ಕಾಗ, ದೊನ್ನೆ ದೀಪದ ಸಾಲು, ಕಾಲನ ಕಾಲಂದುಗೆ (ಕವನ ಸಂಕಲನಗಳು), ದೇವರ ಸ್ವಂತ ನಾಡಿನಲ್ಲಿ (ಪ್ರವಾಸ ಕಥನ), ಮಿನುಗೆಲೆ ನಕ್ಷತ್ರ (ಹಾಸ್ಯ ಪ್ರಬಂಧಗಳು), ಗಂಧಗಾಳಿ (ಅಂಕಣ ಬರಹಗಳು).