12 ಏಪ್ರಿಲ್ 2023, ಮಂಗಳೂರು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಮತ್ತು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಕುತ್ತಾರು ಇವರ ಸಹಯೋಗದಲ್ಲಿ ದಿನಾಂಕ 11-04-2023ರಂದು ನಡೆದ ತುಳು ಹರಿಕಥೆ ಉಚ್ಚಯ-2023ರ ಐದನೇ ದಿನ ಸಮಾರೋಪ ಸಮಾರಂಭವನ್ನು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಉದ್ಘಾಟಿಸಿ ಮಾತನಾಡುತ್ತಾ “ಪುರಾಣ ಕಾಲದ ನಾರದಮುನಿಗಳಿಂದ ತೊಡಗಿ ದಾಸವರೇಣ್ಯರಾದ ಕನಕ – ಪುರಂದರರವರೆಗೆ ದೇವರ ಮಹಿಮೆಗಳನ್ನು ಕೊಂಡಾಡುತ್ತಾ ಭಕ್ತಿ ಪರಂಪರೆಯನ್ನು ಬೆಳಗಿದ ಹರಿದಾಸರುಗಳು ಪೂಜನೀಯರು. ಹರಿಕಥೆಯಿಂದ ಭಕ್ತಿ, ಜ್ಞಾನ ಎರಡೂ ಪಸರಿಸುತ್ತದೆ. ನಮ್ಮ ತುಳು ಭಾಷೆಯಲ್ಲಿ ನಡೆದ ಪಂಚಪರ್ವ ಹರಿಕಥಾ ಉತ್ಸವ ಹರಿಕಥೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು” ಎಂದು ಹೇಳಿದರು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾದ ಶ್ರೀ ಕೆ.ಟಿ.ಸುವರ್ಣರವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ತುಳುವ ಸಿರಿ ಟ್ರಸ್ಟ್(ರಿ.) ಕುಡ್ಲ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಹರಿದಾಸರಿಗೆ ಮಾಲಾರ್ಪಣೆ ಮಾಡಿ ಶಾಲು ಹೊಂದಿಸಿ ಸ್ವಾಗತಿಸಿದರು. ಶ್ರೀಮತಿ ಸೌಮ್ಯ ರವೀಂದ್ರ ಶೆಟ್ಟಿ, ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಪವಿತ್ರ ಕುಮಾರ್ ಗಟ್ಟಿ, ಟ್ರಸ್ಟ್ ನ ಕೋಶಾಧಿಕಾರಿ ಕಲಾಸಾರಥಿ ತೋನ್ಸೆ ಪುಷ್ಕಳ್ ಕುಮಾರ್, ತುಳುವ ಸಿರಿ ಟ್ರಸ್ಟ್ ನ ಗೌರವ ಸಲಹೆಗಾರ ಕೆ. ರವೀಂದ್ರ ರೈ ಕಲ್ಲಿಮಾರ್, ಉಪಾಧ್ಯಕ್ಷ ವಿದ್ಯಾಧರ ಶೆಟ್ಟಿ ಮತ್ತು ಸುಧಾ ಸುರೇಶ್, ಜತೆ ಕಾರ್ಯದರ್ಶಿ ರವಿಕುಮಾರ್ ಕೋಡಿ, ಟ್ರಸ್ಟ್ ನ ಸಂಚಾಲಕರಾದ ಅನಂತ ಕೃಷ್ಣ ಯಾದವ್, ಸುರೇಶ್ ಶೆಟ್ಟಿ ಅಂಬ್ಲಮೊಗರು, ಸಂಜೀವ ಶೆಟ್ಟಿ ಅಂಬ್ಲಮೊಗರು, ಎನ್.ಟಿ. ರಾಮಕೃಷ್ಣ ನಾಯಕ್ ಉಪಸ್ಥಿತರಿದ್ದರು.
ತುಳುವ ಸಿರಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಬಳಿಕ ಹರಿದಾಸ ಯಜ್ಞೇಶ್ ಹೊಸಬೆಟ್ಟು ಇವರಿಂದ ‘ತಪ್ಪುಗು ತರೆದಂಡ’ ಎಂಬ ಕಥಾ ಕೀರ್ತನೆ ನೆರವೇರಿತು. ಇವರಿಗೆ ಸಹಕರಿಸಿದವರು ತಬ್ಲಾದಲ್ಲಿ ಶ್ರೀ ಮಂಗಲ್ ದಾಸ್ ಗುಲ್ವಾಡಿ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ರಮೇಶ್ ಹೆಬ್ಬಾರ್.