ಧೀರಜ್ ರೈ ಸಂಪಾಜೆ 15.04.1989 ರಂದು ಕೆ.ಆರ್. ಚಂದ್ರಶೇಖರ ರೈ ಸಂಪಾಜೆ ಹಾಗೂ ಪದ್ಮಾವತಿ ಸಿ. ರೈ ದಂಪತಿಯವರ 3 ಮಂದಿ ಮಕ್ಕಳಲ್ಲಿ ಹಿರಿಯ ಮಗನಾಗಿ ಜನನ. ಧನ್ ರಾಜ್ ರೈ, ಹರ್ಷರಾಜ್ ರೈ ಇವರ ತಮ್ಮಂದಿರು. ಸಿವಿಲ್ ಎಂಜಿನಿಯರಿಂಗ್ ಇವರ ವಿದ್ಯಾಭ್ಯಾಸ.
ಅಜ್ಜ ಮಾದೇಪಾಲು ದಿ.ರಾಮಣ್ಣ ರೈ ಯವರು ಯಕ್ಷಗುರುಗಳು, ಸ್ತ್ರೀ ಪಾತ್ರಧಾರಿಯಾಗಿ ಕಲಾಸೇವೆ ಗೈದವರು. ತಂದೆ ಕೆ.ಆರ್.ಚಂದ್ರಶೇಖರ ರೈ ಸಂಪಾಜೆಯವರು ತೆಂಕು-ಬಡಗು ಉಭಯ ತಿಟ್ಟುಗಳಲ್ಲೂ ಸ್ತ್ರೀ ವೇಷ, ಪುಂಡುವೇಷ, ಕಿರೀಟ ವೇಷಧಾರಿಯಾಗಿ, ಚೌಡೇಶ್ವರಿ ಮೇಳ, ಸಾಲಿಗ್ರಾಮ ಮೇಳ,ಕಟೀಲು ಮೇಳ ನಂತರ ಹವ್ಯಾಸಿಯಾಗಿ ಸೇವೆ ಸಲ್ಲಿಸಿದರು. ದೊಡ್ಡಪ್ಪ ಯಕ್ಷ ರತ್ನ ರಾ.ಪ್ರ.ವಿ.ದಿ.ಶೀನಪ್ಪ ರೈ ಸಂಪಾಜೆಯವರು ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರು. ಚಿಕ್ಕಪ್ಪ ಕೆ.ಆರ್.ಗಂಗಾಧರ ರೈ ಯವರು ಹವ್ಯಾಸಿ ಮದ್ದಳೆಗಾರರು. ಹಾಗಾಗಿ ಯಕ್ಷಗಾನ ಪರಂಪರೆಯಿಂದಾಗಿ ಅಭಿರುಚಿ ತಾನಾಗಿಯೇ ಬಂತು ಎಂದು ಹೇಳುತ್ತಾರೆ ಧೀರಜ್ ರೈ ಸಂಪಾಜೆ.
ಯಕ್ಷಗಾನದ ಗುರುಗಳು:-
ಭಾಗವತಿಕೆ:-
ನಾದಬ್ರಹ್ಮ ಶ್ರೀ ಸುಬ್ರಹ್ಮಣ್ಯ ಭಟ್ ಮಾಂಬಾಡಿ.
ಅಭಿನವ ವಾಲ್ಮೀಕಿ ದಿ. ಪುರುಷೊತ್ತಮ ಪೂಂಜ ಬೊಟ್ಟಿಕೆರೆ.
‘ನಾದಶ್ರೀ’ ವಿದ್ವಾನ್ ಶ್ರೀ ಗಣೇಶ್ ರಾಜ್ ಎಂ.ವಿ (ಕರ್ನಾಟಿಕ್ ಶಾಸ್ತ್ರೀಯ ಸಂಗೀತ).
ನಾಟ್ಯ ಗುರುಗಳು:-
ಪ್ರಾಥಮಿಕ ಶಾಲಾ ದಿನಗಳಲ್ಲಿ ಪ್ರದರ್ಶನಗಳ ಸಂದರ್ಭದಲ್ಲಿ ಜಯಾನಂದ ಸಂಪಾಜೆ ಮತ್ತು ರಾಧಾಕೃಷ್ಣ ಕಲ್ಲುಗುಂಡಿ.
ಅಭೇರಿ, ರೀತಿಗೌಳ, ರತಿಪತಿಪ್ರೀಯ, ಕಲ್ಯಾಣಿ, ಮೋಹನ, ಮಧ್ಯಮಾವತಿ, ಶುದ್ಧಸಾವೇರಿ ಇತ್ಯಾದಿ ಇವರ ನೆಚ್ಚಿನ ರಾಗಗಳು.
ಯಥಾರ್ಥವಾಗಿ ಹೇಳಬೇಕೆಂದರೆ ಕರುಣಾ, ಶೃಂಗಾರ, ಭಕ್ತಿಪ್ರಧಾನ ಪ್ರಸಂಗಗಳು ಹೆಚ್ಚಿನ ಆಸಕ್ತಿ. ಉದಾ:ಮಾನಿಷಾದ,ಅಕ್ಷಯಾಂಬರ ವಿಲಾಸ ಮತ್ತು ಕೆಲವು ತುಳು ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ಮಂಡೆಚ್ಚ ಭಾಗವತರ ಹಾಡುಗಳು ಇಷ್ಟ, ದಿನೇಶ ಅಮ್ಮಣ್ಣಾಯರು (ನನ್ನ ಮಾನಸ ಗುರುಗಳು),
ಅಭಿನವ ವಾಲ್ಮೀಕಿ ದಿ. ಪುರುಷೊತ್ತಮ ಪೂಂಜ ಬೊಟ್ಟಿಕೆರೆ, ಕುರಿಯ ಗಣಪತಿ ಶಾಸ್ತ್ರಿಗಳು, ದಿ.ಕುಬಣೂರು ಶ್ರೀಧರ ರಾವ್, ದಿ.ಪದ್ಯಾಣ ಗಣಪತಿ ಭಟ್, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಬಲಿಪ ಭಾಗವತರು, ಕೈರಂಗಳ ರಾಜಾರಾಮ ಹೊಳ್ಳರು (ಮಾರ್ಗದರ್ಶಕರು),ಮುಂತಾದವರು ಇವರ ನೆಚ್ಚಿನ ಭಾಗವತರು. ಯಕ್ಷಗಾನ ರಂಗದಲ್ಲಿ ಇರುವ ಎಲ್ಲಾ ಚೆಂಡೆ ಮದ್ದಳೆಯವರು ಇವರ ನೆಚ್ಚಿನ ಕಲಾವಿದರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಅವಕಾಶಗಳೂ ಇದೆ, ಒತ್ತಡದ ಜೀವನಶೈಲಿಯ ನೆಪಕ್ಕೆ ಕಾಲಮಿತಿಯ ಪಾಶ ಒಡ್ಡಿ ಪ್ರಸಂಗಗಳನ್ನು ಗೊಂದಲವಾಗಿಸುವ ದಾರಿಯತ್ತ ಸಾಗುತ್ತಿದೆ (ಅನಿವಾರ್ಯ) ಇದಕ್ಕೆ ಮುಖ್ಯ ಕಾರಣ “ಆಟ ಗೌಜಿ ಆವೊಡು”.. ಆಟ ಅರ್ಥವಾಗಬೇಕೆಂಬ ಧ್ಯೇಯ ಇಲ್ಲ.
ಇವತ್ತಿನ ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರು ಕಲೆ – ಕಲಾವಿದರ ಜೀವಾಳ. ಆದರೆ ಅತಿಯಾದ ನಿರೀಕ್ಷೆ ಮತ್ತು ಹೋಲಿಸುವಿಕೆ ಕಲೆಯನ್ನು ಕಲಾವಿದನನ್ನು ಒತ್ತಡಕ್ಕೆ ತಳ್ಳುತ್ತದೆ, ಇದರಿಂದ ಲಾಭವೋ ನಷ್ಟವೋ ತಿಳಿಯುತ್ತಿಲ್ಲ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆಗಳು:-
ಆದಷ್ಟು ಮಟ್ಟಿಗೆ ಹಿರಿಯರು ಕಲಾವಿದರ ಅನುಭವದ ಬುತ್ತಿಯಿಂದ ಬೇಕಾದುದನ್ನು ಅಳವಡಿಸಿ ಕೊಂಚ ಕಾಲದ ನಿರೀಕ್ಷೆಗಳನ್ನೂ ಸಮದೂಗಿಸುವತ್ತ ಪ್ರಯತ್ನ.
ಧೀರಜ್ ರೈ ಸಂಪಾಜೆ ಅವರಿಗೆ ದೊರೆತಿರುವ ಸನ್ಮಾನ ಹಾಗೂ ಪ್ರಶಸ್ತಿ:-
ಪಲ್ಲವಿ ಕ್ಲಾಸಿಕಲ್ಸ್ ಮಂಗಳೂರು 2017ರ “ಸಾಧಕ ಪ್ರಶಸ್ತಿ”.
ಹವ್ಯಾಸಿ ಬಳಿಗ ಕದ್ರಿಯವರಿಂದ “ಗೌರವಾಭಿನಂದನೆ”.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇವರಿಂದ “ಅಭಿನಂದನಾ ಪತ್ರ”.
ಬಂಟರ ಸಂಘ ಯುವ ವಿಭಾಗ ಬಿ.ಸಿ.ರೋಡು ವಲಯ, ಬಂಟರ ಸಂಘ ಬಿ.ಸಿ.ರೋಡು ವಲಯ ಮತ್ತು ಬಂಟರ ಸಂಘ ಮಹಿಳಾ ವಿಭಾಗ ಬಿ.ಸಿ.ರೋಡು ವಲಯ ಇವರಿಂದ “ಯಕ್ಷ-ಯುವ-ರತ್ನ” ಪ್ರಶಸ್ತಿ.
ಬಂಟರ ಸಂಘ ಬಜ್ಪೆ ಇವರಿಂದ “ಗೌರವ ಸಂಮಾನ”. ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಯಕ್ಷಗಾನ ಸಾಧನೆಯನ್ನು ನೋಡಿ ಗೌರವಿಸಿದ್ದಾರೆ.
ವೇಷಧಾರಿಯಾಗಿ ಪ್ರಾಥಮಿಕ ಶಾಲಾ ದಿನಗಳಿಂದ 1998ರಿಂದ ತೊಡಗಿ 2017ರ ವರೆಗೆ ಬಬ್ರುವಾಹನ, ಯಶಸೇನ, ದೇವೇಂದ್ರ, ಅರ್ಜುನ, ಕೌರವ, ಕೌಂಡ್ಲೀಕ, ವರಾಹ ಮೊದಲಾದ ಪಾತ್ರಗಳನ್ನು ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಮಾಡಿರುತ್ತಾರೆ ಹಾಗೂ ಹವ್ಯಾಸಿಯಾಗಿ ಮತ್ತು ಹವ್ಯಾಸಿ ಬಳಗ ಕದ್ರಿ, ಹೊಸನಗರ ಮೇಳಗಳಲ್ಲಿ 2 – 3ವರ್ಷ ವೇಷಧಾರಿಯಾಗಿ ಹೋಗುತ್ತಿದ್ದರು ಧೀರಜ್.
ಭಾಗವತಿಕೆಯನ್ನು ಹವ್ಯಾಸಿಯಾಗಿ 2011 ರಿಂದ ತೊಡಗಿ 2014-15ರಿಂದ ಮೇಳಗಲ್ಲಿ ತಿರುಗಾಟ ಮಾಡುತ್ತಿದ್ದಾರೆ.
ತಿರುಗಾಟ ಮಾಡಿದ ಮೇಳಗಳು:-
ಚಾಮುಂಡೇಶ್ವರಿ ಯಕ್ಷಗಾನ ಮಂಡಳಿ ಶಿರ್ವ (1ವರ್ಷ).
ಮಯೂರ ವಾಹನ ಯಕ್ಷಗಾನ ನಾಟಕ ಸಭಾ ಸೂಡ (5ವರ್ಷ).
ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿ ಸಸಿಹಿತ್ಲು (1ವರ್ಷ).
ಪ್ರಸ್ತುತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇದರಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.
ಧೀರಜ್ ರೈ ಸಂಪಾಜೆ ಅವರು ಶ್ರೀನಿಧಿ ರೈ (ಎಂ.ಬಿ.ಎ ಪದವೀಧರೆ) ಇವರನ್ನು 28.05.2021ರಂದು ಮದುವೆಯಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
- ಶ್ರವಣ್ ಕಾರಂತ್ ಕೆ.,
ಶಕ್ತಿನಗರ, ಮಂಗಳೂರು