ಹಳ್ಳಿ ಪರಿಸರದಲ್ಲಿ ಹುಟ್ಟಿ ಬೆಳೆದ ಕಾರಣ ಜಾನಪದದ ಸೊಗಡು ನಲ್ಲೂರು ಪ್ರಸಾದ್ ಆರ್.ಕೆ.ಯವರಲ್ಲಿ ರಕ್ತಗತವಾಗಿದೆ. ಜೊತೆಯಲ್ಲಿ ದೊರೆತ ಬೋಧನೆಯ ಅವಕಾಶ ಜಾನಪದ ಜ್ಞಾನಕ್ಕೆ ಇನ್ನಷ್ಟು ಮೆರುಗು ನೀಡಿತು. ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಆಸಕ್ತಿಯಿಂದಾಗಿ ಇವರು ಜಾನಪದ ತಜ್ಞರಾಗಿ, ರಂಗಭೂಮಿ ನಟರಾಗಿ, ಗಾಯಕರಾಗಿ, ಯಶಸ್ವಿ ಸಂಘಟಕರಾಗಿ ಮುನ್ನೆಲೆಗೆ ಬರಲು ಸಹಾಯಕವಾಯಿತು
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಲ್ಲೂರಿನಲ್ಲಿ 25 ನವಂಬರ್ 1947ರಲ್ಲಿ ಎಸ್.ಕೆ. ಸಂಜೀವಯ್ಯ ಮತ್ತು ಶಾಂತಮ್ಮ ದಂಪತಿಯ ಸುಪುತ್ರರಾಗಿ ಪ್ರಸಾದ್ ಆರ್.ಕೆ. ಜನಿಸಿದರು. ಶ್ರವಣಬೆಳಗೊಳದ ಕಾಲೇಜಿನಲ್ಲಿ ಪದವಿ, ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರ ಅಧ್ಯಯನ ಇಲ್ಲಿಗೆ ನಿಲ್ಲದೆ, ‘ಕರ್ನಾಟಕದ ಒಕ್ಕಲಿಗರಲ್ಲಿ ಗಂಗಡಿಕಾರರು ಒಂದು ಅಧ್ಯಯನ’ ಎಂಬ ಮಹಾ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ ಪಡೆದರು 1977ರಿಂದ 2005ರವರೆಗೆ ವಿವಿಧ ಕಾಲೇಜುಗಳಲ್ಲಿ ಅಧ್ಯಾಪನ ವೃತ್ತಿ ಮಾಡಿದ್ದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಾನಪದ ಪ್ರವೇಶ ಮತ್ತು ಪ್ರೌಢ ತರಗತಿಗಳಲ್ಲಿಯೂ ಬೋಧಕರಾಗಿ ಸೇವೆ ಸಲ್ಲಿಸಿದವರು ಇವರು. ಹಳ್ಳಿಯ ಪರಿಸರದಿಂದ ಬಂದ ಇವರಲ್ಲಿ ಜಾನಪದದ ಆಸಕ್ತಿ ಅಧಿಕವಾಗಿದ್ದು ಸಾಹಿತ್ಯ ರಚನೆಗೂ ಅದು ಪ್ರೇರಕವಾಯಿತು. ಜಾನಪದ ಹಿನ್ನೆಲೆ ಇರುವ ರೂಪಕಗಳ ರಚನೆ ಮತ್ತು ನಾಟಕ ನಿರ್ದೇಶನದಲ್ಲಿ ತನ್ನ ಜ್ಞಾನವನ್ನು ಭಟ್ಟಿ ಇಳಿಸಿದರು. ವಿಶೇಷವಾಗಿ ತಾವೇ ನಾಟಕಕಾರರಾಗಿ ಮತ್ತು ಗಾಯಕರಾಗಿ ಹೆಸರು ಪಡೆದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನುಪಮಾ ಸೇವೆ ಸಲ್ಲಿಸಿದ ವ್ಯಕ್ತಿತ್ವ ಪ್ರಸಾದ್ ಆರ್.ಕೆ.ಯವರದು. ವಿವಿಧ ಸಂಘಟನೆಗಳ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದು ಅನನ್ಯ ಸೇವೆ ಸಲ್ಲಿಸಿದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ದೂರದರ್ಶನದ ಚಲನಚಿತ್ರ ಪರಿಶೀಲನ ಸಮಿತಿ ಇವುಗಳ ಸದಸ್ಯರಾಗಿ, ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಾಂಸ್ಕೃತಿಕ ಉತ್ಸವಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದವರು ಪ್ರಸಾದ್ ಆರ್.ಕೆ. ‘ನೀನೇಂಬ ನಾನು’, ‘ದಗ್ಧ’, ‘ಸೋನೆ ಮುಗಿಲು’, ‘ರೆಕ್ಕೆ ಬಡಿಯುವ ಮುನ್ನ’, ‘ನಿವೃತ್ತೋಪನಿಷತ್ತು’, ‘ನವಿಲ ಜಾಗರ’ ಮುಂತಾದ ಕಾವ್ಯ ಕೃತಿಗಳ ಕರ್ತೃ ಇವರು. ‘ದೊರೆಕಾಳಿ’, ‘ಗಂಗಡಿಕಾರ ಒಕ್ಕಲಿಗರು’ ಇವು ಜಾನಪದ ಕೃತಿಗಳು. ‘ಕರ್ನಾಟಕ ಜಾನಪದ’, ‘ಜಾನಪದ ಭಾರತಿ’, ‘ಕಮಲಾ ಕೃತಿ ವಿಮರ್ಶೆ’, ‘ಹೆಜ್ಜೆ ಗುರುತು’ ಇತ್ಯಾದಿ ಸಂಪಾದಿತ ಕೃತಿಗಳನ್ನು ಸೇರಿಸಿ ಸುಮಾರು 15ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. 2005ರಲ್ಲಿ ಇವರಿಗೆ ಪ್ರೀತಿಯಿಂದ ಅರ್ಪಿಸಿದ ಅಭಿನಂದನಾ ಗ್ರಂಥ ‘ನಲ್ಲೂರು’.
‘ಗೌತಮ ಪ್ರಶಸ್ತಿ’, ‘ಜಾನಪದ ತಜ್ಞ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಜ್ವಾಲನಯ್ಯ ಸಾಹಿತ್ಯ ಪ್ರಶಸ್ತಿ’, ‘ಜೀಶಂಪ ಜಾನಪದ ಪ್ರಶಸ್ತಿ’, ‘ಗೊಮ್ಮಟ ವಿದ್ಯಾಪೀಠ ಪ್ರಶಸ್ತಿ’, ‘ಕನ್ನಡ ಕುಲತಿಲಕ ಪ್ರಶಸ್ತಿ’, ‘ಕರುನಾಡ ಸಿರಿ ಪ್ರಶಸ್ತಿ’ ಇತ್ಯಾದಿ ಪ್ರಶಸ್ತಿ ಗೌರವ ಪುರಸ್ಕಾರ ಸಮ್ಮಾನಗಳು ಇವರ ಸಾಹಿತ್ಯ ಸೇವೆಗೆ ಸಂದ ಗೌರವ. ಇವರ ಜನ್ಮ ದಿನವಾದ ಈ ಶುಭ ಸಂದರ್ಭದಲ್ಲಿ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಿಸೋಣ.
– ಅಕ್ಷರೀ
