ಪುತ್ತೂರು : ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ವತಿಯಿಂದ ದಿನಾಂಕ 11 ಜನವರಿ 2026ರಂದು ನಡೆದ ‘ನೃತ್ಯೋತ್ಕ್ರಮಣ’ ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ರಂಗಪ್ರವೇಶ ಸ್ಮೃತಿ ಸಂಧ್ಯಾ ಭರತನಾಟ್ಯ ಕಾರ್ಯಕ್ರಮ ಕಲಾರಾಧಕರನ್ನು ಮಂತ್ರಮುಗ್ಧಗೊಳಿಸಿತು.


ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ಇವರು 1996ರ ಜನವರಿ 12ರಂದು ಮಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ಭರತ ನಾಟ್ಯ ರಂಗಪ್ರವೇಶವನ್ನು 30 ವರ್ಷಗಳ ಬಳಿಕ ಮತ್ತೆ ಅದನ್ನೇ ನೆನಪಿಸಿ ಮರುಸೃಷ್ಟಿಸುವ ಮೂಲಕ ಕಲೆಗೆ ಗೌರವ ಸಲ್ಲಿಸಿದರು. ವಿದ್ವಾನ್ ದೀಪಕ್ ಕುಮಾರ್ ಇವರ ರಂಗಪ್ರವೇಶಕ್ಕೆ ಹಿನ್ನೆಲೆ ನುಡಿಸಿದವರ ಪೈಕಿ ಮೃದಂಗ ವಾದನ ಮಾಡಿದ ಕರ್ನಾಟಕ ಕಲಾಶ್ರೀ ಜಿ. ಗುರುಮೂರ್ತಿ ಬೆಂಗಳೂರು ಅವರು ಮತ್ತೊಮ್ಮೆ ಮೃದಂಗ ನುಡಿಸಿದರು. ಅಂದು ನೃತ್ಯದ ಅಮೂಲ್ಯ ಕ್ಷಣಗಳನ್ನು ಸೆರಹಿಡಿದ ಯಜ್ಞ ಮಂಗಳೂರು ಇವರು ನೃತ್ಯದ ಕ್ಷಣಗಳನ್ನು ಮತ್ತೊಮ್ಮೆ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ನೃತ್ಯ ಗುರು ಡಾ. ವೀಣಾ ಮೂರ್ತಿ ವಿಜಯ್ ಬೆಂಗಳೂರು ಇವರು ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯೆ ದಂತ ವೈದ್ಯೆ ಡಾ. ಆಶಾ ಅಮ್ಮಂಕಲ್ಲು ಶುಭಾಶಂಸನೆಗೈದರು. ದೀಪಕ್ ಕುಮಾರ್ ಇವರ ನೃತ್ಯ ಗುರು ವಿದುಷಿ ರಾಜಶ್ರೀ ಉಳ್ಳಾಲ ಉಪಸ್ಥಿತರಿದ್ದರು.




ರಂಗ ಪ್ರವೇಶದ ಸಂದರ್ಭ ಗುರು ವಿದುಷಿ ನರ್ಮದಾ ನಿರ್ದೇಶನದಲ್ಲಿ ಖಚಿತ ಹಸ್ತ ಮುದ್ರೆ, ಆಕರ್ಷಕ ಅಡುವುಗಳ ಮೂಲಕ ಪ್ರಾರಂಭದಲ್ಲಿ ದೇವರು. ಭೂದೇವಿ, ಗುರುಗಳು ಹಾಗೂ ಸಭಾಸದನದಲ್ಲಿ ನೆರೆದಿದ್ದ ಪ್ರೇಕ್ಷಕರಿಗೂ ಸವಿನಯವಾಗಿ ನೃತ್ಯದ ಮೂಲಕ ವಂದನೆ ಸಲ್ಲಿಸಿದರು. ಖಂಡತ್ರಿಪುಟದಲ್ಲಿ ಸಾಂಪ್ರದಾಯಿಕ ಅಲಾರಿಪುವನ್ನು ಖಚಿತ ಹಸ್ತಮುದ್ರೆ, ಆಕರ್ಷಕ ಅಡವುಗಳ ಸುಂದರ ಅಭಿವ್ಯಕ್ತಿಯಲ್ಲಿ ಪ್ರಾರ್ಥನಾ ರೂಪದ ನೃತ್ಯವನ್ನು ಅರ್ಪಿಸಿದರು. ಬಳಿಕ ನಾಟರಾಗ ಆದಿತಾಳದಲ್ಲಿ ಆನಂದ ನರ್ತನ ಮಾಡಿದರು. ದೀಪಕ್ ಕುಮಾರ್ ಇವರ ಜೀವನದ ಸುಂದರ ಮತ್ತು ಕ್ಲಿಷ್ಟಕರ ಜತಿಸ್ತರದಲ್ಲಿ ಒಂದಾದ ಅಬೋಗಜತಿಸ್ವರದಲ್ಲಿ ತೋಡಿರಾಗ ಆದಿತಾಳದಲ್ಲಿ ‘ಆದಿ ಶಿವನೆ’ ಎಂಬ ಶಿವಸ್ತುತಿಯಲ್ಲಿ ಸುಮಾರು ಅರ್ಧ ಗಂಟೆಯ ‘ವರ್ಣ’ದಲ್ಲಿ ಶಿವನ ಸಂಪೂರ್ಣ ಚಿತ್ರಣ ಮುಂದಿಟ್ಟರು. ಬಳಿಕ ತನ್ನದೇ ನಿರ್ದೇಶನದ ಯಮನ್ ಕಲ್ಯಾಣಿ ಮಿಶ್ರಬಾವು ತಾಳದಲ್ಲಿ ಶ್ರೀ ರಾಮಚಂದ್ರ ಭಜನ್ ನೃತ್ಯ, ನೃತ್ಯೋತ್ಕ್ರಮಣದ ಅಂತಿಮ ಭಾಗದಲ್ಲಿ ವೃತ್ತ ಪ್ರಮುಖವಾದ ‘ತಿಲ್ಲಾನ’ವನ್ನು ಧನುಶ್ರೀ ರಾಗ-ಆದಿತಾಳದಲ್ಲಿ ಅಪೂರ್ವ ಜತಿಗಳ ಪ್ರದರ್ಶನದೊಂದಿಗೆ ನೃತ್ಯ ರಸಧಾರೆಯನ್ನು ಹರಿಸಿದರು. ಹಿಮ್ಮೇಳದಲ್ಲಿ ನಟುವಾಂಗ ಮತ್ತು ಹಾಡುಗಾರಿಕೆ ಮತ್ತು ನಟುವಾಂಗದಲ್ಲಿ ದೀಪಕ್ ಕುಮಾರ್ ಇವರ ಪತ್ನಿ ವಿದುಷಿ ಪ್ರೀತಿಕಲಾ ಸಾಥ್ ನೀಡಿದರು.


ಮೃದಂಗದಲ್ಲಿ ವಿದ್ವಾನ್ ಜಿ. ಗುರುಮೂರ್ತಿ ಬೆಂಗಳೂರು, ಕೊಳಲಿನಲ್ಲಿ ಮೇಧಾ ಉಡುಪ ಮಂಗಳೂರು, ಪಿಟೀಲಿನಲ್ಲಿ ತನ್ಮಯಿ ಉಪ್ಪಂಗಳ ಸಹಕರಿಸಿದರು. ನೃತ್ಯ ಪ್ರಸ್ತುತಿಯ ನಡುವೆ ಕಲಾ ಶಾಲಾ ವಿದ್ಯಾರ್ಥಿಗಳು ರಚಿಸಿದ ದೀಪಕ್ ಕುಮಾರ್ ಇವರ ನೃತ್ಯ ವಿದ್ಯಾರ್ಥಿ ಜೀವನದ ಸಾಧನೆಯ ಕುರಿತು ಚಿತ್ರಣವನ್ನು ಪ್ರಾಜೆಕ್ಟರ್ ಮೂಲಕ ಪ್ರಸಾರ ಮಾಡಲಾಯಿತು. ಬಳಿಕ ಪತ್ರಕರ್ತ ಲೋಕೇಶ್ ಬನ್ನೂರು ಇವರನ್ನು ಗೌರವಿಸಲಾಯಿತು. ಶೌರ್ಯಕೃಷ್ಣ ಶಂಖನಾದ ಮೊಳಗಿಸಿದರು. ಶ್ರೀ ಆಕಾಡೆಮಿಯ ನೃತ್ಯಗುರು ವಿದುಷಿ ಪ್ರೀತಿಕಲಾ ಓಂಕಾರ ಪಠಿಸಿದರು. ಶ್ರೀ ಮೂಕಾಂಬಿಕಾ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿನಿ ಪ್ರಣಮ್ಯ ಪಾಲೆಚ್ಚಾರು ಪ್ರಾರ್ಥಿಸಿದರು. ಮಂಗಳೂರು ಕಲಾಸೂರ್ಯ ನೃತ್ಯಾಲಯದ ನೃತ್ಯಗುರು ವಿದುಷಿ ಸೌಜನ್ಯ ಪಡುವೆಟ್ನಾಯ ಮತ್ತು ನೆಕ್ಕಿಲಾಡಿ ಸ.ಹಿ.ಪ್ರಾ. ಶಾಲೆಯ ಸಹಶಿಕ್ಷಕಿ ತೇಜಸ್ವಿನಿ ಅಂಬೆಕಲ್ಲು ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಕಿರಿಯ ವಿದ್ಯಾರ್ಥಿಗಳಿಂದ ವಿದ್ವಾನ್ ದೀಪಕ್ ಕುಮಾರ್ ಅವರಿಗೆ ಭರತನಾಟ್ಯ ನೃತ್ಯಕ್ಕೆ ಸಂಬಂಧಿಸಿದ ಹಾರವೊಂದನ್ನು ಕಾಣಿಕೆಯಾಗಿ ಸಮರ್ಪಣೆ ಮಾಡಿದರು.


