ಮೀಯಪದವು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಗಡಿನಾಡಿನ ಖ್ಯಾತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆ ‘ರಂಗ ಚಿನ್ನಾರಿ’ ಕಾಸರಗೋಡು (ರಿ) ಆಯೋಜಿಸಿ, ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಕಾಸರಗೋಡು ಕನ್ನಡ ಹಬ್ಬವು ಜೂನ್ 24 ರಿಂದ ಜೂನ್ 30ರವರೆಗೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ದಿನಾಂಕ 24-06-2023ರಂದು ಶ್ರೀ ಎಡನೀರು ಮಠದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮೀಯಪದವಿನ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ವಿದ್ಯಾಸಂಸ್ಥೆಯ ‘ನಾರಾಯಣೀಯಂ’ ವೇದಿಕೆಯಲ್ಲಿ ವಿಕಾಸ ಸಂಘಟನೆಯ ಆಶ್ರಯದಲ್ಲಿ ದೀಪ ಬೆಳಗಿಸಿ ನೆರವೇರಿಸಿದರು.
ಆಶಿರ್ವದಿಸಿ ಮಾತನಾಡಿದ ಎಡನೀರು ಶ್ರೀಗಳು ‘’ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಿತ್ಯ ಕನ್ನಡ ಹಬ್ಬ ನಡೆಯಲಿ, ಜಿಲ್ಲೆಯ ಗ್ರಾಮ ಗ್ರಾಮಗಳಲ್ಲೂ ಕನ್ನಡ ಧ್ವನಿ ಮೊಳಗುವಂತಾಗಲಿ ಎಂದು ಆಶಯ ವ್ಯಕ್ತ ಪಡಿಸಿದರು. ರಂಗ ಚಿನ್ನಾರಿ ಕಾಸರಗೋಡು ಸಂಸ್ಥೆ ಹಲವು ವರ್ಷಗಳಿಂದ ಕನ್ನಡದ ಸೇವೆಯನ್ನು ನಿರಂತರ ನಡೆಸುತ್ತಾ ಬಂದಿದೆ, ಸಂಸ್ಥೆಯ ರೂವಾರಿಗಳಾದ ಕಾಸರಗೋಡು ಚಿನ್ನಾ ಮತ್ತು ಅವರ ತಂಡದ ಕಾರ್ಯ ಶ್ಲಾಘನೀಯ’’ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವಿನ ಶಾಲಾ ಸಂಚಾಲಕಿ ಶ್ರೀಮತಿ ಪ್ರೇಮಾ ಕೆ. ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಲೇಖಕ, ಸಾಹಿತಿ, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ ‘’ಕನ್ನಡದ ಅಸ್ಮಿತೆ ಉಳಿಸುವಲ್ಲಿ ಗಡಿನಾಡಲ್ಲಿ ಇನ್ನಷ್ಟು ಕನ್ನಡದ ಕಾರ್ಯ ನಡೆಯಲಿ, ಮನೆ ಮನಗಳಲ್ಲಿ ಕನ್ನಡವನ್ನು ಪ್ರೀತಿಸುವ ಪೋಷಿಸುವ ಹಾಗೆ ಆದಾಗ ಇಂತಹ ಕಾರ್ಯಗಳು ಸಾರ್ಥಕ್ಯವನ್ನು ಪಡೆಯುತ್ತವೆ. ರಂಗ ಚಿನ್ನಾರಿಯವರ ಈ ಕಾರ್ಯಕ್ಕೆ ಸಮಾಜ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ’’ ಎಂದರು.
ವಿದ್ಯಾವರ್ಧಕ ಎ.ಯು.ಪಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಧರ ರಾವ್ ಆರ್.ಎಂ.ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಹಾಗೂ ಸತ್ಯನಾರಾಯಣ.ಕೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಸ್ಥಾಪಕರಾದ ಉದಯಕುಮಾರ್ ನೂಜಿಯವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.
ರಂಗಚಿನ್ನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ಗಾಯಕ ಕಿಶೋರ್ ಪೆರ್ಲ ಪ್ರಾರ್ಥಿಸಿದರು. ಅಧ್ಯಾಪಕ ರಾಜಾರಾಮ ರಾವ್ ಮೀಯಪದವು ನಿರೂಪಿಸಿ, ವಿಕಾಸ ಸಂಸ್ಥೆಯ ಡಾ.ಜಯಪ್ರಕಾಶನಾರಾಯಣ ತೊಟ್ಟೆಕ್ಕೋಡಿ ವಂದಿಸಿದರು. ಕಾಸರಗೋಡು ಚಿನ್ನಾ ಪ್ರಸ್ತಾವಿಕ ಮಾತುಗಳನ್ನಾಡಿ ಕಾಸರಗೋಡು ಕನ್ನಡ ಹಬ್ಬದ ಮಹತ್ವವನ್ನು ತಿಳಿಸಿದರು.
“ಮುಂದಿನ ವರ್ಷದಿಂದ ಪ್ರತೀವರ್ಷ ಎಪ್ರಿಲ್ ತಿಂಗಳಲ್ಲಿ ಕಾಸರಗೋಡು ಕನ್ನಡ ಹಬ್ಬ ಸಪ್ತಾಹ ಜಿಲ್ಲೆಯಾದ್ಯಂತ ನಾಡ ಹಬ್ಬವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಈ ಸಂದರ್ಭ ಘೋಷಿಸಿದರು.”
ಬಳಿಕ ವಿಕಾಸ ಮೀಯಪದವು ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಎಡನೀರು ಸಂಸ್ಥೆಯ ಸಂಯೋಜನೆಯಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ಜರಗಿತು.