ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಮಂಗಳೂರಿನ ಸಪ್ನ ಬುಕ್ ಹೌಸ್ ಆಶ್ರಯದಲ್ಲಿ ದಿನಾಂಕ : 02-07-2023ರಂದು ಸತೀಶ್ ಚಪ್ಪರಿಕೆ ಅವರ ‘ಘಾಂದ್ರುಕ್’ ಕಾದಂಬರಿ ಹಾಗೂ ಲೇಖಕರ ಜತೆ ಸಂವಾದ ಕಾರ್ಯಕ್ರಮವು ಕೆ. ಎಸ್. ರಾವ್ ರಸ್ತೆಯ ಸಪ್ನ ಬುಕ್ ಹೌಸ್‌ನಲ್ಲಿ ನಡೆಯಿತು.
‘ಘಾಂದ್ರುಕ್’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ್ ಪೆರ್ಲ “ಲೇಖಕ ಸತೀಶ್ ಚಪ್ಪರಿಕೆ ಅವರು ‘ಘಾಂದ್ರುಕ್’ ಕನ್ನಡ ಕಾದಂಬರಿಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರವಾಸ ಕಥನದಂತಿರುವ ಕೃತಿಯು ಓದುಗನ ಮನಗೆಲ್ಲುತ್ತದೆ. ‘ಘಾಂದ್ರುಕ್’ ಅಂದರೆ ಹಿಮಾಲಯದ ತಪ್ಪಲಿನ ಟಿಬೆಟ್‌ನಲ್ಲಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಒಂದು ಹಳ್ಳಿಯ ಹೆಸರು. ಹಳ್ಳಿಯೊಂದರಿಂದ ನಗರಕ್ಕೆ ಬಂದು ಐಟಿ ಕಂಪನಿಯ ಸಿಇಒ ಆಗುವ ಹಂತಕ್ಕೆ ಬೆಳೆದ ಯುವಕನಿಗೆ ಹಣ, ಬೌದ್ಧಿಕ ಸುಖಕ್ಕೆ ಒಂದು ಮಿತಿ ಇದೆ ಅನಿಸುತ್ತದೆ ಮತ್ತು ಇದರ ಆಚೆಗೂ ಒಂದು ಬದುಕಿದೆ ಎಂಬ ಒಳಅರಿವು ಮೂಡುತ್ತದೆ. ನಂತರ ಆತ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಮೊಬೈಲ್ ಸಿಮ್ ತೆಗೆದಿಟ್ಟು ‘ಘಾಂದ್ರುಕ್’ ಹಳ್ಳಿಯತ್ತ ಮುಖಮಾಡುತ್ತಾನೆ. ಈ ಹಿಮನಡಿಗೆಯ ಅದ್ಭುತ ಲೋಕ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತದೆ. ಇದು ಅಧ್ಯಾತ್ಮದ ಔನ್ನತ್ಯದ ಕಡೆಗೆ ಚಲಿಸುವ ಗತಿಯೂ ಹೌದು” ಎಂದು ವಿಶ್ಲೇಷಿಸಿದರು.
ಕೃತಿ ಪರಿಚಯಿಸಿದ ಹಿರಿಯ ಲೇಖಕಿ ಡಾ.ರಾಜಲಕ್ಷ್ಮಿ ಎನ್.ಕೆ. “ಚಲನಶೀಲವಾದ ಕಾಲಘಟ್ಟವನ್ನು ಕಾದಂಬರಿಯಲ್ಲಿ ಹಿಡಿದಿಡಲಾಗಿದೆ. ಪ್ರವಾಸದ ಜತೆಗೆ ಹೊಸ ಹೊಳಪೊಂದನ್ನು ಈ ಕಾದಂಬರಿ ನಮಗೆ ನೀಡುತ್ತದೆ” ಎಂದರು.
ಬಳಿಕ ಲೇಖಕರ ಜತೆ ಸಂವಾದ ಕಾರ್ಯಕ್ರಮ ನಡೆಯಿತು. ಕೇಶವ ಕುಡ್ಲ, ಮೀನಾಕ್ಷಿ ರಾಮಚಂದ್ರ ಹಾಗೂ ಅರುಣಾ ನಾಗರಾಜ್, ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಘಟಕದ ಅಧ್ಯಕ್ಷ ಮಂಜುನಾಥ ರೇವಣಕರ್ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗದೀಶ ಯಡಪಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು.