ಕಾರ್ಕಳ: ಯಕ್ಷ ಕಲಾರಂಗ ಕಾರ್ಕಳ ಇದರ ವತಿಯಿಂದ ಪೆರ್ವಾಜೆಯ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ :04-07-2023ರಂದು ‘ಯಕ್ಷಗಾನ ತರಬೇತಿ’ ಕಾರ್ಯಕ್ರಮ ನಡೆಯಿತು. ಯಕ್ಷ ಕಲಾರಂಗದ ಸಂಚಾಲಕ ಪ್ರೊ. ಪದ್ಮನಾಭ ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ “ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವುದರಿಂದ ಜ್ಞಾನ ವೃದ್ಧಿ ಮತ್ತು ಸಂಸ್ಕೃತಿಯ ಪರಿಚಯವಾಗುವುದು” ಎಂದರು.
ಕಾರ್ಯದರ್ಶಿ ಮಹಾವೀರ ಪಾಂಡಿಯವರು ಯಕ್ಷಗಾನದ ಮಹತ್ವ ಮತ್ತು ಪ್ರಯೋಜನವನ್ನು ವಿವರಿಸಿ, ಯಕ್ಷಗಾನ ತರಗತಿಯ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿ ವೇತನಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಯಕ್ಷಗಾನ ಗುರು ಅಜಿತ್ ಜೈನ್ ವೇದಿಕೆಯಲ್ಲಿದ್ದರು. ಶಿಕ್ಷಕ ಹರಿಶ್ಚಂದ್ರ ಬಾಯರಿ ಸ್ವಾಗತಿಸಿ, ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.