ಮುಂಬೈ: ಶ್ರೀ ಶನೀಶ್ವರ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ಶ್ರೀ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಅವರಿಗೆ ಮುಂಬೈ ಕಲ್ಯಾಣದ ಹೋಟೆಲ್ ಗುರುದೇವ್ ಗ್ರ್ಯಾಂಡ್ ನಲ್ಲಿ ದಿನಾಂಕ 17-07-2023ರಂದು ‘ಗುರುದೇವ ಕಲಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ನಂದಯ್ಯ ಗಾಣದ ರಾಮಣ್ಣ ಪಾತ್ರ ನಿರ್ವಹಣೆಯಲ್ಲಿ ಸಿದ್ಧಿ ಪ್ರಸಿದ್ಧಿ ಪಡೆದ ಮೊಯ್ಲೊಟ್ಟು ಅವರ ಸಾಧನೆಯನ್ನು ಗುರುತಿಸಿ, ಎಕ್ಕಾರು ನಡ್ಯೋಡಿ ಗುತ್ತು ಭಾಸ್ಕರ ಶೆಟ್ಟಿ ಮತ್ತು ಶಾರದಾ ಭಾಸ್ಕರ ಶೆಟ್ಟಿ ಹಾಗೂ ಶ್ರೀಕಾಂತ್ ಶೆಟ್ಟಿ ಅವರು ಚಾರಿಟೇಬಲ್ ಟ್ರಸ್ಟ್ ಮೂಲಕ ಈ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಿದರು.
ಕಲ್ಯಾಣದ ಪ್ರತಿಷ್ಟಿತ ಉದ್ಯಮಿಗಳ ಉಪಸ್ಥಿತಿಯಲ್ಲಿ, ಶ್ರೀ ಶನೀಶ್ವರ ಭಕ್ತವೃಂದ ಪಕ್ಷಿಕೆರೆ ತಂಡದ ಮುಂಬೈ ಯಕ್ಷಯಾನದ ಕಲ್ಯಾಣದಲ್ಲಿ ನಡೆದ ‘ಶ್ರೀ ಸತ್ಯನಾರಾಯಣ ವೃತ ಮಹಾತ್ಮೆ’ ಪೂಜಾ ಸಹಿತ ತಾಳಮದ್ದಳೆಯ ಕಾರ್ಯಕ್ರಮವನ್ನು ಕದ್ರಿ ಶ್ರೀ ನವನೀತ ಶೆಟ್ಟಿ ನಿರ್ವಹಿಸಿದರು. ಹಿಮ್ಮೇಳನದಲ್ಲಿ ಹೆಬ್ರಿ ಗಣೇಶ್, ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ದಯಾನಂದ ಶೆಟ್ಟಿಗಾರ್ ಮಿಜಾರ್ ಹಾಗೂ ಅರ್ಥದಾರಿಗಳು ಕದ್ರಿ ಶ್ರೀ ನವನೀತ ಶೆಟ್ಟಿ, ಶ್ರೀ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು. ಶ್ರೀ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಶ್ರೀ ಸದಾಶಿವ ಆಳ್ವ ತಲಪಾಡಿ, ಕನ್ನಡಿಕಟ್ಟೆ ಶ್ರೀ ಗಣೇಶ್ ಶೆಟ್ಟಿ, ಶ್ರೀ ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು ಹಾಗೂ ಸಂಯೋಜನೆ ಪ್ರಸನ್ನ ಶೆಟ್ಟಿ ಎಕ್ಕಾರು ನಡ್ಯೋಡಿ ಗುತ್ತು.
ಕಲಾ ಸಾರಥಿ ಕಾಪು ಕಲ್ಯಾ ಶ್ರೀ ದಿನೇಶ್ ಶೆಟ್ಟಿ, ಶ್ರೀ ಹೇಮಂತ್ ಶೆಟ್ಟಿ ಕಾವೂರು ಗುತ್ತು, ಶ್ರೀ ನಾಗೇಶ್ ಶೆಟ್ಟಿ, ಶ್ರೀ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತ ಶ್ರೀ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು ಇವರು ಬಾಲ್ಯದಿಂದಲೇ ನಾಟಕ, ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿ ಮುಂದುವರಿದು ರಂಗನಟನಾಗಿ, ಯಕ್ಷಗಾನ ವೇಷಧಾರಿಯಾಗಿ, ಅರ್ಥಧಾರಿಯಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಯಕ್ಷಗಾನ ಹವ್ಯಾಸಿ ಕಲಾವಿದ. ‘ಶ್ರೀ ಶನೀಶ್ವರ ಮಹಾತ್ಮೆ’ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆಯಲ್ಲಿ ಇವರು ನಂದಿಶ್ರೇಷ್ಟಿ, ರಾಮಣ್ಣ ಗಾಣಿಗ, ಸಖಿ ಪಾತ್ರಗಳಲ್ಲಿ ತನ್ನದೇ ಶೈಲಿಯಲ್ಲಿ ಹಾಸ್ಯರಸ ಸೃಷ್ಟಿಗೈದು ಅಪಾರ ಅಭಿಮಾನಿಗಳನ್ನು ಪಡೆದಿರುವ ಅಗ್ರ ಪಂಕ್ತಿಯ ಹವ್ಯಾಸಿ ಹಾಸ್ಯಗಾರರಾಗಿದ್ದಾರೆ.
ವಿಜಯ ಬ್ಯಾಂಕ್‌ನ ಉದ್ಯೋಗದೊಂದಿಗೆ ಶ್ರೀ ಬಪ್ಪನಾಡು ಮೇಳದಲ್ಲಿಯೂ ಪ್ರಧಾನ ಹಾಸ್ಯಗಾರನಾಗಿ ಕಲಾ ವ್ಯವಸಾಯ ಮಾಡಿರುವ ಯಕ್ಷಾರಾಧಕರಾದ ಇವರು ಗ್ರಾಮ್ಯ ತುಳು ಭಾಷಾ ಸೊಗಡನ್ನು ತನ್ನ ಅಶ್ಲೀಲ ರಹಿತ ಹಾಸ್ಯ ಸಂಭಾಷಣೆಯಲ್ಲಿ ಅನಾವರಣಗೊಳಿಸುತ್ತಾ ತಾನು ನಗದೆ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸುವ ಅಪೂರ್ವ ಯಕ್ಷಗಾನ ಕಲಾ ಸಾಧಕ.