ಮಂಗಳೂರು : ಮಂಗಳೂರು ಎಚ್.ಎಂ.ಎಸ್. ಸಂಘಟನೆಯ ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ವತಿಯಿಂದ ‘ಬಾಂಡಿಂಗ್ ತ್ರೂ ಬೀಡಿ’ ಕೃತಿಯ ಅನಾವರಣ ದಿನಾಂಕ : 18-07-2023ರಂದು ನಡೆಯಿತು.
ನಾನಾ ಸಾಹಿತಿಗಳು ಬರೆದ ಬೀಡಿ ಉದ್ಯಮದ ಕಾರ್ಮಿಕರ ಬಗೆಗಿನ ನೋವು ನಲಿವಿನ ಲೇಖನಗಳುಳ್ಳ ‘’ಬೀಡಿ ಬದುಕು’ ಕನ್ನಡ ಪುಸ್ತಕದ ಇಂಗ್ಲೀಷ್ ಅವತರಣಿಕೆ ‘ಬಾಂಡಿಂಗ್ ತ್ರೂ ಬೀಡಿ’ ಕೃತಿಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಬೆಂಗಳೂರಿನ ವಿಧಾನ ಸೌಧದ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಅವರು ಮಾತನಾಡುತ್ತಾ “ಕರಾವಳಿ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ಬೀಡಿಯನ್ನೇ ನಂಬಿಕೊಂಡು ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ಬೀಡಿ ಉದ್ಯೋಗದಿಂದಲೇ ಮಕ್ಕಳಿಗೆ ಶಿಕ್ಷಣ ನೀಡಿ ಉದ್ಯೋಗ ಕಲ್ಪಿಸಿಕೊಟ್ಟ ಅದೆಷ್ಟೋ ಕುಟುಂಬಗಳನ್ನು ನಾವು ಕಂಡಿದ್ದೇವೆ. ಪ್ರಸಕ್ತ ದಿನಗಳಲ್ಲಿ ಬೀಡಿ ಉದ್ಯಮವೂ ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಬೀಡಿ ಕಾರ್ಮಿಕರು ಹಲವಾರು ಸಮಸ್ಯೆಗಳಿಗೆ ಒಳಗಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಅವರ ಸಮಸ್ಯೆ- ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು” ಎಂದರು.
ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ನ ಅಧ್ಯಕ್ಷ ಮಹಮ್ಮದ್ ರಫಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ ಕೆ.ಎಸ್., ಉಪಾಧ್ಯಕ್ಷ ಇಸ್ಮಾಯಿಲ್ ಡಿ.ಎಸ್., ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಮೈಸೂರ್ ಪ್ರತಿನಿಧಿ ರಾಮ್ ಪ್ರಿಯಾದಾಸ್, ಇಕ್ಬಾಲ್ ಎಚ್.ಆರ್., ಸಿದ್ದಿಕ್ ಅರ್ಕಾನ ಉಪಸ್ಥಿತರಿದ್ದರು.