ಮಂಗಳೂರು : ಆಕಾಶವಾಣಿಯ ಉನ್ನತ ಶ್ರೇಣಿ ಸಂಗೀತ ಕಲಾವಿದೆ ಹಾಗೂ ಹಿನ್ನಲೆ ಗಾಯಕಿಯಾಗಿರುವ ಸಂಗೀತಾ ಬಾಲಚಂದ್ರ ಕಲಾಬದುಕಿನಲ್ಲಿ 25 ವರ್ಷ ಪೂರೈಸಿದ ಸಲುವಾಗಿ ದಿನಾಂಕ 23 ಆಗಸ್ಟ್ 2026ರಂದು ಬೆಳಿಗ್ಗೆ 6-30ರಿಂದ 24 ಆಗಸ್ಟ್ 2026ರ ಬೆಳಿಗ್ಗೆ 7-30ರವರೆಗೆ ಸತತ 25 ಗಂಟೆಗಳ ಕಾಲ ದಾಸರ ಪದಗಳನ್ನು ಹಾಡುವ ‘ಪಂಚ ವಿಂಶತಿ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.


‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗಾಗಿ ಈ ಪ್ರಯತ್ನ ಮಾಡುತ್ತಿದ್ದು, ಉಡುಪಿಯ ಶ್ರೀಕೃಷ್ಣ ಮಠದ ಬಳಿಯ ಗೀತಾಮಂದಿರದ ಶ್ರೀಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು 1,500 ನಿಮಿಷ ನಿರಂತರವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ, ಗುರುರಾಜ್ ಅವರು ಸಂಪೂರ್ಣ ಹೊಸದಾಗಿ ಸ್ವರಸಂಯೋಜನೆ ಮಾಡಿರುವ 250 ದಾಸರ ಪದಗಳನ್ನು ಪ್ರಸ್ತುತಿಪಡಿಸಲಿದ್ದೇನೆ. ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಮತ್ತು ತಬಲಾ ವಾದಕರು ಸೇರಿ 8 ಮಂದಿಯನ್ನೊಳಗೊಂಡ ಎರಡು ಪ್ರತ್ಯೇಕ ಸಹ-ಕಲಾವಿದರ ತಂಡ ಸಹಕರಿಸಲಿದೆ. ಸಂಗಿತಾಸಕ್ತರು ಈ ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಬೇಕು. ಸ್ಟುಡಿಯೊ ಎಂಜಿನಿಯರ್ ಮತ್ತು ಕೀಪ್ಯಾಡ್ ಆರ್ಟಿಸ್ಟ್ ಗುರುರಾಜ್, ‘ಗಾಯಕಿಯೊಬ್ಬರು ‘ದಾಸರಪದ’ಗಳನ್ನು ನಿರಂತರ 25 ಗಂಟೆ ಹಾಡುತ್ತಿರುವುದು ದೇಶದಲ್ಲೇ ಮೊದಲ ಪ್ರಯತ್ನ. ಈ ಸಾಧನೆಗಾಗಿ ಸಂಗೀತಾ ಮೂರು ತಿಂಗಳುಗಳಿಂದ ನಿತ್ಯ ನಿರಂತರ 6 ಗಂಟೆ ಅಭ್ಯಾಸ ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಪ್ರತಿ ಮೂರು ಗಂಟೆಗಳಿಗೊಮ್ಮೆ 10 ನಿಮಿಷ ವಿಶ್ರಾಂತಿಯನ್ನಷ್ಟೇ ಪಡೆಯಲಿದ್ದಾರೆ’ ಎಂದು ಸಂಗೀತಾ ಬಾಲಚಂದ್ರ ಇವರು ಮಾಹಿತಿ ನೀಡಿದ್ದಾರೆ.
