ಬೆಂಗಳೂರು : ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ (ರಿ.) ಬೆಂಗಳೂರು ಅರ್ಪಿಸುವ ‘ಅದಮ್ಯ ರಂಗೋತ್ಸವ’ ಕಾರ್ಯಕ್ರಮವನ್ನು ದಿನಾಂಕ 24, 25 ಮತ್ತು 26 ಮಾರ್ಚ್ 2026ರಂದು ಪ್ರತಿ ದಿನ ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 24 ಮಾರ್ಚ್ 2026ರಂದು ಕವಯತ್ರಿ ಶ್ರೀಮತಿ ಹೆಚ್.ಎಲ್. ಪುಷ್ಪ ಇವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆ ಫೌಂಡೇಷನ್ ಅಭಿನಯಿಸುವ ಟಿ.ಪಿ. ಕೈಲಾಸಂರವರ ‘ನಂಕಂಪನಿ’ ನಾಟಕ ಪ್ರದರ್ಶನ ನಡೆಯಲಿದೆ. ಕಂಪನಿ ಶೈಲಿಯ ಸಂಗೀತಮಯ ಹಾಸ್ಯ ನಾಟಕಕ್ಕೆ ವಿ. ಮನೋಹರ ಸಂಗೀತ ಹಾಗೂ ಋತ್ವಿಕ್ ಸಿಂಹ ನಿರ್ದೇಶನ ಮಾಡಿದ್ದಾರೆ.
ದಿನಾಂಕ 25 ಮಾರ್ಚ್ 2026ರಂದು ಹಿರಿಯ ಪೌರಾಣಿಕ ರಂಗ ನಿರ್ದೇಶಕರಾದ ಕಲ್ಲೂರು ಶ್ರೀನಿವಾಸ್, ರೂಪಾಂತರ ರಂಗ ನಿರ್ದೇಶಕರಾದ ಕೆ.ಎಸ್.ಡಿ.ಎಲ್. ಚಂದ್ರು, ಕೆ.ಆರ್. ಪುರಂ ಯುವ ಫರ್ಜನೆ ಇದರ ಅಧ್ಯಕ್ಷರಾದ ಪ್ರಶಾಂತ್ ರೈ ಮತ್ತು ಸಮನ್ವಯ ಅಧ್ಯಕ್ಷರಾದ ಸೋಮಶೇಖರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಪ್ರಯೋಗ ರಂಗ ಇವರಿಂದ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ ಕಿ.ರಂ. ನಾಗರಾಜ್ ಇವರ ರಚನೆ ಹಾಗೂ ಸಿ.ಜಿ.ಕೆ. ಇವರ ನಿರ್ದೇಶನದಲ್ಲಿ ನಡೆಯಲಿದೆ.
ದಿನಾಂಕ 26 ಮಾರ್ಚ್ 2026ರಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ಸಮಾರೋಪ ನುಡಿಗಳನ್ನಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ಜಿ. ಕಪ್ಪಣ್ಣ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಂತಲಾ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕ ಕಾರ್ಯದರ್ಶಿಯಾದ ಶ್ರೀಮತಿ ಕವಿತಾ ರಾವ್ ಇವರಿಗೆ ರಂಗ ಗೌರವ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರು ಬಹುರೂಪಿ ತಂಡದವರಿಂದ ಮಾಲತೇಶ ಬಡಿಗೇರ ಇವರ ನಿರ್ದೇಶನದಲ್ಲಿ ‘ಮಾರೀಕಾಡು’ ನಾಟಕ ಪ್ರದರ್ಶನಗೊಳ್ಳಲಿದೆ.

