ಮಂಗಳೂರು : ಮಂಗಳೂರಿನ ಕೊಡಿಯಾಲಬೈಲಿನ ಭಗವತಿ ನಗರದದಲ್ಲಿರುವ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯದ ವಾರ್ಷಿಕೋತ್ಸವದ ಪ್ರಯುಕ್ತ ‘ಪ್ರತಿಬಿಂಬಗಳು’ ಎಂಬ ಶೀರ್ಷಿಕೆಯಡಿ 2023-24ನೇ ಸಾಲಿನ ವಾರ್ಷಿಕ ಕಲಾಪ್ರದರ್ಶನವು ದಿನಾಂಕ 19-07-2024ರಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಚಿತ್ರಕಲೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಕಾರಂಜಿ ಇನ್ಫೋಟೆಕ್ ಪೈ.ಲಿ. ಇದರ ನಿರ್ದೇಶಕರಾದ ವಿಕ್ರಮ್ ಕೆಮ್ಮೆ, ‘ಆರ್ಕಿಡ್ ಆರ್ಟ್ ಗ್ಯಾಲರಿ’ ಇದರ ನಿರ್ದೇಶಕರಾದ ವಿಲಿಯಂ ಪಾಯಸ್, ಶ್ರೀ ಮಹಾಲಸಾ ಶಿಕ್ಷಣ ಸಮಿತಿ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಬಿ. ಕೆ., ನಿರ್ದೇಶಕರಾದ ಬಾಬುರಾವ್ ಅತಿಥಿಗಳಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ರಚಿಸಿದ 400ಕ್ಕೂ ಹೆಚ್ಚು ವಿವಿಧ ಪ್ರಕಾರದ ಕಲಾಕೃತಿಗಳು ಪ್ರದರ್ಶನದಲ್ಲಿದ್ದು, ರೇಖಾಚಿತ್ರ, ಸ್ಥಿರಚಿತ್ರಣ, 2ಡಿ ವಿನ್ಯಾಸ, ನಿಸರ್ಗಚಿತ್ರ, ಸೃಜನಶೀಲ ವರ್ಣಚಿತ್ರಗಳು, ಮಂಡಲ ಚಿತ್ರಗಳು, ಜಾಹೀರಾತು ಕಲೆ, ಸಾಂದರ್ಭಿಕ ಚಿತ್ರಗಳು ಹಾಗೂ ಡಿಜಿಟಲ್ ಕಲಾಕೃತಿಗಳು ಪ್ರದರ್ಶನದಲ್ಲಿವೆ. ಈ ಪ್ರದರ್ಶನವು ದಿನಾಂಕ 19-07-2024 ರಿಂದ 21-07-2024ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.