ಕಾಸರಗೋಡು : “ಬಹು ಭಾಷಾ ಸಂಗಮ ಭೂಮಿಯಾದ ಕಾಸರಗೋಡು ಪ್ರದೇಶದಲ್ಲಿ ವಿವಿಧ ಆಚಾರ, ವಿಚಾರಗಳು ಧ್ವನಿಸುತ್ತವೆ. ಇಲ್ಲಿನ ಭಾಷಾ ವೈವಿಧ್ಯತೆಗಳು ಉಳಿದೆಲ್ಲಾ ಪ್ರದೇಶಗಳಿಗೆ ಮಾದರಿ. ನೂರ ಇಪ್ಪತ್ತೈದು ಗಾಯಕ-ಗಾಯಕಿಯರನ್ನ ಒಂದೇ ವೇದಿಕೆಯಲ್ಲಿ ವಿವಿಧ ಭಾಷೆಗಳ ಹಾಡುಗಳನ್ನು ಹಾಡುವುದೆಂದರೆ ದೊಡ್ಡ ಸಾಹಸವೇ ಸರಿ” ಎಂದು ಕಾಸರಗೋಡಿನ ಶಾಸಕ ಎನ್.ಎ. ನೆಲ್ಲಿಕುನ್ನು ಹೇಳಿದರು.
ಅವರು ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕವಾದ ‘ಸ್ವರಚಿನ್ನಾರಿ’ಯ ನೇತೃತ್ವದಲ್ಲಿ ದಿನಾಂಕ 05 ಜನವರಿ 2026ರಂದು ಪದ್ಮಗಿರಿ ಕಲಾಕುಟೀರದಲ್ಲಿ ಏರ್ಪಡಿಸಿದ ‘ಅಂತರ್ಧ್ವನಿ’ ಕರೋಕೆ ಗಾಯಕರ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.


ಇಲ್ಲಿನ ನಾಡು ನುಡಿ ಸಂಸ್ಕೃತಿಗಳಿಗಾಗಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿರುವ ರಂಗಚಿನ್ನಾರಿಯ ಸಾಧನೆಗಳನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾಸರಗೋಡಿನ ಎಲ್ಲಾ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಂಭ್ರಮಿಸುವುದೆಂದರೆ ನಿಜಕ್ಕೂ ಅಭಿನಂದನೀಯ ಎಂದರು.


ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕಾಸರಗೋಡಿನ ನಗರ ಸಭಾ ಮಾಜಿ ಅಧ್ಯಕ್ಷರಾದ ಎಸ್.ಜೆ. ಪ್ರಸಾದ, ಚಲನಚಿತ್ರ ನಟರಾದ ಕೆ.ಎಸ್. ಶ್ರೀಧರ್, ನಿರ್ಮಾಪಕ ವಿತರಕರಾದ ಟಿ.ಎ. ಶ್ರೀನಿವಾಸ್, ಸ್ವರಚಿನ್ನಾರಿಯ ಗೌರವಧ್ಯಕ್ಷ ಶ್ರೀ ಕೃಷ್ಣಯ್ಯ ಅನಂತಪುರ, ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್, ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ವೇದಿಕೆಯಲ್ಲಿದ್ದರು.


‘ಅಂತರ್ಧ್ವನಿ’ಯಲ್ಲಿ ಭಾಗವಹಿಸಿದ ನೂರಾರು ಗಾಯಕಿ-ಗಾಯಕರಿಗೆ ‘ವಿನ್ ಟಚ್’ ಆಸ್ಪತ್ರೆಯವರು ಕೊಡಮಾಡಿದ ಸ್ಮರಣಿಕೆಯನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಏರ್ಪಡಿಸಿದ ರಂಗಚಿನ್ನಾರಿಯ ನಿರ್ದೇಶಕರೂ ಸಂಚಾಲಕರೂ ಆದ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು.


ಅರುವತ್ತು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಗಾಯಕ-ಗಾಯಕಿಯವರಿಗೆ ಉದಾರವಾಗಿ ನೀಡಿದ ಕಾಸರಗೋಡಿನ ಖ್ಯಾತ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯರಾದ ವೈ. ಸತ್ಯನಾರಾಯಣ ಮಾಸ್ತರ್ ರವರಿಗೆ ಗೌರವಿಸಲಾಯಿತು.

ರಂಗಚಿನ್ನಾರಿ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿ, ಕೆ. ಸತ್ಯನಾರಾಯಣ, ಉದಯ ಕುಮಾರ್ ಮನ್ನಿಪ್ಪಾಡಿ, ಜನಾರ್ದನ ಅಣಂಗೂರು, ಕಿಶೋರ ಪೆರ್ಲ, ರಾಜಮೋಹನ ಶೆಟ್ಟಿ, ಗೋಪಿ ಬೆಂಗಳೂರು, ನ್ಯಾಯವಾದಿ ಕೆ.ಎನ್. ಅಶೋಕ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀಮತಿ ಪ್ರತಿಜ್ಞಾ ಕಂಗಲ್, ಸೌಮ್ಯ ಪ್ರವೀಣ್, ಬಬಿತಾ ಆಚಾರ್ಯ, ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.


