ಮಡಿಕೇರಿ : ಕಲಾಕಾವ್ಯ ನಾಟ್ಯ ಶಾಲೆಯ ಏಳನೇ ವರ್ಷದ ವಾರ್ಷಿಕೋತ್ಸವವವು ಸಂಭ್ರಮದಿಂದ ದಿನಾಂಕ 14 ಏಪ್ರಿಲ್ 2025ರಂದು ನಡೆಯಿತು. ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಭರತನಾಟ್ಯ ಕಲಾವಿದೆ ಮಿಲನ ಭರತ್ ಹಾಗೂ ಯೋಗ ಗುರು ಶಿಲ್ಪ ರವೀಂದ್ರ ರೈ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಿಲನಾ ಭರತ್ “ಒಂದು ನಾಟ್ಯಶಾಲೆಯನ್ನು ಸ್ಥಾಪಿಸುವುದು ಸುಲಭದ ವಿಷಯವಲ್ಲ, ತಾನು ಕಲಿತು ಬಳಿಕ ಇತರರಿಗೆ ಆ ವಿದ್ಯೆಯನ್ನು ಧಾರೆಯೆರೆಯಬೇಕಾಗಿರುತ್ತದೆ, ಇದಕ್ಕೆ ಬಹಳ ಅತ್ಮಸ್ಥೆರ್ಯದ ಅಗತ್ಯವಿರುತ್ತದೆ. ಕಾವ್ಯಶ್ರೀ ಅವರು ಎಲ್ಲವನ್ನೂ ಮೀರಿ ಈ ಶಾಲೆಯನ್ನು ಕಟ್ಟಿದ್ದಾರೆ. ಅವರ ಸಾಧನೆ ನಿಜಕ್ಕೂ ಅಭಿನಂದನೀಯ” ಎಂದರು.
ಶಿಲ್ಪಾ ರವೀಂದ್ರ ರೈ ಮಾತನಾಡಿ “ಇಂದು ಭಾರತೀಯ ನೃತ್ಯಕಲೆ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕುಂಠಿತವಾಗುತ್ತಿದೆ, ಜನರು ಆಸಕ್ತಿ ಕಳೆದುಕೊಳ್ಳುತ್ತಿರುವುದು ಇದಕ್ಕೆ ಮೂಲ ಕಾರಣ. ಆದರೆ ಕಾವ್ಯಶ್ರೀ ದಕ್ಷಿಣ ಭಾರತದ ಪ್ರಮುಖ ನೃತ್ಯ ಪ್ರಕಾರವಾದ ಭರತನಾಟ್ಯದ ಮೇಲಿಟ್ಟಿರುವ ಗೌರವ, ಅಭಿಮಾನ ನಿಜಕ್ಕೂ ಮೆಚ್ಚುವಂತದ್ದು, ಈ ನೃತ್ಯಶಾಲೆ ಸ್ಥಾಪಿಸಲು ಅವರು ಅಂದು ಇಟ್ಟ ದಿಟ್ಟ ಹೆಜ್ಜೆ ಇಂದು ಹೆಮ್ಮರವಾಗಿದೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ” ಎಂದು ಹಾರೈಸಿದರು.
ಕಳೆದ ಏಳು ವರ್ಷಗಳಲ್ಲಿ ಕಲಾಕಾವ್ಯ ನಾಟ್ಯಶಾಲೆ ನಡೆದುಬಂದ ಹಾದಿಯ ಕುರಿತು ವಿದುಷಿ ಕಾವ್ಯಶ್ರೀ ಕಪಿಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾಕಾವ್ಯ ನಾಟ್ಯಶಾಲೆ ಆರಂಭವಾದಲ್ಲಿಂದ ಇಲ್ಲಿಯವರೆಗೆ ಇದ್ದ ಸವಾಲುಗಳು, ಏಳುಬೀಳುಗಳು ಹಾಗೂ ತಮಗಿದ್ದಂತಹ ಯೋಜನೆ, ಯೋಚನೆಗಳನ್ನು ಹಂಚಿಕೊಂಡರು. “ಇಂದಿನ ಯುವಜನತೆ ಸಂಸ್ಕೃತಿದತ್ತವಾಗಿ ಬಂದ ಕಲಾ ಪ್ರಕಾರಗಳನ್ನು ತ್ಯಜಿಸಿ ಆಧುನಿಕ ನೃತ್ಯ ಕಲೆಗಳಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ, ಆದರೆ ಭಾರತೀಯ ಸಂಸ್ಕೃತಿಯನ್ನು ಸದಾ ಉನ್ನತಿಗೆ ಕೊಂಡೊಯ್ಯುವುದು ಇಲ್ಲಿನ ಭರತನಾಟ್ಯದಂತಹ ಕಲಾ ಪ್ರಕಾರಗಳು, ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕೃತಿಯ ಹಿರಿಮೆಯನ್ನು ಧಾರೆಯೆರೆಯಬೇಕಿದೆ” ಎಂದರು. ಕಲಾಕಾವ್ಯ ನಾಟ್ಯಶಾಲೆಯ ವಿದ್ಯಾರ್ಥಿಗಳು ಸಾಧನೆಯಲ್ಲಿ ಸದಾ ಮುಂದು, ಈ ವರ್ಷ ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಪರೀಕ್ಷೆಯಲ್ಲಿ ಕಲಾಕಾವ್ಯ ನಾಟ್ಯಶಾಲೆಯ ವಿದ್ಯಾರ್ಥಿ ಮಂಡೀರ ಯುಕ್ತಾನ್ ನೀಲಮ್ಮ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಐದು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ಇತರ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ತಮ್ಮ ಈ ನೃತ್ಯಶಾಲೆಯ ಯಶಸ್ಸಿನ ಜೊತೆ ಬೆಂಬಲವಾಗಿ ನಿಂತ ತಮ್ಮ ಕುಟುಂಬದ ಕುರಿತು ಸಂತಸ ವ್ಯಕ್ತಪಡಿಸಿದರು.
ನಾಟ್ಯಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹದಿನೆಂಟು ನೃತ್ಯಗಳ ವೈಭವ ನೆರೆದ ಜನರ ಕಣ್ಮನಗಳನ್ನು ತಣಿಸಿತು. ತೊಂಭತ್ತಾರು ಮಕ್ಕಳ 7,776 ಗೆಜ್ಜೆಯ ನಾದ ಹೊಸ ಲೋಕವನ್ನೇ ಸೃಷ್ಟಿಸಿದಂತಿತ್ತು. ಕಾರ್ಯಕ್ರಮದಲ್ಲಿ ದುಗ್ಗಳ ಕಪಿಲ್, ನೂರ್ತಲೆ ಸೋಮಣ್ಣ, ನವೀನ್ ಅಂಬೆಕಲ್ಲು, ತಹಶೀಲ್ದಾರ್ ಪ್ರವೀಣ್, ರೋಟರಿ ಮಿಸ್ಟ್ ಹಿಲ್ಸ್ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಹಾಜರಿದ್ದರು. ಆನಂದ್ ಕೊಡಗು ಕಾರ್ಯಕ್ರಮವನ್ನು ನಿರೂಪಿಸಿದರು.