ಕುಂಭಾಶಿ : ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧದ ಅಡಿಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಈವರೆಗೆ 12 ತಾಳಮದ್ದಳೆಯನ್ನು ಆಯೋಜಿಸಿದ್ದು, ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪ್ರತೀ ಸಂಕಷ್ಟಹರ ಚತುರ್ಥಿ ದಿನದಂದು ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಸಹಯೋಗದೊಂದಿಗೆ ಶ್ರೀ ವಿನಾಯಕ ದೇವಸ್ಥಾನದ ಸಹಕಾರದೊಂದಿಗೆ ದಿನಾಂಕ 05 ಫೆಬ್ರವರಿ 2026ರಂದು ಸಂಜೆ 4-00 ಗಂಟೆಗೆ ಅರ್ಥಾಂಕುರ-14 ಕಾರ್ಯಕ್ರಮವನ್ನು ಆಯೋಜಿಸಿದೆ.
ಪ್ರಸಿದ್ಧ ಅರ್ಥದಾರಿ ವಾಸುದೇವ ರಂಗ ಭಟ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಪ್ರಸಿದ್ಧ ವಾಗ್ಮಿ ಪವನ್ ಕಿರಣ್‌ಕೆರೆ ಭಾಗವಹಿಸಲಿದ್ದಾರೆ. ಯುಗಳ ಸಂವಾದ ಕಾರ್ಯಕ್ರಮವಾಗಿ ಈ ಇಬ್ಬರು ಅರ್ಥದಾರಿಗಳು ಮಾತಿನ ಮಂಟಪದಲ್ಲಿ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು, ಮದ್ದಳೆವಾದಕರಾಗಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಕುಮಾರ ಅಮೀನ್ ಕೊಕ್ಕರ್ಣಿ ಭಾಗವಹಿಸಲಿದ್ದಾರೆ. ಬಳಿಕ ಶ್ರೀಪರ್ಣ ಯಕ್ಷ ಬಳಗ ತೆಕ್ಕಟ್ಟೆ ಕಲಾವಿದರಿಂದ ‘ವರಾಹ ರೂಪಂ’ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಭಾಗವತರಾಗಿ ಪಂಚಮಿ ವೈದ್ಯ ತೆಕ್ಕಟ್ಟೆ, ಮದ್ದಳೆವಾದಕರಾಗಿ ರಾಘವೇಂದ್ರ ಹೆಗಡೆ ಹಾಗೂ ಚಂಡೆಯಲ್ಲಿ ಕುಮಾರ್ ಅಮೀನ್ ಸಹಕರಿಸಲಿದ್ದಾರೆ ಎಂದು ಆನೆಗುಡ್ಡೆ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ.

