ಉಡುಪಿ : ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ‘ಬಾಲ ಮತ್ತು ಕಿಶೋರ ಯುಗಳ ನೃತ್ಯ’ ಕಾರ್ಯಕ್ರಮವು ದಿನಾಂಕ 05 ಜನವರಿ 2025ರಂದು ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಅಥಿತಿ ಶ್ರೀಯುತ ಮೋಹನ್ ರಾವ್ ಇವರು ದೀಪ ಬೆಳಗಿಸಿ ಶುಭ ಹಾರೈಸಿದರು.
ಬಹಳ ವರ್ಷದಿಂದಲೂ ಬೈಲೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಮತ್ತು ಪ್ರೋತ್ಸಾಹ ಕೊಡುತ್ತಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಬಗ್ಗೆ ಪ್ರಸ್ತಾಪಿಸುತ್ತ ಶ್ರೀಯುತ ಜಯರಾಮ ಆಚಾರ್ಯರವರು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ನಡೆಸುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ “ಪ್ರತಿನಿತ್ಯವೂ ದೇವತಾರಾಧನೆಯಲ್ಲಿ ರಾಜೋಪಚಾರ ಮಂತ್ರದ ಮುಖಾಂತರ ಮಾತ್ರ ನಡೆಯುತ್ತಿದ್ದು, ಇನ್ನು ಮುಂದೆ ನೃತ್ಯ, ಸಂಗೀತ ನಿತ್ಯ ಆರಾಧನೆಯಲ್ಲಿ ಬರಲಿ. ಇಂತಹ ಕಾರ್ಯಕ್ರಮಕ್ಕೆ ದೇವಸ್ಥಾನಗಳ ವ್ಯವಸ್ಥಾಪಕರು ಅವಕಾಶ ಮಾಡಲಿ” ಎಂದು ನುಡಿದರು.
“ಪರಿಷತ್ ನೃತ್ಯ ಕಲೆ ಬೆಳವಣಿಗೆಗೆ ಹಲವಾರು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ನೃತ್ಯ ಪರಿಷತ್ ಏಕಕಾಲದಲ್ಲಿ ಬಾಲ ಮತ್ತು ಕಿಶೋರ ಯುಗಳ ನೃತ್ಯಕಾರ್ಯಕ್ರಮ ಮಂಗಳೂರು, ಪುತ್ತೂರು ಮತ್ತು ಉಡುಪಿ ಮೂರು ಕಡೆಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ. ಎಲ್ಲಾ ನೃತ್ಯ ಗುರುಗಳು ಮತ್ತು ಅವರ ಶಿಷ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಪರಿಸರದಲ್ಲಿ ಪ್ರೋತ್ಸಾಹ ಕಲಾವಿದರಿಗೆ ಸಿಗಬೇಕು” ಎಂದು ಪರಿಷತ್ತಿನ ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರು ಹೇಳಿದರು.
ಉಡುಪಿಯ ಭರತನಾಟ್ಯ ನೃತ್ಯ ಗುರುಗಳು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ವಿದುಷಿ ಪಾವನ ಮತ್ತು ವಿದ್ವಾನ್ ಭವಾನಿ ಶಂಕರ್ ಕಾರ್ಯಕ್ರಮ ನಿರೂಪಿಸಿ, ಪರಿಷತ್ತಿನ ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರು ಸ್ವಾಗತ ಮಾಡಿ ಧನ್ಯವಾದ ಅರ್ಪಿಸಿದರು. ಬಾಲ ಮತ್ತು ಕಿಶೋರ ನೃತ್ಯ ಕಾರ್ಯಕ್ರಮದಲ್ಲಿ ಸುಮಾರು 40 ಪ್ರಬುದ್ಧ ಮಕ್ಕಳು ಭಾಗವಹಿಸಿದ್ದರು.