ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಶವಂತ ಚಿತ್ತಾಲರ 95ನೆಯ ಜನ್ಮ ದಿನದ ಹಿನ್ನೆಯಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮ ದಿನಾಂಕ 03-08-2023ರಂದು ನಡೆಯಿತು.
ಚಿತ್ತಾಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಕನ್ನಡ ಕಥಾಲೋಕಕ್ಕೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ ಯಶವಂತ ಚಿತ್ತಾಲರು. ಅದುವರೆಗೂ ಕನ್ನಡ ಸಾಹಿತ್ಯಕ್ಕೆ ಅಪರಿಚಿತವಾಗಿದ್ದ ಕಾರ್ಪೂರೇಟ್ ಲೋಕದ ಅನುಭವವನ್ನು ಪರಿಚಯಿಸಿದವರು. ಹನೇಹಳ್ಳಿಯ ಹುಲುಸಾದ ಅನುಭವವನ್ನು ಮತ್ತು ಮುಂಬೈ ಮಾಯಾನಗರಿಯ ಆತಂಕಗಳನ್ನು ತಮ್ಮ ವಿಶಿಷ್ಟ ಕಥನದ ಮೂಲಕ ಹಿಡಿದಿಟ್ಟ ಚಿತ್ತಾಲರು ಕನ್ನಡ ಸಾಹಿತ್ಯ ಲೋಕದ ಸೀಮೆಯನ್ನು ವಿಸ್ತರಿಸಿದರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಸಣ್ಣ ಊರು ಹನೇಹಳ್ಳಿಯಲ್ಲಿ ದಿನಾಂಕ 03-08-1928 ರಂದು ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲರು.
ಕುಮಟಾ, ಧಾರವಾಡ, ಮುಂಬಯಿ, ನ್ಯೂಜರ್ಸಿ (ಅಮೆರಿಕಾ)ಗಳಲ್ಲಿ ಓದು ಮುಗಿಸಿದ ಇವರು ರಸಾಯನ ವಿಜ್ಞಾನದ ಶಾಖೆಯಾದ ಪಾಲಿಮಾರ್ ತಂತ್ರಜ್ಞಾನದಲ್ಲಿ ತಜ್ಞತೆಯ ಸಂಪಾದನೆಯ ಜೊತೆಗೆ ಮುಂಬಯಿ ವಿಶ್ವವಿದ್ಯಾನಿಲಯದ ಪ್ಲ್ಯಾಸ್ಟಿಕ್ ವಿಭಾಗದಲ್ಲಿ ಪದವಿಯನ್ನು ಮುಗಿಸಿ, ಸ್ಟೀಫನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಬೇಕ್‌ಲೈಟ್ ಹೈಲಾಂ ಸಂಸ್ಥೆಯಲ್ಲಿ ಉದ್ಯೋಗ ಮಾಡಿ ನಿವೃತ್ತಿಯನ್ನು ಪಡೆದರು. ದೂರದರ್ಶನದ ನಿರ್ದೇಶಕರಾಗಿದ್ದಾಗ ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ಟಿ.ವಿ ಧಾರವಾಹಿಯಾಗಿ ಪ್ರಸಾರವಾಗಿತ್ತು.” ಎಂದು ಅಭಿಮಾನದಿಂದ ಹೇಳಿದರು.
ಇದೇ ಸಂದರ್ಭದಲ್ಲಿ ಯಶವಂತ ಚಿತ್ತಾಲರ ಜೊತೆಗಿನ ತಮ್ಮ ಒಡನಾಟವನ್ನು ಹಂಚಿ ಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿಯವರು “ಚಿತ್ತಾಲರ ಶಿಕಾರಿ ಕಾದಂಬರಿ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದೆ. ಅವರ ವಿಶಿಷ್ಟ ಕಥೆಗಳಾದ ‘ಕತೆಯಾದಳು ಹುಡುಗಿʼ, ʻಆಟʼ, ʻಅಬೋಲಿನʼ ಮೊದಲಾದವುಗಳ ಮಹತ್ತ್ವವನ್ನು ಹೇಳಿ ತಮ್ಮ ಅನಾರೋಗ್ಯದ ಸಂದರ್ಭದಲ್ಲಿಯೂ ‘ದಿಗಂಬರ’ ಕಾದಂಬರಿಯನ್ನು ಬರೆದ ಕ್ರಮವನ್ನು ವರ್ಣಿಸಿದರು.”
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಯಶವಂತ ಚಿತ್ತಾಲರ 95ನೆಯ ಜನ್ಮ ಜನ್ಮದಿನದ ಹಿನ್ನೆಲೆಯಲ್ಲಿ ಪರಿಷತ್ತಿನಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮದಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ.ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಮ್.ಪಟೇಲ್ ಪಾಂಡು ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಪರಿಷತ್ತಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.