ಮಂಗಳೂರು : ವಿಜಯ ಕರ್ನಾಟಕ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನವು ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣ ಆಯೋಜಿಸಿದೆ. ಸಂಗೀತ ಪ್ರಿಯರ ಬಹುನಿರೀಕ್ಷಿತ, ಕಳೆದ ಐದು ಆವೃತ್ತಿಗಳಲ್ಲಿ ಯಶಸ್ವಿಯಾಗಿದ್ದ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮವು ಮಂಗಳೂರು ಪುರಭವನದಲ್ಲಿ ದಿನಾಂಕ 21-07-2024ರಂದು ಸಂಜೆ ಗಂಟೆ 5-00ರಿಂದ ನಡೆಯಲಿದೆ. ಹಿರಿಯ ದಿಗ್ಗಜ ಕಲಾವಿದೆ ಸಂಗೀತ ಕಟ್ಟಿ ಕುಲಕರ್ಣಿ ಮತ್ತು ಜೀ ಮರಾಠಿ ಸರಿಗಮಪ ಸಂಗೀತ ಸ್ಪರ್ಧೆಯ ಫೈನಲಿಸ್ಟ್ ಮುಗ್ಧ ವೈಶಂಪಾಯನ ಹಾಗೂ ಪ್ರಥಮೇಶ ಲಘಾಟೆ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ.
ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 2018, 2019, 2021, 2022 ಮತ್ತು 2023ರ ಆವೃತ್ತಿಗಳು ನಗರದ ಪುರಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ‘ಬೋಲಾವ ವಿಠಲ’ ಕಾರ್ಯಕ್ರಮ ನಡೆದಿತ್ತು. ಸುಮಾರು ಮೂರೂವರೆ ಗಂಟೆಗಳ ಕಾಲ ಕಲಾವಿದರು ಕಲಾರಸಿಕರಿಗೆ ಸಂಗೀತದ ರಸದೌತಣ ಉಣಬಡಿಸಿದ್ದರು. ಇದೀಗ ಮತ್ತೊಮ್ಮೆ ಅಂತಹುದೇ ಶ್ರೇಷ್ಠ ಮಟ್ಟದ ಸಂಗೀತಕ್ಕಾಗಿ ವೇದಿಕೆ ಸಿದ್ಧವಾಗಿದೆ. ಅದೇ ಕಾರ್ಯಕ್ರಮ, ಅದೇ ಪರಿಕಲ್ಪನೆ, ಅದೇ ಉದ್ದೇಶ. ಆದರೆ ಈ ಬಾರಿ ಬದಲಾವಣೆ ಎಂದರೆ ಕಲಾವಿದರು ಮಾತ್ರ. ಅಂತಾರಾಷ್ಟ್ರೀಯ ಮಟ್ಟದ ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಕಲಾವಿದರಾದ ಬೆಂಗಳೂರಿನ ಸಂಗೀತ ಕಟ್ಟಿ ಕುಲಕರ್ಣಿ, ಮುಗ್ಧ ವೈಶಂಪಾಯನ ಮತ್ತು ಪ್ರಥಮೇಶ ಲಘಾಟೆ ಇವರ ಹಾಡುಗಾರಿಕೆಗೆ ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್ ವಾಜ್‌ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಆದಿತ್ಯ ಒ.ಕೆ., ಕೊಳಲಿನಲ್ಲಿ ಶಡಜ್ ಗೋಡ್ಖಿಂಡಿ ಸಾಥ್ ನೀಡಲಿದ್ದಾರೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ದೇಶದ ಹಲವು ಶ್ರೇಷ್ಠ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುವ ಮುಂಬಯಿಯ ಪಂಚಮ್ ನಿಶಾದ್ ಸಂಸ್ಥೆಯ ಅಭೂತಪೂರ್ವ ಪರಿಕಲ್ಪನೆಯ ಕಾರ್ಯಕ್ರಮವಾಗಿರುವ ‘ಬೋಲಾವ ವಿಠಲ’ ವಿನೂತನ ಸಂತವಾಣಿ ಕಾರ್ಯಕ್ರಮವಾಗಿದೆ. ಪಂಚಮ್ ನಿಶಾದ್ ಸಂಸ್ಥೆಯು ಆಷಾಢ ಮಾಸದಲ್ಲಿ ‘ಬೋಲಾವ ವಿಠಲ’ ಶೀರ್ಷಿಕೆಯಡಿ ಪುಣೆ, ಮುಂಬಯಿ, ಹೊಸದಿಲ್ಲಿ, ಗೋವಾ, ಕೊಲ್ಗೊತ್ತಾ, ಬೆಂಗಳೂರು ಅಲ್ಲದೆ ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಳೆದ ಹಲವು ದಶಕಗಳಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ನಗರವಾಸಿಗಳಿಗೆ ಸಂಗೀತದ ಶ್ರೇಷ್ಠತೆ ಪರಿಚಯಿಸಿದ ‘ಬೋಲಾವ ವಿಠಲ’ ತಂಡವನ್ನು 2018ರಿಂದ ಮಂಗಳೂರಿಗೆ ವಿಜಯ ಕರ್ನಾಟಕ ಪತ್ರಿಕೆ ಹಾಗೂ ಸಂಗೀತ ಭಾರತಿ ಪ್ರತಿಷ್ಠಾನ ಪರಿಚಯಿಸಿತು. ಇದೀಗ ಮುಂದುವರಿದ ಭಾಗವಾಗಿ ಈ ವರ್ಷವೂ ಕಾರ್ಯಕ್ರಮ ಆಯೋಜಿಸುತ್ತಿದೆ.
ಪಾಂಡುರಂಗನಿಗೆ ಅಭಂಗ್ ರೂಪದಲ್ಲಿ ಆರಾಧನೆ ಶ್ರೇಷ್ಠ. ಪಂಡರಾಪುರದಲ್ಲಿ ಪ್ರತಿದಿನ ಇಂತಹ ಆರಾಧನೆಗಳು ನಡೆಯುತ್ತಿರುತ್ತವೆ. ಆದರೆ ಎಲ್ಲರಿಗೂ ಪಂಡರಾಪುರಕ್ಕೆ ಹೋಗಿ ಆರಾಧನೆ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಭಕ್ತಿ ಒಂದೆಡೆಯಾದರೆ, ಪ್ರತಿಭೆಯ ಅನಾವರಣ ಇನ್ನೊಂದೆಡೆ. ನಿಯಮಿತ ಕಾಲಮಿತಿಯಲ್ಲಿ ಕಲಾವಿದರು ತಮ್ಮ ಶ್ರೇಷ್ಠತೆಯನ್ನು ಅನಾವರಣಗೊಳಿಸಲಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗೀತಪ್ರಿಯರಿಗೆ ವಿಭಿನ್ನ ಮಾದರಿಯ ಕಾರ್ಯಕ್ರಮ ಕೇಳಲು ಅವಕಾಶವಾಗಿದೆ.
‘ಬೋಲಾವ ವಿಠಲ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಸಂಗೀತಾಸಕ್ತರು ನಗರದ ಎಂ.ಜಿ. ರಸ್ತೆಯಲ್ಲಿರುವ ಕಾಯರ್‌ಮಂಜ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ‘ವಿಜಯ ಕರ್ನಾಟಕ’ ಅಥವಾ ಕೊಡಿಯಾಲ್ ಬೈಲ್ ನಲ್ಲಿರುವ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಪಾಸ್ ಪಡೆದುಕೊಳ್ಳಬಹುದು. ಪಾಸ್ ಹೊಂದಿರುವವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ.