ಮಂಗಳೂರು : ಹಳೆಯ ತಲೆಮಾರಿನ ಅರ್ಥಧಾರಿಗಳಾದ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ. ರಾಮಣ್ಣ ಶೆಟ್ಟಿ ಸಂಸ್ಮರಣಾರ್ಥ ಪ್ರತಿ ವರ್ಷ ನೀಡುವ ‘ಬೊಂಡಾಲ ಪ್ರಶಸ್ತಿ’ 2023-24ನೇ ಸಾಲಿಗೆ ಕಟೀಲು ಮೇಳದ ಖ್ಯಾತ ವೇಷಧಾರಿ ಮೋಹನ್ ಕುಮಾರ್ ಅಮ್ಮುಂಜೆ ಆಯ್ಕೆಯಾಗಿದ್ದಾರೆ. ಯಕ್ಷಾಂಗಣ ಮಂಗಳೂರು ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಚಾಲಕತ್ವದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಪ್ರಶಸ್ತಿ ನೀಡಲಾಗುವುದು ಎಂದು ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹೇಳಿದ್ದಾರೆ.
ಬಟ್ಲಬೆಟ್ಟು ಅಮ್ಮುಂಜೆಯ ದಿ. ವೆಂಕಪ್ಪ ಬೆಳ್ಚಡ ಮತ್ತು ದಿ. ಸುಶೀಲಾ ದಂಪತಿಗೆ 1973 ಜುಲೈ 4ರಂದು ಜನಿಸಿದ ಮೋಹನ್ ಕುಮಾರ್ ಎಸ್.ಎಸ್.ಎಲ್.ಸಿ.ವರೆಗೆ ಓದಿದ್ದಾರೆ. ಗುಂಡಿಲಗುತ್ತು ಶಂಕರ ಶೆಟ್ಟರಿಂದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಕಲಿತ ಅವರು 1991ರಲ್ಲಿ ಯಕ್ಷಗಾನ ರಂಗಕ್ಕೆ ಬಂದರು. ಮುಂದೆ ಪಡ್ರೆ ಚಂದು ಅವರಿಂದಲೂ ನಾಟ್ಯಾಭ್ಯಾಸ ಮಾಡಿ ಬಳಿಕ ಶ್ರೀ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರ ಸೇರಿ ಕೋಳ್ಯೂರು ರಾಮಚಂದ್ರ ರಾಯರಿಂದ ಎಲ್ಲಾ ಬಗೆಯ ನೃತ್ಯಗಳಲ್ಲಿ ಪರಿಣತಿ ಗಳಿಸಿದರು.
ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಥಮ ಬಾರಿಗೆ ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಿದ ಮೋಹನ್ ಕಟೀಲು ಮೇಳದಲ್ಲಿ 29 ವರ್ಷ, ಎಡನೀರು ಮೇಳದಲ್ಲಿ ಎರಡು ವರ್ಷ, ಬಪ್ಪನಾಡಿನಲ್ಲಿ ಒಂದು ವರ್ಷ ಸೇರಿದಂತೆ ಒಟ್ಟು 32 ವರ್ಷಗಳ ತಿರುಗಾಟ ನಡೆಸಿದ್ದಾರೆ. ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ ಮುಂಡರು, ವಿಷ್ಣು, ಶ್ರೀಕೃಷ್ಣ, ಹಿರಣ್ಯಾಕ್ಷ, ಶಿಶುಪಾಲ, ದಕ್ಷ, ಋತುಪರ್ಣ, ಜಾಂಬವ, ಅಶ್ವತ್ಥಾಮ, ಶಶಿಪ್ರಭೆ, ಭ್ರಮರ ಕುಂತಳೆ ಇತ್ಯಾದಿ ಪಾತ್ರಗಳಲ್ಲಿ ಗಮನ ಸೆಳೆದ ಅವರು ಪ್ರಸ್ತುತ ಕಟೀಲು ಮೇಳದಲ್ಲಿ ದೇವಿ ಮಹಾತ್ಮೆಯ ರಕ್ತಬೀಜನಾಗಿ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಕದ್ರಿ ವಿಷ್ಣು ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ ಗೌರವ ಪಡೆದಿರುವ ಅಮ್ಮುಂಜೆ ಮೋಹನ್ ಕುಮಾರ್ ಪತ್ನಿ ಶಶಿಕಲಾ ಹಾಗೂ ಮಕ್ಕಳಾದ ವೈಶಾಖ ಮತ್ತು ವೈಷ್ಣವಿ ಅವರೊಂದಿಗೆ ಬಟ್ಲಬೆಟ್ಟು ‘ಕೌಸ್ತುಭಾ’ದಲ್ಲಿ ವಾಸವಾಗಿದ್ದಾರೆ.
ಬೊಂಡಾಲ ಪ್ರಶಸ್ತಿಯು ರೂ.10,000/- ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು ಫೆಬ್ರವರಿ 15ರಂದು ನಡೆಯುವ ಬೊಂಡಾಲ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಆಶ್ರಯದಲ್ಲಿ ಫೆಬ್ರವರಿ 14ರಿಂದ 16ರವರೆಗೆ ನಡೆಯುವ ‘ಬಯಲಾಟದ ಸುವರ್ಣ ಸಂಭ್ರಮ’ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.