ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ (ರಿ.) ಇದರ ಆಡಳಿತಕ್ಕೊಳಪಟ್ಟ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಪ್ರಕಟಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ‘ಜ್ಞಾನ ದರ್ಶಿನಿ’ ಮತ್ತು ‘ಜ್ಞಾನ ವರ್ಷಿಣಿ’ ಎಂಬ ನೈತಿಕ ಮೌಲ್ಯಾಧರಿತ ಕೃತಿಗಳ ಲೋಕಾರ್ಪಣೆ ಹಾಗೂ 21ನೇ ವರ್ಷದ ರಾಜ್ಯಮಟ್ಟದ ಅಂಚೆ ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭವು ದಿನಾಂಕ 10 ಆಗಸ್ಟ್ 2024ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಇವರು ಮಾತನಾಡಿ “ಆಟ-ಪಾಠಗಳು ಜೊತೆಯಾಗಿದ್ದಾಗ ಶಿಕ್ಷಣ ಅರ್ಥಪೂರ್ಣವಾಗಿದ್ದು, ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಪುಸ್ತಕದ ಜೊತೆ ಇದ್ದಾಗ ಮಸ್ತಕದ ವಿಕಾಸವೂ ಆಗುವುದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು” ಎಂದು ಹೇಳಿದರು.
ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶುಭಾಶಂಸನೆ ಮಾಡಿ, “ಕಲೆಯನ್ನು ತಪಸ್ಸಿನಂತೆ ಏಕಾಗ್ರತೆ ಮತ್ತು ಸತತ ಪ್ರಯತ್ನದಿಂದ ಅಭ್ಯಾಸ ಮಾಡಿದರೆ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಡಿ.ಡಿ.ಪಿ.ಐ. ವೆಂಕಟೇಶ ಸುಬ್ರಾಯ ಪಟಗಾರ ಮಾತನಾಡಿ “ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ “ಮಾನವೀಯತೆ ಇಲ್ಲದ ಜನ್ಮ ವ್ಯರ್ಥ. ಗುರು-ಹಿರಿಯರನ್ನು ಗೌರವಿಸುವುದು, ಸಮಾನ ಮನಸ್ಕರಲ್ಲಿ ಸ್ನೇಹಿತರಂತೆ ಪ್ರೀತಿ-ವಿಶ್ವಾಸದಿಂದ ವ್ಯವಹರಿಸುವುದು ಹಾಗೂ ಕಿರಿಯರಲ್ಲಿ ಪ್ರೀತಿ, ಕರುಣೆ ಅನುಕಂಪ ತೋರಿಸುವುದು ಇತ್ಯಾದಿ ಮಾನವೀಯ ಮೌಲ್ಯಗಳಿಂದ ಜೀವನ ಪಾವನವಾಗುತ್ತದೆ. ಆದುದರಿಂದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನೂ ಕಲಿಸಿಕೊಡಲಾಗುತ್ತದೆ” ಎಂದರು.
ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರನ್ ವರ್ಮ ಉಪಸ್ಥಿತರಿದ್ದರು. ದಾವಣಗೆರೆಯ ಖ್ಯಾತ ಕಲಾವಿದ ಶಾಂತಯ್ಯ ಪರಡಿಮಠ ಕುಂಚದಿಂದ ರೂಪಿಸಿದ ಭಾರತಮಾತೆಯ ಚಿತ್ರ ಮತ್ತು ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರ ಗಾಯನ ಮತ್ತು ನೃತ್ಯ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.