ಉರ್ವಸ್ಟೋರ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 22 ಆಗಸ್ಟ್ 2026ರಂದು ಅಕಾಡೆಮಿಯ ಸಭಾಂಗಣದಲ್ಲಿ ಆಯೋಜಿಸಲಾದ ಲೇಖಕ ಪ್ರೊ. ಬಿ.ಎ. ವಿವೇಕ ರೈ ಇವರ ಕೃತಿಗಳಾದ ‘ತುಳುವ ಜಾಲ ಪೊಲಿ’ ಮತ್ತು ‘ನಾಲಾಯಿಡ್ದ್ ನಾಲೂರುಗು’ ಬಿಡುಗಡೆ ಸಮಾರಂಭ ಮತ್ತು ವಿಚಾರಗೋಷ್ಠಿ ನಡೆಯಿತು.
ಹಿರಿಯ ಸಂಶೋಧಕ, ನಿವೃತ್ತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ ಇವರು ಕೃತಿ ಬಿಡುಗಡೆಗೊಳಿಸಿ, “ಉತ್ತಮ ವಿಚಾರಗಳು ನಾಲ್ಕೂರಿಗೆ ಹರಡಬೇಕು ಎನ್ನುವ ಅರ್ಥವನ್ನು ‘ನಾಲಾಯಿಡ್ದ್ ನಾಲೂರುಗು’ ಕೃತಿ ಹೊಂದಿದೆ. ಕನ್ನಡದಲ್ಲಿ ‘ಅರಸು ಬಾಯಿಯಲ್ಲಿ ಹೇಳಿದ ಮಾತು ಭೂಖಂಡಕ್ಕೆ ತಲುಪಬೇಕು’ ಎನ್ನುವ ಅರ್ಥ ಈ ಮಾತಿಗೆ ಇದೆ. ವಿವಿಧ ಕೃತಿಗಳಿಗೆ ಅವರು ಬರೆದ ಮುನ್ನುಡಿ ಒಟ್ಟು ಸೇರಿಸಿ ಕೃತಿ ರಚನೆಯಾಗಿದೆ. ಮರು ಮುದ್ರಣದ ಮೂಲಕ ಕೃತಿ ಓದುಗರನ್ನು ತಲುಪುತ್ತಿದೆ. ‘ತುಳುವ ಜಾಲ ಪೊಲಿ’ ಉತ್ತಮ ವಿಚಾರ ಮೇಲೆ ಬರಲಿ ಎನ್ನುವ ಅಥವನ್ನು ಹೊಂದಿದೆ. ತುಳುವಿನ ವಿಚಾರ ಪುಸ್ತಕದ ರೂಪದಲ್ಲಿ ಹೊರ ಬರುತ್ತಿದೆ. ಗ್ರಂಥ ವಿಮರ್ಶೆ ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಸಂಶೋಧಕರಿಗೆ ಹೊಸ ವಿಚಾರ ತಿಳಿಸುವ, ಅನೇಕ ಮಾಹಿತಿಗಳು ಪುಸ್ತಕದಲ್ಲಿವೆ. ಜರ್ಮನ್ ಭಾಷೆಯಿಂದ ತುಳು ಸೊಗಡಿಗೆ ಹೊಂದುವಂತೆ ಕೃತಿಗಳನ್ನು ಭಾಷಾಂತರಿಸಿದ್ದಾರೆ” ಎಂದರು.

ಈ ಸಮಾರಂಭದಲ್ಲಿ ಭಾಗವಹಿಸಿದ ಜಾನಪದ ವಿದ್ವಾಂಸ, ಲೇಖಕ ಪ್ರೊ. ಬಿ.ಎ. ವಿವೇಕ ರೈ ಇವರು ಮಾತನಾಡಿ “ತುಳು ಭಾಷೆಯ ಬೆಳವಣಿಗೆ ಜತೆಗೆ ಬದುಕು ಕಟ್ಟುವ ಕೆಲಸವೂ ಆಗಬೇಕು. ಇಂದು ತುಳು 40ಕ್ಕೂ ಹೆಚ್ಚು ಜಾತಿಗಳ ಮನೆ ಭಾಷೆಯಾಗಿದ್ದು, ಜತೆಗೆ ಕೊಂಕಣಿ, ಬ್ಯಾರಿ ಸೇರಿದಂತೆ ವಿವಿಧ ಸಮುದಾಯಗಳ ಜನರೂ ತುಳುವನ್ನು ಆಡು ಭಾಷೆಯಾಗಿ ಬಳಸುತ್ತಿದ್ದಾರೆ. ಹೊಸ ತಲೆಮಾರಿಗೆ ತುಳುವಿನಲ್ಲಿ ಹೊಸ ಪುಸ್ತಕಗಳ ರಚನೆಗೆ ತರಬೇತಿ, ಅಚ್ಚು ಹಾಕುವುದು, ಓದಿಸುವ ಕೆಲಸವೂ ಆಗಬೇಕು. 32 ವರ್ಷಗಳ ಹಿಂದೆ ಅಕಾಡೆಮಿ ಅಧ್ಯಕ್ಷನಾಗಿದ್ದೆ. ಆ ಕಾಲದಲ್ಲಿ ಅಕಾಡೆಮಿಯಲ್ಲಿ ಸಾಕಷ್ಟು ಮಂದಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದರು. ಈಗ ಹತ್ತನೇ ಅಧ್ಯಕ್ಷರ ಅವಧಿಯಲ್ಲಿ ಮುಂದುವರಿಯುತ್ತಿದೆ. ಅಕಾಡೆಮಿಯ ಕೆಲಸಗಳು ‘ಅಕಾಡೆಮಿಕ್’ ಆಗಿ ಸಾಗಬೇಕು ಮತ್ತು ನೂರುಕಾಲ ಉಳಿಯುವ ಮೂಲಕ ತುಳು ಭಾಷೆಯ ಬೆಳವಣಿಗೆಗೆ ತನ್ನ ಕೊಡುಗೆ ನೀಡಬೇಕು” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಮಾತನಾಡಿ, “1994ರಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಆರಂಭ, ತುಳು ಬೆಳವಣಿಗೆಯ ಮೈಲುಗಲ್ಲಾಗಿತ್ತು. ಮೊದಲ ಅಧ್ಯಕ್ಷರಾಗಿದ್ದ ಪ್ರೊ. ಬಿ.ಎ. ವಿವೇಕ ರೈ ಇವರನ್ನು ಎರಡನೇ ಅವಧಿಗೂ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಅಕಾಡೆಮಿಗೆ ಪಂಚಾಂಗ ಹಾಕಿ ಕೊಟ್ಟವರೇ ಅವರು. ಅವರು ಬಿತ್ತಿದ ಬೀಜವನ್ನು ಅಧ್ಯಕ್ಷನಾಗಿ ಮುಂದಕ್ಕೆ ಕೊಂಡೊಯ್ಯುತ್ತಿದ್ದೇನೆ. ತುಳು ಬದುಕು, ಅಧ್ಯಯನ, ಸಂಶೋಧನೆ ಕ್ಷೇತ್ರಗಳಿಗೆ ಇಂದಿಗೂ ಅವರೇ ಅಧ್ಯಕ್ಷರು, ಅವರೇ ನಮ್ಮನ್ನು ಮುನ್ನಡೆಸುತ್ತಿದ್ದಾರೆ” ಎಂದರು.


ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್., ಅಕಾಡೆಮಿ ಸದಸ್ಯರಾದ ಬಾಬು ಕೊರಗ ಪಾಂಗಾಳ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ಉಡುಪಿ ಸರಕಾರಿ ಪ್ರ. ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲೆ ಡಾ. ನಿಕೇತನಾ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ. ತುಕಾರಾಮ ಪೂಜಾರಿ, ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ತುಳು ಜಾನಪದ ವಿದ್ವಾಂಸ ಡಾ. ಪೂವಪ್ಪ ಕಣಿಯೂರು ಭಾಗವಹಿಸಿದ್ದರು. ಅಕ್ಷಯ ಆರ್. ಶೆಟ್ಟಿ ನಿರೂಪಿಸಿ, ದುರ್ಗಾ ಪ್ರಸಾದ್ ರೈ ಸ್ವಾಗತಿಸಿದರು.

