ನೀರ್ಚಾಲು : ಶಂಕರ ಶರ್ಮ ಕುಳಮರ್ವ ಇವರು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ‘ಉತ್ತರ ಕಾಂಡ ಕಾವ್ಯಧಾರಾ’ ಕೃತಿಯ ಲೋಕಾರ್ಪಣಾ ಸಮಾರಂಭವು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 18 ಆಗಸ್ಟ್ 2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ವಿದ್ವಾಂಸ ವಿಶ್ರಾಂತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ ಇವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ “ರಾಮಾಯಣದ ಉತ್ತರ ಕಾಂಡದ ಕಥೆಯನ್ನು ಭಾಮಿನಿ ಷಟ್ಪದಿಯಲ್ಲಿ ಶಂಕರ ಶರ್ಮ ಕುಳಮರ್ವರು ಸೊಗಸಾಗಿ ನಿರೂಪಿಸಿದ್ದಾರೆ. ಇದು ಹೊಸಗನ್ನಡ ಕಾಲಘಟ್ಟದ ಅಪೂರ್ವ ಕೃತಿ” ಎಂದು ಹೇಳಿದರು.
ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಬೇ.ಸಿ. ಗೋಪಾಲಕೃಷ್ಣ ಭಟ್ ಕೃತಿಯ ಅವಲೋಕನ ಮಾಡಿ “ಶಂಕರ ಶರ್ಮರು ರಚಿಸಿದ ಈ ಮಹಾಕಾವ್ಯದಲ್ಲಿ ಅದರದ್ದೇ ಆದ ವಿಶೇಷ ಗುಣಗಳಿವೆ. ಸುಂದರ, ಸುಲಲಿತ, ಸುಮಧುರವಾಗಿದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕೃತಿಕಾರ ಶಂಕರಶರ್ಮ ಕುಳಮರ್ವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು.
ಹಿರಿಯ ಶಿಕ್ಷಕಿ ಶೈಲಜಾ ಬಿ. ದೀಪ ಬೆಳಗಿಸಿ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಉಪ್ಪಂಗಳ ಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು. ಕೃತಿಕಾರ ಶಂಕರಶರ್ಮ ಕುಳಮರ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶೀಲಾ ಶಂಕರಿ ಪ್ರಾರ್ಥನೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಹಿರಿಯ ಸಾಹಿತಿ ವಿ.ಬಿ. ಕುಳಮರ್ವ ಭಾಮಿನಿ ಷಟ್ಪದಿಯಲ್ಲಿ ಆಶುಕವಿತೆ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಶ್ಯಾಮ ಪ್ರಸಾದ್ ಕುಳಮರ್ವ ಧನ್ಯವಾದ ಸಮರ್ಪಿಸಿದರು.