Subscribe to Updates

    Get the latest creative news from FooBar about art, design and business.

    What's Hot

    ಡಾ. ವಸಂತಕುಮಾರ ಪೆರ್ಲ ಇವರಿಗೆ ಹವ್ಯಕ ಸಭಾದಿಂದ ಸನ್ಮಾನ

    January 28, 2026

    ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಅಂಗವಾಗಿ ‘ಬಾಲ ಯುಗ್ಮ ನೃತ್ಯ’ ಪ್ರಸ್ತುತಿ

    January 28, 2026

    ಬಸವಣ್ಣ ದೇವರಮಠದಲ್ಲಿ ‘ವಚನ ಕಂಠಪಾಠ ಸ್ಪರ್ಧೆ’ | ಏಪ್ರಿಲ್ 19

    January 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಡಾ. ನರಹರಿ ಮತ್ತು ಐ.ಎ.ಡಿ.
    Article

    ಪುಸ್ತಕ ವಿಮರ್ಶೆ | ಡಾ. ನರಹರಿ ಮತ್ತು ಐ.ಎ.ಡಿ.

    January 28, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡಿನ ಅಪೂರ್ವ ವೈದ್ಯ, ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಿಕೊಂಡ ಡಾಕ್ಟರ್ ನರಹರಿಯವರ ಸಾಧನೆ ಮತ್ತು ಸಂಘಟಿತ ಶುಶ್ರೂಷಾ ವಿಧಾನ ಹಾಗೂ ಅದರ ಫಲಶ್ರುತಿಗೆ ಸಂಬಂಧಿಸಿ ಡಾ. ಯು. ಮಹೇಶ್ವರಿಯವರು ‘ಸಂಯೋಜಿತ ಚಿಕಿತ್ಸೆಯ ಹರಿಕಾರ- ಡಾ. ನರಹರಿ ಮತ್ತು ಐ.ಎ.ಡಿ.’ ಎಂಬ ಮಹತ್ವದ ಕೃತಿಯನ್ನು ಬರೆದಿದ್ದಾರೆ. ಕಾಂತಾವರ ಕನ್ನಡ ಸಂಘ ಪ್ರಕಟಿಸಿದ ಈ ಪುಸ್ತಕವು ಸಂಸ್ಕೃತಿ ಸಂವರ್ಧನ ಚಿಂತನ ಮಾಲೆಯ ಆರನೇ ಕೃತಿಯಾಗಿದೆ.

    ಅಂತರ್ ಶಿಸ್ತೀಯ ಅಧ್ಯಯನದ ಫಲಶ್ರುತಿಯಾಗಿ ಮೂಡಿ ಬಂದಿರುವ ಈ ಕೃತಿಯು ವೈದ್ಯಕೀಯ, ಸಂಸ್ಕೃತಿ, ವಿಜ್ಞಾನ, ಸಮಾಜ ವಿಜ್ಞಾನ ಮುಂತಾದ ವಿಚಾರಗಳನ್ನೊಳಗೊಂಡಿದ್ದು ಆನೆಕಾಲು ರೋಗ ನಿರ್ಮೂಲನೆಯ ಕುರಿತು ಅಧಿಕೃತವಾಗಿ ಮಾತನಾಡುತ್ತದೆ.

    ಈ ಕೃತಿಯು ಸಮಕಾಲೀನ ಸಮುದಾಯಕ್ಕೆ ವೈದ್ಯ ವಿಜ್ಞಾನವನ್ನು ಕುರಿತ ಅರಿವು ದಾಟಿಸುವ ರೀತಿಯನ್ನು ನೋಡಿದಾಗ ಬಿ.ಜಿ.ಎಲ್. ಸ್ವಾಮಿಯವರ ‘ಹಸಿರು ಹೊನ್ನು’ ನೆನಪಾಗುತ್ತದೆ. ಹಾರುವ ಓತಿಯ ಅನ್ವೇಷಣೆಯನ್ನು ಒಳಗೊಂಡ ತೇಜಸ್ವಿಯವರ ಕಾದಂಬರಿಯ ನಿರೂಪಣಾ ರೀತಿಯೂ ಇಲ್ಲಿದೆ. ಆನೆಕಾಲು ರೋಗದ ನಿರ್ಮೂಲನ ವಿಧಾನಗಳಲ್ಲಿ ಐ.ಎ.ಡಿ.ಯ ಕೊಡುಗೆಯ ವೈಶಿಷ್ಟ್ಯದ ಬಗ್ಗೆ ಈ ಕೃತಿಯು ವಿಶೇಷ ಅಧ್ಯಯನವನ್ನು ಮಾಡಿದೆ.

    ವೈದ್ಯಕೀಯದಲ್ಲಿ ಆದ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸುವುದು ಮುಖ್ಯ. ಭೌತಿಕ ಮತ್ತು ಆಧ್ಯಾತ್ಮಿಕ ನೋಟದ ಸಂಗಮವಾದ ವ್ಯಕ್ತಿತ್ವದಿಂದಷ್ಟೇ ಸಾಮಾಜಿಕ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯ. ಕೈಗಾರಿಕಾ ಕ್ರಾಂತಿಯಿಂದ ಔದ್ಯಮೀಕರಣ ಹೆಚ್ಚಿರುವ ಈ ಕಾಲದಲ್ಲಿ ಡಾ. ನರಹರಿಯವರು ಹಿಡಿದಿರುವ ಈ ಮೂರನೇ ದಾರಿಗೆ ಸರಕಾರದಿಂದ ಸಹಾಯವನ್ನು ನಿರೀಕ್ಷಿಸಲಾಗದು. ಈ ರೀತಿಯ ಸಮಾಜ ಸೇವೆಗೆ ತುಂಬಾ ತಾಳ್ಮೆ ತ್ಯಾಗ ಮತ್ತು ತತ್ಪರತೆ ಬೇಕು. ಆಯುರ್ವೇದ ಮತ್ತು ಅಲೋಪತಿಗಳ ನಡುವೆ ಸಂಘರ್ಷ ಇದ್ದದ್ದೇ. ಆದರೆ ಅವುಗಳ ತಿರುಳನ್ನು ತಿಳಿದು ಒಳಿತನ್ನು ಸ್ವೀಕರಿಸಿ ಮುನ್ನಡೆಯುವವರು ಕಡಿಮೆ. 90 ಶೇಕಡಾದಷ್ಟು ಉರಿಯೂತಕ್ಕೆ ಪರಿಹಾರ ಕಾಣುವಂತೆ ದುಡಿದು ಸವಾಲಿಗೆ ಕ್ರಿಯಾತ್ಮಕವಾಗಿ ಉತ್ತರಿಸಿದ ಡಾ. ನರಹರಿಯವರು ಅಂಗಮರ್ದನ, ಯೋಗಾಭ್ಯಾಸ, ಅಭ್ಯಂಜನ ಪಥ್ಯ ಮುಂತಾದನ್ನು ಬಳಸಿ ಆಂಟಿ ಬಯೋಟೆಕ್ ಬಳಕೆಯನ್ನು ನಿಯಂತ್ರಿಸಿದ್ದಾರೆ.

    ಅನುದಾನದ ಹಂಗಿಲ್ಲದೆ, ಕಠಿಣ ದಾರಿಯಲ್ಲಿ ಸಾಗಿದ ವೈದ್ಯರೊಬ್ಬರ ಯಶೋಗಾಥೆ ಈ ಕೃತಿಯಲ್ಲಿದೆ. ಸಂಸ್ಕೃತಿ ಸಂಬಂಧಿ ಕೃತಿಯು ಸಕಾಲಿಕವಾಗಿದೆ. ಇಂಥ ಕೃತಿಯ ರಚನೆಯಲ್ಲಿ ಕೃತಿಕಾರನು ಸಮತೋಲನವನ್ನು ಸಾಧಿಸಬೇಕಾಗುತ್ತದೆ. ಪಾರಿಭಾಷಿಕ ಪದಗಳ ಬಳಕೆಯೂ ಸವಾಲೇ. ಮಹೇಶ್ವರಿಯವರಿಗೆ ಕ್ಷೇತ್ರಕ್ಕೆ ತಕ್ಕ ಸಮನ್ವಯತೆಯು ಸಾಧ್ಯವಾಗಿದೆ.

    ನರಹರಿಯವರ ಸಾಧನೆ ಸಣ್ಣದಲ್ಲ. ತಮ್ಮದಲ್ಲದ ತಪ್ಪಿನಿಂದ ರೋಗಿಯಾದವರ ಶುಶ್ರೂಷೆ, ಅಲೆಮಾರಿಗಳನ್ನು ಶಿಸ್ತಿಗೆ ತಂದ ಸಾಹಸ ಮುಂತಾಗಿ ಅನೇಕ ವಿಷಯಗಳು ಇಲ್ಲಿವೆ. ‘ಸಾಹಿತ್ಯ ಸುಮದೊಳಗೆ ವಿಜ್ಞಾನ ಮೇಳವಿಸೆ’ ಎಂಬ ಡಿ.ವಿ.ಜಿ. ಅವರ ಮಾತನ್ನು ನೆನಪಿಸಿ ಈ ಕೃತಿ ಹೊಸ ಜನಾಂಗ ಕಣ್ಣು ತೆರೆಯುವಂತೆ ಮಾಡಿದೆ.

    ಆನೆಕಾಲು ಎಂಬುದು ಭಯ ತರಿಸುವ ರೋಗವಾಗಿದೆ. ನರಹರಿಯವರು ಅದರ ವಿರುದ್ಧ ದುಡಿದಿದ್ದಾರೆ. ಅವರ ತಂಡವು 2004ರಿಂದ ಮೂರು ವರ್ಷಗಳಲ್ಲಿ 2000ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರ, ಎಚ್.ಐ.ವಿ. ಬಾಧಿತರ ಮಾಹಿತಿ ಸಂಗ್ರಹಿಸಿ, ಸೇವೆಯನ್ನು ವಿಸ್ತರಿಸಿತು. ಕೇರಳದಲ್ಲೆ ಅತಿ‌ ಹೆಚ್ಚು ಎಚ್.ಐ.ವಿ. ಸೋಂಕಿತರು ಕಾಸರಗೋಡಿನಲ್ಲಿದ್ದಾರೆ ಎಂಬ ಸ್ಥಿತಿಯಿತ್ತು. ಸಂಸ್ಥೆಯ ಕಾರ್ಯಕ್ರಮಗಳ ಮೂಲಕ ಆ ಸಂಖ್ಯೆ ರಾಜ್ಯದಲ್ಲೆ ಅತಿ ಕಡಿಮೆ ಎಂಬ ನೆಲೆಗೆ ತಲುಪಿತು. ಲೈಂಗಿಕ ಕಾರ್ಯಕರ್ತೆಯರಿಗಂತೂ ಇದರಿಂದ ಸಾಂತ್ವನ ಸಿಕ್ಕಿದೆ. ತಾನು ಹೆಚ್.ಐ.ವಿ. ಬಾಧಿತೆ ಎಂದು ವೇದಿಕೆಯಲ್ಲಿ ಹೇಳುವಷ್ಟು ಧೈರ್ಯ ಬಂದಿದೆ. ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಂಡ ಬಾಗಿಲಾಗಿ ಈ ಸಂಸ್ಥೆ ಹೇಗೆ ದುಡಿಯಿತೆಂಬುದನ್ನು ನಿರೂಪಿಸುವಲ್ಲಿ ಕೃತಿಯು ಯಶಸ್ವಿಯಾಗಿದೆ. ಇದು ಕಥಾನಕವಲ್ಲ. ಕಾದಂಬರಿಯಲ್ಲ. ಮೆಡಿ ಟರ್ಮುಗಳನ್ನು ಕಲಿತು ಅರ್ಥಮಾಡಿಕೊಂಡು ಡಾ. ಮಹೇಶ್ವರಿಯವರು ರಚಿಸಿದ ಅನನ್ಯ ಮತ್ತು ಅಸಾಧಾರಣ ಕೃತಿಯಾಗಿದೆ.

    ರೋಗ ಬಾಧೆ ಮತ್ತು ರೋಗಿ
    ಇವತ್ತಿನ ವೈದ್ಯಕೀಯ ವಿಧಾನದಲ್ಲಿ ಟೆಸ್ಟುಗಳ ಫಲಿತಾಂಶಗಳು ಹೇಳುವ ನಿರ್ಣಯಗಳು ಮತ್ತು ರೋಗಬಾಧಿತನನ್ನು ಮುಟ್ಟಿ ಮಾತಾಡಿಸುವ ದುಬಾರಿ ಯಂತ್ರೋಪಕರಣಗಳಷ್ಟೆ ಮುಖ್ಯವಾಗುತ್ತವೆ. ಕೆಲವು ಹಿರಿಯ ಅನುಭವೀ ವೈದ್ಯರ ಅದರಲ್ಲೂ ಫಿಸೀಶಿಯನ್ನುಗಳ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಾಗಿ ಅಸೌಖ್ಯಗಳು ಮನೋದೈಹಿಕ ಹಿನ್ನೆಲೆಯನ್ನು ಹೊಂದಿರುತ್ತವೆ. ಹಾಗಾಗಿಯೇ ನರಹರಿಯವರಂತೆ ಕೆಲವರಾದರೂ ಸಾಂತ್ವನ ಮತ್ತು ಶುಶ್ರೂಷೆ ನೀಡುವ ವಿಧಾನವನ್ನು ಅನುಸರಿಸುತ್ತಾರೆ. ಈ ಕೃತಿಯಲ್ಲಿ ಲೇಖಕಿಯು ಫಲಾನುಭವಿಗಳ ಅಭಿಪ್ರಾಯಗಳನ್ನೂ ಕೊಟ್ಟಿದ್ದಾರೆ. ಐ.ಎ.ಡಿ. ಬೆಳೆದು ಬಂದ ರೀತಿಯ ಜೊತೆ ಜೊತೆಗೇ ಚರ್ಮರೋಗಗಳಿಗೆ ಸಂಬಂಧಿಸಿ ನಡೆಸಿದ ಅಧ್ಯಯನಗಳು ಮಹತ್ವವನ್ನು ಪಡೆಯುತ್ತವೆ. ನೋವು ಹತಾಶೆ ಮತ್ತು ಆತಂಕಗಳ ಮಡುವಾಗುವ ರೋಗ ಬಾಧಿತನೂ ವೈದ್ಯರಿಗೆ ಅನೇಕ ಹೊಸ ವಿಷಯಗಳನ್ನು ತಿಳಿಸಬಲ್ಲ. ಕೆಲವರಂತೂ ಇರುವ ಎಲ್ಲ ಪದ್ಧತಿಗಳ ಹಿಂದೆ ಅಲೆದಾಡಿರುತ್ತಾರೆ. ಒಂದೆರಡು ದಶಕಗಳಿಂದ ‘ಆಯುಷ್’ ಎಂಬ ವ್ಯವಸ್ಥೆಯಡಿಯಲ್ಲಿ ಆಯುರ್ವೇದ, ಸಿದ್ಧ ಯುನಾನಿ ಹೋಮಿಯೋಪತಿಗಳಿಗೆ ಬೆಂಬಲ ದೊರೆತರೂ ಅವುಗಳು ಪರಸ್ಪರ ಹತ್ತಿರವಾಗಿರಲಿಲ್ಲ. ಒಂದು ಪದ್ಧತಿಯವರು ಇನ್ನೊಂದನ್ನು ಅಭ್ಯಸಿಸಿದರೂ ಬಳಸುವಂತಿಲ್ಲ. ದೇಶದ ಡ್ರಗ್ ಪಾಲಿಸಿಯೂ ಸಮರ್ಪಕವಲ್ಲ. ಒಂದೇ ರೋಗಕ್ಕೆ ಹಲವು ಕಂಪೆನಿಗಳು ಔಷಧ ತಯಾರಿಯ ಪರವಾನಗಿ ಪಡೆಯುತ್ತವೆ. ಆಯುಷ್ಮಾನ್ ಭಾರತ್ ಮೂಲಕ ಔಷಧಗಳು ಬಡಜನರಿಗೆ ಹತ್ತಿರವಾದರೆ ಅದರ ಮೇಲೆ ಅನಾವಶ್ಯಕವಾಗಿ ಕೆಂಡ ಕಾರುವ ಪರಿಸ್ಥಿತಿಯಿದೆ. ಶುದ್ಧವಾದ, ಗುಣಮಟ್ಟವುಳ್ಳ ಆಹಾರವನ್ನು ಒದಗಿಸುವ ಉತ್ಪನ್ನಗಳನ್ನು ಕೈಗೊಳ್ಳುವ ಸಂಸ್ಥೆಗಳು ಸವಾಲುಗಳನ್ನು ಎದುರಿಸುತ್ತವೆ. ಹೆಚ್ಚು ರೋಗಿಗಳನ್ನು ತಯಾರಿಸುವ ಇಂಥ ಸಮಾನಾಂತರ ಕೆಡುಕಿನ ಮುಂದೆ ಹಣಮಾಡುವ ಉತ್ಸಾಹವನ್ನು ನಿಯಂತ್ರಿಸಿ, ಅಮಾಯಕರ ಸೇವೆಗೆ ನಿಲ್ಲುವ ಚರ್ಮರೋಗ ಶುಶ್ರೂಷಾ ವಿಧಾನದಂತಹ ಪ್ರಯತ್ನಗಳಿಗೂ ಸರಕಾರ ಬೆಂಬಲ ಕೊಟ್ಟರೆ ಉಪಕಾರವಾಗುತ್ತದೆ. ಈ ನಿಟ್ಟಿನಲ್ಲಿ ತುಂಬ ಬೆಲೆಬಾಳುವ ಈ ಕೃತಿಯು ಇಂಗ್ಲೀಷ್ ಮತ್ತಿತರ ಭಾಷೆಗಳಿಗೆ ಅನುವಾದವಾಗಬೇಕಿದೆ.

    ವಿಮರ್ಶಕರು | ಪ್ರೊ. ಪಿ.ಎನ್. ಮೂಡಿತ್ತಾಯ

    ವಿಶ್ರಾಂತ ಪ್ರಾಂಶುಪಾಲರು ಭೂತಪೂರ್ವ ಅಧ್ಯಕ್ಷ, ಪಿ.ಜಿ. ರಿಸರ್ಚ್ ಸೆಂಟರ್ ಸರಕಾರಿ ಕಾಲೇಜು ಕಾಸರಗೋಡು
    ‘ಶ್ರೀ ಲಕ್ಷ್ಮೀ’, ಅಂಚೆ ಕಯ್ಯಾರು, ಉಪ್ಪಳ – 671322.

    ಪ್ರೊ. ಪಿ.ಎನ್. ಮೂಡಿತ್ತಾಯರು ಏಳು ವರ್ಷ ಆಕಾಶವಾಣಿ ಸಲಹೆಗಾರನಾಗಿಯೂ ಒಂದು ವರ್ಷ ತಲಚ್ಚೇರಿಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿರುವ ಇವರು ‘ದೇವರ ಕ್ಷಮೆ ಕೋರಿ’, ‘ಕಾರ್ಟೂನು ಬರೆಹಗಳು’, ‘ಮಿಸ್ಕಾಲು’ ಹೀಗೆ ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ‘ಗೋವು ಮತ್ತು ಸಾವಯವ ಬದುಕು’ ಹಾಗೂ ‘ಹಸಿರುವಾಣಿ’ ಎಂಬ ಎರಡು ಪ್ರಕೃತಿ ಪರಿಸರ ಕೃತಿಗಳನ್ನು ರಚಿಸಿದ್ದಾರೆ. ಗೋಪಕುಮಾರ್.ವಿ ಇವರ ಜೊತೆ ಸೇರಿ ಕಾರಂತರ ‘ಚೋಮನ ದುಡಿ’, ‘ಮೂಕಜ್ಜಿಯ ಕನಸುಗಳು’ ಹಾಗೂ ‘ಒಡಿಯೂರಿಲೆ ಅವಧೂತನ್’ ಹೀಗೆ ಆರು ಕೃತಿಗಳನ್ನು ಕನ್ನಡದಿಂದ ಮಲಯಾಳಕ್ಕೆ, ‘ಜ್ಞಾನಪ್ಪಾನ’, ‘ಚಟ್ಟಂಬಿ ಸ್ವಾಮಿಗಳು’, ‘ವ್ಯಾಸ ಭಾರತದ ದ್ರೌಪದಿ‌’ ಇತ್ಯಾದಿ ಕೃತಿಗಳನ್ನು ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದ್ದು. ಕವನ ಸಂಕಲನ ‘ಬೇರೆ ಶಬ್ದಗಳಿಲ್ಲ’ ಎಂಬ ಸ್ವರಚಿತ ಕವನ ಸಂಕಲನ ಮತ್ತು ಓರೆಗೆರೆ ಬರಹ (ಕಾರ್ಟೂನ್) ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ‘ಮಹಿಳಾ ವೈಭವ -2026’ | ಫೆಬ್ರುವರಿ 01 ಮತ್ತು 02
    Next Article ಬಸವಣ್ಣ ದೇವರಮಠದಲ್ಲಿ ‘ವಚನ ಕಂಠಪಾಠ ಸ್ಪರ್ಧೆ’ | ಏಪ್ರಿಲ್ 19
    roovari

    Add Comment Cancel Reply


    Related Posts

    ಡಾ. ವಸಂತಕುಮಾರ ಪೆರ್ಲ ಇವರಿಗೆ ಹವ್ಯಕ ಸಭಾದಿಂದ ಸನ್ಮಾನ

    January 28, 2026

    ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಅಂಗವಾಗಿ ‘ಬಾಲ ಯುಗ್ಮ ನೃತ್ಯ’ ಪ್ರಸ್ತುತಿ

    January 28, 2026

    ಬಸವಣ್ಣ ದೇವರಮಠದಲ್ಲಿ ‘ವಚನ ಕಂಠಪಾಠ ಸ್ಪರ್ಧೆ’ | ಏಪ್ರಿಲ್ 19

    January 28, 2026

    ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ‘ಮಹಿಳಾ ವೈಭವ -2026’ | ಫೆಬ್ರುವರಿ 01 ಮತ್ತು 02

    January 27, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.