ಕಥೆಗಾರ ರಘುನಾಥ್ ಚ.ಹ. ಇವರ ಇತ್ತೀಚಿನ ಕಥಾಸಂಕಲನ ‘ಇಲ್ಲಿಂದ ಮುಂದೆಲ್ಲ ಕಥೆ’ ಕನ್ನಡ ಕಥಾಲೋಕದಲ್ಲಿ ಒಂದು ಭಿನ್ನ ದಾರಿಯನ್ನು ಹಿಡಿದು ಸಾಗುವ ಕೃತಿ. ಭಿನ್ನ ತಂತ್ರಗಳೊಂದಿಗೆ ಓದುಗನನ್ನು ಬಿಗಿ ಹಿಡಿಯುತ್ತ, ಪ್ರತಿಯೊಂದು ಕಥೆಯೂ ಕೊನೆಯಲ್ಲಿ ನೀಡುವ ಒಂದು ಅನಿರಿಕ್ಷಿತ ತಿರುವು ಕುತೂಹಲವನ್ನು ಬೆಳೆಸುತ್ತ ಹೋಗುತ್ತದೆ. ಯಾವುದೇ ಹಿಂಜರಿಕೆಯಿಲ್ಲದೆ ಮನುಷ್ಯ ಜೀವನದ ವಾಸ್ತವಗಳನ್ನು ಮುಖಕ್ಕೆ ರಾಚುವಂತೆ ಹೇಳುವ ಈ ಕಥೆಗಳು ಒಂದು ಹೊಸ ಅರಿವನ್ನೂ ಮೂಡಿಸುತ್ತವೆ.
ಮೊದಲ ಕಥೆ ‘ಬಣ್ಣ’ ನಿರೂಪಕ ಮತ್ತು ಅವನ ಮನೆಗೆ ಬಣ್ಣ ಬಳಿಯುವ ಬಾಬು ಎಂಬವರ ನಡುವೆ ನಡೆಯುತ್ತದೆ. ಇದನ್ನು ಕೊರೋನಾ ಕಾಲದ ಕಥೆಗಳ ಸಾಲಿಗೂ ಸೇರಿಸಬಹುದು. ಕೊರೋನಾ ಮಾರಿ ಎಬ್ಬಿಸಿದ ಬಿರುಗಾಳಿಗೆ ತತ್ತರಿಸಿದ ನಾಲ್ಕು ವರ್ಷದ ಪುಟ್ಟ ಮಗಳನ್ನು ಕಳೆದುಕೊಂಡ ಬಾಬು ಇತರ ಮಕ್ಕಳ ಸುಖದಲ್ಲಿ ಸಮಾಧಾನ ಕಂಡುಕೊಳ್ಳುವ ವೇದಾಂತಿಯಾಗಿದ್ದಾನೆ. ಬಣ್ಣ ಬಳಿದು ಮುಗಿಸುವ ಕೊನೆಯ ದಿವಸ ನಿರೂಪಕನಿಗೆ ತನ್ನ ಮಗಳ ಫೋಟೋ ತೋರಿಸುವಷ್ಟರ ಮಟ್ಟಿಗೆ ಹತ್ತಿರವಾಗಿದ್ದಾನೆ. ನಿರೂಪಕನ ಮನಸ್ಸು ಬಾಬುವಿನ ದುಃಖದೊಂದಿಗೆ – ಅದು ‘ಎಂಪಥಿ’ ಅನ್ನಿಸುವಷ್ಟರ ಮಟ್ಟಿಗೆ ಒಂದಾಗುತ್ತದೆ. ಆದರೆ ಅದು ತಾತ್ಕಾಲಿಕವೆನ್ನುವುದನ್ನು ಕಥೆಯ ಕೊನೆಯ ಭಾಗ ಸಾಬೀತು ಪಡಿಸುತ್ತದೆ. ಎರಡು ವರ್ಷಗಳ ನಂತರ ಒಂದು ದಿನ ಫೇಸ್ ಬುಕ್ ತೆರೆದಾಗ ಬಾಬುವಿನ ಫ್ರೆಂಡ್ ರಿಕ್ವೆಸ್ಟ್ ನೋಡಿದಾಗಲಷ್ಟೇ ಅವನಿಗೆ ಬಾಬುವಿನ ನೆನಪಾಗುತ್ತದೆ ಮತ್ತು ಅದನ್ನು ಒಪ್ಪಲೇ ಬೇಡವೇ ಎನ್ನುವ ಹೊಯ್ದಾಟ ಉಂಟಾಗುವುದು ಇದಕ್ಕೆ ಸಾಕ್ಷಿ. ಬಾಬುವಿನ ದುಃಖಕ್ಕೆ ಅವನ ಪ್ರತಿಕ್ರಿಯೆ ಹೃದಯದಾಳವನ್ನು ಹೊಕ್ಕು ಕುಳಿತು ಕಾಡಿದ್ದಾದರೆ ಹೀಗಾಗುತ್ತಿರಲಿಲ್ಲ. ಇದು ಲಿಪ್ ಸಿಂಪಥಿ ತೋರಿಸಿ ಬಣ್ಣ ಬದಲಾಯಿಸುವ ವಿದ್ಯಾವಂತರು ಮತ್ತು ಮೆಲ್ದರ್ಜೆಯ ಮಂದಿಯ ಹಿಪಾಕ್ರಸಿ ಕೂಡಾ ಆಗಿದೆ.
‘ಬಿಡುಗಡೆ’ ಅನ್ನುವುದು ಆತ್ಮಕಥನದ ಹಿಂದಿನಿಂದ ಇಣುಕುವ ಆತ್ಮ ವಂಚನೆಯ ಕಥೆ. ನಿಜ ಹೇಳಬೇಕಿದ್ದರೆ ಪ್ರಾಮಾಣಿಕತೆ ಅನ್ನುವುದು ಯಾವುದೇ ಆತ್ಮಕಥನದ ಜೀವಾಳ. ನಾನು ನಿಜವನ್ನೇ ಹೇಳುತ್ತಿದ್ದೇನೆ ಅನ್ನುವ ಆತ್ಮವಿಶ್ವಾಸ ಅಲ್ಲಿರಬೇಕು. ಆದರೆ ಇಲ್ಲಿ ನಿರೂಪಕನಿಗೆ ಆತ್ಮಕಥನ ಬರೆದು ಮುಗಿಸಿದ ನಂತರವೂ ಆ ತೃಪ್ತಿಯಿಲ್ಲ. ಮೂವತ್ತೈದು ವರ್ಷಗಳಿಂದ ಜತೆಯಾಗಿದ್ದು ತನ್ನ ಪ್ರತಿಯೊಂದು ಬೇಕು-ಬೇಡಗಳನ್ನು ಅತ್ಯಂತ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದ ಹೆಂಡತಿಯ ಬಗ್ಗೆಯೇ ಅವನಿಗೆ ಖಚಿತವಾದ ಭಾವನೆಗಳಿಲ್ಲ. ಅವಳ ಬಗ್ಗೆ ತಾನು ಬರೆದದ್ದು ಸರಿಯಿದೆಯೋ ಇಲ್ಲವೋ ಗೊತ್ತಿಲ್ಲ. ಬಹಳ ಹೆಸರಾಂತ ಸಾಹಿತಿಯಾದ ಅವನು ಇದುವರೆಗೆ ತನಗಾಗಿ ಮಾತ್ರವೇ ಬದುಕಿದವನು. ಸಮಾಜದಲ್ಲಿ ಇತರರ ಬಗ್ಗೆ ತಾನು ಬರೆದದ್ದೂ ಸರಿಯೋ ತಪ್ಪೋ ಎಂಬುದೂ ಅವನಿಗೆ ಖಚಿತವಿಲ್ಲ. ಆದ್ದರಿಂದಲೇ ಬರೆಯುವ ಮೇಜಿನ ಬಳಿ ನಿದ್ದೆ ಹೋದ ಅವನಿಗೆ ಏನೇನೋ ದುಃಸ್ವಪ್ನಗಳು ಕಾಡುತ್ತವೆ. ಅವನು ಬರೆದಿಟ್ಟಿದ್ದ ಹಾಳೆಗಳೆಲ್ಲವೂ ಅವನನ್ನು ಬಿಟ್ಟು ಹೋಗುತ್ತವೆ. ಕೊನೆಯಲ್ಲಿ ಒಂದು ಹಾಳೆಯಿಂದ ಅವನಂತೇ ಇರುವ ಒಬ್ಬ ವ್ಯಕ್ತಿ ಎದ್ದು ಬಂದು ಅಲ್ಲಿಂದ ಹೊರಟು ಹೋಗುತ್ತಾನೆ. ಅನಂತರ ಹೊರಗೆ ಗಲಭೆ ಏಳುತ್ತದೆ. ಅವನು ನೀಡಿದ್ದನೆಂದು ಹೇಳಲಾದ ಒಂದು ಹೇಳಿಕೆಯ ಬಗ್ಗೆ ಪ್ರತಿಭಟನೆಯ ಅಲೆಗಳು ಎಲ್ಲೆಲ್ಲೂ ತುಂಬಿಕೊಳ್ಳುತ್ತವೆ. ಅವನು ಅದುವರೆಗೆ ಪ್ರತಿಪಾದಿಸಿದ ಸಿದ್ಧಾಂತಕ್ಕೆ ತದ್ವಿರುದ್ಧವಾದ ಹೇಳಿಕೆಯದು. ಸಹಜವಾಗಿಯೇ ಜನರು ಅದನ್ನು ವಿರೋಧಿಸುತ್ತಿದ್ದಾರೆ. ಅವನೀಗ ಅಕ್ಷರಶಃ ಒಂಟಿಯಾಗಿದ್ದಾನೆ. ಈಗ ಅವನಿಗೆ ಹೆಂಡತಿಯ ಜತೆಗಿನ ತನ್ನ ಬಂಧ ಮುಖ್ಯವೆನ್ನಿಸಿ ಅವಳನ್ನು ಮತ್ತೆ ಮತ್ತೆ ಕೇಳುತ್ತಾನೆ. ‘ನಿನಗೆ ನನ್ನಲ್ಲಿ ನಂಬಿಕೆಯಿದೆಯೇ?’ ಎಂದು. ಸದಾ ನಿರ್ಲಿಪ್ತಳಾಗಿ ಕಾಣುವ ಹೆಂಡತಿಗೆ ಗಂಡನಿಂದ ಬಿಡುಗಡೆಯಿಲ್ಲ. ತನಗೆ ತನ್ನಿಂದಲೇ ಬಿಡುಗಡೆಯಿಲ್ಲವೆಂದು ಅವನಿಗೆ ಮನವರಿಕೆಯಾಗುತ್ತದೆ. ವೈಯಕ್ತಿಕ ಮತ್ತು ಸಾಮಾಜಿಕ ಸಂಬಂಧಗಳ ಬಗ್ಗೆ ನಿರ್ಲಕ್ಷ್ಯ ತಾಳಿ ಸ್ವಾರ್ಥವೊಂದೇ ಪರಮಾರ್ಥವಾಗಿದ್ದ ನಿರೂಪಕ ಏಕಾಕಿಯಾಗಿ ನಿಲ್ಲುವುದೇ ಈ ಕಥೆಯ ವ್ಯಂಗ್ಯ. ನಿರೂಪಕನ ಒಳಗೆ ನಡೆಯುವ ಪ್ರಹಸನಕ್ಕೆ ಇಲ್ಲಿ ಲೇಖಕರು ವಾಸ್ತವದಿಂದ ಫಕ್ಕನೆ ಕನಸಿಗೆ ಸರಿಯುವ ತಂತ್ರ ಬಳಸಿದಂತಿದೆ.
‘ಅಪ್ಪುಗೆ’ ತಾಯಿಯನ್ನು ಕಳೆದುಕೊಂಡು ಅಪ್ಪನ ಆರೈಕೆಯಲ್ಲಿ ಬೆಳೆದ ಒಬ್ಬ ಮಗಳು ಅಪ್ಪನ ಅಪ್ಪುಗೆಗಾಗಿ ಹಂಬಲಿಸುವ ಕಥೆ. ತನ್ನ ಎಲ್ಲ ಅಗತ್ಯಗಳನ್ನೂ ಚಾಚೂ ತಪ್ಪದೆ ಪೂರೈಸುವ ಅಪ್ಪನಿಗೆ ತನ್ನ ಬಗ್ಗೆ ಭಾವನಾತ್ಮಕ ಸಂಬಂಧ ಯಾಕೆ ಸಾಧ್ಯವಾಗುತ್ತಿಲ್ಲವೆನ್ನುವುದು ಅವಳ ಚಿಂತೆ. ಅದಕ್ಕಾಗಿ ಬೀದಿಯಲ್ಲಿ ನಿಂತು ತನ್ನ ಜತೆಗೆ ಉಚಿತ ಅಪ್ಪುಗೆಯನ್ನು ಘೋಷಿಸುವ ಆತ್ಯಂತಿಕ ಅಂಚಿಗೆ ಅವಳು ಹೋಗುತ್ತಾಳೆ ಮತ್ತು ಅದು ಕಾನೂನಿಗೆ ವಿರುದ್ಧವಾದ್ದರಿಂದ ಪೋಲೀಸರಿಂದ ತಡೆಹಿಡಿಯಲ್ಪಡುತ್ತಾಳೆ. ಮನುಷ್ಯನ ತೀವ್ರ ಅಸಹಾಯಕ ಸ್ಥಿತಿಯು ಅವನನ್ನು/ಅವಳನ್ನು ಯಾವ ಅಂಚಿಗೆ ದೂಡಬಹುದು ಎನ್ನುವುದನ್ನು ಈ ಕಥೆ ಹೇಳುತ್ತದೆ.
‘ಬರ’ ಅದ್ಭುತ ನಾಟಕೀಯ ಗುಣವುಳ್ಳ ಒಂದು ಚಿಕ್ಕ ಕಥೆ. ನಾಟಕದ ಮನೆಯ ಮುಂದೆ ನಿಂತು ಪ್ರದರ್ಶಿಸಬೇಕಾದ ನಾಟಕದ ಬಗ್ಗೆಯೇ ಚಿಂತಿಸುತ್ತ ನಿಂತ ನಾಟಕದ ಮೇಷ್ಟ್ರ ಚಿತ್ರ ಇಲ್ಲಿದೆ. ಜೀವನಮೌಲ್ಯಗಳ ಬಗ್ಗೆ ಸಂದೇಶ ನೀಡುವ ನಾಟಕಗಳು ಅವನಿಗೆ ಬೇಕಾಗಿವೆ. ಆದರೆ ವಾಸ್ತವ ಜೀವನವೆಂಬ ನಾಟಕದಲ್ಲಿ ಕಷ್ಟ-ಸಂಕಟಗಳಿಂದ ನಲುಗಿ ಹೊಟ್ಟೆ ಪಾಡಿಗಾಗಿ ಸಹಾಯ ಬೇಡುತ್ತಿದ್ದ ಪುಟ್ಟ ಚೂಟಿ ಹುಡುಗನಿಗೆ ಸಹಾಯ ಮಾಡದೆ ಆತ ತಪ್ಪಿಸಿಕೊಳ್ಳುವ ಒಂದು ಪ್ರಹಸನ ಇಲ್ಲಿದೆ.
‘ಕ್ರಾಂತಿ’ ಕಥೆ ಹೋರಾಟ-ಕ್ರಾಂತಿಗಳ ಹೆಸರಿನಲ್ಲಿ ಘೋಷಣೆಗಳನ್ನು ಸೃಷ್ಟಿಸುತ್ತ, ಸಮಾಜದಲ್ಲಿ ಕ್ರಾಂತಿಯ ಮೂಲಕ ಪರಿವರ್ತನೆಗಳನ್ನು ತರುತ್ತೇವೆ ಎಂದು ಕೂಗುತ್ತ ಬರೇ ಫೇಸ್ ಬುಕ್ ಸ್ಟೇಟಸ್ ಗಳನ್ನು ಹಾಕಿ ಲೈಕ್-ಕಮೆಂಟುಗಳಿಗಾಗಿ ಕಾಯುತ್ತ ಕ್ರಿಯಾತ್ಮಕವಾಗಿ ಏನೂ ಮಾಡದಿರುವ ಆಷಾಢಭೂತಿಗಳ ಬಗ್ಗೆ ವ್ಯಂಗ್ಯವಾಡುತ್ತದೆ. ಪಕ್ಕದ ಮನೆಯಲ್ಲಿ ಸಾವು ಸಂಭವಿಸಿದರೂ ಅದರ ಬಗ್ಗೆ ಸಂವೇದನಾ ಶೂನ್ಯರಾಗುವ ಕ್ರಾಂತಿಕಾರಿಯ ಬಗ್ಗೆ ಕಥೆ ತಿರಸ್ಕಾರ ಹುಟ್ಟುವಂತೆ ಮಾಡುತ್ತದೆ.
54 ಪುಟಗಳ ಒಂದು ನೀಳ್ಗತೆ ‘ಕನ್ನಡಿ’, ಒಂದು ಕಿರು ಕಾದಂಬರಿಗಾಗುವಷ್ಟು ವಿಷಯಗಳು ಇಲ್ಲಿವೆ. ಬಡತನವನ್ನೇ ಹೊದ್ದುಕೊಂಡು ಬೆಳೆದ ಬಸವರಾಜು ಎಂಬ ಹುಡುಗನ ಕಥೆಯಿದು. ಮನುಷ್ಯ ಮನಸ್ಸಿನೊಳಗೆ ಸದಾ ಕಾಡುವ ದ್ವಂದ್ವಗಳನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಡುತ್ತದೆ. ತರಗತಿಯಲ್ಲಿ ಹೆಚ್ಚು ಮಾತನಾಡದ, ಎಲ್ಲದಕ್ಕೂ ತಲೆಯಾಡಿಸುವ ಬಸವರಾಜುವನ್ನು ಅವನ ಕಾಲೇಜು ಗೆಳೆಯ ಪ್ರಸನ್ನ ‘ಕುರಿ’ ಎಂದೂ ‘ಕೋಲೆಬಸವ’ ಎಂದೂ ತಮಾಷೆ ಮಾಡುತ್ತಾನೆ. ಗೆಳೆಯರಂತೆ ಇಂಗ್ಲೀಷ್ ಮಾತನಾಡಲು ಬಾರದಿದ್ದರೂ ಬಸವರಾಜು ಕನ್ನಡದಲ್ಲಿ ತರಗತಿಯಲ್ಲೇ ಮೊದಲ ಸ್ಥಾನ ಪಡೆದು ಕನ್ನಡ ಮೇಷ್ಟ್ರಿಂದ ಶಹಭಾಸ್ ಗಿರಿ ಪಡೆದಿರುತ್ತಾನೆ. ಕಾಲೇಜಿನಲ್ಲಿ ಚೆನ್ನಾಗಿ ಜನಪದಗೀತೆಗಳನ್ನು ಹಾಡುತ್ತಿದ್ದ ಮಂಗಳಾ ಎಂಬ ಹುಡುಗಿ ಅವನ ಮನಸ್ಸಿನಲ್ಲಿ ಭದ್ರ ಸ್ಥಾನ ಪಡೆದಿರುತ್ತಾಳೆ. ಅಕ್ಕ ಪಂಕಜಳ ಬದುಕು ವಂಚಕ ಗಂಡ ಯತಿರಾಜುವಿನಿಂದಾಗಿ ಬಿರುಗಾಳಿಗೆ ಸಿಲುಕಿದ ನೌಕೆಯಾಗಿದೆ. ಯತಿರಾಜು ಮೊದಲೇ ಮೇರಿ ಎಂಬವಳನ್ನು ಮದುವೆಯಾಗಿ ಅವಳ ಜತೆಗೆ ಇರುವುದನ್ನು ನೋಡಿ ಪಂಕಜಾ ತೌರು ಮನೆಗೆ ಹಿಂದಿರುಗುತ್ತಾಳೆ. ಆ ಕೊರಗಿನಲ್ಲೇ ಅಪ್ಪ ಸೀತಾರಾಮು ಸಾಯುತ್ತಾನೆ. ಅಮ್ಮ ಸರೋಜಮ್ಮ ಎದೆಗುಂದದೆ ಮಕ್ಕಳಿಬ್ಬರನ್ನೂ ಬೆಂಗಳೂರಿಗೆ ಕರೆತಂದು ಅಲ್ಲಿ ಬದುಕು ಕಟ್ಟಿಕೊಳ್ಳುತ್ತಾಳೆ. ಬಸವರಾಜು ಕಷ್ಟಪಟ್ಟು ಗಿಟ್ಟಿಸಿಕೊಂಡ ನೌಕರಿಯಲ್ಲಿ ಪ್ರಾಮಾಣಿಕವಾಗಿ ದುಡಿದು ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ಅಲ್ಲಿ ಬಾಸ್ ನ ಬಲಗೈಯಾಗಿ ದುಡಿಯುತ್ತಿದ್ದ ಚುರುಕು ಬುದ್ದಿಯ ದಾಕ್ಷಾಯಿಣಿಗೆ ಹತ್ತಿರವಾಗುತ್ತಾನೆ. ಪಂಕಜಾ ತನ್ನ ಹೊಸ ಉದ್ಯೋಗದಲ್ಲಿ ಯಶಸ್ಸು ಗಳಿಸಿ ಅವಳ ಬಾಸ್ ಅವಳನ್ನು ಮದುವೆಯಾಗುತ್ತಾನೆ. ಆ ಹಂತದಲ್ಲಿ ಯತಿರಾಜು ಮೇರಿಯನ್ನೂ ವಂಚಿಸಿ ದೂರವಾದ ಸುದ್ದಿ ಬರುತ್ತದೆ. ದಾಕ್ಷಾಯಿಣಿಯನ್ನು ಮದುವೆಯಾಗುವ ಆಲೋಚನೆ ಮಾಡಿದ ಮುಗ್ಧ ಮನದ ಬಸವರಾಜುವಿಗೆ ಅವಳು ಬಾಸ್ ಶೋಷಣೆಗೆ ಗುರಿಯಾದ ವಿಷಯ ಗೊತ್ತಾದಾಗ ಆಘಾತವಾಗುತ್ತದೆ. ಬಾಸ್ ಅವನನ್ನು ಕೂಡಾ ಒಂದು ದಿನ ಯಾವುದೋ ಕೆಲಸ ಸರಿಯಾಗಿ ಮಾಡಿಲ್ಲವೆಂದು ಬೈದು ಮನ ನೋಯಿಸುತ್ತಾನೆ.
ಇಲ್ಲಿಂದ ಮುಂದೆ ಕಥೆ ಪಡೆಯುವ ತಿರುವು ಕುತೂಹಲಕಾರಿಯಾಗಿದೆ. ಚಿಂತೆಯಿಂದ ನಿದ್ರೆ ಬರದೆ ಹೊರಳಾಡಿದ ಬಸವರಾಜುಗೆ ಕ್ರೂರಿಯಾದ ಮನುಷ್ಯನಾಗಿರುವುದಕ್ಕಿಂತ ಕುರಿಯಾಗುವುದೇ ಉತ್ತಮ ಅನ್ನಿಸುತ್ತದೆ. ಎಣಿಸಿದ ತಕ್ಷಣ ಅವನು ಒಂದು ಕುರಿ ರೊಪ್ಪದಲ್ಲಿರುತ್ತಾನೆ. ಅವನು ಅಲ್ಲಿನ ಕುರಿ ಮಂದೆಯೊಂದಿಗೆ ಸೇರಿಕೊಳ್ಳುತ್ತಾನೆ. ಆ ಮನೆಯಲ್ಲಿ ಒಂದು ಸಾವು ಸಂಭವಿಸಿ ಅವರೆಲ್ಲರೂ ಉತ್ತರಕ್ರಿಯೆಯ ತಯಾರಿಯಲ್ಲಿದ್ದಾಗ ಅಲ್ಲಿಗೆ ಮಂಗಳಾ ತನ್ನ ಪುಟ್ಟ ಮಗ ಬಸವರಾಜುವಿನೊಂದಿಗೆ ಬರುತ್ತಾಳೆ. ಬಸವರಾಜುವಿಗೆ ಮಂಗಳಾ ತನ್ನ ಬಳಿ ಬಂದು ಮೈದಡವಬೇಕೆಂಬ ಆಸೆಯಾಗುತ್ತದೆ. ಮಂಗಳಾ ತನ್ನ ಗಂಡನೊಂದಿಗೆ ಏನೇನೂ ಸುಖವಾಗಿಲ್ಲ ಅನ್ನುವುದು ಅವನಿಗೆ ಗೊತ್ತಾಗುತ್ತದೆ. ಎಲ್ಲಿಂದಲೋ ಬಂದು ಸೇರಿಕೊಂಡ ಕುರಿಯನ್ನು ಮರುದಿನ ಉತ್ತರಕ್ರಿಯೆಯ ಭಾಗವಾಗಿ ಬಲಿ ಕೊಡುವುದೆಂದು ಅವರೆಲ್ಲರೂ ಮಾತನಾಡಿಕೊಳ್ಳುವುದನ್ನು ಕೇಳಿ ಬಸವರಾಜು ಬದಲಾಗುತ್ತಾನೆ. ಕಾರ್ಪೊರೇಟ್ ಜಗತ್ತಿನಲ್ಲಿ ಅನ್ಯಾಯಕ್ಕೆ ಗುರಿಯಾಗುವ ಪಂಕಜಾ, ಮೇರಿ ಮತ್ತು ದಾಕ್ಷಾಯಿಣಿಯರ ಪರಿಸ್ಥಿತಿಯನ್ನೆಣಿಸಿ ಅವನ ಮನಸ್ಸು ಮರುಗುತ್ತದೆ. ಸ್ವಾರ್ಥಪೂರಿತ ಮನುಷ್ಯ ಜಗತ್ತಿನಿಂದ ತಪ್ಪಿಸಿಕೊಳ್ಳಲು ತಾನು ಕುರಿಯಾದೆ. ಅದರೆ ಅದರಿಂದ ತಾನು ಕಟುಕರ ಕತ್ತಿಗೆ ಕತ್ತು ಕೊಡಬೇಕಾಗಿ ಬಂದಿದೆ. ತಾನಿನ್ನು ಮುಂದೆ ಕುರಿಯಂತಿರದೆ ಮನುಷ್ಯನಾಗಿ ತನ್ನತನವನ್ನು ಬೆಳೆಸಿಕೊಂಡು ಗಟ್ಟಿಯಾಗಿ ನಿಲ್ಲಬೇಕು ಎಂದು ಸಂಕಲ್ಪ ಮಾಡುವಲ್ಲಿಗೆ ಕಥೆ ಮುಗಿಯುತ್ತದೆ. ಬಸವರಾಜು ಕುರಿಯಾಗುವ ಭಾಗವನ್ನು ಮ್ಯಾಜಿಕ್ ರಿಯಲಿಸಂ ತಂತ್ರವನ್ನು ಬಳಸಿ ಕಥೆಗಾರರು ಬಹಳ ಚಾಕಚಕ್ಯತೆಯಿಂದ ನಿರ್ವಹಿಸಿದ್ದಾರೆ. ಒಟ್ಟು ಕಥೆಯಲ್ಲಿ ಸಮಾಜದ ಬದುಕಿಗೆ ಲೇಖಕರು ಹಿಡಿದ ಕನ್ನಡಿಯು ಎಂಟು ಬಿಂಬಗಳನ್ನು ತೋರಿಸುವುದೂ ಅರ್ಥಪೂರ್ಣವಾಗಿದೆ.
ಸಂಕಲನದ ಶೀರ್ಷಿಕೆಯ ಕಥೆ ಇಲ್ಲಿಲ್ಲ. ಎಲ್ಲ ಕಥೆಗಳಿಗೂ ಅನ್ವಯವಾಗುವ ಶೀರ್ಷಿಕೆಯದು. ಕಥೆ ಎನ್ನುತ್ತಲೇ ಇಡೀ ಕೃತಿಯು ಶೂನ್ಯ ಮೌಲ್ಯಗಳಿಂದ ಇಡಿಕಿರಿದ ಕಹಿ ವಾಸ್ತವದ ಚಿತ್ರಗಳಿಗೆ ಬಣ್ಣ ಹಾಕುತ್ತದೆ. ಹೊಸತನದ ಹುಡುಕಾಟದ ಪ್ರಯತ್ನ, ನಿರೂಪಣೆಯ ಸೊಗಸು ಮತ್ತು ಬಿಗಿಯಾದ ರಚನೆಗಳುಳ್ಳ ಈ ಸಂಕಲನದ ಏಳು ಕಥೆಗಳು ಕೊನೆಯವರೆಗೂ ಅಸಕ್ತಿಯನ್ನು ಉಳಿಸಿಕೊಂಡು ಹೋಗುತ್ತವೆ. ಅಪಾರ ಅವರು ಬರೆದ ಅರ್ಥಪೂರ್ಣ ಮುಖಚಿತ್ರವು ಸಂಕಲನದ ಪರಿಣಾಮವನ್ನು ಇನ್ನಷ್ಟು ಗಾಢವಾಗಿಸಿದೆ.
– ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.