Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಸಾಹಿತ್ಯ ವೈಭವ 2026’ | ಜನವರಿ 25

    January 23, 2026

    ವಿಜಯಪುರ ಜಿಲ್ಲಾ ಸಮಿತಿಯಿಂದ ಗಮಕ ವಾಚನ ಮತ್ತು ವ್ಯಾಖ್ಯಾನ

    January 23, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’ ಕಥಾ ಸಂಕಲನ

    January 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’ ಕಥಾ ಸಂಕಲನ
    Article

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’ ಕಥಾ ಸಂಕಲನ

    January 23, 2026No Comments16 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕನ್ನಡ ಮಹಿಳಾ ಸಾಹಿತ್ಯ ಪರಂಪರೆಯ ನಾಲ್ಕು ಪೀಳಿಗೆಗಳನ್ನು ವಿಮರ್ಶಕರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಮೊದಲ ಪೀಳಿಗೆಯ ಲೇಖಕಿಯರಾದ ಕೊಡಗಿನ ಗೌರಮ್ಮ, ಶ್ಯಾಮಲಾ ಬೆಳಗಾಂವಕರ ಮೊದಲಾದವರು ಸಾಮಾಜಿಕ ಹಿನ್ನೆಲೆಯಲ್ಲಿ ಹೆಣ್ಣಿನ ಸಮಸ್ಯೆಗಳ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತಿದರು. ಸಮಾಜದ ಜ್ವಲಂತ ಸಮಸ್ಯೆಗಳ ಚಿತ್ರಣವನ್ನು ನೀಡಲು ವಾಸ್ತವದ ಹಾದಿಯನ್ನು ಅನುಸರಿಸಿದರು. ಆ ಕಾಲದ ಹೆಂಗಸರಿಗೆ ಸ್ವತಂತ್ರ ಅಸ್ತಿತ್ವವಿಲ್ಲದಿದ್ದುದರಿಂದ ಇವರ ಕತೆಗಳಲ್ಲಿ ಹೆಂಗಸರು ಹೆಚ್ಚಾಗಿ ಶೋಷಿತ ಪಾತ್ರಗಳಾಗಿ ಕಾಣಿಸಿಕೊಂಡರು. ಅವರ ಅಸ್ತಿತ್ವ, ಹೃದಯವಂತಿಕೆ ಮತ್ತು ಪ್ರತಿಭೆಗಳನ್ನು ಸಮಾಜವು ಗುರುತಿಸುವುದಿಲ್ಲ ಎಂಬ ನೋವು ಅವರಿಂದ ಕತೆಗಳನ್ನು ಬರೆಸಿತು. ಎರಡನೇ ಪೀಳಿಗೆಯ ಪ್ರಮುಖ ಲೇಖಕಿಯರಾದ ತ್ರಿವೇಣಿ, ಅನುಪಮಾ ನಿರಂಜನ ಮೊದಲಾದವರ ಕತೆ ಕಾದಂಬರಿಗಳು ಹೆಣ್ಣಿನ ಅಸ್ಮಿತೆಯ ಅರಿವು, ಆಕೆಯ ಕ್ರಿಯಾಶಕ್ತಿಯನ್ನು ಅನಾವರಣಗೊಳಿಸುವುದರೊಂದಿಗೆ ವೈಜ್ಞಾನಿಕ ತಿಳಿವು ಮತ್ತು ಮನೋವೈಜ್ಞಾನಿಕ ಒಳನೋಟಗಳನ್ನು ಒದಗಿಸಿದ್ದರಿಂದ ಅವರ ಕೃತಿಗಳಿಗೆ ಆಳ, ವಿಸ್ತಾರಗಳು ಒದಗಿದವು. ರಾಜಲಕ್ಷ್ಮಿ ಎನ್. ರಾವ್ ಮತ್ತು ವೀಣಾ ಶಾಂತೇಶ್ವರರ ಕತೆಗಳಲ್ಲಿ ಕಾಣುವ ಅಂತರ್ಮುಖತೆ, ದ್ವಂದ್ವ ಮತ್ತು ದಿಟ್ಟತನಗಳು ನವ್ಯ ಮನೋಧರ್ಮದ ಅಂಗವಾಗಿ ಬಂದವು. ಅವರು ತಮ್ಮ ಕೃತಿಗಳನ್ನು ಸಾಮಾಜಿಕ ಜಾಗೃತಿಗಾಗಿ ಬಳಸದೆ ಅಂತರಂಗವನ್ನು ಶೋಧಿಸಲು ಉಪಯೋಗಿಸಿಕೊಂಡರು.
    ಎಪ್ಪತ್ತರ ದಶಕದ ಹೊತ್ತಿಗೆ ಸಮಾಜವು ಬದಲಾಗತೊಡಗಿತು. ಮಹಿಳೆಯರ ಮೇಲೆ ಸ್ತ್ರೀ ವಿಮುಕ್ತಿ ಚಳುವಳಿಯು ಪ್ರಭಾವವನ್ನು ಬೀರಿತು. ಶಿಕ್ಷಣ ಕ್ಷೇತ್ರವು ಅವರಿಗೆ ಬಾಗಿಲನ್ನು ತೆರೆಯಿತು. ಇದರಿಂದಾಗಿ ಹೆಣ್ಣಿನ ಸ್ಥಾನಮಾನಗಳು ಬದಲಾಗಿ, ಅವರ ಅನುಭವವು ವ್ಯಾಪ್ತಿ ವೈವಿಧ್ಯಗಳನ್ನು ಪಡೆಯಿತು. ಅವಿಭಕ್ತ ಕುಟುಂಬ ಮತ್ತು ವಿವಾಹ ವ್ಯವಸ್ಥೆಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳತೊಡಗಿದವು. ಗಂಡು ಹೆಣ್ಣಿನ ಸಂಬಂಧದಲ್ಲಿ ದ್ವಂದ್ವ ಬಿಕ್ಕಟ್ಟುಗಳು ತಲೆದೋರತೊಡಗಿದವು. ಆದರೂ ಸಾಮಾಜಿಕ ಧೋರಣೆಗಳಲ್ಲಿ ಬದಲಾವಣೆಗಳು ಪೂರ್ಣ ಪ್ರಮಾಣದಲ್ಲಿ ಕಾಣಿಸದಿದ್ದುದರಿಂದ ಘರ್ಷಣೆಗಳು ನಡೆಯುತ್ತಲೇ ಇದ್ದವು. ಈ ಅವಧಿಯಲ್ಲಿ ಬರೆಯತೊಡಗಿದ ವೈದೇಹಿ, ಸಾರಾ ಅಬೂಬಕ್ಕರ್ ಮುಂತಾದವರಿಗೆ ತಮ್ಮ ಕಾಲದ ಸಾಮಾಜಿಕ ಮತ್ತು ಚಾರಿತ್ರಿಕ ಅರಿವಿದ್ದುದರಿಂದ ಭಿನ್ನ ಸ್ವರೂಪದ ಕೃತಿಗಳನ್ನು ಬರೆಯಲು ಸಾಧ್ಯವಾಯಿತು. ಈ ಮಾತನ್ನು ಮಾಲತಿ ಪಟ್ಟಣಶೆಟ್ಟಿಯವರಿಗೂ ಅನ್ವಯಿಸಬಹುದು.
    1976ರಲ್ಲಿ ಕವಿತೆಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿರಿಸಿದ ಮಾಲತಿ ಪಟ್ಟಣಶೆಟ್ಟಿಯವರು ಆಂಗ್ಲ ಪ್ರಾಧ್ಯಾಪಕರಾಗಿದ್ದುದರಿಂದ ಆ ಭಾಷೆಯ ಮೇಲಿನ ಪ್ರಭುತ್ವವು ಅವರನ್ನು ವಿಶ್ವ ಸಾಹಿತ್ಯದ ಕಡೆಗೆ ಸೆಳೆದುಕೊಂಡಿತು. ಪಾಶ್ಚಾತ್ಯ ಸಾಹಿತ್ಯವಾದಗಳ ಜೊತೆಗೆ ಸ್ತ್ರೀವಾದವನ್ನು ಅಧ್ಯಯನ ಮಾಡಿದ ಅವರು ಅಲ್ಲಿನ ಪ್ರಗತಿಪರ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡು ಹೆಣ್ಣಿನ ಅಸ್ಮಿತೆಯನ್ನು ಎತ್ತಿ ಹಿಡಿದರು. ಮೂಲತಃ ಕವಿಯಾಗಿ ಗುರುತಿಸಿಕೊಂಡಿದ್ದರೂ ಇಂದು ನಿನ್ನಿನ ಕತೆಗಳು (1988), ಸೂರ್ಯ ಮುಳುಗುವುದಿಲ್ಲ (1998), ಎಲ್ಯಾದರೂ ಬದುಕಿರು ಗೆಳೆಯಾ (2016) ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದರು. ಒಂದೊಂದು ಸಂಕಲನದ ಪ್ರಕಟಣೆಯ ನಡುವೆಯೂ ದಶಕಗಳ ಅಂತರವಿದ್ದು, ಆ ಕಾಲಾವಧಿಯಲ್ಲಿ ಅವರ ಚಿಂತನೆ ಮತ್ತು ಬರವಣಿಗೆಯಲ್ಲಾದ ಬದಲಾವಣೆಗಳನ್ನು ಗುರುತಿಸಲು ಸಾಧ್ಯ.
    ಇವರ ಕತೆಗಳು ಉತ್ತರ ಕರ್ನಾಟಕದ ಸಾಮಾಜಿಕ ಆವರಣದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿವೆ. ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಕತೆಗಳಲ್ಲಿ ಧಾರವಾಡದ ಮಣ್ಣಿನ ವಾಸನೆಯನ್ನು ಬೀರುವ ಆಡುಮಾತಿನ ಲಯವಿದೆ. ಆಕರ್ಷಕ ಆರಂಭ, ಸೂಕ್ಷ್ಮ ತಿರುವನ್ನು ನೀಡುವ ಮುಕ್ತಾಯ, ಆಪ್ತವೆನಿಸುವ ನಿರೂಪಣೆಯಿದೆ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕತೆಗಳು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತವೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ತೋರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ.
    ಕಾಲ, ಸ್ಥಳ, ವ್ಯಕ್ತಿಗಳ ಅಂತರವನ್ನು ಮೀರಿದರೂ ಪ್ರೇಮದ ಭಾಷೆಯು ಒಂದೇ ರೀತಿ ಇರುತ್ತದೆ. ‘ಸಂಗಾತಿ’ಯು ಅಂಥ ಪ್ರೇಮಕತೆಯೆಂದು ಮೇಲ್ನೋಟಕ್ಕೆ ಅನಿಸಿದರೂ ಅದರ ವ್ಯಾಪ್ತಿಯನ್ನು ಮೀರಿ ನಿಲ್ಲುತ್ತದೆ. ಪಾರ್ಶ್ವವಾಯುವಿಗೆ ತುತ್ತಾದ ತಾಯಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದಿರುವುದಿಂದ ಪ್ರೀತಿಸಿದ ಯುವಕನನ್ನು ಮದುವೆಯಾಗಲು ಒಲ್ಲೆಯೆನ್ನುವ ಮಗಳು, ಆಕೆಯ ಮನಸ್ಸಿನ ನೋವನ್ನು ಅರಿತುಕೊಂಡು, ಮಗಳನ್ನು ಮದುವೆಗೆ ಸಿದ್ಧಗೊಳಿಸುವ ತಾಯಿಯ ಪಾತ್ರಗಳು ಮನಮುಟ್ಟುತ್ತವೆ. ತನಗಾಗಿ ತ್ಯಾಗವನ್ನು ಮಾಡಲು ಸಿದ್ಧಳಾದ ಮಗಳ ಆಸೆಯನ್ನು ನೆರವೇರಿಸುವ ತಾಯಿಯು ವಿಮೆಯ ಹಣವನ್ನು ಕೊಡುವುದಲ್ಲದೆ, ಹಳ್ಳಿಯ ಹೊಲದಲ್ಲಿ ಕಟ್ಟಿಸಿದ ಚಿಕ್ಕ ಮನೆಯಲ್ಲಿದ್ದುಕೊಂಡು, ಒಕ್ಕಲು ಮಗ ಗುರುಸಿದ್ಧನ ಕುಟುಂಬ ನೋಡಿಕೊಳ್ಳುತ್ತಾ ಬಾಳಲು ಬಯಸುವ ನಿರ್ಧಾರವು ಕತೆಯ ಮುಖ್ಯ ತಿರುವಿಗೆ ಕಾರಣವಾಗುತ್ತದೆ. ಸ್ವಾವಲಂಬನೆಯ ಬದುಕಿನ ಮಹತ್ವವನ್ನು ವಿವರಿಸುತ್ತದೆ. ಯಾಂತ್ರಿಕ ಜೀವನದ ಸುಳಿಯಲ್ಲಿ ಸಿಲುಕಿ, ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳಲು ಸಮಯ ಸಿಗದೆ ತಮ್ಮ ಜೀವನವನ್ನಷ್ಟೇ ನೋಡಿಕೊಳ್ಳುವ ಮಕ್ಕಳು, ಅವರು ತಮ್ಮನ್ನು ಬಿಟ್ಟು ಸಂಗಾತಿಯ ಕಡೆ ಮನಸ್ಸು ಮಾಡಿದಾಗ ಒಳಗೊಳಗೆ ಉರಿಯುವ ಹೆತ್ತವರ ನಡುವೆ ಮೋಹಿನಿಯಂಥ ಮಗಳು ಮತ್ತು ಆಕೆಯ ಅವ್ವನ ಹೃದಯ ವೈಶಾಲ್ಯತೆ ವ್ಯಕ್ತವಾಗುತ್ತದೆ. ಹಿರಿಯರಿಗೆ ಕಿರಿಯರ ಮೇಲಿನ ಅಪನಂಬಿಕೆ, ಕಿರಿಯರಿಗೆ ಹಿರಿಯರ ಮೇಲಿರುವ ಅಸಮಾಧಾನ – ತಿರಸ್ಕಾರ, ತಲೆಮಾರುಗಳ ಅಂತರ, ಪೀಳಿಗೆಗಳ ನಡುವಿನ ಸಂಘರ್ಷಗಳಲ್ಲಿ ಕಿರಿಯರ ಹೊಸ ಚಿಂತನೆಗಳನ್ನು ಗ್ರಹಿಸಲಾರದೆ ಹಿರಿಯರು ಜಡವಾಗುತ್ತಿರುವ ಸಂದರ್ಭದಲ್ಲಿ, ಮಗಳು ನನ್ನ ಜೊತೆಗೆ ಇರಬೇಕೆಂಬ ವ್ಯಾಮೋಹವನ್ನು ಮೀರಿದ ತಾಯಿಯು ತನ್ನ ಬಾಳು ಹೇಗೆಯೇ ಇದ್ದರೂ, ಮಗಳ ಬಾಳು ಒಳ್ಳೆಯದಾಗಬೇಕು ಎಂದು ಆಸೆ ಪಡುತ್ತಾಳೆ. ಮನುಷ್ಯರ ನಡುವಿನ ಗೋಡೆಗಳು, ಮನಸ್ಸುಗಳ ನಡುವಿನ ಕಂದರಗಳನ್ನು ಕೂಡಿಸುವ ಸೇತುವೆಯನ್ನು ಕಟ್ಟಬೇಕಲ್ಲದೆ ಸಂಬಂಧಗಳನ್ನು ಕಡಿದುಕೊಂಡು ಏಕಾಕಿಯಾಗಬಾರದು. ಮಕ್ಕಳಿಗೂ ಅವರದ್ದೇ ಆದ ನೆಲೆ ಬೆಲೆಗಳಿವೆ. ತಮ್ಮ ಭೂತಕ್ಕೆ ಅವರ ಭವಿಷ್ಯವನ್ನು ಕಟ್ಟಿ ಹಾಕುವುದು ಸರಿಯಲ್ಲ ಎಂದು ಮನಗಾಣಿಸುವ ಕತೆಯು ತಾಯಿ ಮಕ್ಕಳ ಸಹಜ ಸುಂದರ ಸಂಬಂಧಕ್ಕೆ ನವಿರಾದ ಭಾಷ್ಯವನ್ನು ಬರೆಯುತ್ತದೆ.
    ‘ಸಪ್ತಪದಿ’ಯು ಈ ಕತೆಯ ವಿರುದ್ಧ ನೆಲೆಯಲ್ಲಿದ್ದರೂ ಪ್ರಿಯಕರ ಹರೀಶ ಮತ್ತು ತಾಯಿಯ ಸಂಬಂಧಗಳ ನಡುವೆ ತೂಗುಯ್ಯಾಲೆಯಾಡುವ ಸವಿತಳ ದ್ವಂದ್ವ ‘ಸಂಗಾತಿ’ಯ ನಾಯಕಿ ಮೋಹಿನಿಗಿಂತ ಬೇರೆಯಲ್ಲ. ತಾಯಿಯ ಕಾಲ ಕಳೆದ ಬಳಿಕ ಮುಂದೇನು ಎಂಬ ಪ್ರಶ್ನೆ ಮೂಡಿ ಹರೀಶನನ್ನು ಮದುವೆಯಾಗಲು ಬಯಸಿದರೆ, ತನಗೆ ಮತ್ತು ತನ್ನ ಇತರ ಮಕ್ಕಳಿಗೆ ಆಕೆಯ ಸಂಬಳದ ಹಣ ಕೈತಪ್ಪಿ ಹೋಗುವುದೆಂದು ಸಂಕಟಪಡುವ ತಾಯಿಯ ಮನಸ್ಸು ಸ್ವಾರ್ಥ ಕಲುಷಿತವಾಗಿದೆ. ಹೆಂಗಸರಾಗಿದ್ದುಕೊಂಡು ಸವಿತಳ ಬಯಕೆಯನ್ನು ಅರ್ಥ ಮಾಡಿಕೊಳ್ಳಲಾಗದಿರುವುದು ಇಲ್ಲಿನ ವ್ಯಂಗ್ಯವಾಗಿದೆ. ಅಷ್ಟು ವರ್ಷಗಳ ಕಾಲ ಪ್ರೀತಿಸಿದ್ದರೂ ಮದುವೆಯಾಗಲು ಮೀನಮೇಷ ಎಣಿಸುತ್ತಿದ್ದ ಸವಿತಳ ಮನಸ್ಸನ್ನು ಅರ್ಥಮಾಡಿಕೊಂಡು, ಪುರುಷ ಸಹಜ ಅಹಂ ಬದಿಗಿಟ್ಟು ಆಕೆಗಾಗಿ ಕಾಯುತ್ತಾ ಕೊನೆಯ ಗಳಿಗೆಯಲ್ಲಿ ಸ್ವೀಕರಿಸುವ ಹರೀಶನ ಪಾತ್ರವು ಮೆಚ್ಚುಗೆಯನ್ನು ಪಡೆಯುತ್ತದೆ.
    ಪ್ರಿಯಕರನಾದ ವಿಶಾಲನನ್ನು ಕ್ಷುಲ್ಲಕ ಕಾರಣಕ್ಕಾಗಿ ದೂರ ಮಾಡಿದ ‘ಪರಿತ್ಯಕ್ತ’ದ ನಾಯಕಿಯು ವೃತ್ತಿಜೀವನದ ಘಟ್ಟದಲ್ಲಿ ಅವನನ್ನು ಕಂಡಾಗ “ಹೌದು. ನಾನೇ ಅವನಿಗೆ ಮೋಸ ಮಾಡಿದೆ. ಮೂರು ನಾಲ್ಕು ವರ್ಷಗಳ ಅವ್ಯಾಹತ ಪ್ರಣಯದ ನಂತರವೂ ಅವನಿಗೆ ಚಕಾರ ಶಬ್ದ ತಿಳಿಸದೆ ಅರುಣನ ಜೊತೆಗಿನ ಮದುವೆಗೆ ಒಪ್ಪಿದ್ದೆ. ಅಪ್ಪ ತೀರಿಕೊಂಡಾಗ ದುಃಖದಲ್ಲಿ ಸಮಭಾಗಿಯಾಗಿ ಒದಗಿದ್ದ, ನೌಕರಿ ಕೊಡಿಸಿದ್ದ, ಬಿ.ಎಡ್. ತಯಾರಿಗಾಗಿ ನೋಟ್ಸ್ ಕೊಟ್ಟು, ಎದುರು ಕುಳಿತು ಓದಿ, ನಾನು ಪ್ರಥಮ ಶ್ರೇಣಿ ಬರಲು ಕಾರಣನಾಗಿದ್ದ, ನನ್ನನ್ನು ಮನಸಾರೆ ಪ್ರೀತಿಸಿದ್ದ ವ್ಯಕ್ತಿಯನ್ನು ನಿರಾಕರಿಸಲು ಕಾರಣವೇನು?” (ಪುಟ 36) ಎಂದು ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾಳೆ. ಗಂಡನ ಕಿರುಕುಳಗಳಿಂದ ನೊಂದು ಬಸವಳಿದಿದ್ದ ಆಕೆಯು ತನ್ನನ್ನು ಸ್ವೀಕರಿಸಬೇಕೆಂದು ವಿಶಾಲನಲ್ಲಿ ಕೇಳಿಕೊಳ್ಳುತ್ತಾಳೆ. ಆ ಮಾತು ಅವನೊಳಗೆ ಸುಪ್ತವಾಗಿದ್ದ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಆಕೆ ಕೈಕೊಟ್ಟು ಹೋದಾಗ ಅವನ ಎದೆಯಾಳದಲ್ಲಿ ಅಡಗಿದ್ದ ನೋವು ಒಮ್ಮೆಲೆ ಪುಟಿದೆದ್ದು ಆಕೆಯನ್ನು ನಿರಾಕರಿಸುತ್ತಾನೆ. ಇಲ್ಲಿ ಪ್ರೇಯಸಿಯು ವಿಶಾಲನನ್ನು ವಂಚಿಸಿದಂತೆ ‘ಮುಕ್ತಾ’ದಲ್ಲಿ ಡಾ. ವಿಶ್ವನಾಥನು ತನ್ನ ಪ್ರೇಯಸಿಯಾದ ಮುಕ್ತಾಳಿಗೆ ಕೈಕೊಟ್ಟು ಉಷಾಳನ್ನು ಮದುವೆಯಾಗಿರುತ್ತಾನೆ. ಆಕೆಯು ವಿಚ್ಛೇದನವನ್ನು ಕೊಟ್ಟು ದೂರವಾದರೆ, ಬೆಳೆದ ಮಗ ವಿದೇಶದಲ್ಲಿ ನೆಲೆಸಿರುತ್ತಾನೆ. ಮೂವತ್ತು ವರುಷಗಳ ಬಳಿಕ ಮಧ್ಯವಯಸ್ಸು ಸಮೀಪಿಸಿದಾಗ ಜೊತೆಯಲ್ಲಿ ಯಾರೂ ಇರುವುದಿಲ್ಲ. ‘ಪರಿತ್ಯಕ್ತ’ದ ನಾಯಕಿಯಂತೆ ಪಶ್ಚಾತ್ತಾಪವನ್ನು ಅನುಭವಿಸುವ ಆತನು ಅಪಘಾತಕ್ಕೊಳಗಾಗಿ ಕಾಲುಗಳನ್ನು ಕಳೆದುಕೊಂಡ ಪ್ರೇಯಸಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿ, ಜೀವವನ್ನು ಉಳಿಸಿ, ಆಕೆಗೆ ತಿಳಿಯದಂತೆ ಆಸ್ಪತ್ರೆಯ ವೆಚ್ಚವನ್ನು ತುಂಬುತ್ತಾನೆ. ಆಕೆಯ ಗಂಡ ಶಂಕರರಾವ್ ಮಹಾಡಕರನು ಹಾಡು ನೃತ್ಯಗಳೆಲ್ಲ ಕೆಳದರ್ಜೆಯ ಕಲೆಗಳೆಂದು ಬಗೆದವನು. ಸಂಗೀತಗಾರ್ತಿಯಾದ ಹೆಂಡತಿಯ ಹೆಸರನ್ನು ಹಾಳುಮಾಡಲು ಆಕೆಯ ಗುರುಗಳೊಂದಿಗೆ ಅನೈತಿಕ ಸಂಬಂಧವನ್ನು ಆರೋಪಿಸಲು ಹಿಂಜರಿಯದ ಕ್ರೂರಿ. ರಾಜಕಾರಣಿಯಾದ ಆತನು ಆಸ್ಪತ್ರೆಗೆ ಬಂದರೂ ಆಕೆಯ ಮುಖವನ್ನು ನೋಡಲು ಬಯಸದೆ ಆಸ್ಪತ್ರೆಯ ವೆಚ್ಚದ ರೂಪದಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಗಂಡನ ‘ಅಭಿನಯ’ವನ್ನು ಮಾಡುವ ವ್ಯವಹಾರಸ್ಥ. ಇದನ್ನು ತಿಳಿದ ವಿಶ್ವನಾಥನು ಆಕೆಯನ್ನು ತನ್ನ ಬಾಳಿಗೆ ಆಹ್ವಾನಿಸುತ್ತಾನೆ. ಆದರೆ ಆಕೆಯು ‘ಪರಿತ್ಯಕ್ತ’ದ ನಾಯಕಿಯಂತೆ ಯುವತಿಯಾಗಿರದೆ ಬದುಕಿನ ಕಷ್ಟಗಳನ್ನುಂಡು ಮಾಗಿ, ನಡುಹರೆಯವನ್ನು ಸಮೀಪಿಸಿದವಳಾಗಿರುವುದರಿಂದ ಆಕೆಗೆ ಪ್ರೇಮದ ಅಗತ್ಯವಿಲ್ಲ. ಆದರೂ ವಿಶ್ವನಾಥನ ಬಗ್ಗೆ ಕಹಿಯನ್ನಿರಿಸಿಕೊಳ್ಳದೆ ಸುರಕ್ಷಿತ ಸಂಪರ್ಕವನ್ನು ಇಟ್ಟುಕೊಳ್ಳುತ್ತಾಳೆ. ಗಂಡನನ್ನು ಧಿಕ್ಕರಿಸಿದರೂ, ಪ್ರಿಯಕರನನ್ನು ವರಿಸದೆ ಸಾಧನೆಯ ಹಾದಿಯಲ್ಲಿ ಸಾಗಲು ತೀರ್ಮಾನಿಸುವ ಮೂಲಕ ತನ್ನ ಹೆಸರೇ ಸೂಚಿಸುವಂತೆ ಸ್ವತಂತ್ರ ಅಸ್ತಿತ್ವದ ಸಂಕೇತವಾಗುತ್ತಾಳೆ. ‘ಮತ್ತೆ ಬಂದ ವಸಂತ’ವು ಇದೇ ವಸ್ತುವನ್ನು ಗಂಡಿನ ದೃಷ್ಟಿಕೋನದಿಂದ ಗಮನಿಸುತ್ತದೆ. “ನಾವು ದೈಹಿಕವಾಗಿ ಹತ್ತಿರವಿರುವುದರಿಂದ ಹಲವು ಸಮಸ್ಯೆಗಳು ಹುಟ್ಟುತ್ತವೆ. ನಾವು ಕೊನೆಯವರೆಗೂ ಸ್ನೇಹಿತರಾಗಿ ಉಳಿಯಬೇಕು. ಅತಿ ಹತ್ತಿರ ಇರುವುದರಿಂದ ಯಾವ ಕ್ಷಣದಲ್ಲೂ ಅತೃಪ್ತಿ, ಅವಜ್ಞೆ ಹುಟ್ಟುತ್ತವೆ. ಪ್ರೀತಿ ಕರಗುತ್ತ ಹೋಗುತ್ತದೆ.  ಜೀವನದ ಕೊನೆಯ ಹಂತದಲ್ಲಿ ಪ್ರೀತಿಯ ಆಸ್ತಿಯನ್ನು ಕಳೆದುಕೊಂಡು ನಿರ್ಗತಿಕರಂತೆ ಸಾಯುವುದು ಬೇಡ. ಈ ವಯಸ್ಸಿನಲ್ಲಿ ನನ್ನ ನಿನ್ನಲ್ಲಿ ಹೊಂದಾಣಿಕೆಯಾಗದಿದ್ದರೆ ನಿರಾಶೆಯಾಗುವುದಿಲ್ಲವೇ? ಇನ್ನು ನಿರಾಶೆಗಳಿಗೆ ಸ್ಥಳವಿಲ್ಲ. ನನ್ನ ಪ್ರೀತಿಯ ಮಧ್ಯಬಿಂದುವಾಗಿ, ಆಶಾತಾರೆಯಾಗಿ ನೀನಿರು. ನಾನು ಪರಿಘವಾಗಿ ಸುತ್ತುತ್ತಿರುತ್ತೇನೆ. ಜೀವನದ ಗತಿಗೆ ನಿರ್ದಿಷ್ಟ ದಿಕ್ಕು ಸಿಕ್ಕುತ್ತದೆ. ನೀನು ಇಲ್ಲಿಗೆ ಬಾ. ನಾನು ಅಲ್ಲಿಗೆ ಬರುತ್ತೇನೆ. ವರ್ಷದಲ್ಲಿ ಮೂರ್ನಾಲ್ಕು ಸಲ ಭೇಟಿಯಾಗೋಣ. ಪಲಾಯನ ಮಾಡಿದೆ ಎಂದು ತಿಳಿಯಬೇಡ. ಹತ್ತಿರದಲ್ಲಿದ್ದರೆ ನಾವು ಹೇಡಿಗಳಾಗಬಹುದು. ಅವಲಂಬಿತರಾಗಬಹುದು. ದೂರದಲ್ಲಿದ್ದು ಒಬ್ಬರನ್ನೊಬ್ಬರು ಅಪೇಕ್ಷಿಸುತ್ತಾ ಧೀರರಾಗಿರೋಣ. ತ್ಯಾಗವೇ ಪ್ರೀತಿಯ ಇನ್ನೊಂದು ಹೆಸರಲ್ಲವೇ?” (ಪುಟ 66) ಎನ್ನುವ ಚಂದ್ರಮೌಳಿಯ ಮಾತುಗಳು ಹೆಚ್ಚಿನ ಪಾತ್ರಗಳ ಮನೋಭಾವವನ್ನೇ ಮಾತಿನಲ್ಲಿ ಬಗೆದು ತೋರಿಸುತ್ತವೆ. ಸಂಬಂಧಗಳ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಎತ್ತುವ ಕತೆಗಳು ತಿಳುವಳಿಕೆಯ ಆಧಾರದಲ್ಲಿ ಸಂಬಂಧವಿರಿಸುವ ಆಶಯವನ್ನು ವ್ಯಕ್ತಪಡಿಸುತ್ತವೆ.
    ‘ಕಣ್ಣಂಚಿನಲ್ಲೊಂದು ತಾರೆ’ಯು ಇವುಗಳಿಗಿಂತ ಸಂಕೀರ್ಣವಾದ ರಚನೆಯಾಗಿದೆ. ಹೆತ್ತವರ ಒತ್ತಡಕ್ಕೆ ಮಣಿದು, ರಾಜಕಾರಣಿಯನ್ನು ಮದುವೆಯಾದ ಸುಮಾ ಆತನ ಕ್ರೌರ್ಯದಿಂದ ಬೇಸತ್ತು ತನ್ನ ಗೆಳೆಯ ಶಂಕರನ ಬಳಿಗೆ ಬರುತ್ತಾಳೆ. ಆತನು ಆಕೆಗೆ ಬೆಂಗಳೂರಿನಲ್ಲಿ ಉದ್ಯೋಗವನ್ನು ದೊರಕಿಸಿ ಕೊಡುತ್ತಾನೆ. ಆದರೆ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಬಾಳುವ ಕನಸು ದೂರದ ನಕ್ಷತ್ರವನ್ನು ಹಿಡಿಯಲು ಯತ್ನಿಸಿದಂತೆ ಎಂಬ ಭಾವನೆಯು ಆಕೆಗಿದ್ದರೆ ನಿಜವಾದ ಪ್ರೀತಿಗೆ ಅಸಾಧಾರಣ ಶಕ್ತಿಯಿರುವುದರಿಂದ ದೂರದ ನಕ್ಷತ್ರವನ್ನು ಹಿಡಿಯಬಹುದು ಎಂಬ ನಂಬಿಕೆಯು ಶಂಕರನಿಗಿದೆ. ಗಂಡನ ಪರವಾಗಿ ಸುಮಾಳ ತಂದೆ ಕರೆದೊಯ್ಯಲು ಬಂದಾಗ “ನಾ ಅವರ ಮಗಳಲ್ಲ ಅತ್ತೆಮ್ಮಾ. ಮಗಳಾಗಿದ್ರ ತಮ್ಮ ರಾಜಕೀಯ ಚದುರಂಗದೊಳಗ ನನ್ನ ಹಿಂಗ ಬಳಸಿಕೊಳ್ತಿರಲಿಲ್ಲಾ. ತಮ್ಮ ಪಾರ್ಟಿಯೊಳಗೆ ಒಬ್ಬ ನೀಚ ಮನುಷ್ಯನ ಕರಕೊಳ್ಳಲಿಕ್ಕೆ ನನ್ನ ಬಲಿಗೊಟ್ಟರು ಅವನ ಹೇಯ ಜೀವನ, ಹೊಡತ ಬಡತಕ್ಕ ಓಡಿ ಅಪ್ಪನ ಆಶ್ರಯಕ್ಕೆ ಬಂದ್ರ ಅವ ನನ್ನ ಇಟ್ಟಕೊಳ್ಳಾಕ ತಯಾರಾಗಲಿಲ್ಲ. ನಾನು ಅಲ್ಲೊ ಇರೂದಂದ್ರ ಮರ್ಯಾದಿಗೆ ಕುಂದಂತ. ಅಳ್ಯಾ ಎಲ್ಲಿ ಪಾರ್ಟಿ ಬಿಡ್ತಾನೋ ಅಂತ ಹೊಡದ ಹೊರಗ ಹಾಕಿದ್ರು. ನಾನು ಹೋಗದೇ ಇದಾಗ ಕ್ವಾಣ್ಯಾಗ ಬಂಧಿಸಿಟ್ಟು ದಿನಾ ಹೊಡದು ನಾ ಹೋಗಬೇಕೂ ಅಂತ ಒತ್ತಾಯಿಸ್ತಿದ್ರು. ಇವರು ತಂದಿ ತಾಯಿನಾ? ಅಜನ್ಮ ವೈರಿಗಳು” (ಪುಟ 158) ಎನ್ನುವ ಆಕೆಯ ಮಾತುಗಳಲ್ಲಿ ಸಂಬಂಧಗಳ ಕೃತ್ರಿಮತೆ, ವ್ಯಾವಹಾರಿಕತೆ ಮತ್ತು ಭಾವನಾತ್ಮಕತೆಗಳ ನಡುವಿನ ತಿಕ್ಕಾಟದ ಸ್ವರೂಪವು ವ್ಯಕ್ತವಾಗುತ್ತದೆ. ಸುಮಾ ಜಗ್ಗದಿದ್ದಾಗ ತಂದೆಯು ಶಂಕರನ ಮೇಲೆ ಹಲ್ಲೆಯನ್ನು ಮಾಡಿಸುತ್ತಾನೆ. ತಾನು ಶಂಕರನನ್ನು ಮದುವೆಯಾದರೆ ಗಂಡನ ಕಡೆಯವರು ಆತನನ್ನು ಕೊಲ್ಲುವುದು ಖಂಡಿತವೆಂದು ತಿಳಿದ ಆಕೆಯು ಶಂಕರನಿಗೆ ಕಾನೂನು ರಕ್ಷಣೆಯನ್ನು ಒದಗಿಸಿ ತನ್ನ ಉದ್ಯೋಗದಲ್ಲಿ ಮುಂದುವರಿಯುತ್ತಾಳೆ. ಕಣ್ಣಂಚಿನ ತಾರೆಯು ಶಂಕರನ ಕಣ್ಣಿನಲ್ಲಿ ಮಿನುಗುವ ಸಂತಸದ ಕಣ್ಣೀರನ್ನು ಸೂಚಿಸುತ್ತಿರುವುದರಿಂದ, ಸುಮಾ ಎಂಬ ತಾರೆಯು ಶಂಕರನ ಕಣ್ಣಿನಲ್ಲಿರುವುದರಿಂದ ಅವರು ಒಂದಾಗುವ ಭರವಸೆಯೊಂದಿಗೆ ಕತೆಯು ಮುಕ್ತಾಯವಾಗುತ್ತದೆ.
    ಈ ಕತೆಯಲ್ಲಿ ನಾಯಕಿಯ ಹೆತ್ತವರು ಋಣಾತ್ಮಕ ಪಾತ್ರವಾಗಿದ್ದರೆ ‘ಸೂರ್ಯ ಮುಳುಗುವುದಿಲ್ಲ’ ಕತೆಯಲ್ಲಿ ನಾಯಕಿಯ ಗಂಡನ ಮನೆಯವರು ಆ ಜಾಗದಲ್ಲಿದ್ದಾರೆ. ರವೀಂದ್ರನು ಕಡಲಲ್ಲಿ ಮುಳುಗಿ ತೀರಿಕೊಂಡ ಆಘಾತದಿಂದಾಗಿ ಆತನ ಹೆಂಡತಿ ಶುಭಾ ಅಂತರ್ಮುಖಿಯಾಗುತ್ತಾಳೆ. ರವೀಂದ್ರನ ಗೆಳೆಯ ದಿನಕರ ಆಕೆಗೆ ಶಿಕ್ಷಕಿಯ ಕೆಲಸವನ್ನು ಕೊಡಿಸುತ್ತಾನೆ. ಅತ್ತೆ ಮಾವಂದಿರ ಬಿರುನುಡಿಗಳಿಂದ ಕಲ್ಲಾಗಿದ್ದ ಆಕೆ ಹೊಸ ಉದ್ಯೋಗ ಮತ್ತು ದಿನಕರನ ಒಡನಾಟದಿಂದ ಅರಳತೊಡಗುತ್ತಾಳೆ. ಇಲ್ಲಿ ದಿನಕರನು ಆಕೆಗೆ ಬೆಳಕು ಕೊಡುವ ಸೂರ್ಯನಾಗಿದ್ದಾನೆ. ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ದಿನಕರನು ಕಡಲಿಗಿಳಿದಾಗ, ಮುಳುಗುತ್ತಿರುವ ತನ್ನ ಗಂಡನನ್ನು ಕಂಡಂತಾಗಿ ತಲ್ಲಣಿಸುವ, ಮಗನು ತಾವರೆ ಹೂವಿಗಾಗಿ ಕಾಡಿದಾಗ ತನ್ನ ಬದುಕು ಮುಳುಗಿ ಹೋಯಿತು ಎಂಬಂತೆ ಉಸಿರುಗಟ್ಟಿ ಬಾಳುತ್ತಿದ್ದ ಶುಭಾ ‘ಸೂರ್ಯ ಮುಳುಗುವುದಿಲ್ಲ’ ಎನ್ನುವುದು ಆಕೆಯು ದಿನಕರನನ್ನು ವರಿಸುವ ನಿರ್ಧಾರಕ್ಕೆ ಪೂರಕವಾಗಿದೆ.
    ಬಂಧನದಿಂದ ಪಡೆದ ಬಿಡುಗಡೆಯನ್ನು ಸೂಚಿಸುವ ‘ಗಿಳಿಯು ಪಂಜರದೊಳಿಲ್ಲಾ’ ಸಂಕ್ಷೇಪದಿಂದ ವಿಸ್ತಾರದೆಡೆಗೆ ಒಲಿದ ಕತೆಯಾಗಿದೆ. ವಿನಯಾ ಕಷ್ಟಪಟ್ಟು ವೈದ್ಯಕೀಯ ತರಬೇತಿಯನ್ನು ಪಡೆದು ಸಾಧನೆಯನ್ನು ಮಾಡಿದರೆ, ಆಕೆಯ ಸಹಪಾಠಿಯೂ ಪ್ರೇಮಿಯೂ ಆಗಿರುವ ದಿನೇಶನು ಆಕೆಯನ್ನು ಮದುವೆಯಾಗಿ ಗೃಹಕೃತ್ಯಗಳಿಗೆ ಸೀಮಿತವಾಗಿರಿಸಲು ಬಯಸುತ್ತಾನೆ. ಹೆಣ್ಣಿನ ಸಾಮರ್ಥ್ಯ, ಪ್ರತಿಭೆಗಳಿಗೆ ಬೇಲಿ ಕಟ್ಟುವ ಮನೋಭಾವವನ್ನು ವಿರೋಧಿಸಿದ ಆಕೆಯು ಆತನನ್ನು ಬಿಟ್ಟು, ಹುಬ್ಬಳ್ಳಿಗೆ ಬಂದು ತನ್ನನ್ನು ಉದ್ಯೋಗಸ್ಥ ನೆಲೆಗೆ ತಲುಪಿಸಲು ಹಗಲಿರುಳು ಒದ್ದಾಡಿದ್ದ ತಂದೆಯನ್ನು ಸಾಕುತ್ತಾಳೆ. ನೇತ್ರ ತಜ್ಞನೂ ವಿಧುರನೂ ಆದ ಗುಜರಾತಿ ಮೂಲದ ಮದನ ಜೋಷಿಯನ್ನು ಮದುವೆಯಾಗುತ್ತಾಳೆ. ಆದರೆ ಹೆಂಡತಿಯ ಪ್ರಸಿದ್ಧಿ, ಬೆಳವಣಿಗೆ ಮತ್ತು ತನ್ನನ್ನು ಮೀರಿ ಹೋಗುವುದನ್ನು ಕಂಡು ಹೊಟ್ಟೆಕಿಚ್ಚು ಪಟ್ಟು ಸಂಬಂಧ ಬಿಗಡಾಯಿಸುವುದರೊಂದಿಗೆ ಸಮಾನತೆಯ ಪ್ರಶ್ನೆಯು ಮುನ್ನೆಲೆಗೆ ಬರುತ್ತದೆ. “ನನ್ನ ಮದಿವೆ ಆಗೋವಾಗ ಈ ವಿಚಾರ ಯಾಕೆ ಮಾಡಲಿಲ್ಲ? ಒಬ್ಬ ಸಾದಾ ಹೆಣ್ಣುಮಗಳನ್ನ ಮದವಿ ಮಾಡಬಹುದಿತ್ತಲ್ಲ? ಇಪ್ಪತ್ತನಾಲ್ಕು ನಿಮ್ಮ ನೆರಳಿನ್ಯಾಂಗ, ದಾಸಿ ಹಂಗ, ನಿಮ್ಮ ‘ಹಾಂ’ದಾಗ ‘ಹಾಂ’ ಕೂಡಿಸೊ ಪಂಜರದ ಗಿಳೀನ್ನ ಸಾಕಬೇಕಿತ್ತು. ನಿಮ್ಮ ಪಾರ್ಟಿ ಡಿನ್ನರದೊಳಗ ಉಟ್ಟು ತೊಟ್ಟು ಕೀರ್ತಿ ಹೆಚ್ಚು ಮಾಡತಿದ್ದಳು. ನಿಮ್ಮೊಳಗಿದ್ದ ಪುರುಷ ಹೊರಗ ಬರಲಿಕ್ಕ ಹತ್ಯಾನ ನಿಮ್ಮ ಗೊಂಬಿ ನಾ ಆಗಿರಲಿಕ್ಕ ಸಾಧ್ಯ ಇಲ್ಲ. ನನಗ ವಿದ್ಯಾ ಅದ. ಸ್ವತಂತ್ರ ವ್ಯಕ್ತಿತ್ವ ಅದ, ನಾ ಸ್ವತಂತ್ರ ಇರಬಲ್ಲೆ” (ಪುಟ 87) ಎಂದು ಮಗನನ್ನು ಎತ್ತಿಕೊಂಡು ಹೊರಟುಬಿಡುತ್ತಾಳೆ. ಆದರೆ ಇತರ ಕತೆಗಳ ನಾಯಕಿಯಂತೆ ಪ್ರಿಯಕರನ ಹತ್ತಿರ ಹೋಗುವುದಿಲ್ಲ. ಯಾಕೆಂದರೆ ಆಕೆ ಬರೇ ಹೆಣ್ಣು ಮಾತ್ರವಲ್ಲ. ಗಂಡು ಮಗುವಿನ ತಾಯಿಯೂ ಆಗಿದ್ದು ಆ ಕರ್ತವ್ಯವನ್ನು ನಿರ್ವಹಿಸುವುದು ಅನಿವಾರ್ಯವಾಗಿರುವುದರಿಂದ ಋಣವನ್ನು ಹರಿದುಕೊಳ್ಳುವುದು ಸುಲಭವಲ್ಲ. ಆದ್ದರಿಂದ ಮದನನು ಆಕೆಯನ್ನು ಮನೆಗೆ ಕರೆದೊಯ್ಯಲು ಬಂದಾಗ ಆತನನ್ನು ಸ್ವೀಕರಿಸಿ, ಗಂಡನ ಸಹಭಾಗಿತ್ವದೊಂದಿಗೆ ಔದ್ಯೋಗಿಕ ಬದುಕಿನಲ್ಲಿ ಮುಂದುವರಿಯುತ್ತಾಳೆ. ಮದನನಲ್ಲಿ ದಕ್ಷತೆ, ಸಭ್ಯತೆ, ಸಾಮರ್ಥ್ಯ ಮುಂತಾದ ಒಳ್ಳೆಯ ಗುಣಗಳಿದ್ದರೂ ಹೆಣ್ಣಿನ ಸ್ಥಾನದಲ್ಲಿದ್ದುಕೊಂಡು ಯೋಚನೆ ಮಾಡುವ ಶಕ್ತಿ ಕಡಿಮೆ. ಹೆಂಡತಿಯ ಕ್ರಿಯಾಶೀಲತೆಯ ಬಗ್ಗೆ ಅವನಗಿದ್ದ ಹೊಟ್ಟೆಕಿಚ್ಚು ಮಾಯವಾಗಿ ತನ್ನ ಸಂಕುಚಿತ ಮನೋಭಾವವನ್ನು ಕಳೆದುಕೊಂಡು ಪ್ರೀತಿಪಾತ್ರ ಸೌಜನ್ಯಯುಕ್ತ ವ್ಯಕ್ತಿಯಾಗಿ ಮಾರ್ಪಟ್ಟರೂ, ಪರಿವರ್ತನೆಯನ್ನು ತನಗೆ ತಾನೇ ಸಾಧಿಸುವ ಶಕ್ತಿಯಿಲ್ಲದಿರುವುದರಿಂದ ಬದಲಾವಣೆಯ ಅರಿವು ಆತನ ಸಂವೇದನೆಗೆ ಹೊರತಾಗಿದೆ. ಆಕೆಯು ದೂರವಾದ ಮೇಲೆ ಅವನ ಹೃದಯದಲ್ಲಿ ಸಂಕುಚಿತ ಮನಸ್ಸಿನ ಶೂನ್ಯವನ್ನು ಮೀರಿದ ಬದಲಾವಣೆಯು ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಇದುವರೆಗಿನ ಕತೆಗಳಿಗಿಂತ ಭಿನ್ನ ಜಾಡನ್ನು ಹಿಡಿದ ಕತೆಯು ಹೊಂದಾಣಿಕೆಯ ಅಗತ್ಯವನ್ನು ಮನಗಾಣಿಸುತ್ತದೆ. ‘ಅತಿಥಿ’ಯ ಧೋರಣೆಯೂ ಅದುವೇ ಆಗಿದೆ. ವಿವಾಹ ವಯಸ್ಸನ್ನು ಮೀರಿದ ಅನುರಾಧಳು ವಿಜಯನನ್ನು ಪ್ರೀತಿಸುತ್ತಾಳೆ. ಸಂಸಾರಸ್ಥನಾದ ಆತನು ತನ್ನ ಹೆಂಡತಿ ಕುಸುಮಳಿಗೆ ವಿಚ್ಛೇದನವನ್ನು ಕೊಡುವ ಆತುರದಲ್ಲಿದ್ದಾನೆ. ಇದು ತಿಳಿದಿದ್ದರೂ ಅನುರಾಧಳಿಗೆ ಆತನನ್ನು ಪ್ರೀತಿಸದಿರಲಾಗುವುದಿಲ್ಲ. ಆರ್ಥಿಕವಾಗಿ ಸ್ವತಂತ್ರಳಾಗಿರುವುದರಿಂದ ಆಕೆಯು ಪರಿಸ್ಥಿತಿಯನ್ನು ನಿಭಾಯಿಸಬಲ್ಲಳು. ಆದರೆ ಆತನ ಹೆಂಡತಿಯನ್ನು ನೆನೆಯುವಾಗ ಆಕೆಗೆ ದ್ವಂದ್ವ ಕಾಡುತ್ತದೆ. ಕೊನೆಗೆ ಆಕೆಯು ತನ್ನ ಬಯಕೆಯನ್ನು ನಿಯಂತ್ರಿಸಿಕೊಂಡು ಗಂಡಹೆಂಡಿರನ್ನು ಒಂದುಗೂಡಿಸುತ್ತಾಳೆ. ಇದರಿಂದ ಕುಸುಮ ಕೃತಜ್ಞಳಾಗಿ ತನ್ನ ಅಣ್ಣನೊಂದಿಗೆ ಅನುರಾಧಳ ಮದುವೆಯನ್ನು ಮಾಡಿಸುವುದು ಕತೆಯ ದೃಷ್ಟಿಯಿಂದ ಆಶಾವಾದಿ ಬೆಳವಣಿಗೆಯಾಗಿದೆ. ಇವುಗಳು ಮಧ್ಯಮ ವರ್ಗದವರ ಬದುಕಿನ ಕಥನಗಳಾದರೆ ‘ಮುಗಿಲ ಮಲ್ಲಿಗೆ’, ‘ಚುಕ್ಕಿ ಚಂದ್ರಾಮರ ಮುಗಿಲು ಬೇಕು’ ಎಂಬ ಕತೆಗಳು ಕೆಳವರ್ಗದವರ ಬದುಕನ್ನು ಪ್ರತಿಬಿಂಬಿಸುತ್ತವೆ. ಈ ಕತೆಗಳ ನಾಯಕಿಯರು ದುಷ್ಟ ಗಂಡಂದಿರಿಂದ ಬೇರೆಯಾಗಿ, ಸ್ವಾವಲಂಬಿಗಳಾಗುತ್ತಾರೆ. ಶೋಷಣೆ, ಹಿಂಸೆ, ಯಾತನೆಗಳು ಜಾತಿ, ವರ್ಗ, ವರ್ಣ, ಕ್ಷೇತ್ರ ಮುಂತಾದೆಡೆಗಳಲ್ಲಿ ಹಾಸುಹೊಕ್ಕಿರುವುದರಿಂದ ಪಾತ್ರಗಳ ಸಾಮಾಜಿಕ ಶ್ರೇಣಿಗಳು ಭಿನ್ನವಾದರೂ ಸಂಕಷ್ಟದ ಸ್ವರೂಪವು ಒಂದೇ ಆಗಿದೆ. ಲೇಖಕಿಯು ತಮ್ಮ ಗ್ರಹಿಕೆಗೆ ನಿಲುಕಿದ ಶೋಷಿತ ಬದುಕನ್ನು ಚಿತ್ರಿಸಿರುವುದರಿಂದ ಅವುಗಳಲ್ಲಿ ಕೃತಕತೆಯಿಲ್ಲ. ಭಾವುಕ ನೆಲೆಯಲ್ಲಿ ಚಲಿಸುವ ‘ಋಣ’ ಕತೆಯಲ್ಲಿ ತಾಯಿಯ ಅಂತ್ಯಕ್ರಿಯೆಗೂ ಹೋಗಲು ಬಿಡದ ವ್ಯವಸ್ಥೆಯ ಕ್ರೌರ್ಯವನ್ನು, ಬಡವರು ಮತ್ತು ದುರ್ಬಲರು ಅದನ್ನು ತಮ್ಮ ಬದುಕಿನ ಅಂಗವೆಂಬಂತೆ ಒಪ್ಪಿಕೊಳ್ಳುವ ದುರಂತವನ್ನು ಕಾಣುತ್ತೇವೆ. ‘ಆ ಮರ ಆ ಯುವತಿ’ಯಲ್ಲಿ ಹೊರಗಡೆ ನಿಂತು ಯಾರನ್ನೋ ನಿರೀಕ್ಷಿಸುತ್ತಿರುವ ಹೆಣ್ಣನ್ನು ಸೂಳೆ ಎಂದುಕೊಳ್ಳುವ, ‘ಸಾವಿನ ನೆರಳಲ್ಲಿ’ ಹೆಣ್ಣಿನ ನಿಗೂಢ ಆತ್ಮಹತ್ಯೆಗೆ ಅನೈತಿಕ ಸಂಬಂಧವೇ ಕಾರಣ ಎಂದುಕೊಳ್ಳುವ ಜನರ ಕೆಟ್ಟ ಕುತೂಹಲಗಳನ್ನು ನವಿರಾಗಿ ವಿಡಂಬಿಸಿದ್ದಾರೆ. ಮೇಲುವರ್ಗ ಮತ್ತು ಮಧ್ಯಮವರ್ಗದ ಕೌಟುಂಬಿಕ ಪರಿಸ್ಥಿತಿಗಳನ್ನೇ ಹೆಚ್ಚು ವಿಶ್ಲೇಷಿಸುವ ಲೇಖಕಿಯು ವೈಯಕ್ತಿಕ ಸಂಬಂಧಗಳಾಚೆಗಿನ ಸಮಸ್ಯೆಗಳ ಬಗ್ಗೆ ಬರೆದದ್ದು ಕಡಿಮೆ. ‘ಆನಂದ ವಿಹಾರ’ವು ಸಮಾಜಮುಖಿಯಾಗಿದ್ದು ಸಾಮಾಜಿಕ ಹೋರಾಟದ ಮೂಲಕ ಮದ್ಯದ ಅಂಗಡಿಯನ್ನು ಮುಚ್ಚಿಸಿದ ಕತೆಯನ್ನು ಹೇಳುತ್ತದೆ. ಇಲ್ಲಿ ಲೇಖಕಿಯು ಬದುಕನ್ನು ಹೊರಗಿನಿಂದ ನೋಡಿದ್ದಾರೆ.
    ತಾಯ್ತನದ ಸಮಸ್ಯೆಯು ಸ್ತ್ರೀಪ್ರಜ್ಞೆಯನ್ನು ಆಳವಾಗಿ ಪ್ರಭಾವಿಸಿದ ಸಮಸ್ಯೆಗಳಲ್ಲೊಂದು. ಈ ಸಮಸ್ಯೆಗೆ ಹಲವು ಆಯಾಮಗಳಿರುವುದರಿಂದ ಅದಕ್ಕೆ ಸುಲಭ ಪರಿಹಾರಗಳಿಲ್ಲ. ಈ ಸಮಸ್ಯೆಯನ್ನು ಸರಳವಾಗಿ ವಿವರಿಸುವ ಮೂಲಕ ‘ನನಗೊಂದು ಮಗು ಬೇಕು’ ಮಹತ್ವದ ಕತೆಯಾಗುವುದಿಲ್ಲ. ಮೋಹನ ಮತ್ತು ನಳಿನಿ ದಂಪತಿಗೆ ಮಕ್ಕಳಾಗಿರುವುದಿಲ್ಲ. ನಳಿನಿಯು ತಾಯ್ತನಕ್ಕೆ ಆತುಕೊಂಡಿದ್ದರೆ ಮೋಹನ ಈ ಬಗ್ಗೆ ಚಿಂತಿತನಾಗಿರುವುದಿಲ್ಲ. ನೆರೆಹೊರೆಯವರ ಮತ್ತು ಬಳಗದವರ ನಿಲುವು ಪ್ರತಿಕ್ರಿಯೆಗಳಿಂದಾಗಿ ತಾಯ್ತನದ ಪ್ರಶ್ನೆಯಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಮಗ್ಗುಲು ಸೂಕ್ಷ್ಮವಾಗಿ ಕಾಣಿಸಿಕೊಂಡಿದೆ. ತಾಯಿಯಾಗುವ ಛಲದಿಂದ ವೈದ್ಯಕೀಯ ಉಪಾಯಗಳನ್ನು ಹುಡುಕಿಕೊಂಡು ಹೋಗುತ್ತಾಳೆ. ಸಂತಾನಕ್ಕಾಗಿ ವೀರ್ಯಾಣುಗಳ ಬ್ಯಾಂಕಿನಿಂದ ಪರಪುರುಷನ ವೀರ್ಯಾಣುವನ್ನು ತನ್ನ ಅಂಡಾಣುವಿನೊಂದಿಗೆ ಇನ್‌ವಿಟ್ರೋ ಫರ್ಟಿಲೈಸೇಶನ್ (ಗರ್ಭಕೋಶದ ಹೊರಗೆ ಭ್ರೂಣೋತ್ಪತ್ತಿ) ಮಾಡಿ ಹೆರಲು ನಿರ್ಧರಿಸುತ್ತಾಳೆ. ಇದರಿಂದಾಗಿ ಗಂಡ ಹೆಂಡಿರ ನಡುವೆ ಸಂಘರ್ಷ ಹುಟ್ಟಿ ಪರಸ್ಪರ ಬೇರೆಯಾಗುವಲ್ಲಿಗೆ ಕತೆ ಮುಗಿಯುತ್ತದೆ. ಎಷ್ಟೆಂದರೂ ನಾವು ಈ ಸಮಾಜದಲ್ಲಿ ಬದುಕುವವರಲ್ಲವೇ? ಆದ್ದರಿಂದ ನಾವೇಕೆ ವಿಶಾಲ ಮನಸ್ಸಿನವರಾಗಬಾರದು? ಎಂಬ ಪ್ರಶ್ನೆಯನ್ನು ಸಮಸ್ಯೆಯ ಹೊರಗಿದ್ದುಕೊಂಡು ಕೇಳುವುದು ಸುಲಭ. ಆದರೆ ತನ್ನದಲ್ಲದ ವೀರ್ಯವನ್ನು ಒಡಲಿಗಿಳಿಸಿಕೊಂಡು ಗರ್ಭಧರಿಸಲು ಬಯಸುವ ಹೆಂಡತಿಯ ನಿರ್ಣಯದಿಂದ ಗಂಡನ ಮನದಲ್ಲಿ ಹುಟ್ಟಬಹುದಾದ ತಲ್ಲಣವನ್ನೂ ಗಮನಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಇಬ್ಬರ ಮನದಲ್ಲೂ ಸಂಕೀರ್ಣ ಭಾವನೆಗಳು ಹಾದುಹೋಗುವ ಸಾಧ್ಯತೆಗಳಿದ್ದವು. ಗಂಡನ ಪಾತ್ರವು ಇಲ್ಲಿನ ಇತರ ಕತೆಗಳಲ್ಲಿ ಕಾಣಿಸಿಕೊಳ್ಳುವಂತೆ ದುಷ್ಟ ಪಾತ್ರವಲ್ಲ. ಕೃತಕ ಗರ್ಭಧಾರಣೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಆತನು ಜಗಳವಾಡುತ್ತಾನೆಯೇ ಹೊರತು ಬದುಕಿನ ಬೇರೆ ಘಟ್ಟಗಳಲ್ಲಿ ಆಕೆಯನ್ನು ದಮನಿಸಿರಲಿಲ್ಲ. ಆದ್ದರಿಂದ ನಳಿನಿಯು ಆತನನ್ನು ತ್ಯಜಿಸುವ ಸನ್ನಿವೇಶವು ಅವಸರದ ತೀರ್ಮಾನವೆನಿಸಿಕೊಳ್ಳುತ್ತದೆ. ಕತೆಯು ಅವಳ ದೃಷ್ಟಿಕೋನಗಳಿಗಷ್ಟೇ ಸೀಮಿತಗೊಂಡು ಮೋಹನನ ಸಂಕಟ, ಸಂದಿಗ್ಧತೆ, ಮಾನಸಿಕ ತುಮುಲಗಳನ್ನು ವಿಶ್ಲೇಷಿಸುವ ಅವಕಾಶವನ್ನು ಕಳೆದುಕೊಳ್ಳುವುದರಿಂದ ಸಂಕೀರ್ಣ ರಚನೆಯೆನಿಸಿಕೊಳ್ಳುವುದಿಲ್ಲ.
    ಗಂಡು ಹೆಣ್ಣಿನ ಸಂಬಂಧಗಳು ಎಲ್ಲ ತಲೆಮಾರುಗಳ ಲೇಖಕಿಯರ ಕತೆಗಳಿಗೆ ವಸ್ತುವನ್ನು ಒದಗಿಸಿವೆ. ದಿನ ಕಳೆದಂತೆ ಈ ಸಂಬಂಧಗಳು ಜಟಿಲವಾಗುತ್ತಿವೆ. ‘ನಾ ಯಾಕ ಹುಟ್ಟಿದೆನೊ’ ಇದಕ್ಕೆ ಉದಾಹರಣೆಯಾಗಿದೆ. ವಿಷಮ ದಾಂಪತ್ಯದ ನೋವಿಗೊಳಗಾದ ಮಗುವಿನ ಕಣ್ಣುಗಳಿಂದ ವಸ್ತುಸ್ಥಿತಿಯನ್ನು ಗಮನಿಸಿರುವುದು ಈ ಕತೆಯ ವಿಶೇಷತೆಯಾಗಿದೆ. ಆರು ವಯಸ್ಸಿನ ರಚನಾಳಿಗೆ ತನ್ನ ತಂದೆತಾಯಿಯರು ದಿನವೂ ಯಾಕೆ ಜಗಳವಾಡುತ್ತಾರೆ ಎಂಬುದು ಬಿಡಿಸಲಾರದ ಒಗಟಾಗಿದೆ. ತಂದೆತಾಯಿಯರನ್ನು ಪ್ರೀತಿಸುವ ಅವಳಿಗೆ ತಮ್ಮ ನಡುವೆ ಇನ್ನೊಬ್ಬ ಹೆಣ್ಣು ಬರುವುದರಿಂದ ದಿಗಿಲಾಗುತ್ತದೆ. ಅಪ್ಪನ ಮಲಗುವ ಕೋಣೆಯಲ್ಲಿ ತನ್ನ ತಾಯಿಯ ಬದಲು ಇನ್ನೊಬ್ಬಳು ಇರುವುದರ ಹಿಂದಿನ ಮರ್ಮವನ್ನು ಆಕೆಯು ಅರ್ಥಮಾಡಿಕೊಳ್ಳಲಾರಳು. ಕತೆಯ ದೃಷ್ಟಿಕೋನವು ತಬ್ಬಿಬ್ಬುಗೊಳಿಸುವ ವಾತಾವರಣವನ್ನು ಸಂಕೇತಿಸುತ್ತದೆ. ‘ಬದುಕೆಂಬ ಮೋಹ’ವು ಅದೇ ವಸ್ತುವನ್ನು ಹೆಂಡತಿಯ ದೃಷ್ಟಿಯಿಂದ ನೋಡುತ್ತದೆ. ಗಂಡನು ಪರಸ್ತ್ರೀಯನ್ನು ಮನೆಯೊಳಗೆ ಸೇರಿಸಿದಾಗ ಆಕೆ ತನ್ನ ಮಗನನ್ನು ಕಟ್ಟಿಕೊಂಡು ಹೊರಡುತ್ತಾಳೆ. ಕಷ್ಟಪಟ್ಟು ಉದ್ಯೋಗ ಸಂಪಾದಿಸಿ ತನ್ನ ನೆಲೆಯನ್ನು ಕಂಡುಕೊಂಡರೂ ಮಗ ಮದುವೆಯಾದ ಬಳಿಕ ಸೊಸೆಯಿಂದ ತಿರಸ್ಕೃತಳಾಗುತ್ತಾಳೆ.
    ‘ಎಂಜಲು’, ‘ನಿರ್ಗಮನ’, ನೀ ಯಾಕ ಪರದೇಶಿ’ ಎಂಬ ಕತೆಗಳಲ್ಲಿ ಕುಟುಂಬವು ವಿಸ್ತೃತ ನೆಲೆಯಲ್ಲಿ ಕಾಣಿಸಿಕೊಳ್ಳುತ್ತದೆ. ಕುಟುಂಬದೊಳಗೆ ಪರಸ್ಪರ ಸಂಬಂಧವನ್ನು ಹೊಂದಿದ ಎರಡು ವರ್ಗಗಳ ನಡುವಿನ ಸಂಘರ್ಷವು ಮುಖ್ಯವಾಗುತ್ತದೆ. ಅಣ್ಣ, ಅತ್ತಿಗೆಯರ ಆಸರೆಯಲ್ಲಿ ಬದುಕುವ ಶಾಂತಾ ಮತ್ತು ಮಗಳು ನಿರ್ಮಲ ಅನುಭವಿಸುವ ತಾರತಮ್ಯ, ಅತ್ತಿಗೆ ಸುಭದ್ರೆಯು ಅವರ ಆಶೋತ್ತರಗಳಿಗೆ ಸ್ಪಂದಿಸದೆ ಕೆಲಸದಾಳುಗಳಂತೆ ಬಳಸಿಕೊಳ್ಳುವ ರೀತಿಯನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸುಭದ್ರೆಯ ಮಗಳು ಹೆತ್ತು ಸತ್ತಾಗ ಇಂಜಿನಿಯರಿಂಗ್ ಕಲಿತು ಔದ್ಯೋಗಿಕ ಬದುಕಿನ ಹಾದಿಯನ್ನು ಹಿಡಿದ ನಿರ್ಮಲಳನ್ನು ತನ್ನ ಅಳಿಯನಿಗೆ ಎರಡನೇ ಮದುವೆ ಮಾಡಲು ಸಿದ್ಧಳಾದಾಗ ಶಾಂತಳ ತಾಳ್ಮೆ ಕಟ್ಟೆಯೊಡೆದು ಅಣ್ಣನ ಹಂಗಿನ ಮನೆಯಿಂದ ಹೊರಬೀಳುತ್ತಾಳೆ. ಉದ್ಯೋಗದಿಂದ ನಿವೃತ್ತಿ ಹೊಂದಿದ ಬಳಿಕ ಸೋಮಶೇಖರನವರು ಮನೆಯವರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ನೋವು ಮುಖ್ಯವಾಗುತ್ತದೆ. ತಾವು ಪ್ರೀತಿಸಿದ ನಿರ್ಮಲಳನ್ನು ಮದುವೆಯಾಗುವುದರ ಬದಲು ತಂಗಿ ತಮ್ಮಂದಿರ ಮದುವೆಯ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ಅದೊಂದು ಮರೆಯಲಾಗದ ಹೊಡೆತವೇ ಸರಿ. ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ಉಪಚರಿಸಲು ಯಾರೂ ಬಾರದಿದ್ದ ಸಂದರ್ಭದಲ್ಲಿ ಆಶಾಕಿರಣವಾಗಿ ಬಂದ ನಿರ್ಮಲಳ ಜೊತೆ ಹೋಗುತ್ತಾನೆ. ‘ನೀ ಯಾಕ ಪರದೇಶಿ’ಯಲ್ಲಿ ಅತ್ತೆಯು ಪರಿಸ್ಥಿತಿಯನ್ನು ಸ್ವೀಕರಿಸಿದ್ದಾಳೆ. ತಾರುಣ್ಯದಲ್ಲಿ ಕಷ್ಟಪಟ್ಟು ಮಗನನ್ನು ಸಾಕಿದವಳು, ನಂತರದ ದಿನಗಳಲ್ಲಿ ಸೊಸೆಯಿಂದ ತಿರಸ್ಕಾರಕ್ಕೊಳಗಾದಾಗ ಅಪಸ್ವರವೆತ್ತದೆ ಮೌನವಾಗಿರುತ್ತಾಳೆ. ಆದರೆ ಸೊಸೆಯ ಗರ್ಭಕೋಶದಲ್ಲಿ ಕಾನ್ಸರ್ ಆದಾಗ ಆಕೆಗೆ ಅತ್ತೆಯ ಆರೈಕೆ ಬೇಕಾಗುತ್ತದೆ. ಆಕೆಯ ಕರೆಯು ಸ್ವಾರ್ಥಲೇಪಿತವಾಗಿದ್ದರೂ ಅವಳ ಮನಸ್ಸು ಮೃದುವಾಗಿರುವುದನ್ನು ಅಲ್ಲಗೆಳೆಯುವಂತಿಲ್ಲ. ಎರಡು ತಲೆಮಾರುಗಳನ್ನು ಪ್ರತಿನಿಧಿಸುವ ತಂದೆ – ಮಗ, ಅತ್ತೆ – ಸೊಸೆಯರ ನಡುವೆ ಗುಣಾತ್ಮಕ ಅಂತರವಿದ್ದರೂ ಕತೆಗಳು ಬದುಕಿನ ಸಮಗ್ರತೆಯ ದೃಷ್ಟಿಯಿಂದ ಹೆಣ್ಣಿನ ಅಸ್ತಿತ್ವವನ್ನು ಸಮರ್ಥಿಸುತ್ತವೆ. ಮೂಲೆಗುಂಪಾದ ತಾಯಿಯ ಸಂವೇದನೆಗಳನ್ನು ವಿವರಿಸುವ ಕತೆಗಳಲ್ಲಿ ಆಕೆಯು ತನ್ನವರಿಂದಲೇ ಶೋಷಣೆಗೊಳಗಾಗುತ್ತಾಳೆ. ಮನೆಯಲ್ಲಿ ಸಿರಿವಂತಿಕೆಯಿದ್ದರೂ ಹೃದಯ ಶ್ರೀಮಂತಿಕೆಯಿಲ್ಲ. ನೆಮ್ಮದಿಯ ಬಾಳಿಗೆ ಅವಕಾಶವಿಲ್ಲದಾಗುವ ಸ್ಥಿತಿ, ತಾಯಿಯಾಗಿ ತನ್ನ ಕರ್ತವ್ಯಗಳನ್ನು ತೀರಿಸಿದ ಬಳಿಕವೂ ಎದುರಾಗುವ ಕುಹಕ ವ್ಯಂಗ್ಯಗಳು, ಸ್ವಂತ ಮಕ್ಕಳಿಂದ ಎದುರಾಗುವ ಅವಮಾನ ಸಂಕಟಗಳ ಚಿತ್ರಣವನ್ನಷ್ಟೇ ನೀಡಿ ವಿರಮಿಸದೆ ಜೀವಪರ ನಿಲುವನ್ನು ಹೊಂದಿದ ಪಾತ್ರಗಳನ್ನೂ ಚಿತ್ರಿಸಿ ಕಳಕಳಿಯನ್ನು ಮೆರೆದಿರುವ ಲೇಖಕಿಯು ಪರಿತ್ಯಕ್ತೆಯ ಬದುಕಿನ ಕಷ್ಟ ನಷ್ಟಗಳನ್ನು ಚಿತ್ರಿಸುವುದರೊಂದಿಗೆ ವಸ್ತುನಿಷ್ಠತೆಯನ್ನು ಕಾಯ್ದುಕೊಂಡಿದ್ದಾರೆ. ಮನೆಯಲ್ಲಿರುವ ವೃದ್ಧ ತಂದೆತಾಯಿಯರ ಕುರಿತು ಹೊಸ ತಲೆಮಾರು ಪ್ರೀತಿ ಕಾಳಜಿಗಳನ್ನು ತೋರಿ ತಾವು ಅಲಕ್ಷಿತರಲ್ಲ ಎಂಬ ಭರವಸೆಯನ್ನು ಮೂಡಿಸಬೇಕಾದ ಅಗತ್ಯದ ಕಡೆಗೆ ಬೊಟ್ಟು ಮಾಡುವ, ಮಾನವೀಯ ಸಂಬಂಧಗಳ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವನ್ನು ಮನಗಾಣಿಸುವ, ಕಾಲ ಕಳೆದಂತೆ ನಿಸ್ಸಾರವೂ ನಿರ್ವೀರ್ಯವೂ ಆಗಿಬಿಡುವ ಬದುಕನ್ನು ಕಣ್ಮುಂದೆ ತರುವ, ವೃದ್ಧ ತಂದೆತಾಯಿಯರೊಂದಿಗೆ ವಾತ್ಸಲ್ಯ ಮಮಕಾರಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದ ಕೃತಘ್ನ ಬದುಕು ಅನಾವರಣಗೊಳಿಸುವ ಕತೆಗಳಲ್ಲಿ ಹಿರಿಯರಿಗೆ ಕಿರಿಯರ ಮೇಲಿನ ಅಪನಂಬಿಕೆ, ಕಿರಿಯರಿಗೆ ಹಿರಿಯರ ಮೇಲಿರುವ ಅಸಮಾಧಾನ- ತಿರಸ್ಕಾರ, ತಪ್ಪು ಗ್ರಹಿಕೆ, ತಲೆಮಾರುಗಳ ಅಂತರ, ಪೀಳಿಗೆಗಳ ನಡುವಿನ ಸಂಘರ್ಷಗಳಿಂದಾಗಿ ಮನುಷ್ಯರ ನಡುವೆ ಗೋಡೆ ಕಂದರಗಳು ಸೃಷ್ಟಿಯಾಗಬಾರದು ಎಂಬ ಆಶಯವಿದೆ.
    ಬದುಕಿನಲ್ಲಿ ಹುಟ್ಟುವ ಸಮಸ್ಯೆಯನ್ನು ಎದುರಿಸುವ ದಾರಿಯನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಬೆಳೆಯುವ ‘ಕ್ಷಮಿಸು ಮಗಳೆ’ ಕತೆಯಲ್ಲಿ ಸೋಮನಾಥ ಪಾಟೀಲನ ಮುಂದೆ ತನ್ನ ಕರ್ಮಫಲವು ಪರಿಸ್ಥಿತಿಯ ವ್ಯಂಗ್ಯವಾಗಿ ಕಾಣಿಸಿಕೊಳ್ಳುತ್ತದೆ. ಅವನಿಂದ ಬಸಿರಾದ ಪಾರು ಹೆಣ್ಣುಮಗಳನ್ನು ಹೆತ್ತರೂ ಮಗು ತಬ್ಬಲಿಯಾಗಿ ಬಾಳುತ್ತಾಳೆ. ಕಸಮುಸುರೆ ಮಾಡಿಕೊಂಡು ಬದುಕುತ್ತಿದ್ದ ಆಕೆಯನ್ನು ನೋಡಿಕೊಳ್ಳುತ್ತಿದ್ದ ಚಿಕ್ಕಪ್ಪನು ಹಣದ ಆಸೆಗಾಗಿ ಆಕೆಯನ್ನು ಪ್ರಭಾವಿ ವ್ಯಕ್ತಿಗಳ ಹಾಸಿಗೆಗೆ ಕಳುಹಿಸಲೂ ಹೇಸುವುದಿಲ್ಲ. ಪಾಟೀಲನು ಮುದುಕನಾದಾಗ ಭೇಟಿಯಾಗುವ ಮಗಳಲ್ಲಿ ಪಾರುವಿನ ಮುಖವನ್ನೇ ಕಾಣುತ್ತಾನೆ. ಗಂಡಸರಿಂದ ಮೋಸ ಹೋಗಿದ್ದ ಆಕೆಯು ಹಲವು ಬಾರಿ ಲೈಂಗಿಕ ಶೋಷಣೆಗೆ ಒಳಗಾದ ವಿಚಾರವನ್ನು ತಿಳಿದು ಪಶ್ಚಾತ್ತಾಪಗೊಂಡ ಪಾಟೀಲನು ಆಕೆಯನ್ನು ಮಗಳಾಗಿ ಸ್ವೀಕರಿಸಲು ಸಿದ್ಧನಾಗುತ್ತಾನೆ. ಅಂತ್ಯದಲ್ಲಿ ರಹಸ್ಯವನ್ನು ಸ್ಫೋಟಿಸಿ, ಓದುಗರನ್ನು ಬೆಚ್ಚಿ ಬೀಳಿಸುವ ತಂತ್ರವನ್ನು ಬಿಟ್ಟುಕೊಟ್ಟ ಕತೆಯು ಸತ್ಯವನ್ನು ಮೊದಲೇ ನಿರೂಪಿಸಿ, ಅದನ್ನು ಒಪ್ಪಿಕೊಂಡೇ ಪಾತ್ರಗಳ ವರ್ತನೆ, ತಲ್ಲಣ ಮತ್ತು ಯಾತನೆಗಳನ್ನು ಗಮನಿಸುವ ಅವಕಾಶವನ್ನು ನೀಡುತ್ತದೆ. ಆದರೆ ‘ನಾಟಕ ಹೂಡಿ ನನ್ನ ಮನವೊಲಿಸಲು ಇಂಥ ತಂತ್ರ ಹೂಡಿರಬಹುದೇ?’ ಎಂದು ಚಿಂತಿಸಿ ಅಲ್ಲಿಂದ ಪಲಾಯನ ಮಾಡುವಷ್ಟು ಆಕೆಯ ಮನಸ್ಸು ಕಹಿಯಾಗಿರುವುದು ದುರಂತ. ಇಲ್ಲಿ ಪಾಟೀಲ ಮತ್ತು ಪಾರು ತಪ್ಪಿತಸ್ಥರಾಗಿದ್ದರೂ ಅವರ ಮಗಳು ಶಿಕ್ಷೆಯನ್ನು ಅನುಭವಿಸುತ್ತಾಳೆ. ಆದರೆ ಕತೆಯು ಯಾರ ತಪ್ಪನ್ನು ಸಮರ್ಥಿಸುವುದಿಲ್ಲ. ಅವರೆಲ್ಲರೂ ಮನುಷ್ಯರೆಂದುಕೊಂಡು ಮಾನವೀಯ ದೃಷ್ಟಿಯಲ್ಲಿ ನಡೆಸಿಕೊಳ್ಳುತ್ತದೆ. ಸಮಾಜದಲ್ಲಿ ಗಂಡು ಹೆಣ್ಣುಗಳಿಬ್ಬರಿಗೂ ನೈತಿಕ ಹೊಣೆಗಾರಿಕೆಯಿದೆ. ಅದನ್ನು ಕುರಿತ ಪ್ರಜ್ಞೆ ಕೆಲವರಿಗೆ ಸರಿಯಾದ ಸಮಯದಲ್ಲಿ ಮೂಡಿದರೆ ಕೆಲವರಿಗೆ ತಡವಾಗಬಹುದು. ತಡವಾಗಿಯಾದರೂ ತಮ್ಮೊಳಗಿನ ಜವಾಬ್ದಾರಿ ಮತ್ತು ಪ್ರಾಮಾಣಿಕತೆಗೆದುರಾಗಿ ತಲ್ಲಣಿಸದವರು ವಿರಳ. ಪ್ರತಿಯೊಬ್ಬರೂ ನೈತಿಕ ಹೊಣೆಗಾರಿಕೆಗೆ ಬದ್ಧರಾಗಿ ನಡೆದರೆ ಮನಃಕ್ಲೇಷಗಳು ಮೂಡಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳಬೇಕಾಗುವುದಿಲ್ಲ ಎಂಬ ವಿಚಾರವನ್ನು ಕತೆಯು ಅರ್ಥ ಮಾಡಿಸುತ್ತದೆ.
    ಕಣ್ಮರೆಯಾದ ಗೆಳೆಯನ ಕುರಿತು ಕತೆ ಹೆಣೆಯುವ ಶ್ರಮವನ್ನು ‘ಎಲ್ಯಾದರೂ ಬದುಕಿರು ಗೆಳೆಯಾ’ ಎಂಬ ಕತೆಯಲ್ಲಿ ಕಾಣಬಹುದು. ಆತನನ್ನು ಹುಡುಕಾಡುವ ಹಾದಿಯಲ್ಲಿ ಎದುರಾಗುವ ವ್ಯಕ್ತಿಗಳು ತಮಗೆ ಕಂಡಂತೆ, ತಮಗೆ ಕಂಡಷ್ಟು ವಿವರಿಸುವುದರೊಂದಿಗೆ ಗೆಳೆಯನ ವ್ಯಕ್ತಿತ್ವವು ಓದುಗರ ಮನದಲ್ಲಿ ಬೆಳೆಯತೊಡಗುತ್ತದೆ. ಆತನು ಜೀವಂತವಾಗಿದ್ದಾನೋ, ಕೊಲೆಯಾಗಿದ್ದಾನೋ ಎಂಬ ಗೊಂದಲವು ಕಾಡುತ್ತದೆ. ಆದರೆ ಶಬ್ದಗಳ ಮೂಲಕ ಹುಡುಕಿದರೆ ಆತನು ಆ ಬಲೆಗೆ ಸಿಗದೆ ತಪ್ಪಿಸಿಕೊಳ್ಳುತ್ತಾನೆ. ಅವನಿಂದ ಸ್ನೇಹವನ್ನು ಮಾತ್ರ ಸವಿದ ನಿರೂಪಕನಿಗೆ ಏಕಪಕ್ಷೀಯ ನಿರ್ಣಯವನ್ನು ಕೈಗೊಳ್ಳಲು ಸಾಧ್ಯವಾಗದೆ ಇಬ್ಬಂದಿತನಕ್ಕೆ ಒಳಗಾಗುವ ಕ್ರಿಯೆಯು ಕಥನತಂತ್ರದ ದೃಷ್ಟಿಯಿಂದ ವಿಶಿಷ್ಟವೆನಿಸುತ್ತದೆ. ‘ಕೈಹಿಡಿದು ನಡೆಸೆನ್ನ’ ಕತೆಯಲ್ಲಿ ಪರ ಪುರುಷರ ಸಂಗವನ್ನು ಮಾಡಿ, ದಾರಿ ತಪ್ಪಿದ ಚಪಲಚಿತ್ತದ ಹೆಣ್ಣನ್ನು ಮಾನವೀಯ ದೃಷ್ಟಿಯಿಂದ ಕಂಡು ಮಗಳ ಗೆಳತಿಯನ್ನಾಗಿಸುವ ಶಿಕ್ಷಕಿಯು ಆಕೆಯನ್ನು ಸ್ವಂತ ಮಗಳಂತೆ ಕಾಣುತ್ತಾಳೆ. ಆದರೆ ಆಕೆಯ ಮಗಳು ಮದುವೆಯಾಗಬೇಕಿದ್ದವನನ್ನು ಬುಟ್ಟಿಗೆ ಹಾಕಿಕೊಂಡು ಆತನ ಜೊತೆ ಓಡಿಹೋಗುವ ಮೂಲಕ ಶಿಕ್ಷಕಿಗೆ ವಿಶ್ವಾಸ ದ್ರೋಹವನ್ನು ಮಾಡುವ ಕೃತಘ್ನ ಹೆಣ್ಣಿನ ಚಿತ್ರ ಇಲ್ಲಿದೆ. ಕತೆಯು ಶಿಕ್ಷಕಿಯ ದೃಷ್ಟಿಕೋನವನ್ನು ಅವಲಂಬಿಸಿದ್ದು, ಆಕೆಯು ತೆರೆತೆರೆಯಾಗಿ ಅನುಭವಿಸುವ ಮಾನಸಿಕ ಯಾತನೆಯನ್ನು ದಾಖಲಿಸುತ್ತದೆ.
    ಮಾಲತಿ ಪಟ್ಟಣಶೆಟ್ಟಿಯವರ ಕತೆಗಳಲ್ಲಿ ಹೆಣ್ಣು ತನ್ನ ಆತ್ಮವಿಶ್ವಾಸ, ಛಲ, ಶ್ರಮದಿಂದ ಸಾಧಿಸಿಕೊಳ್ಳುವ ಸ್ವಾವಲಂಬನೆ ಮತ್ತು ಅಸ್ಮಿತೆಯ ಸ್ಥಾಪಿಸುವ ಬಗೆಯು ಗಮನಾರ್ಹವಾಗಿದೆ. ಒಂದು ಹಂತದಲ್ಲಿ ಎಚ್ಚೆತ್ತ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಅರಿವು ಈ ಬದಲಾವಣೆಗಳಿಗೆ ಕಾರಣವಾಗಿದೆ. ಮೊದಲು ಮೂಕವಾಗಿದ್ದ ಅವಳ ಪ್ರತಿಕ್ರಿಯೆಯು ಈಗ ಕೃತಿಗಳ ಮೂಲಕ ಧ್ವನಿಯನ್ನು ಪಡೆದಿದೆ. ಇದರಿಂದ ಅವಳ ಬದುಕು ದುರಂತದತ್ತ ಸಾಗುವುದು ಕಡಿಮೆಯಾದರೂ ಅಸಹನೀಯವಾಗುವುದು ತಪ್ಪಿಲ್ಲ ಎಂಬುದಕ್ಕೆ ಈ ಸಂಕಲನದಲ್ಲಿ ಉದಾಹರಣೆಗಳಿವೆ. ಇವರೆಲ್ಲರೂ ಆಧುನಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ದುರಂತದ ಸ್ವರೂಪಗಳು. ಇವರ ಹೆಚ್ಚಿನ ಕತೆಗಳಲ್ಲಿ ಕಂಡುಬರುವ ಪರಿತ್ಯಕ್ತ ಹೆಣ್ಣಿನ ಪರಿಕಲ್ಪನೆಯು ಇದಕ್ಕೆ ಸಾಕ್ಷಿಯಾಗಿದೆ. ಪ್ರಿಯಕರನನ್ನು ತೊರೆದು, ಗಂಡನಿಂದ ಸಂಕಷ್ಟಗಳನ್ನುಂಡು, ಮತ್ತೆ ಪ್ರಿಯಕರನ ಸ್ನೇಹವನ್ನು ಬಯಸುವ ನಾಯಕಿಯರು ಅವರ ಕತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಅವರ ಹೆಚ್ಚಿನ ಕತೆಗಳ ವಿನ್ಯಾಸವಾಗಿದೆ. ಈ ಪರಿಸ್ಥಿತಿಗೆ ಒಂದಿಲ್ಲೊಂದು ಬಗೆಯಲ್ಲಿ ಗಂಡಸೇ ಕಾರಣನಾದರೂ ಎಲ್ಲ ಗಂಡಸರನ್ನು ಅವರು ಖಳರಾಗಿ ಚಿತ್ರಿಸುವುದಿಲ್ಲ. ಹೆಂಗಸರನ್ನು ಅರ್ಥ ಮಾಡಿಕೊಂಡು ಆಕೆಯನ್ನು ಸ್ವೀಕರಿಸುವ, ಬಿಡುಗಡೆಯ ಬಯಕೆಗೆ ಸಹಕರಿಸುವ, ಸಾಧನೆಯನ್ನು ಮಾಡಲು ಪ್ರೋತ್ಸಾಹಿಸುವ ಗಂಡಸರಿಗೂ ಅವರ ಕತೆಗಳಲ್ಲಿ ಸ್ಥಾನವಿದೆ. ಒಂದೇ ಸಮಸ್ಯೆಯ ಹಲವು ಮಗ್ಗುಲುಗಳನ್ನು ಗಮನಿಸುವ ಲೇಖಕಿಯು ಹೆಣ್ಣಿನ ಬವಣೆಗೆ ಮಾತ್ರ ಮೀಸಲಾಗದೆ ಗಂಡಿನ ಸಮಸ್ಯೆಗಳನ್ನು ಗಮನಿಸುತ್ತಾರೆ. ಸೋಲುಗಳ ಆಚೆಗೂ ಕೈಬೀಸಿ ಕರೆಯುವ ಬದುಕಿನತ್ತ ಗಂಡು ಹೆಣ್ಣುಗಳು ಜೊತೆಯಾಗಿ ಹೆಜ್ಜೆ ಹಾಕಬೇಕಿದೆ ಎಂಬ ನಂಬಿಕೆ, ಕೋಮಲತೆ ಮತ್ತು ಗಟ್ಟಿತನಗಳು ಬೆರೆತ ಮನಸ್ಸು ಇಲ್ಲಿ ಕೆಲಸ ಮಾಡಿದೆ. ಪಾತ್ರಗಳು ತಮ್ಮ ಚಿಂತನೆಯಿಂದಲೇ ಬದುಕಿನ ಹಾದಿಯನ್ನು ಕಂಡುಕೊಳ್ಳುತ್ತವೆ. ಅದರೊಳಗಿನಿಂದಲೇ ಶಕ್ತಿ ಪಡೆದುಕೊಳ್ಳುತ್ತದೆ. ಲೇಖಕಿಯು ಬದುಕನ್ನು ಇಡಿಯಾಗಿ ನೋಡುವ ಮೂಲಕ ಅನ್ಯಾಯಕ್ಕೆ ಒಳಗಾದ ಹೆಣ್ಣು ಗಂಡುಗಳ ದೌರ್ಬಲ್ಯಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸುತ್ತಾರೆ. ನಿರುದ್ವಿಗ್ನ ನಿರೂಪಣೆಯ ಹಿಂದಿನ ಸಂಯಮ ಮತ್ತು ತಿಳುವಳಿಕೆ ಉಲ್ಲೇಖನೀಯವಾಗಿದೆ. ಇವರ ಕತೆಗಳು ಗಂಡಿನ ಸ್ವಾರ್ಥ, ಅಧಿಕಾರ ಲಾಲಸೆ, ಕ್ರೌರ್ಯ, ಮೋಸದ ವ್ಯವಹಾರಗಳ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರೂ ಪುರುಷ ದ್ವೇಷವನ್ನು ಪ್ರತಿಪಾದಿಸದೆ ಅವರ ಅಧಿಕಾರ ಮನೋಭಾವವನ್ನು ಪ್ರಶ್ನಿಸುತ್ತದೆ. ಸಂಬಂಧದ ದೃಷ್ಟಿಯಲ್ಲಿ ಭಾವುಕಳೂ, ನಿಷ್ಠಳೂ ಆದ ಹೆಣ್ಣು ಪೂರ್ಣತೆಯನ್ನು ಪಡೆಯುವುದು ಗಂಡಿನ ಸಾಂಗತ್ಯದಲ್ಲಾದರೂ, ಅದು ವಿಫಲವಾದಾಗ ಮೂಡುವ ತಲ್ಲಣ, ದ್ವಂದ್ವ ಮತ್ತು ಹತಾಶೆಯನ್ನು ಹೊರಹಾಕುತ್ತದೆ.
    ಮಾಲತಿ ಪಟ್ಟಣಶೆಟ್ಟಿಯವರ ವಾಸ್ತವವಾದಿ ಶೈಲಿಯು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದ ಸ್ಥಿತಿಗಳನ್ನು ಹಿಡಿದಿಡುತ್ತದೆ. ವ್ಯವಸ್ಥೆಯೊಳಗಿನ ಕ್ರೌರ್ಯ, ವೈಷಮ್ಯ, ಮನುಷ್ಯತ್ವದ ಸೆಲೆ ಇಲ್ಲದಂತೆ ಹೊಗೆಯಾಡುತ್ತಿರುವ ಸ್ವಾರ್ಥ, ಸಣ್ಣತನ, ಕ್ಷುದ್ರತೆಗಳು ನೆಮ್ಮದಿಗೆ ಆಸ್ಪದವಿಲ್ಲದ ನರಕ ಸದೃಶ ಬದುಕಿನ ಮುಖಗಳನ್ನು ಅನಾವರಣಗೊಳಿಸುತ್ತವೆ. ಪುರುಷ ಪ್ರಧಾನ ವ್ಯವಸ್ಥೆಯೊಳಗೆ ಹೆಂಗಸರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ಅವರ ಸ್ವಾಭಿಮಾನ, ಘನತೆಗಳನ್ನು ವಿವೇಚಿಸುವ ಮಾನವೀಯ ದೃಷ್ಟಿಕೋನವು ಉತ್ತಮಿಕೆಯ ಸಾಧ್ಯತೆಗಳೆಡೆಗೆ ಗಮನವನ್ನು ಹರಿಸುತ್ತದೆ. ವಿವಿಧ ಜಾತಿ, ವಯಸ್ಸು, ಅಂತಸ್ತು, ಭಾವಸ್ಥಿತಿ ಮತ್ತು ಸಂವೇದನೆಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಇವರ ಕತೆಗಳ ಕೇಂದ್ರವಾಗಿದ್ದಾಳೆ. ಯುವತಿಯರಿಂದ ವಯಸ್ಕರವರೆಗೆ, ಮುಗ್ಧರಿಂದ ಆಧುನಿಕರವರೆಗೆ ಹಲವು ರೀತಿಯ ಹೆಂಗಸರು ಇವರ ಕತೆಗಳಲ್ಲಿ ಬರುತ್ತಾರೆ. ವ್ಯವಸ್ಥೆಯ ಒಳಗಿದ್ದುಕೊಂಡೇ ಯಾರ ಅರಿವಿಗೂ ಬಾರದೆ ಚೌಕಟ್ಟನ್ನು ಮೀರುತ್ತಾ ಪ್ರತಿರೋಧಗಳ ನಡುವೆಯೂ ತಮ್ಮತನವನ್ನು ಕಾಯ್ದುಕೊಳ್ಳುವ ಪಾತ್ರಗಳು ರಾಜಲಕ್ಷ್ಮಿ ಎನ್. ರಾವ್, ವೀಣಾ ಶಾಂತೇಶ್ವರರ ಪಾತ್ರಗಳಂತೆ ಭೂತಕ್ಕೆ ಅಂಟಿಕೊಂಡು ನರಳದೆ, ವರ್ತಮಾನದ ಸುಖ ಸಮೃದ್ಧಿಗಳತ್ತ ಕರೆಗೆ ಓಗೊಟ್ಟು, ಮಾನಸಿಕ ಬಿಡುಗಡೆಯನ್ನು ಪಡೆಯುತ್ತವೆ. ಹಳೆಯ ಮತ್ತು ಹೊಸ ತಲೆಮಾರುಗಳನ್ನು ಪ್ರತಿನಿಧಿಸುವ ಪಾತ್ರಗಳು ವ್ಯವಸ್ಥೆಯನ್ನು ಸಮರ್ಥಿಸದೆ ಬದುಕಿಗಾಗಿ ಹೋರಾಡುತ್ತವೆ. ಅವರ ವಿವೇಕ, ವಾಸ್ತವ ಪ್ರಜ್ಞೆ, ಬದುಕುಳಿಯುವ ಸಾಹಸ, ಹೃದಯವಂತಿಕೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕಡೆಗೆ ಒತ್ತು ನೀಡಲಾಗಿದೆ. ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಲೇಖಕಿಯೊಳಗಿನ ಜೀವನ ಪ್ರೀತಿಯಿಂದ ಮೂಡಿ ಬಂದಿವೆ. ಕತೆಯೊಳಗಿನಿಂದಲೇ ತತ್ವ ಅರಳಿ ಜೀವನದ ರೀತಿಯಾಗುವ ಕ್ರಮವು ಪರಿಣಾಮಕಾರಿ ಎನಿಸುತ್ತದೆ.ಭಾಷೆಯನ್ನು ಸೂಕ್ಷ್ಮವಾಗಿ ಬಳಸುವ ಲೇಖಕಿಯು ಸಮಾಜದ ಕ್ರೂರ ವಾಸ್ತವವನ್ನು ನಿರ್ಲಿಪ್ತವಾಗಿ, ಉರಿಯುವ ವಿಷಾದದ ನೆಲೆಯಲ್ಲಿ ಮಂಡಿಸುತ್ತಾ ಕತೆಗೆ ಹೊಸ ಅರ್ಥಗಳನ್ನು ಒದಗಿಸುವುದರೊಂದಿಗೆ ಬದುಕಿನ ವ್ಯಂಗ್ಯ ವೈರುಧ್ಯಗಳತ್ತ ಗಮನವನ್ನು ಸೆಳೆಯುತ್ತಾರೆ. ಋಣಾತ್ಮಕ ನೆಲೆಯನ್ನು ಮೀರಿ ವಿಶೇಷ ಅರ್ಥವಂತಿಕೆಯನ್ನು ಪಡೆದುಕೊಳ್ಳುವ ಕತೆಗಳು ಮಾನವನ ವಿಚ್ಛಿದ್ರಕಾರಿ ಪ್ರವೃತ್ತಿಯನ್ನು, ಮೌಲ್ಯಗಳ ಕಡೆ ತೋರುವ ತಿರಸ್ಕಾರಗಳನ್ನು ವಿಷಾದ ಬೆರೆತ ಧಾಟಿಯಲ್ಲಿ ವಿವರಿಸುತ್ತವೆ. ಹೆಣ್ಣಿನ ಬದುಕಿನ ನಿಜವನ್ನು ತೋಡುವ ಅವರ ಶ್ರದ್ಧೆ ಕುತೂಹಲಗಳ ನಡುವೆ ಗಂಡಿನ ಅಸಹಾಯಕತೆ, ಪ್ರೇಯಸಿಯ ಕೈಹಿಡಿಯಲು ಸಾಧ್ಯವಾಗದಿರುವ ಕಾರ್ಯಕಾರಣ ಸಂಬಂಧಗಳು ಮರೆಯಾಗುತ್ತವೆ. ಸ್ವಹಿತಾಸಕ್ತಿ, ಸ್ವಾರ್ಥಗಳು ಮೇಲುಗೈ ಸಾಧಿಸಿ ನೈತಿಕ ಹೊಣೆಗಾರಿಕೆಯನ್ನು ಇಲ್ಲವಾಗಿಸುವ ಬಗೆಯು ಕಂಡುಬರುತ್ತಿದ್ದರೂ ಅದಕ್ಕೆ ಸಂಬಂಧಿಸಿದ ಕಾರಣಗಳನ್ನು ತಳಮಟ್ಟ ಶೋಧಿಸಲು ಹೋಗದೆ ಅದರಿಂದ ಹುಟ್ಟುವ ತಲ್ಲಣ ಮತ್ತು ಅದನ್ನು ಮೆಟ್ಟಿ ನಿಲ್ಲುವ ಛಲ ಮುಖ್ಯವಾಗುತ್ತದೆ. ಹೆಣ್ಣಿನ ಬದುಕನ್ನು ಕುರಿತ ಅಸ್ತಿತ್ವವಾದಿ ಚಿಂತನೆಯು ಅವರ ಜೀವನಾನುಭವದಿಂದ ಬಂದಿದ್ದು, ಅದರ ಮೂಲದ್ರವ್ಯದಿಂದ ಹೊರಡುವ ಕತೆಗಳು ಈ ನಿಜವನ್ನು ಮತ್ತೆ ಮತ್ತೆ ಹುಡುಕಾಡುತ್ತವೆ. ಅವರು ಒಂದೇ ವಸ್ತುವನ್ನು ಹೊಂದಿದ ಕತೆಗಳನ್ನು ಬರೆಯುತ್ತಾರೆ ಎಂದೆನಿಸಿದರೂ ಅವುಗಳ ಒಳನೆಲೆಗಳು, ಪರಿಸ್ಥಿತಿಯ ಸೂಕ್ಷ್ಮತೆಗಳು ಬೇರೆ ಬೇರೆಯಾಗಿವೆ. ಅವರ ಕತೆಗಳು ಕೌಟುಂಬಿಕ ಸಮಸ್ಯೆ, ಗಂಡು ಹೆಣ್ಣಿನ ಸಂಬಂಧ, ಹೆಣ್ಣಿನ ದುಃಖ, ಮುಗ್ಧರ ವಂಚನೆ, ಸಮಾಜದ ದಬ್ಬಾಳಿಕೆಗೆ ಸಿಲುಕಿ ನೊಂದವರ, ತಿರಸ್ಕೃತರ ಯಾತನೆಗಳನ್ನು ಚಿತ್ರಿಸುತ್ತಾ ಅವುಗಳನ್ನು ಮೀರಲು ಅಗತ್ಯವಾದ ಮಾನವೀಯ ಸಾಧ್ಯತೆಗಳನ್ನು ಶೋಧಿಸುವುದರಿಂದ ಮಹತ್ವವನ್ನು ಪಡೆಯುವ ಕತೆಗಳು ಮರು ಓದಿನ ಮೂಲಕ ಚರ್ಚೆಗೊಳಗಾಗಬೇಕಿದೆ.

    ವಿಮರ್ಶಕರು : ಡಾ. ಸುಭಾಷ್ ಪಟ್ಟಾಜೆ

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್, ಸುನಂದಾ ಬೆಳಗಂವಕರ ಜೀವನ ಮತ್ತು ಸಾಹಿತ್ಯ, ಬಹುಮುಖಿ: ಮೋಹನ ಕುಂಟಾರ್ ಬದುಕು ಮತ್ತು ಸಾಧನೆ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕಿ : ಮಾಲತಿ ಪಟ್ಟಣಶೆಟ್ಟಿ

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಮೂವತ್ನಾಲ್ಕು ವರ್ಷಗಳ ಕಾಲ ಆಂಗ್ಲ ಭಾಷೆಯ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾ ಪರೀಕ್ಷೆಗೆ, ಗರಿಗೆದರಿ, ತಂದೆ ಬದುಕು ಗುಲಾಬಿ, ದಾಹತೀರ, ಮೌನ ಕರಗುವ ಹೊತ್ತು, ಹೂ ದಂಡಿ, ಎಷ್ಟೊಂದು ನಾವೆಗಳು, ನನ್ನ ಸೂರ್ಯ, ಗುನ್ ಗುನ್ ಗೀತ ಗಾನ, ಬಾಳೆಂಬ ವ್ರತ (ಕವನ ಸಂಕಲನಗಳು), ಇಂದು ನಿನ್ನಿನ ಕತೆಗಳು, ಸೂರ್ಯ ಮುಳುಗುವುದಿಲ್ಲ, ಎಲ್ಯಾದರೂ ಬದುಕಿರು ಗೆಳೆಯಾ, ಕಣ್ಣಂಚಿನ ತಾರೆ (ಕಥಾ ಸಂಕಲನ), ಬಗೆದಷ್ಟು ಜೀವಜಲ (ಪ್ರಬಂಧ ಸಂಕಲನ), ಸಹಸ್ಪಂದನ, ಸಂವೇದನ (ವಿಮರ್ಶಾ ಸಂಗ್ರಹ), ಬೆಳ್ಳಕ್ಕಿ ಸಾಲು, ಬೋರಂಗಿ, ಮಕ್ಕಳ ಮೂರು ನಾಟಕಗಳು (ಮಕ್ಕಳ ಸಾಹಿತ್ಯ) ಮುಂತಾಗಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಕಥೆ, ಕವಿತೆ ಮತ್ತು ಪ್ರಬಂಧಗಳು ಇತರ ಭಾಷೆಗಳಿಗೆ ಅನುವಾದವಾದಗೊಂಡಿದ್ದು, ವಿವಿಧ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಂಡಿವೆ. ಇವರ ಸಾಹಿತ್ಯ ಸೇವೆಗಾಗಿ 25ಕ್ಕೂ ಅಧಿಕ ಪ್ರಶಸ್ತಿಗಳು ದೊರೆತಿವೆ. ಸದ್ಯ ಧಾರವಾಡದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದು, ಎಂಬತ್ತಾರರ ವಯಸ್ಸಿನಲ್ಲೂ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ‘ಜನ ಗಣ ಮನ’ | ಜನವರಿ 24
    Next Article ವಿಜಯಪುರ ಜಿಲ್ಲಾ ಸಮಿತಿಯಿಂದ ಗಮಕ ವಾಚನ ಮತ್ತು ವ್ಯಾಖ್ಯಾನ
    roovari

    Add Comment Cancel Reply


    Related Posts

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಸಾಹಿತ್ಯ ವೈಭವ 2026’ | ಜನವರಿ 25

    January 23, 2026

    ವಿಜಯಪುರ ಜಿಲ್ಲಾ ಸಮಿತಿಯಿಂದ ಗಮಕ ವಾಚನ ಮತ್ತು ವ್ಯಾಖ್ಯಾನ

    January 23, 2026

    ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ‘ಜನ ಗಣ ಮನ’ | ಜನವರಿ 24

    January 23, 2026

    ಸಂದೇಶ ಸಂಸ್ಥೆಯ ಆವರಣದಲ್ಲಿ 35ನೇ ವರ್ಷದ ‘ಸಂದೇಶ ಪ್ರಶಸ್ತಿ’ ಪ್ರದಾನ

    January 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.