‘ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಎಂಬ ಚೆನ್ನವೀರ ಕಣವಿಯವರ ಕವಿತೆಯ ಸಾಲುಗಳನ್ನು ಆಲಿಸುತ್ತಿದ್ದಂತೆ ಮನಸ್ಸು ವರ್ಷಧಾರೆಗೆ ಹೆಸರಾಗಿರುವ ಕರಾವಳಿ ಮತ್ತು ಮಲೆನಾಡಿನತ್ತ ಚಲಿಸುತ್ತದೆ. ಈ ಗೀತೆಯನ್ನು ರಾಗ ತಾಳ ಲಯ ಬದ್ದವಾಗಿ ಗುನುಗುನಿಸುವ ಬಗೆ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ. ಸುತ್ತಲೂ ಹಸಿರು ವನಸಿರಿಯ ಸೊಬಗು, ಅಲ್ಲಲ್ಲಿ ನಿನಾದಿಸುವ ಜೀರುಂಡೆಗಳ ಸದ್ದು, ನಮ್ಮ ಹೆಜ್ಜೆಗಳ ಜೊತೆ ಹೆಜ್ಜೆ ಹಾಕುತ್ತಿರುವ ಭಾವವನ್ನು ಮೂಡಿಸುವ ತರಗೆಲೆಗಳ ಸಪ್ಪಳ, ತನುವನ್ನು ತಬ್ಬಿ ಮುಖಕ್ಕೆ ಮುತ್ತಿಡುವ ತಂಗಾಳಿ, ಮಂಜು ಮಳೆಗಳ ಸೇಚನ, ಹಸಿರು ವನಗಳ ಸಾಲನ್ನು ಚಾದರವಾಗಿ ಹೊದ್ದು ನಿಂತ ಪ್ರಕೃತಿಯ ದೃಶ್ಯಗಳನ್ನು ಒಂದಿಷ್ಟೂ ಮರೆಮಾಚದೆ ಅಭಿವ್ಯಕ್ತಗೊಳಿಸುವ ಪ್ರಕೃತಿಯ ಸುಂದರ ತಾಣದಲ್ಲಿ ವಿಹರಿಸುವ ಪಾತ್ರಗಳ ನಡುವೆ ನಾವೂ ಇದ್ದೇವೆಯೋ ಎಂಬ ಅನುಭವವನ್ನು ನೀಡುವ ಗಿರಿಮನೆ ಶ್ಯಾಮರಾವ್ ಅವರ ‘ಮುಂಗಾರಿನ ಕರೆ’ ಎಂಬ ಕಾದಂಬರಿಯು ಮೊದಲ ಓದಿನಲ್ಲೇ ಆಪ್ತವೆನಿಸಿಕೊಳ್ಳುತ್ತದೆ.
‘ಮಲೆನಾಡಿನ ರೋಚಕ ಕಥೆಗಳು’ ಸರಣಿಯ ಏಳನೇ ಕೃತಿ ‘ಮುಂಗಾರಿನ ಕರೆ’ಯ ಮುಖ್ಯ ಪಾತ್ರ ‘ನಿಧಿ’ ಕಾದಂಬರಿಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾಳೆ. ಮಲೆನಾಡಿನ ಪರಿಸರಕ್ಕೆ ಹೊಂದಿಕೊಂಡು, ಅಲ್ಲಿನ ಬೆಟ್ಟ ಗುಡ್ಡಗಳನ್ನು ಜೀವಂತಿಕೆಯ ನೆಲೆಯಲ್ಲಿ ಇರಿಸಿಕೊಂಡು ಇಳೆಯನ್ನೇ ನೆಚ್ಚಿ ಬದುಕುತ್ತಿದ್ದ ‘ಕಾಡುಗಂಬ ಕಾಫಿ ಎಸ್ಟೇಟ್’ನ ಮಾಲೀಕರಾದ ಸುಂದರ ಗೌಡರ ಅನಾರೋಗ್ಯವು ದೂರದ ಪೇಟೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದ ಆತನ ಮಗಳು ನಿಧಿಯನ್ನು ಮಲೆನಾಡಿನ ಪರಿಸರಕ್ಕೆ ಕರೆತರುತ್ತದೆ. ಆರೋಗ್ಯವಂತರಾಗಿದ್ದ ತಂದೆಯ ಪರಿಸ್ಥಿತಿಯು ಆಕೆಯ ಪಾಲಿಗೆ ಕಗ್ಗಂಟಾಗುತ್ತದೆ. ಸುಂದರ ಗೌಡರ ಎರಡನೇ ಹೆಂಡತಿ ಕವಿತಾಳ ಮಗಳು ನಿಧಿಗೂ, ಮೊದಲ ಹೆಂಡತಿ ಕುಮುದಾಳ ಮಗ ಲೋಕೇಶನಿಗೂ ಅಷ್ಟಕ್ಕಷ್ಟೆ. ಹುಟ್ಟಿದಂದಿನಿಂದಲೇ ನಿಧಿಯನ್ನು ದ್ವೇಷಿಸುತ್ತಿದ್ದ ಲೋಕೇಶನ ಈ ಬಗೆಯ ವರ್ತನೆ ನಿಧಿಯನ್ನು ಬೆಂಗಳೂರಿನಲ್ಲಿ ಉಳಿದುಕೊಳ್ಳುವಂತೆ ಮಾಡಿದ್ದಲ್ಲಿ, ಪ್ರೀತಿ – ಅಕ್ಕರೆ ಹಾಗೂ ಸಹೋದರತೆಯ ಅಭಾವ ನಿಧಿಯನ್ನು ಮಲೆನಾಡಿನ ಪರಿಸರದಿಂದ ವಿಮುಖಗೊಳಿಸಿದ್ದರಲ್ಲಿ ಅಚ್ಚರಿಯಿಲ್ಲ. ವ್ಯವಹಾರದಲ್ಲಿ ಚತುರೆಯಾಗಿರದೆ ಮನೆವಾರ್ತೆಗೆ ಸೀಮಿತಳಾಗಿದ್ದ ನಿಧಿಯ ತಾಯಿ ಕವಿತಳಿಗೆ ಮಗಳನ್ನು ತನ್ನೆಡೆಗೆ ಕರೆಸಿಕೊಳ್ಳಬೇಕೆಂಬ ಯೋಚನೆ ಮೂಡದಿದ್ದುದೂ ಸೋಜಿಗದ ಸಂಗತಿಯಾಗಿದೆ. ಏನೇ ಇದ್ದರೂ ನಿಧಿ ತನ್ನ ಭೂತಕಾಲದ ಘಟನೆಗಳನ್ನು ಮರೆತವಳಂತೆ ಕಾಡುಗಂಬ ಕಾಫಿ ಎಸ್ಟೇಟಿಗೆ ಹಿಂತಿರುಗುವುದು ಕಾದಂಬರಿಯ ಹೊಸ ಬೆಳವಣಿಗೆಯಾಗಿದೆ.
ವಿಶಾಲವಾದ ಮನೆಯ ಪಡಸಾಲೆಯಲ್ಲಿ ಜೀವ ಇಲ್ಲದವರಂತೆ ಮಲಗಿದ್ದ ತಂದೆಯನ್ನು ಕಾಣುತ್ತಲೇ ನಿಧಿಯ ಅಂತರಂಗ ಎಚ್ಚೆತ್ತುಕೊಳ್ಳುತ್ತದೆ. ತನ್ನ ಕೈಗಳೊಂದಿಗೆ ಬೆಸೆದ ಮಗಳ ಸಾಮೀಪ್ಯದ ಹಿತವನ್ನು ಅನುಭವಿಸಿದ ಸುಂದರ ಗೌಡರಿಗೆ ಅದೇನೋ ಚೇತನ ಬಂದಂತೆ ದೇಹದಲ್ಲಿ ಕಾಣಿಸಿಕೊಂಡ ನಿಧಾನಗತಿಯ ಸಂಚಾರ ನಿಧಿಯಲ್ಲಿ ಏನೋ ಒಂದು ರೀತಿಯ ಸಂಚಲನವನ್ನು ಉಂಟು ಮಾಡುತ್ತದೆ. ತಂದೆಯ ಅಂತರಂಗ ಏನನ್ನೋ ನುಡಿಯ ಬಯಸುತ್ತಿದೆ ಎಂಬುದನ್ನು ಅರಿತ ನಿಧಿ ಅದರ ಆಳವನ್ನು ಗ್ರಹಿಸುವ ಮುನ್ನವೇ ತಂದೆಯನ್ನು ಕಳೆದುಕೊಳ್ಳಬೇಕಾಗಿ ಬರುವ ಸ್ಥಿತಿ ಶೋಕದ ವಾತಾವರಣವನ್ನು ನಿರ್ಮಿಸುತ್ತದೆ. ದೀರ್ಘ ನಿಟ್ಟುಸಿರಿನೊಂದಿಗೆ ‘ಇನ್ನೇನೂ ಉಳಿದಿಲ್ಲ’ ಎನ್ನುವ ನಿಧಿಯ ಮಾತು ಎಸ್ಟೇಟಿನ ಭವ್ಯತೆಯನ್ನು ಮಾಸುವಂತೆ ಮಾಡುತ್ತದೆ.
ಎಸ್ಟೇಟಿನ ಗತ ವೈಭವವನ್ನು ಮೆಲುಕು ಹಾಕುವ ನಿಧಿಗೆ ಆಕೆಯ ಇರುವಿಕೆಯ ಮಹತ್ವವನ್ನು ತಿಳಿಸಿ ಹೇಳುವ ಅಡುಗೆಯ ತಮ್ಮಯ್ಯ ನಿಧಿಯ ಕೌತುಕಗಳಿಗೆ ತೆರೆ ಎಳೆಯುವ ಮಾರ್ಗದರ್ಶಕನಾಗಿಯೂ, ಅವಳ ಸಾಮಾಜಿಕ ಬದುಕಿನಲ್ಲಿ ಕಾಣಸಿಗುವ ಗೊಂದಲಗಳಿಗೆ ಉತ್ತರಿಸುವ ಆಪ್ತನಾಗಿಯೂ ಕಂಡು ಬರುವ ಸನ್ನಿವೇಶ ಕಾದಂಬರಿಯ ವಿಸ್ತಾರಕ್ಕೆ ಕಾರಣವಾಗುತ್ತದೆ. ಎಸ್ಟೇಟಿನ ಮ್ಯಾನೇಜರ್ ರಂಗದೊರೆ, ಮರದ ವ್ಯಾಪಾರಿ ಮುತ್ತುರಾಜ್, ಕೆಲಸದಾಳು ವಲ್ಲಿ, ಸುಬ್ಬಿ, ಮೂಢನಂಬಿಕೆಗೆ ಸಿಲುಕಿ ನೋವು ಅನುಭವಿಸುವ ಕೋಮಲ – ಸೀತು, ನಿಧಿಯ ಸಹಪಾಠಿಗಳಾದ ಲೀನ ಹಾಗೂ ವೃತ್ತಿ ಬಾಂಧವ್ಯದ ನೆಲೆಯಲ್ಲಿ ಆಪ್ತನಾಗುವ ಡಾ. ಪ್ರಶಾಂತ್ ಮೊದಲಾದವರೊಂದಿಗೆ ನಿಧಿಯ ಮನೋತರಂಗ ಹೆಣೆದುಕೊಳ್ಳುವುದರಿಂದ ಆಕೆಯೊಳಗಿನ ಚಾಕಚಕ್ಯತೆ ಹಾಗೂ ಸಾಮರ್ಥ್ಯ ಬೆಳಕಿಗೆ ಬರುತ್ತದೆ.
ಕಾಡುಗಂಬ ಕಾಫಿ ಎಸ್ಟೇಟಿನ ಸಿರಿವಂತಿಕೆ ಹಾಗೂ ಪ್ರಕೃತಿ ಸಹಜ ಮನೋಭಾವಗಳಿಗೆ ಸಾಕ್ಷಿಯಾಗುವ ನಿಧಿಗೆ ಅವುಗಳು ತನ್ನ ಬದುಕಿನ ದಿಕ್ಕನ್ನು ಬದಲಿಸಬಹುದು ಎಂಬ ಕಲ್ಪನೆ ಇರುವುದಿಲ್ಲ. ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಸಾಧನೆಯನ್ನು ಮಾಡಲು ಬಯಸಿದ್ದ ಆಕೆಗೆ ಎಸ್ಟೇಟಿನ ಸ್ಥಿತಿ ಗತಿಗಳು ಹಿನ್ನಡೆಯನ್ನು ಉಂಟು ಮಾಡುತ್ತವೆ. ಮ್ಯಾನೇಜರ್ ರಂಗದೊರೆ ಮತ್ತು ಮರದ ವ್ಯಾಪಾರಿ ಮುತ್ತುರಾಜ್ ಮಾಡುವ ಮೋಸದ ಲೆಕ್ಕಾಚಾರ, ಹಣದ ಆಮಿಷಕ್ಕೆ ಬಲಿಯಾದ ವಲ್ಲಿ ಕಾರಿರುಳ ಭೂತವಾಗಿ ನಿಧಿಯ ಕೋಣೆಯುದ್ದಕ್ಕೂ ಚಲಿಸಿ ಹುಟ್ಟಿಸುವ ಭೀಕರತೆ, ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮಾಟ ಮಂತ್ರಗಳ ಮೊರೆಹೊಕ್ಕು, ಅದರ ಹೆಸರಿನಲ್ಲಿ ಹೆಣ್ಣಿನ ಮಾನವನ್ನು ದುರ್ಬಳಕೆ ಮಾಡಿಕೊಳ್ಳುವ ರೀತಿ, ಕುಡಿತದ ಚಟಕ್ಕೆ ಬಿದ್ದ ಪತಿಯಿಂದ ದೈಹಿಕ ಹಿಂಸೆ ಅನುಭವಿಸುವ ಸುಬ್ಬಿಯ ಪರಿಸ್ಥಿತಿ, ಎಸ್ಟೇಟಿನ ಹೊರವಲಯದಲ್ಲಿ ಕಳ್ಳ ಭಟ್ಟಿ ವ್ಯವಹಾರಗಳನ್ನು ದಿಟ್ಟತನದಿಂದ ಎದುರಿಸುವ ರೀತಿಯೂ ನಿಧಿಯನ್ನು ಎಸ್ಟೇಟಿನ ಒಡತಿಯನ್ನಾಗಿ ಮಾರ್ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಆಕಸ್ಮಿಕ ಅಪಘಾತಕ್ಕೆ ಒಳಗಾದ ನಿಧಿಯನ್ನು ಉಪಚರಿಸುವ ಶಶಾಂಕನೊಂದಿಗಿನ ಒಡನಾಟ ಮಧುರ ಬಾಂಧವ್ಯಕ್ಕೆ ಕಾರಣವಾಗುವ ಬಗೆಯು ಕಾದಂಬರಿಯಲ್ಲಿ ಅಡಗಿರುವ ರಮ್ಯತೆಯ ಸತ್ವವನ್ನು ಪರಿಚಯಿಸುತ್ತದೆ. ಅಪರಿಚಿತನಾದ ಶಶಾಂಕನನ್ನು ನಿಧಿಯ ಬದುಕಿನ ಪ್ರತಿಯೊಂದು ಹೆಜ್ಜೆಗೂ ಬೆಸೆಯುವಂತೆ ಮಾಡಿದ ಬಗೆ ಗಮನಾರ್ಹವಾಗಿದೆ. ಪೇಟೆಯ ಜಂಜಡಗಳಿಗೆ ವಿದಾಯ ಹೇಳುವ ಶಶಾಂಕ ಮಲೆನಾಡಿನ ಪರಿಸರದ ಪ್ರಾಮಾಣಿಕ ಕೃಷಿಕನಾಗಿಯೂ, ನಿಸರ್ಗ ನಿರ್ಮಿತ ಸೋಜಿಗಗಳ ಬಗ್ಗೆ ಸಂಶೋಧನೆ ನಡೆಸುತ್ತಾ ಅವುಗಳ ಕಡೆಗೆ ಹೊಸ ಬೆಳಕು ಚೆಲ್ಲುವ ಭರವಸೆಯ ಬರಹಗಾರನಾಗಿ ರೂಪುಗೊಳ್ಳುವ ವಿಧಾನವೂ ಯುವ ಜನಾಂಗಕ್ಕೆ ಮಾದರಿಯಾಗಿದೆ. ಶಶಾಂಕನ ಬರಹಗಳು ನಿಧಿಗೆ ಮಲೆನಾಡಿನ ಜೀವಚರಗಳ, ಕೃಷಿ ಅಂಶಗಳ ಕುರಿತು ಮಾಹಿತಿ ನೀಡಿದರೆ, ಆತನ ಒಡನಾಟ ಮಾನಸಿಕ ನೆಮ್ಮದಿ ಮತ್ತು ಸಂತಸವನ್ನು ನೀಡುತ್ತದೆ. ಅವರ ನಡುವಿನ ಭಾವಪೂರ್ಣ ನಂಟು ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಶಶಾಂಕನ ನೆರವಿನಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಧಿ ಎಸ್ಟೇಟಿನಲ್ಲಿನ ಕಾರ್ಮಿಕರ ಸಮಸ್ಯೆ, ಎಸ್ಟೇಟಿನ ಹೊರವಲಯದಲ್ಲಿ ನಡೆಯುವ ಕಳ್ಳ ದಂಧೆಗಳನ್ನು ಯಶಸ್ವಿಯಾಗಿ ಹತ್ತಿಕ್ಕುವಲ್ಲಿ ಸಫಲಳಾಗಿ, ಕೆಲಸಗಾರರ ಕುಟುಂಬಗಳಿಗೆ ಸಾಮಾಜಿಕ- ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಪ್ರೇರಣೆ ನೀಡುತ್ತದೆ. ಎಲ್ಲವನ್ನೂ ಮರೆಸುವ ಕಾಲ ನಿಧಿಯ ಬದುಕಿನಲ್ಲೂ ಹೊಸ ಧ್ಯೇಯವನ್ನು ಹುಟ್ಟು ಹಾಕುತ್ತದೆ. ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣವನ್ನು ಪಡೆಯಲಿಚ್ಛಿಸಿದ್ದ ನಿಧಿ ತನ್ನ ನಿರ್ಧಾರವನ್ನು ಬದಲಿಸಿ ಎಸ್ಟೇಟಿನಲ್ಲೇ ಆರೋಗ್ಯ ಕೇಂದ್ರವನ್ನು ತೆರೆಯಲು ಮುಂದಾಗುತ್ತಾಳೆ. ತಾನು ಕಲಿತ ವಿದ್ಯೆಯನ್ನು ತನ್ನ ನೆಲದ ಒಳಿತಿಗಾಗಿ ಮುಡಿಪಾಗಿಟ್ಟ ಕಾರ್ಮಿಕರ ಆರೋಗ್ಯ ಹಾಗೂ ಭದ್ರತೆಗೆ ಸದುಪಯೋಗಪಡಿಸಿಕೊಳ್ಳುವ ಬಗೆ ಎಸ್ಟೇಟಿನ ಸದಸ್ಯರಿಗೆ ಮೆಚ್ಚುಗೆಯಾಗುವುದಲ್ಲದೆ ಶಶಾಂಕ ಮತ್ತು ನಿಧಿಯ ಸಂಬಂಧವನ್ನು ಹತ್ತಿರಗೊಳಿಸುತ್ತದೆ. ಕೊನೆಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಳ್ಳುವ ರಂಗದೊರೆ, ವಲ್ಲಿ, ಸೀತು, ಕೋಮಲ ಮೊದಲಾದ ಪಾತ್ರಗಳು ತಮ್ಮ ಒಡತಿಯ ಮಾನವೀಯ ಮೌಲ್ಯಗಳನ್ನು ಓದುಗರ ಮುಂದೆ ಬಿಚ್ಚಿಡುತ್ತವೆ. ಸಹಪಾಠಿ ಡಾ. ಪ್ರಶಾಂತನನ್ನು ವಿವಾಹವಾಗಲು ನಿರ್ಧರಿಸುವ ನಿಧಿ ತನ್ನ ನಿರ್ಧಾರದಲ್ಲಿ ಮುಂದುವರೆಯುವ ವಿಚಾರದಲ್ಲಿ ಒಂದೆಡೆ ಗೊಂದಲಕ್ಕೆ ಸಿಲುಕಿದರೆ, ಇನ್ನೊಂದೆಡೆ ಆಕೆಯು ತನ್ನ ಜೀವನದಲ್ಲಿ ಕನಸಾಗಿ ಉಳಿಯುವುದನ್ನು ನೆನೆದು ಮರುಗುವ ಶಶಾಂಕನ ನೋವು ಹೃದಯವನ್ನು ತಟ್ಟುತ್ತದೆ. ತನ್ನ ನಿರ್ಧಾರವನ್ನು ದೃಢಗೊಳಿಸುವ ನಿಧಿ ವಿವಾಹ ಸಂಬಂಧಿ ಮಾತುಕತೆಗಾಗಿ ಪ್ರಶಾಂತನನ್ನು ಪಟ್ಟಣದಲ್ಲಿ ಸಂಧಿಸುವ ತೀರ್ಮಾನಕ್ಕೆ ಬರುತ್ತಾಳೆ. ಪಟ್ಟಣದಲ್ಲಿ ಸ್ವಂತ ಆಸ್ಪತ್ರೆಯನ್ನು ಹೊಂದಿದ್ದ ಡಾ. ಪ್ರಶಾಂತ್ ತನ್ನ ಕೈಕೆಳಗೆ ಕೆಲಸ ನಿರ್ವಹಿಸುವ ದಾದಿ ಲೀನಾಳೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಬೆಳಕಿಗೆ ಬರುತ್ತದೆ. ಇದು ನಿಧಿಯ ತೀರ್ಮಾನವನ್ನು ಬದಲಿಸುವಂತೆ ಮಾಡುವುದಲ್ಲದೆ, ತನ್ನ ಬದುಕಿನ ಋಣವು ತನ್ನದೇ ಆದ ಕಾಡುಗಂಬ ಕಾಫಿ ಎಸ್ಟೇಟಿನ ಮಣ್ಣಿನಲ್ಲಿದೆ ಎಂಬ ವಾಸ್ತವವನ್ನು ನಿಧಿಗೆ ಮನವರಿಕೆ ಮಾಡಿಕೊಡುತ್ತದೆ. ತನ್ನ ಬದುಕಿಗೆ ಸಂಬಂಧಿಸಿದ ನಿರ್ಧಾರಕ್ಕೆ ಬರುವುದರಲ್ಲಿ ಗೊಂದಲಕ್ಕೆ ಒಳಗಾಗುವ ನಿಧಿ ಕ್ರಮೇಣ ಚೈತನ್ಯವನ್ನು ಮೈಗೂಡಿಸಿಕೊಂಡು ಎಸ್ಟೇಟಿನ ಬಿಕ್ಕಟ್ಟು, ಕಾರ್ಮಿಕರ ಸಮಸ್ಯೆ, ಒಳ ಜಗಳಗಳನ್ನು ಬಗೆಹರಿಸುವಲ್ಲಿ ಸಫಲವಾಗುವ ಸನ್ನಿವೇಶವು ಓದುಗರ ಮನದೊಳಗೆ ಆಕೆಯ ವ್ಯಕ್ತಿತ್ವವನ್ನು ಸ್ಥಾಪಿಸುತ್ತದೆ. ಒಂದು ಕಡೆ ಅಡುಗೆ ತಮ್ಮಯ್ಯ ಮತ್ತು ಶಶಾಂಕನ ಇರವನ್ನು ನಿಧಿಯ ಜೀವನದಲ್ಲಿ ಬಿಂಬಿಸುತ್ತಾ ಸಾಗಿದರೆ ಇನ್ನೊಂದು ಕಡೆ ನಿಧಿಯಂಥ ಜಾಣೆ ತನ್ನ ಮಗನ ಜೀವನದುದ್ದಕ್ಕೂ ಇದ್ದರೆ ಒಳ್ಳೆಯದು ಎಂದು ಭಾವಿಸುವ ಶಶಾಂಕನ ತಾಯಿಯ ನಿಲುವು ಸ್ವಾಗತಾರ್ಹವಾಗಿದೆ. ಜಾತಿ ಅಂತಸ್ತುಗಳ ವಿಚಾರದಲ್ಲಿ ಭಿನ್ನರಾಗಿರುವ ಶಶಾಂಕ ಹಾಗೂ ನಿಧಿಯ ಜೋಡಿಯನ್ನು ಕಾಣಬಯಸುವ ಓದುಗರಿಗೆ ಕಾದಂಬರಿ ನಿರಾಸೆ ಉಂಟು ಮಾಡುವುದಿಲ್ಲ. ಜಾತಿ, ಆಸ್ತಿ, ಅಂತಸ್ತು, ಹಣಕಾಸಿನ ಮೂಲಕ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುವ ನಿಧಿ ಕೊನೆಗೂ ಅನ್ಯ ಜಾತಿಯ ಶಶಾಂಕನನ್ನು ವರಿಸುವುದು ಆಕೆಯ ಧೈರ್ಯ ಹಾಗೂ ಸಮಾಜದಲ್ಲಿ ಬದಲಾವಣೆಗಳನ್ನು ತರಲು ಬಯಸುವ ಯೋಚನೆಗಳನ್ನು ಪ್ರತಿಧ್ವನಿಸುತ್ತದೆ. ಈ ಮೂಲಕ ಕಾದಂಬರಿಯು ತನ್ನ ಸತ್ವ ಮತ್ತು ಸ್ತ್ರೀ ಕೇಂದ್ರಿತ ನೆಲೆಗಳಿಂದ ಮುಖ್ಯವೆನಿಸಿಕೊಳ್ಳುತ್ತದೆ.
ಭಾರತವು ಸ್ವಾತಂತ್ರ್ಯ ಪಡೆದು ಸುಮಾರು ಎಪ್ಪತ್ತು ದಶಕಗಳು ಸಂದರೂ ಸ್ತ್ರೀಯರ ವಿಚಾರ ಇಂದಿಗೂ ಶೋಚನೀಯವಾಗಿದೆ. ಗ್ರಾಮಾಂತರ ಭಾಗಗಳಲ್ಲಿ ಸಾಮಾಜಿಕ ಪಿಡುಗುಗಳು ಮಹಿಳೆಯರನ್ನು ಈಗಲೂ ಪೀಡಿಸುತ್ತಿದ್ದರೆ ಇನ್ನೊಂದೆಡೆ ಮಹಿಳೆಯ ಸ್ಥಾನಮಾನ ಆರ್ಥಿಕವಾಗಿ ಅಷ್ಟೇನೂ ಮೇಲೇರದಿರುವುದು ಚಿಂತೆಗೀಡು ಮಾಡುತ್ತದೆ. ಇಂಥ ಸಂದರ್ಭದಲ್ಲಿ ನಿಧಿಯಂಥ ಸಾಮಾನ್ಯ ಹೆಣ್ಣು ತನ್ನ ಬುದ್ಧಿವಂತಿಕೆ ಮತ್ತು ದಿಟ್ಟ ಹೆಜ್ಜೆಗಳ ಮೂಲಕ ನೆಲದ ಮೇಲಿನ ಹಕ್ಕನ್ನು ಅಧಿಕಾರವೆಂದು ಭಾವಿಸಿ, ಅಲ್ಲಿನ ದ್ವಂದ್ವ, ಬಿಕ್ಕಟ್ಟುಗಳನ್ನು ಬಗೆಹರಿಸಿ, ಅಲ್ಲಿನ ಸಮಾಜದ ಭಾಗವಾಗಿ ಅಲ್ಲೇ ಬದುಕಲು ಹೊರಟಿರುವುದು ಮಹಿಳೆಯರ ಪಾಲಿಗೆ ಸಕಾರಾತ್ಮಕ ಸಂದೇಶವಾಗಿಯೂ ಪ್ರೇರಕ ಶಕ್ತಿಯಾಗಿಯೂ ಕಂಡು ಬರುತ್ತದೆ. ತೊಟ್ಟಿಲು ತೂಗುವ ಕೈಗಳು ಲೆಕ್ಕಪತ್ರಗಳನ್ನು ಹಿಡಿದು, ಅಡುಗೆ ಮಾಡುವ ದಿನಚರಿ, ವ್ಯವಹಾರಗಳಲ್ಲಿ ತೊಡಗಿಕೊಂಡು, ಶೋಷಣೆ – ಪಿಡುಗುಗಳಿಗೆ ಬಲಿಪಶುವಾಗದೆ ತಲೆ ಎತ್ತಿ ಧೈರ್ಯದಿಂದ ಮುನ್ನಡೆದಾಗ ಆಗಬಹುದಾದ ಊಹಾತೀತ ಬದಲಾವಣೆಗಳಿಗೆ ನಿಧಿ ಸ್ಪಷ್ಟ ಉದಾಹರಣೆಯಾಗಿ ಕಂಡು ಬರುತ್ತಾಳೆ. ಯಾರಿಗೂ ಕಾಯದೇ ಓಡುವ ಕಾಲದೊಂದಿಗೆ ತನ್ನತನವನ್ನು ಬಿಟ್ಟುಕೊಡದೆ, ಬದುಕಿನ ಹೆಜ್ಜೆಗಳನ್ನು ಯೋಚಿಸಿ ಕ್ರಮಿಸಿದಾಗ ಕಾಣಿಸಿಕೊಳ್ಳುವ ಪಲ್ಲಟಗಳು ಸಕಾರಾತ್ಮಕ ನೆಲೆಗೆ ಮುನ್ನುಡಿಯಾಗುತ್ತವೆ ಎಂಬುದನ್ನು ನಿಧಿ ಸಾಬೀತು ಪಡಿಸುವ ಬಗೆ ಪ್ರಸ್ತುತ ಕಾದಂಬರಿಯ ಸಾರ್ವಕಾಲಿಕತೆಗೆ ಕಾರಣವಾಗುತ್ತದೆ.
ಕಾದಂಬರಿಯ ಹೆಸರು : ‘ಮುಂಗಾರಿನ ಕರೆ’
ಲೇಖಕರು : ಗಿರಿಮನೆ ಶ್ಯಾಮರಾವ್
ಪ್ರಕಾಶಕರು : ಗಿರಿಮನೆ ಪ್ರಕಾಶನ, ಸಕಲೇಶಪುರ.
ಬೆಲೆ : ರೂ. 220/-
ನಯನಾ ಜಿ.ಎಸ್ :
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವರ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.
ಲೇಖಕರ ಬಗ್ಗೆ :
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದು, ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.