ಹನೂಮಂತನಿಗೆ ಶ್ರೀ ರಾಮಚಂದ್ರನಲ್ಲಿರುವ ಪರಮ ಭಕ್ತಿ, ಸೀತೆಗೆ ಪಾತಿವ್ರತ್ಯದಲ್ಲಿರುವ ಅಚಲ ನಿಷ್ಠೆ ಮತ್ತು ಕ್ಷಾತ್ರಿಯ ಹೆಣ್ಣಿನ ಓಜಸ್ಸೇ ಚೂಡಾಮಣಿ ಪ್ರಸಂಗದಲ್ಲಿ ಅಭಿವ್ಯಕ್ತಗೊಳ್ಳಬೇಕಾದ ಮೂಲ ದ್ರವ್ಯಗಳು. ಇದನ್ನು ಅಂದಿನ ತಾಳಮದ್ದಲೆಯು ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ನಡೆದು ಶ್ರೋತ್ರಗಳ ಮೆಚ್ಚುಗೆಗೆ ಪಾತ್ರವಾಯಿತು.
ಕಲ್ಕೂರ ಪ್ರತಿಷ್ಠಾನವು ಶ್ರೀಯುತ ಪ್ರದೀಪ್ ಕುಮಾರ ಕಲ್ಕೂರ ಅವರ ಮನೆಯ ಸುಂದರ ಸಭಾಂಗಣದಲ್ಲಿ ಪೇಜಾವರ ಶ್ರೀ ಶ್ರೀಗಳ 60ನೇ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸಿದ ನಾಲ್ಕು ದಿನಗಳ ನಾಡು ನುಡಿ ಜಾಗೃತಿ ಸಮ್ಮೇಳನದ ಎರಡನೇ ದಿನ ಶ್ರೀಯುತ ಬಿ ಸೀತಾರಾಮ ತೋಳ್ಪಡಿತ್ತಾಯರ ನೇತೃತ್ವದಲ್ಲಿ ಆಯೋಜನೆಗೊಂಡ ತಾಳಮದ್ದಲೆಯಲ್ಲಿ ಡಾ. ಎಂ ಪ್ರಭಾಕರ ಜೋಶಿಯವರು ಜಾಂಬವಂತರಾಗಿ ಪ್ರಸಂಗಕ್ಕೆ ಉತ್ತಮ ಮುನ್ನುಡಿಯನ್ನು ನೀಡಿದರು. ವೈಚಾರಿಕವಾಗಿ ಮತ್ತು ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯವನ್ನು ಶ್ರೀಯುತ ಉಜಿರೆ ಅಶೋಕ್ ಭಟ್ ತಮ್ಮದಾಗಿಸಿಕೊಂಡಿದ್ದಾರೆ. ಈ ದೃಷ್ಟಿಯಿಂದ ಹನೂಮಂತನಾಗಿ ಅವರು ಪ್ರಸಂಗಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾದರು. ಗಾಂಭೀರ್ಯದ ದೃಷ್ಟಿಯಿಂದ ಸೀತೆಯಾಗಿ ಪಾತ್ರ ನಿರ್ವಹಣೆ ಮಾಡಿದ ಯುವ ಕಲಾವಿದ ಶ್ರೀ ಪವನ್ ಕಿರಣ್ಕರೆ ಅವರ ಕೊಡುಗೆಯು ಉಲ್ಲೇಖನೀಯ. ರಾವಣನಾಗಿ ಅನುಭವೀ ಕಲಾವಿದ ಶ್ರೀಯುತ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರ ಪಾತ್ರ ಚಿತ್ರಣ ಒಟ್ಟು ಕಾರ್ಯಕ್ರಮಕ್ಕೆ ಉತ್ತಮ ಪೋಷಣೆಯನ್ನು ಒದಗಿಸಿತು.
ಪ್ರಸಂಗದ ಪಾತ್ರಗಳ ಔಚಿತ್ಯವನ್ನರಿತು ಕಲಾವಿದರು ಅರ್ಥ ನಿರ್ವಹಣೆ ಮಾಡಿದಾಗ ಎಂತಹ ಫಲಪ್ರಾಪ್ತಿಯಾಗಬಹುದು ಎಂಬುದಕ್ಕೆ ಅಂದಿನ ಕಾರ್ಯಕ್ರಮ ಉತ್ತಮ ಉದಾಹರಣೆಯಾಗಿ ಕಂಡು ಬಂತು. ಪ್ರಸಂಗದ ಆಯ್ಕೆಯು ನಾಡು ನುಡಿ ಜಾಗೃತಿ ಎಂಬ ಸಮ್ಮೇಳನದ ಶೀರ್ಷಿಕೆಗೆ ಬಹಳ ಹೊಂದಿಕೊಳ್ಳುವಂತಿದ್ದುದು ಕಾರ್ಯಕ್ರಮವು ಹೆಚ್ಚು ಜನಮೆಚ್ಚುಗೆ ಗಳಿಸಲು ಮತ್ತೊಂದು ಕಾರಣವಾಯಿತು.
ಒಟ್ಟು ಕಾರ್ಯಕ್ರಮದ ಯಶಸ್ಸಿನಲ್ಲಿ ಹಿಮ್ಮೇಳದ ಕೊಡುಗೆಯೂ ಅಪಾರವಾದದ್ದು. ತಾರಾ ಮೌಲ್ಯವುಳ್ಳ ಶ್ರೀಯುತ ಪಟ್ಲ ಸತೀಶ್ ಶೆಟ್ಟಿ, ಶ್ರೀಯುತ ಸತ್ಯನಾರಾಯಣ ಪುಣಿಚಿತ್ತಾಯ ಇವರ ಸುಶ್ರಾವ್ಯ ಹಾಡುಗಾರಿಕೆಗೆ ಪೂರಕವಾಗಿ ಹಿಮ್ಮೇಳದಲ್ಲಿ ಸಹಕರಿಸಿದ ತೋಳ್ಪಡಿತ್ತಾಯತ್ರಯರು (ಚೆಂಡೆ: ಶ್ರೀ ಬಿ ಸೀತಾರಾಮ ತೋಳ್ಪಡಿತ್ತಾಯ, ಮದ್ದಲೆ: ಶ್ರೀ ಬಿ ಜನಾರ್ಧನ ತೋಳ್ಪಡಿತ್ತಾಯ, ಚಕ್ರತಾಳ :ಶ್ರೀ ಬಿ ಸತೀಶ್ ತೋಳ್ಪಡಿತ್ತಾಯ) ಎಲ್ಲರೂ ಪ್ರಶಂಸಾರ್ಹರು.
ಸಂಘಟಕರಾದ ಶ್ರೀ ಪ್ರದೀಪ್ ಕುಮಾರ ಕಲ್ಕೂರ ಅವರ ಬಗ್ಗೆ ಮೆಚ್ಚುಗೆಯ ಎರಡು ಮಾತುಗಳನ್ನು ಆಡದೆ ಹೋದಲ್ಲಿ ನನ್ನ ಈ ಲೇಖನ ಸಂಪೂರ್ಣವಾದಂತಾಗದು. ಅವರನ್ನು ಕಳೆದ ಸುಮಾರು ಮೂರು ದಶಕಗಳಿಗೂ ಮೀರಿ ನಾನು ಅತ್ಯಂತ ಹತ್ತಿರದಿಂದ ಕಂಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಕಲ್ಕೂರ ಪ್ರತಿಷ್ಠಾನದ ಮೂಲಕ ಅವರ ದಣಿವರಿಯದ ಸಂಘಟನಾ ಸಾಮರ್ಥ್ಯ, ಚಿಂತನೆ ಹಾಗೂ ವಿಶೇಷವಾಗಿ ಎಲ್ಲರಲ್ಲೂ ಅವರು ತೋರುವ ಪ್ರೀತಿಗೆ ನಾನು ವಿಸ್ಮಯಗೊಂಡಿದ್ದೇನೆ. ಅವರ ಮನೆಯನ್ನು ಮನೆ ಎನ್ನಬೇಕೇ? ಮಠ ಎನ್ನಬೇಕೇ? ಸಾಂಸ್ಕೃತಿಕ ಕೇಂದ್ರ ಎನ್ನಬೇಕೇ?! ಕೊನೆಯ ದಿನದ ತಮ್ಮ ಉಪನ್ಯಾಸದಲ್ಲಿ ಡಾ. ಎಂ ಪ್ರಭಾಕರ ಜೋಶಿಯವರು ಅಂದಂತೆ ಅದೊಂದು ಸಂಸ್ಥಾನವೇ ಸರಿ. ಕಲ್ಕೂರ ಕುಟುಂಬಕ್ಕೆ, ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಅವರ ಕನಸನ್ನು ನನಸಾಗಿಸುವಲ್ಲಿ ಅಹರ್ನಿಶಿ ದುಡಿಯುತ್ತಿರುವ ಪ್ರಜ್ಞಾವಂತ ತಂಡಕ್ಕೆ ನಮೋ ನಮಃ.
ಸಂಘಟಕರಾಗಿ, ಚಿಂತಕರಾಗಿ ಶ್ರೀಯುತ ಪ್ರದೀಪ್ ಕುಮಾರ ಕಲ್ಕೂರ ಅವರಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆಗಳು ಲಭಿಸಲಿ. ಇವರ ಪರಿಶ್ರಮ, ತ್ಯಾಗಕ್ಕೆ ಸಮಾಜವು ಇವರನ್ನು ಸೂಕ್ತ ರೀತಿಯಲ್ಲಿ ಗುರುತಿಸುವಂತಾಗಲಿ ಮತ್ತು ಕಲ್ಕೂರರ ಆಶಯದಂತೆ ಸಮಾಜವು ಇವರ ಕೆಲಸ ಕಾರ್ಯಗಳಿಂದ ಪ್ರೇರಿತವಾಗಿ ಇನ್ನೂ ಹೆಚ್ಚು ಸುಸಂಸ್ಕೃತವಾಗಲೆಂದು ಹಾರೈಸುತ್ತೇನೆ.
- ಪಿ. ನಿತ್ಯಾನಂದ ರಾವ್