ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿಯ ಆಶ್ರಯದಲ್ಲಿ ‘ಅನುಪಲ್ಲವಿ’ಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 17 ಮೇ 2026ರಂದು ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪ್ರಕಾಶ್ ಪುತ್ತೂರು “ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳ ಅಸ್ವಾದನೆಯು ವಿಶಿಷ್ಟ ಅನುಭವವಾಗಿದೆ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪರಂಪರೆಯನ್ನು ಉಳಿಸುವ ಮತ್ತು ಪೋಷಿಸುವ ಹೊಣೆಗಾರಿಕೆ ಸಮಾಜದ್ದಾಗಿದೆ” ಎಂದು ಹೇಳಿದರು.
ಕದ್ರಿ ನೃತ್ಯ ಭಾರತಿಯ ನಿರ್ದೇಶಕಿ ವಿದುಷಿ ಗೀತಾ ಸರಳಾಯ ಮಾತನಾಡಿ “ಶಾಸ್ತ್ರೀಯ ನೃತ್ಯದ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಂಗೀತದ ಅರಿವು ಅತೀ ಆವಶ್ಯಕವಾಗಿದ್ದು, ಇವೆರಡು ಪರಸ್ಪರ ಪೂರಕವಾಗಿವೆ. ಶಾಸ್ತ್ರೀಯ ನೃತ್ಯ ಕಲಾ ಕ್ಷೇತ್ರದಲ್ಲಿ ಇಂದು ನೂತನ ಪ್ರಯೋಗಗಳು ನಡೆಯುತ್ತಿವೆ” ಎಂದರು.

ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಸಂಗೀತ ಗುರು ಸತ್ಯವತಿ ಮೂಡಂಬಡಿತ್ತಾಯ. ನಾದಸ್ವರ ಕಲಾವಿದ ನಾಗೇಶ್ ಎ. ಬಪ್ಪನಾಡು, ನಾಗರಿಕ ಸಲಹಾ ಸಮಿತಿಯ ಟ್ರಸ್ಟಿ ಸಾವಿತ್ರಿ ರಮೇಶ್ ಭಟ್, ಪ್ರೊ. ರಮೇಶ್ ಭಟ್ ಎಸ್.ಜಿ., ವಿಭು ರಾವ್ ಉಪಸ್ಥಿತರಿದ್ದರು.



ನಿಟ್ಟೆ ಕ್ಷೇಮದ ಪ್ರಸೂತಿ ತಜ್ಞೆ ಡಾ. ಶುಭದಾ ಕೆ. ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ನಲ್ಲಿ ಟಿ. ಅನ್ವಿತಾ, ಮೃದಂಗದಲ್ಲಿ ಕೃಷ್ಣ ಪವನ್ ಕುಮಾರ್, ತಂಬೂರದಲ್ಲಿ ವಿದ್ವತ್ ರಾವ್ ಸಹಕರಿಸಿದರು. ಕದ್ರಿ ನೃತ್ಯ ಭಾರತಿಯ ನಿರ್ದೇಶಕಿ ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಚಿದಾನಂದ್ ಇವರ ಶಿಷ್ಯ ದೀಪ್ತಿಶ್ರೀ ಎಸ್. ಜೋಗಿ ಇವರಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಕೃಷ್ಣಮೂರ್ತಿ ವಂದಿಸಿದರು.

