Subscribe to Updates

    Get the latest creative news from FooBar about art, design and business.

    What's Hot

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ

    May 19, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ಕನಕದಾಸರ ಸಮಗ್ರ ಅನುವಾದ ಕೃತಿಗಳ ಬಿಡುಗಡೆ

    May 19, 2026

    ಪ್ರೇಕ್ಷಕರ ಮನ ಸೆಳೆದ ‘ವಿಶ್ವ ಕೊಂಕಣಿ ಸಮಾರೋಹ’-2026

    May 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ವಿಭಾ ಪುರೋಹಿತ್ ಇವರ ‘ನೀತಿ ಪ್ರತೀತಿ’
    Article

    ಪುಸ್ತಕ ವಿಮರ್ಶೆ | ವಿಭಾ ಪುರೋಹಿತ್ ಇವರ ‘ನೀತಿ ಪ್ರತೀತಿ’

    May 19, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಮ್ಮ ಸಾಮಾಜಿಕ ಸ್ವಾಸ್ಥ್ಯ ಸುಸ್ಥಿತಿಯಲ್ಲಿರಬೇಕಾದರೆ ಜನರಲ್ಲಿ ಜೀವನ ಮೌಲ್ಯಗಳ ಅರಿವಿರಬೇಕು. ಮನುಷ್ಯ-ಮನುಷ್ಯರ ನಡುವೆ ಸಂಬಂಧಗಳು ಹೇಗಿರಬೇಕು ಅನ್ನುವುದು ತಿಳಿದಿರಬೇಕು. ಬೇರೆ ಬೇರೆ ಸಂದರ್ಭಗಳಲ್ಲಿ ವರ್ತಿಸುವುದು ಹೇಗೆಂದು ಹಿರಿಯರು ಮಕ್ಕಳಿಗೆ ತಿಳಿಯ ಹೇಳಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ಅಂಕ ಕೇಂದ್ರಿತವಾಗಿದೆಯಷ್ಟೆ ಹೊರತು ಇತರರೊಂದಿಗೆ ಹೇಗೆ ಬೆರೆಯಬೇಕೆಂಬ ಶಿಕ್ಷಣ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ನೇರವಾಗಿ ಇವೆಲ್ಲವನ್ನೂ ಹೇಳಿ ಕೊಡುವುದಕ್ಕಿಂತ ಜೀವನ ಪಾಠಗಳ ಬಗ್ಗೆ ಮೌಲ್ಯ ಸಂದೇಶಗಳನ್ನು ಸಾರುವ ಪುಸ್ತಕಗಳನ್ನು ಓದಲು ಮಕ್ಕಳಿಗೆ ಕೊಡುವುದು ಉತ್ತಮ. ಇಂಥ ಸಂದರ್ಭದಲ್ಲಿ ವಿಭಾ ಪುರೋಹಿತರ ಲೇಖನ ಸಂಕಲನ ‘ನೀತಿ ಪ್ರತೀತಿ’ ಪ್ರಸ್ತುತವಾಗುತ್ತದೆ. ಬೆಂಗಳೂರು ಬಸವನಗುಡಿಯ ನ್ಯೂವೇವ್ ಬುಕ್ಸ್ ಇದನ್ನು ಪ್ರಕಟಿಸಿದೆ.

    ‘ನೀತಿ ಪ್ರತೀತಿ’ ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿಯ ಕನ್ನಡ ವಿಭಾಗದಲ್ಲಿ ಸಂಶೋಧನಾ ಕಾರ್ಯದಲ್ಲಿ ನಿರತರಾಗಿರುವ ವಿಭಾ ಪುರೋಹಿತ್ ಬರೆದ 30 ಲೇಖನಗಳ ಸಂಕಲನ. ‘ವಿಶ್ವಧ್ವನಿ’ ಆನ್ ಲೈನ್ ಪತ್ರಿಕೆಗಾಗಿ ಅವರು ಬರೆದ ಅಂಕಣಗಳ ಸಂಕಲನ. ನೀತಿ ಪಾಠಗಳೇ ಈ ಎಲ್ಲ ಲೇಖನಗಳ ಮುಖ್ಯ ವಸ್ತು. ಪ್ರಾಚೀನ ಸಾಹಿತ್ಯ ಕೃತಿಗಳಾದ ಪಂಚತಂತ್ರದ ಕಥೆಗಳು, ಭಕ್ತಿ ಮೂಡಿಸುವ ಕಥೆಗಳು, ಜಾನಪದ ಕಥೆಗಳು, ಕೆಲವೊಮ್ಮೆ ಘಟನೆಗಳು, ಇನ್ನು ಕೆಲವೊಮ್ಮೆ ಬೇರೆ ದೇಶದ ಕಥೆಗಳು – ಹೀಗೆ ವೈವಿಧ್ಯಮಯ ಕಥೆಗಳ ಪುನರಾಖ್ಯಾನವನ್ನು ನಾವಿಲ್ಲಿ ಕಾಣಬಹುದು. ಆದರೆ ಆ ಎಲ್ಲಾ ಕಥೆಗಳನ್ನು ಇಂದಿನ ಸಂದರ್ಭಗಳಿಗೆ ಅನ್ವಯಿಸಿ ಹೇಳುವುದು ಇಲ್ಲಿನ ಲೇಖನಗಳ ವೈಶಿಷ್ಟ್ಯ.

    ವಿಶೇಷ ಚೇತನರಲ್ಲಿ ಹುದುಗಿರುವ ವಿಶೇಷ ಪ್ರತಿಭೆ, ಪರಪೀಡನೆ ಸಲ್ಲದು, ಸಂಸ್ಕೃತಿಯಿಂದಲೇ ಜೀವನಕ್ಕೆ ಚೆಲುವು, ಆಸಕ್ತಿ ಮತ್ತು ಕ್ರಿಯಾಶೀಲತೆ, ಜವಾಬ್ದಾರಿಯಿಂದ ವಿಮುಖರಾಗದಿರಿ, ಭರವಸೆಯ ಬೆಳಕು, ಅತಿಯಾದ ಮಮಕಾರ, ಮುಂತಳ್ಳುವ ಮುನ್ನ ಪರಿಶೀಲಿಸಿ, ಕೊಟ್ಟದ್ದು ತನಗೆ-ಬಚ್ಚಿಟ್ಟದ್ದು ಪರರಿಗೆ, ಸಮನ್ವಯ ಸಾಧನೆ, ಸಂಕಲ್ಪ ಶಕ್ತಿ, ಸರದಿಗಾಗಿ ಕಾಯಬೇಕಿದೆ, ಹೊಂದಾಣಿಕೆಯಿಂದ ಸುಂದರ ಬದುಕು-ಮೊದಲಾದ ಲೇಖನಗಳಲ್ಲಿ ಶೀರ್ಷಿಕೆಗಳೇ ಮೌಲ್ಯ ಸಂದೇಶಗಳನ್ನು ಸಾರುತ್ತವೆ. ‘ಮುಂತಳ್ಳುವ ಮುನ್ನ’ ಇಂದಿನ ಮೊಬೈಲ್ ಯುಗದಲ್ಲಿ ಜನರು ಮಾಡುವ ತಪ್ಪುಗಳತ್ತ ಬೊಟ್ಟು ಮಾಡಿ ತೋರಿಸುತ್ತದೆ. ವಿಭಾ ಅವರು ಎಲ್ಲ ಲೇಖನಗಳಲ್ಲಿ ತರಗತಿಯಲ್ಲಿ ಬೋಧನೆ ಮಾಡುವ ಶೈಲಿಯಲ್ಲಿ ಮೊದಲು ಕಥೆಯನ್ನು ಅಥವಾ ಸಂದರ್ಭಗಳನ್ನು ಹೇಳಿ ನಂತರ ಅದರ ವಿಶ್ಲೇಷಣೆಯನ್ನು ಆರಂಭಿಸುತ್ತಾರೆ. ಕೆಲವೊಮ್ಮೆ ಪ್ರಶ್ನೋತ್ತರ ರೂಪವನ್ನು ಬಳಸುತ್ತಾರೆ. ಮಕ್ಕಳಿಗೆ ಮನದಟ್ಟು ಮಾಡಿಸಲು ಈ ತಂತ್ರವು ಬಹಳ ಪ್ರಯೋಜನಕಾರಿ.

    ವಿಭಾ ಅವರು ಮಾಡುವ ನೀತಿ ಪಾಠದ ವಿಧಾನಕ್ಕೆ ಉದಾಹರಣೆಯಾಗಿ ಕೊಡಬಹುದಾದ ಒಂದು ಒಳ್ಳೆಯ ಕಥೆ ‘ಅತಿಯಾದ ಮಮಕಾರ’ (ಪು.52-56). ಇದು ಒಂದು ಅನ್ಯ ದೇಶದ ಕಥೆ. ಒಬ್ಬಳು ತಾಯಿ ತನ್ನ ಮಗಳನ್ನು ಅತಿಯಾಗಿ ಮುದ್ದು ಮಾಡಿ ಅವಳ ಕೈಯಲ್ಲಿ ಏನೂ ಕೆಲಸ ಮಾಡಿಸದೆ ಅವಳು ಸೋಮಾರಿಯಾಗಲು ಕಾರಣಳಾಗುತ್ತಾಳೆ. ಒಮ್ಮೆ ತಾಯಿ ಅಸೌಖ್ಯದಿಂದ ಹಾಸಿಗೆ ಹಿಡಿದಾಗ ಮಗಳು ಅಡುಗೆ ಮಾಡದೆ ಕುಳಿತು ಕೆಲಸದಿಂದ ತಪ್ಪಿಸಿಕೊಳ್ಳುತ್ತಾಳೆ. ತಾಯಿ ಹಸಿವೆಯಿಂದ ತಾಳ್ಮೆ ಕಳೆದುಕೊಂಡು ‘ನಿನಗೆ ನೂರು ಕಣ್ಣುಗಳಾಗಲಿ’ ಎಂದು ಶಾಪ ಹಾಕುತ್ತಾಳೆ. ಸ್ವಲ್ಪ ಹೊತ್ತಿನಲ್ಲಿ ಮಗಳು ಮಾಯವಾಗಿ ಮನೆಯ ಹೊರಗೆ ನೂರು ಕಣ್ಣುಗಳ ಅನಾನಾಸು ಹಣ್ಣು ಬಿದ್ದಿರುತ್ತದೆ.

    ಕಥೆಯ ಕೊನೆಗೆ ಲೇಖಕಿ ಹೀಗಾದುದಕ್ಕೆ ತಾಯಿಯನ್ನು ದೂರುವುದಿಲ್ಲ. ಅವಳು ಮಗಳಿಗೆ ಚಿಕ್ಕವಳಿರುವಾಗಲೇ ಕೆಲಸ ಹೇಳಿ ಮಾಡಿಸಬಹುದಿತ್ತು ಅನ್ನುತ್ತಾರೆ. ಅಥವಾ ಮಗಳು ತಾನಾಗಿಯೇ ಗಮನಿಸಿ ಅರಿತು ಮಾಡಬಹುದಿತ್ತು ಅನ್ನುತ್ತಾರೆ. ಅಂದರೆ ಒಂದು ಸನ್ನಿವೇಶದ ಎಲ್ಲಾ ಆಯಾಮಗಳನ್ನೂ ಚೆನ್ನಾಗಿ ಪರಿಶೀಲಿಸಿ ಸಾಧ್ಯಸಾಧ್ಯತೆಗಳ ಕುರಿತು ಚಿಂತನೆ ನಡೆಸುತ್ತಾರೆ. ಇದೇ ವಿಧಾನವನ್ನು ಅವರು ಎಲ್ಲ ಲೇಖನಗಳಲ್ಲೂ ಅನುಸರಿಸಿದ್ದಾರೆ.

    ವಿಭಾ ಅವರ ಬರವಣಿಗೆಯ ಶೈಲಿ ಸರಳವಾಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುವ ಶಕ್ತಿಯನ್ನು ಹೊಂದಿದೆ. ಪ್ರತಿಯೊಂದು ಕಥೆಗೆ ಅವರು ಕೊಡುವ ವ್ಯಾಖ್ಯಾನ, ಸನ್ನಿವೇಶಗಳಿಗೆ ಅವರು ಕೊಡುವ ಉದಾಹರಣೆಗಳು, ಆಧುನಿಕ ಸಂದರ್ಭಕ್ಕೆ ಅವುಗಳನ್ನು ಕನೆಕ್ಟ್ ಮಾಡುವ ರೀತಿಗಳು ಸೂಕ್ತವಾಗಿದ್ದು ಮಕ್ಕಳಿಗೆ ಸುಲಭದಲ್ಲಿ ಅರ್ಥವಾಗುವಂತಿವೆ. ಖಂಡಿತವಾಗಿಯೂ ಮುಂದೆ ಇವರಿಂದ ಒಳ್ಳೆಯ ಕೃತಿಗಳನ್ನು ನಿರೀಕ್ಷಿಸಬಹುದು. ವಿಭಾ ಅವರ ಸಂಶೋಧನಾ ಮಾರ್ಗದರ್ಶಿ ಡಾ. ವಿವೇಕಾನಂದ ಸಜ್ಜನರ ಮುನ್ನುಡಿಯು ಕೃತಿಗೊಂದು ಸುಂದರ ಕಲಶವನ್ನಿಟ್ಟಿದೆ.

    ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕಿ : ವಿಭಾ ಪುರೋಹಿತ್

    ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಎಂ.ಎ. ಮಾಡಿರುವ ವಿಭಾ ವಿಜೇಂದ್ರ ಪುರೋಹಿತ್ ಇವರು ಆನೇಕಲ್ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಭಾಷೆ ಮತ್ತು ಸಾಹಿತ್ಯ ವಿಭಾಗದಲ್ಲಿ ಬೋಧನೆ ಮತ್ತು ಸಂಶೋಧನ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೃಜನಶೀಲ ಬರಹ ಮತ್ತು ವಿಮರ್ಶೆ ಬರೆಯುವ ಹವ್ಯಾಸ ಹೊಂದಿರುವ ಇವರ ಕೃತಿಗಳು ‘ಮಲ್ಲಿಗೆ ಮತ್ತು ಇತರ ಕವಿತೆಗಳು’, ‘ದೀಪಹಚ್ಚು’, ‘ಕಲ್ಲೆದೆ ಬಿರಿದಾಗ’, ‘ಬಾಲ್ಕನಿ ಕಂಡ ಕವಿತೆಗಳು’, ‘ಜೀವನ ಯಾತ್ರೆ’, ‘ನೀತಿ ಪ್ರತೀತಿ’, ‘ಕವಿತೆ 2021’, ‘ವಿಮರ್ಶೆ ಬರಹಗಳ ಸಂಕಲನ’. ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’, ‘ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ’, ‘ಕನ್ನಡ ಸೇವಾರತ್ನ ಪ್ರಶಸ್ತಿ’, ‘ಲೇಖಿಕಾ ಕಾವ್ಯ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರ ಲೇಖನಗಳು ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ಕಸ್ತೂರಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನೇಕ ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಹಲವಾರು ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleಮಕ್ಕಳ ಸೃಜನಶೀಲತೆಗೆ ರಂಗಭೂಮಿಯ ಸ್ಪರ್ಶ : ‘ಸಂಕ್ಷಿಪ್ತ’-2026 ಬೇಸಿಗೆ ರಂಗ ಶಿಬಿರದ ಸಮಾರೋಪ
    Next Article ಪ್ರೇಕ್ಷಕರ ಮನ ಸೆಳೆದ ‘ವಿಶ್ವ ಕೊಂಕಣಿ ಸಮಾರೋಹ’-2026
    roovari

    Add Comment Cancel Reply


    Related Posts

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ

    May 19, 2026

    ಬೆಂಗಳೂರಿನ ಕಲಾಗ್ರಾಮದಲ್ಲಿ ಕನಕದಾಸರ ಸಮಗ್ರ ಅನುವಾದ ಕೃತಿಗಳ ಬಿಡುಗಡೆ

    May 19, 2026

    ಪ್ರೇಕ್ಷಕರ ಮನ ಸೆಳೆದ ‘ವಿಶ್ವ ಕೊಂಕಣಿ ಸಮಾರೋಹ’-2026

    May 19, 2026

    ಮಕ್ಕಳ ಸೃಜನಶೀಲತೆಗೆ ರಂಗಭೂಮಿಯ ಸ್ಪರ್ಶ : ‘ಸಂಕ್ಷಿಪ್ತ’-2026 ಬೇಸಿಗೆ ರಂಗ ಶಿಬಿರದ ಸಮಾರೋಪ

    May 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.