ಬೆಂಗಳೂರು: ಡಿ. ವಿ. ಜಿಯವರ 138ನೆಯ ಮತ್ತು ಪು. ತಿ. ನ ಅವರ 120ನೆಯ ಜನ್ಮದಿನೋತ್ಸವ ಕಾರ್ಯಕ್ರಮವನ್ನು ದಿನಾಂಕ 18 ಮಾರ್ಚ್ 2025 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಇವರಿಬ್ಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ “ಡಿ. ವಿ. ಜಿ ಮತ್ತು ಪು. ತಿ. ನ ಇಬ್ಬರೂ ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ಇವತ್ತು ಕನ್ನಡ ಸಾಹಿತ್ಯ ಇಷ್ಟೊಂದು ಬಹುಮುಖಿಯಾಗಿ ಬೆಳೆಯಲು ಅವರ ಕೊಡುಗೆಗಳು ಮುಖ್ಯ ಕಾರಣ. ವಿದ್ವಾಂಸರು, ಪತ್ರಿಕಾ ಸಂಪಾದಕರು, ಸಾಹಿತ್ಯ ವಿದ್ವಾಂಸರ ನಿಕಟ ಪರಿಚಯವಿದ್ದ ಡಿ. ವಿ. ಗುಂಡಪ್ಪನವರು 1933ರಲ್ಲಿ ಪರಿಷತ್ತಿಗೆ ಉಪಾಧ್ಯಕ್ಷರಾಗಿ ಬಂದ ಮೇಲೆ ಪರಿಷತ್ತಿಗೆ ಹೊಸ ಹುರುಪು ಉಂಟಾಯಿತು. ಪರಿಷತ್ತಿಗೆ ಭವ್ಯವಾದ ಶ್ರೀಕೃಷ್ಣರಾಜಪರಿಷತ್ತಿನ ಮಂದಿರ ಕಟ್ಟಡ ನೆಲೆಯಾಗಿ ಸಿಕ್ಕಿತು. ಪರಿಷತ್ತಿನ ಕಾರ್ಯಾಲಯವನ್ನು ಸುವ್ಯವಸ್ಥೆಗೊಳಿಸಿದರು. ಪ್ರತಿವಾರವೂ ಪರಿಷತ್ತಿನಲ್ಲಿ ಸಾರ್ವಜನಿಕವಾಗಿ ಭಾಷಣ, ಕಾವ್ಯವಾಚನ ಇತ್ಯಾದಿ ನಡೆಯತೊಡಗಿತು. ಪರಿಷತ್ತು ಜನಪ್ರಿಯವಾಗಲು ಹೆಚ್ಚು ಹೆಚ್ಚು ಜನರು ಸದಸ್ಯರಾಗಬೇಕು ಎಂಬುದು ಡಿ. ವಿ. ಜಿ. ಅವರ ಆಶಯವಾಗಿತ್ತು. ಅದಕ್ಕಾಗಿ ಸದಸ್ಯರ ಸಂಖ್ಯೆ ಹೆಚ್ಚಿಸಿದರು. ಸಂಸ್ಥೆಯ ನಿಬಂಧನೆ ಎಂಬುದು ಸಂಸ್ಥೆಗೆ ದಿಕ್ಸೂಚಿ – ಅಂಕುಶವಿದ್ದಂತೆ. ಅದು ಸಕಾಲಿಕವಾಗಿರಬೇಕು, ಸಮರ್ಪಕವಾಗಿರಬೇಕು, ಮತ್ತು ಸಮಗ್ರವಾಗಿರಬೇಕು ಎಂದು ಅದುವರೆಗೆ ಹಲವಾರು ವಾರ್ಷಿಕಾಧಿವೇಶನಗಳಲ್ಲ್ಲಿ ಆಗಿದ್ದ ನಿಬಂಧನೆಯ ತಿದ್ದುಪಡಿಗಳನ್ನೆಲ್ಲ ಸೇರ್ಪಡೆ ಮಾಡಿ ಒಂದೂಗೂಡಿಸಿ ನಿಬಂಧನಾವಳಿಯನ್ನು ಪ್ರಕಟಿಸಿದರು. ಡಿ.ವಿ.ಜಿಯವರು ಕನ್ನಡ ಕಾವ್ಯಗಳು ಜನರಲ್ಲಿ ಪ್ರಚಾರವಾಗಬೇಕಾದರೆ ಗಮಕ ಕಲೆಯೊಂದೇ ದಾರಿ ಎಂದು ಪ್ರತಿಪಾದಿಸಿ ಪರಿಷತ್ತಿನಲ್ಲಿ ಗಮಕ ತರಗತಿಗಳನ್ನು ಪ್ರಾರಂಭಿಸಿದರು. ಗಮಕಿಗಳು ತಯಾರಾಗತೊಡಗಿದರು. ಈ ತರಗತಿಗಳಿಂದ ಉತ್ತೀರ್ಣರಾಗಿ ಬಂದವರಲ್ಲಿ ನಾಡಿನ ಪ್ರಸಿದ್ದ ಗಮಕಿಗಳು ಸೇರಿದ್ದಾರೆ. ಪು. ತಿ. ನ ಅವರು ‘ಪರಕಾಯ ಪ್ರವೇಶ’ದಲ್ಲಿ ಸಿದ್ಧಿಯನ್ನು ಪಡೆದವರು ಎಂಬುದನ್ನು ಅನೇಕರು ಗುರುತಿಸುತ್ತಾರೆ ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ನಮ್ಮ ಸಂಸ್ಕೃತಿಯ ಸಾರಭೂತಸಂಗತಿಗಳನ್ನು ಪ್ರತೀಕಗಳ ರೂಪದಲ್ಲಿ ಹಿಡಿದಿಡುವ ಪುರಾಣಗಳ ಜಗತ್ತು ಅವರಿಗೆ ಸ್ವಂತ ಮನೆಯಂತೆ ಪರಿಚಿತ. ವರ್ತಮಾನದ ಬದುಕಿನ ಅರ್ಥವನ್ನು ಶೋಧಿಸುವುದಕ್ಕೆ ಅವರು ಮಾಡಿಕೊಳ್ಳುವ ಬುದ್ಧಿಪೂರ್ವಕ ಆಯ್ಕೆಯು ಪೌರಾಣಿಕ ಆವರಣದ್ದಾಗಿರುತ್ತದೆ. ಈ ಮಾತಿಗೆ ಅವರ ‘ಅಹಲ್ಯೆ’ ನಾಟಕಕ್ಕಿಂತ ಉತ್ತಮ ನಿದರ್ಶನ ಬೇರಿಲ್ಲ. ಸುತ್ತಲಿನ ನಿಸರ್ಗದ ವಿವರಗಳನ್ನು ವರ್ಣಿಸುವುದಕ್ಕೆ ಪೌರಾಣಿಕ ಪ್ರತಿಮೆಗಳನ್ನು ಕೊಡುವುದರಿಂದ ಹಿಡಿದು, ಪ್ರಾಚೀನರಾದರೂ ಸಾರ್ವಕಾಲಿಕರಾದ ಪ್ರಾತ್ರಗಳ ನಿರ್ಮಾಣದವರೆಗೆ ಅವರ ಪುರಾಣಪ್ರೀತಿ ಸಕ್ರಿಯವಾಗಿದೆ. ಪು. ತಿ. ನ ಅವರ ಕವಿತೆಯ ಬಗ್ಗೆ ಮತ್ತೆ ಮತ್ತೆ ಹೇಳಲಾಗಿರುವ ಇನ್ನೊಂದು ಮಾತು ಭಾಗವತಪ್ರಜ್ಞೆಗೆ ಸಂಬಂಧಿಸಿದ್ದು. ಅವರ ಹಲವು ಗೀತ ನಾಟಕಗಳಲ್ಲಿ ಮತ್ತು ‘ರಂಗವಲ್ಲಿ’ಯಂತಹ ಕವಿತೆಗಳಲ್ಲಿ ರಮಣೀಯವಾದ ಭಕ್ತಿ – ನಂಬಿಕೆಗಳನ್ನೇ ಮೂಲ ನೆಲೆಯಾಗಿ ಹೊಂದಿರುವ ಪಾತ್ರಗಳ ಸೃಷ್ಟಿಯನ್ನು ನಾವು ಕಾಣುತ್ತೇವೆ. ಇಲ್ಲಿ ಪು. ತಿ. ನ ಅವರು ತಮ್ಮ ಗಮನವನ್ನು ಕೇವಲ ಭಕ್ತಿಯ ಕಡೆ ಮಾತ್ರ ಹರಿಸದೆ, ಜ್ಞಾನಯೋಗದ ಕಡೆಗೆ ಅಪಾರ ಆಸಕ್ತಿಯನ್ನು ತೋರುತ್ತಾರೆ ಎಂಬುದು ಕೂಡಾ ಪ್ರಮುಖವಾದ ಸಂಗತಿ. ಮಲೆದೇಗುಲದಂತಹ ಕವಿತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಅವರದು ಆಲೋಚನೆಯ ಮೂಲಕ ದೇವರ ಪರಿಕಲ್ಪನೆಯನ್ನು ಕಂಡುಕೊಳ್ಳುವ ದಾರಿ. 1981ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ 53ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪು. ತಿ. ನ ಮಹತ್ವದ ಮಾತುಗಳನ್ನಾಡಿದ್ದರು” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ. ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಿ. ವಿ. ಜಿ ಮತ್ತು ಪು. ತಿ. ನ ಅವರ ಜನ್ಮದಿನಾಚರಣೆ
No Comments2 Mins Read
Next Article ಪುತ್ತೂರಿನ ‘ಬಹುವಚನಂ’ನಲ್ಲಿ ಥೇಟರ್ ಮಾರ್ಚ್’ ಕಾರ್ಯಕ್ರಮ