ಪುಟ್ಟಮಕ್ಕಳಿಗೆ ಸೂಕ್ತ ನಾಟ್ಯಶಿಕ್ಷಣ ನೀಡಿ ಅವರನ್ನು ರಂಗದ ಮೇಲೆ ಉತ್ತಮವಾಗಿ ಪ್ರದರ್ಶನ ನೀಡುವಂತೆ ಸುಸಜ್ಜಿತಗೊಳಿಸುವುದು ಸುಲಭದ ಕೆಲಸವಲ್ಲ. ಅಂಥ ಸ್ತುತ್ಯಾರ್ಹ ತರಬೇತಿ ನೀಡಿ, ತಮ್ಮ ಸುಮನೋಹರ ನೃತ್ಯ ಸಂಯೋಜನೆಯಲ್ಲಿ ಉದಯೋನ್ಮುಖ ಕಲಾವಿದರನ್ನು ಕಲಾಶಿಲ್ಪವಾಗಿಸಿ ಜನಮಾನಸವನ್ನು ಗೆಲ್ಲುವಂಥ ಒಂದು ಸುಂದರ ನೃತ್ಯಪ್ರದರ್ಶನವನ್ನು ನೀಡಿ ಯಶಸ್ವಿಯಾದವರು ಹೆಸರಾಂತ ಉತ್ತಮ ನೃತ್ಯಗುರು ಹಾಗೂ ಮುಖ್ಯವಾಗಿ ಕಲಾವಿದೆಯಾಗಿ ಖ್ಯಾತರಾಗಿರುವ ವಿದುಷಿ ಎ. ಕುಸುಮಾ. ‘ನರ್ತನ ಶ್ರುತಿ’ – ಶೀರ್ಷಿಕೆಯಲ್ಲಿ ‘ಶರ್ವಾಣಿ ನಾಟ್ಯ ಕಲಾಕೂಟ ಅಕಾಡೆಮಿ ಆಫ್ ಆರ್ಟ್ಸ್’ ದಿನಾಂಕ 31 ಡಿಸೆಂಬರ್ 2025ರಂದು ನಯನ ರಂಗಮಂದಿರದಲ್ಲಿ ಶಾಲೆಯ ದಶಮಾನೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದು ಮೆಚ್ಚುಗೆ ಪಡೆಯಿತು.

ವಿದುಷಿ ಕುಸುಮಾ ಇವರ ನೇತೃತ್ವದಲ್ಲಿ ನೃತ್ಯ ಪ್ರಸ್ತುತಿಗಳು ಜನರಂಜಿಸಿ ಕಣ್ಮನಕ್ಕೆ ಆನಂದವನ್ನು ನೀಡಿದವು. ಉದಯೋನ್ಮುಖ ಪುಟ್ಟ ಕಲಾವಿದೆಯರ ಅಂಗಶುದ್ಧತೆ, ಪರಿಶ್ರಮ ಮತ್ತು ಬದ್ಧತೆಯ ನೃತ್ಯಾಭ್ಯಾಸ ಎದ್ದು ಕಂಡಿತು. ಪುಷ್ಪಾಂಜಲಿಯೊಂದಿಗೆ ನೃತ್ತ ನಮನಗಳ ಮೂಲಕ ಪ್ರಥಮ ವಂದನೆ ಹಾಗೂ ಕೃತಜ್ಞತೆ ಸಲ್ಲಿಸಿ, ಮುಂದೆ ಹಲವಾರು ದೈವೀಕ ಕೃತಿಗಳನ್ನು ಬಹು ಸೊಗಸಾಗಿ ನಿರೂಪಿಸಿದರು. ಎಲ್ಲ ಮಕ್ಕಳಲ್ಲೂ ಅಪಾರ ಆತ್ಮವಿಶ್ವಾಸ- ಉತ್ಸಾಹ ಮಿಳಿತವಾಗಿದ್ದು ಮೊದಲನೋಟಕ್ಕೆ ಆವರ ಸಂಭ್ರಮದ ನರ್ತನ ಲಹರಿ ಆಸಕ್ತಿ ಮೂಡಿಸಿತು. ಅಂದ ಚೆಂದದ ವಸ್ತ್ರವಿನ್ಯಾಸ- ವೇಷಭೂಷಣ ಮತ್ತು ಪ್ರಸಾಧನಗಳಲ್ಲಿ ಮಕ್ಕಳು ಅತ್ಯಾಕರ್ಷಕವಾಗಿ ಕಾಣುತ್ತ, ಉತ್ತಮ ಪ್ರದರ್ಶನ ನೀಡಿದರು.


ಎಲ್ಲಕ್ಕಿಂತ ಅತ್ಯಂತ ಗಮನ ಸೆಳೆದ ನೃತ್ಯ – ಭಾರತದ ವಿವಿಧ ಭಾಗಗಳ ನೃತ್ಯ ವೈವಿಧ್ಯವನ್ನು ಚಿತ್ರಿಸಿದ ‘ಏಕತೆಯಲ್ಲಿ ವೈವಿಧ್ಯತೆ’ ಬಿತ್ತರಿಸಿದ ‘ಐಕ್ಯಮತ್ಯೆ’ಯ ಉತ್ತಮ ಸಂದೇಶವನ್ನು ಸಾರಿದ ನೃತ್ಯಗುಚ್ಚ ಮನಮೋಹಕವಾಗಿತ್ತು. ಕಣ್ಮನ ತುಂಬಿದ ವರ್ಣರಂಜಿತ ಉಡುಪು- ಭೂಷಣಗಳಿಂದ ಕೂಡಿದ ಕಾಶ್ಮೀರ ಬಾಲೆಯರ ಉಲ್ಲಾಸದ ಕುಣಿತ, ಮರಾಠಿ ನೃತ್ಯಗಾರ್ತಿಯರ ಲವಲವಿಕೆಯ ಸೊಬಗಿನ ನೃತ್ಯ, ಪಂಜಾಬಿ ಭಾಂಗ್ರ ನೃತ್ಯ ಶೈಲಿಯ ಹರ್ಷದ ಚಲನೆಗಳ ರಮ್ಯ ನೃತ್ಯಗಳು ನಿಜಕ್ಕೂ ಮನೋಲ್ಲಾಸವನ್ನು ನೀಡಿದವು. ಅಂತಿಮವಾಗಿ ಎಲ್ಲ ರಾಜ್ಯಗಳ ನೃತ್ಯಗಳೂ ಸಂಗಮಿಸಿ, ಭಾರತಮಾತೆ ಧ್ವಜ ಹಿಡಿದು ಭಾವಪೂರ್ಣ ಸನ್ನಿವೇಶ ತೆರೆದುಕೊಂಡದ್ದು ಹೃದಯಸ್ಪರ್ಶಿಯಾಗಿತ್ತು. ಎಲ್ಲ ಕಲಾವಿದೆಯರು ತನ್ಮಯತೆಯಿಂದ, ಆನಂದವನ್ನು ಅನುಭವಿಸುತ್ತ ನರ್ತಿಸಿದ್ದು ವಿಶಿಷ್ಟವಾಗಿತ್ತು. ಅಪೂರ್ವ ಪರಿಕಲ್ಪನೆ ಮತ್ತು ನೃತ್ಯಸಂಯೋಜನೆಯ ಯಶಸ್ಸಿಗೆ ಭಾಜನರಾದವರು ಗುರು ಕುಸುಮಾ.


ನಂತರ – ಅನಾವರಣಗೊಂಡ ‘ವೈಕುಂಠ ದರ್ಶನ’ದ ನೃತ್ಯರೂಪಕವನ್ನು ಕಲಾವಿದರು, ನಾಟಕೀಯ ಆಯಾಮದಿಂದ, ಕುತೂಹಲಕರವಾಗಿ ಅಂಕಗಳು ಬಿಚ್ಚಿಕೊಂಡಂತೆ ಕಥಾ ಬೆಳವಣಿಗೆಯನ್ನು ತಮ್ಮ ಸಮರ್ಥ – ಸುಂದರ ನೃತ್ಯದ ಹರವುಗಳಿಂದ ಪ್ರದರ್ಶಿಸಿದರು. ನೃತ್ಯರೂಪಕಕ್ಕೆ ಪೂರಕವಾಗಿ ಬಳಸಿಕೊಂಡ ಪರಿಕರಗಳು ಬಹು ಸೂಕ್ತವಾಗಿದ್ದವು. ಗುರು ಕುಸುಮಾ ಅವರ ಸೃಜನಶೀಲ ಪ್ರಯೋಗ, ನಿರ್ದೇಶನ ಮೆಚ್ಚುಗೆ ಪಡೆಯಿತು. ಮಕ್ಕಳಲ್ಲಿ ಪುರಾಣ ಪ್ರಜ್ಞೆ – ವೈಚಾರಿಕ ಚಿಂತನೆ ಬೆಳೆಸುವಲ್ಲಿ ಅವರ ಪಾತ್ರ ಮುಖ್ಯವೆನಿಸಿದ್ದಲ್ಲದೆ, ಅವರ ಸದಾಶಯ ಮೆಚ್ಚುಗೆ ಪಡೆಯಿತು.


ಇದೇ ಕಾರ್ಯಕ್ರಮದಲ್ಲಿ ನೃತ್ಯಗುರು ಪರಿಮಳ ಹನ್ಸೋಗೆ ಅವರ ಇಬ್ಬರು ಪ್ರತಿಭಾನ್ವಿತ ಶಿಷ್ಯೆಯರು ಅಂಗಶುದ್ಧ – ಉತ್ತಮ ಭಂಗಿಗಳಿಂದ ಕೂಡಿದ ಸುಂದರ ನೃತ್ಯ ಪ್ರದರ್ಶನ ನೀಡಿದರು. ಗುರು ಚೈತ್ರ ನರಸಿಂಹಸ್ವಾಮಿಯವರ ಪುಟ್ಟ ಶಿಷ್ಯರೂ ಕೂಡ ಚೆಂದದ ನೃತ್ಯ ಪ್ರಸ್ತುತಿ ನೀಡಿದ್ದು ಖುಷಿ ತಂದಿತು.


ಭರವಸೆಯ ಕಲಾವಿದರನ್ನು ಬಹು ಬದ್ಧತೆಯಿಂದ, ಉತ್ತಮ ನಾಟ್ಯಶಿಕ್ಷಣ ನೀಡಿ, ಗುರುಕುಲ ಮಾದರಿಯಲ್ಲಿ ಮುಂದಿನ ಪರಂಪರೆಯನ್ನು ಉತ್ತಮ ಮಾರ್ಗದಲ್ಲಿ ಬೆಳೆಸುತ್ತಿರುವ ಗುರು ಕುಸುಮಾ ಇವರ ಕಾರ್ಯಕ್ಷಮತೆಗೆ ಹಾರ್ದಿಕ ಅಭಿನಂದನೆಗಳು. ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿ- ಕಲಾ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ ಮತ್ತು ನೃತ್ಯಗುರು ಪರಿಮಳ ಹನ್ಸೋಗೆ ಉಪಸ್ಥಿತರಿದ್ದರು.

* ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
