ಬೆಂಗಳೂರಿನ ಖ್ಯಾತ ‘ಅರ್ಕ ಕಲಾ ಫೌಂಡೇಶನ್’ ಸಂಸ್ಥೆಯ ನೃತ್ಯಗುರು-ಕಲಾವಿದೆ ವಿದುಷಿ ಭಾನುಪ್ರಿಯ ರಾಕೇಶ್, ಇತ್ತೀಚೆಗೆ ತಮ್ಮ ಹೊಸ ಪರಿಕಲ್ಪನೆಯ ‘ತಸ್ಮೈ ಶ್ರೀ ಗುರವೇ ನಮಃ’ ಎಂಬ ವಿಶಿಷ್ಟ ಗುರುವಂದನಾ ಕಾರ್ಯಕ್ರಮದಲ್ಲಿ ತಮಗೆ ನೃತ್ಯವಿದ್ಯೆಯನ್ನು ಕಲಿಸಿದ ಗುರುತ್ರಯರಾದ ಶ್ರೀಮತಿಯರಾದ ರೇವತಿ ನರಸಿಂಹನ್, ಇಂದಿರಾ ಕದಾಂಬಿ ಹಾಗೂ ವೈಜಯಂತಿ ಕಾಶಿ ಇವರಿಗೆ ನೃತ್ಯ ಕಾಣಿಕೆಯನ್ನು ಕೃತಜ್ಞತಾಪೂರ್ವಕವಾಗಿ ಅದ್ಭುತವಾಗಿ ನರ್ತಿಸುವ ಮೂಲಕ ಅರ್ಪಿಸಿ, ಪ್ರೇಕ್ಷಕರ ಮನತಣಿಸಿದರು. ಕಲಾವಿದೆಯ ಹರಿತವಾದ ನೃತ್ತಗಳ ಮಿನುಗು, ನುರಿತ ರಮ್ಯಾಭಿನಯದ ಬೆಡಗು ಆಕೆಯ ಅಸ್ಮಿತೆಯನ್ನು ಎತ್ತಿಹಿಡಿಯಿತು.

ಭಾನುಪ್ರಿಯ ರಾಕೇಶ್, ತಮ್ಮ 21 ಶಿಷ್ಯರೊಂದಿಗೆ ಗುರುಗಳ ನೃತ್ಯರಚನೆಗಳನ್ನು ನೇರ ವಾದ್ಯವೃಂದದೊಂದಿಗೆ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಸತತ ಅಭ್ಯಾಸ- ಪರಿಶ್ರಮ- ಬದ್ಧತೆಗಳಿಂದ ಭಾನು, ಸಾಧಿಸಿರುವ ನೃತ್ಯ ಪ್ರೌಢಿಮೆ ಕಲಾರಸಿಕರ ಮನತಣಿಸಿ ಬೆರಗು ಮೂಡಿಸಿತು. ಭಾನು, ತಮ್ಮ ರಂಗಪ್ರವೇಶದ ಸಂದರ್ಭದಲ್ಲಿ ಪ್ರಸ್ತುತಪಡಿಸಿದ ಕೃತಿಗಳನ್ನೇ ಇಂದು ಪ್ರದರ್ಶಿಸಿದ್ದು ನಿಜಕ್ಕೂ ವಿಶೇಷವಾಗಿತ್ತು. ಮೊದಲಿಗೆ ಅವರು ತಮ್ಮ ಶಿಷ್ಯರೊಡನೆ ಸಾಕಾರಗೊಳಿಸಿದ ‘ಪುಷ್ಪಾಂಜಲಿ’ (ಹಂಸಧ್ವನಿ ರಾಗ ಮತ್ತು ಆದಿತಾಳ) ಕೇವಲ ನೃತ್ತಗಳ ನಮನವಾಗಿರದೆ, ಹೊಸ ವಿನ್ಯಾಸದ ಜತಿಗಳ ಸೌಂದರ್ಯದೊಂದಿಗೆ ಅನುರಣಿಸಿತು. ನಂತರದ ಮುತ್ತುಸ್ವಾಮಿ ದೀಕ್ಷಿತರ ‘ಗಜಾನನ ಮುಖಂ ಗಣೇಶ್ವರಂ – ‘ಗಣೇಶ ಸ್ತುತಿ’ಯನ್ನು ಆದಿಪೂಜಿತ ವಿನಾಯಕನ ವಿವಿಧ ವಿಶಿಷ್ಟ ಭಂಗಿಗಳನ್ನು ಸುಮನೋಹರವಾಗಿ ಪ್ರದರ್ಶಿಸಿ ಕಲಾವಿದೆಯರು ಸಾಮರಸ್ಯದಿಂದ ನರ್ತಿಸಿ ಗಣೇಶನ ವ್ಯಕ್ತಿತ್ವ- ಮಹಿಮೆಯನ್ನು ಸಾಕ್ಷಾತ್ಕರಿಸಿದರು.

ಮುಂದೆ ‘ಜತಿಸ್ವರ’ (ರಾಗ-ಅಭೋಗಿ, ಆದಿತಾಳ) ಶುದ್ಧ ನೃತ್ತಬಂಧ ರಮಣೀಯ ಆಂಗಿಕಾಭಿನಯ, ಮುದ ನೀಡಿದ ಹೆಜ್ಜೆ ಗೆಜ್ಜೆಗಳಿಗೆ ಸಾಕ್ಷಿಯಾಯಿತು. ನಂತರ- ಬಳ್ಳಾರಿ ಶೇಷಗಿರಿ ಆಚಾರ್ಯ ರಚಿಸಿದ ಚಂದ್ರಕೌನ್ಸ್ ರಾಗ- ಅದಿತಾಳದ ‘ಚಂದ್ರಶೇಖರಂ ಭಜಾಮಿ ಸತತಂ’ – ಭಾನು ಅವರ ಶಕ್ತಿಶಾಲಿಯಾದ ಶಿವನ ಯೋಗದ ಭಂಗಿಗಳು ರೋಮಾಂಚನಗೊಳಿಸಿದವು. ಕಮನೀಯ ರೂಪಿಯ ದರ್ಶನವನ್ನು ಕಲಾವಿದೆಯರು ಮನನೀಯವಾಗಿ ಕಾಣಿಸಿ ಭಕ್ತಿಭಾವದಿಂದ ಅರ್ಪಿಸಿದರು. ಗುರು ಭಾನು ನರ್ತಿಸಿ, ಶಿವನ ಢಮರುಗ ನಿನಾದಕ್ಕೆ ಅನುಗುಣ ಹೆಜ್ಜೆಗಳನ್ನು ಕುಣಿಸಿ, ಎವೆ ಇಕ್ಕದೆ ದಿಟ್ಟಿಸುವಂತೆ ಮಾಡಿದ ವಿಹಂಗಮ ಯೋಗದ ವಿವಿಧ ಭಂಗಿಗಳನ್ನು ಲೀಲಾಜಾಲವಾಗಿ ಅಷ್ಟೇ ನಿರಾಯಾಸವಾಗಿ ನಗುಮೊಗದಿಂದ ಪ್ರದರ್ಶಿಸಿ ಬೆರಗುಗೊಳಿಸಿದರು.

ನಂತರದ ಪದ್ಮಚರಣರ ಮೇರುಕೃತಿ ‘ಶೃಂಗ ಪುರಾಧೀಶ್ವರಿ ಶಾರದೆ’ – ಸಂಗೀತ ರಸಿಕೆ – ಸಮಗಾನಪ್ರಿಯೆಯ ಕೃಪೆ ಬೇಡುವ ಕೀರ್ತನೆ, ಕಲಾವಿದೆಯರ ಸುಂದರಾಭಿನಯದಲ್ಲಿ ವೀಣಾಪಾಣಿಯ ಸುಮಧುರ ಭಂಗಿಗಳು ಕಣ್ತುಂಬಿದವು. ಅನಂತರ ಭಾನುಪ್ರಿಯ ಸಮರ್ಪಿಸಿದ ವಿರಹೋತ್ಖಂಠಿತ ನಾಯಕಿಯ ವಿರಹ ತಲ್ಲಣಗಳಿಗೆ ಕನ್ನಡಿ ಹಿಡಿದ ಮಧುರೈ ಮುರಳೀಧರನ್ ರಚಿಸಿದ ‘ವರ್ಣ’ (ರಾಗ- ಪೂರ್ವೀ ಕಲ್ಯಾಣಿ, ಆದಿತಾಳ) ‘ಸ್ವಾಮಿಯೈ ವರಸೊಲ್ಲಡಿ’ ಎಂದು ವಿಹ್ವಲಿತ ನಾಯಕಿ ವಿವಿಧ ಬಗೆಯಲ್ಲಿ ತನ್ನ ಆರಾಧ್ಯದೈವ, ಇನಿಯನನ್ನು ಬರಲು ಹೇಳೇ ಎಂದು ಸಖಿಯಲ್ಲಿ ಆಪ್ತವಾಗಿ ಕೇಳಿಕೊಳ್ಳುವ ದೀರ್ಘಬಂಧವನ್ನು ಕಲಾವಿದೆ ಭಾನು ಅತ್ಯಂತ ಹೃದಯಸ್ಪರ್ಶಿಯಾಗಿ ಅಭಿನಯಿಸಿದರು. ವಿರಹತಪ್ತೆಯ ದುಃಖದಲ್ಲಿ ಪಾಲ್ಗೊಂಡಂತೆ ನೋಡುಗರ ಹೃದಯವನ್ನು ಮಿಡಿವ ಕರುಣಾಜನಕ ಅಭಿನಯವನ್ನು ಮಿಡಿಸುವಲ್ಲಿ ಭಾನು ಯಶಸ್ವಿಯಾದರು. ತಳಮಳಗೊಂಡ ನಾಯಕಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ ಕಲಾವಿದೆ, ಮನ್ಮಥ ಹುಟ್ಟುಹಾಕಿರುವ ವಿರಹವೇದನೆಯನ್ನು ಸಹಿಸದ ತನ್ನ ದೇಹ ಅಗಲಿಕೆಯ ನೋವಿನಲ್ಲಿ ದಗ್ಧವಾಗುತ್ತಿರುವ ಬಗ್ಗೆ ತನ್ನ ಸ್ವಾಮಿ ಮುರುಗನಿಗೆ ಮನಗಾಣಿಸಿ ಅವನನ್ನು ಬರಹೇಳೆ ಎಂದು ತನ್ನ ಸಖಿಗೆ ತನ್ನ ತಾಪವನ್ನು ಅನೇಕ ಪರಿಯಲ್ಲಿ ನಿವೇದಿಸಿ ಹೃದಯ ಕರಗುವಂತೆ ಬೇಡಿಕೊಳ್ಳುವ ದೃಶ್ಯವನ್ನು ಅದ್ಭುತವಾಗಿ ಅಭಿನಯಿಸಿ ತಾವೊಬ್ಬ ಪ್ರೌಢ ಕಲಾವಿದೆ ಎಂಬುದನ್ನು ಭಾನು ಸಾಬೀತುಗೊಳಿಸಿದರು.

ಕರುಣಾರ್ತ ನಾಯಕಿಯಾಗಿ ತನ್ನ ಹೃದಯದ ತಲ್ಲಣವನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ ನಾಯಕಿ, ತನ್ನ ಮನಸ್ಸಿನ ತಾಕಲಾಟದ ಬಿಂಬವಾಗಿ ಮಿಂಚಿನ ವೇಗದ ನೃತ್ತಗಳಲ್ಲಿ ತನ್ನ ನೋವನ್ನು ಹೊರಹಾಕಿದ ಪರಿ ಎಲ್ಲರ ಹೃದಯಗಳಲ್ಲೂ ಅನುರಣನವನ್ನು ಉಂಟುಮಾಡಿತ್ತು. ಕಲಾವಿದೆಯ ವಿಳಂಬ ಕಾಲದ ನೃತ್ತಗಳಲ್ಲಿ ನಾಯಕಿಯ ಉಸಿರು ಹೊಯ್ದಾಡಿತ್ತು, ಒಳತೋಟಿಗಳ ಸಂಘರ್ಷದಲ್ಲಿ ಜತಿಗಳು ಝಳಪಿಸಿ ನೋವು ಹೊನಲಾಗಿತ್ತು, ಅಸಹನೆಯ ಜ್ವಾಲೆಯ ತಾಪದಲ್ಲಿ ಅವಳ ಮನದಾಳದ ತೀವ್ರ ಭಾವಗಳು ಬೆಂದು ಬಸವಳಿದಂತೆ ರೂಪಕಾತ್ಮಕವಾಗಿ ಆಕೆಯ ನೃತ್ತಗಳ ಅಭಿವ್ಯಕ್ತಿ ಅನಂತ ಭಾವಗಳನ್ನು ಸ್ಫುರಿಸಿತ್ತು. ಗಾಯಕ ಬಾಲಸುಬ್ರಮಣ್ಯ ಶರ್ಮರ ಆರ್ದ್ರ ಕಂಠದ ಭಾವಪೂರ್ಣ ಗಾಯನ, ನಾಯಕಿಯ ಹೃದಯದ ಮುಖವಾಣಿಯಾಗಿ ಮನ ಕಲಕಿತ್ತು.

ಕಲಾವಿದೆಯ ನೃತ್ಯ ಸಾಮರ್ಥ್ಯವನ್ನು ಅನಾವರಣಗೊಳಿಸಿದ ಅಭಿನಯದ ನೈಪುಣ್ಯದೊಂದಿಗೆ, ನಿರಾಯಾಸದ ಹಸ್ತ ವಿನಿಯೋಗ, ಆಂಗಿಕಾಭಿನಯ, ಅರೆಮಂಡಿ, ಆಕಾಶಚಾರಿ, ಅರೆಮಂಡಿ, ರಂಗಾಕ್ರಮಣ, ನೃತ್ಯವ್ಯಾಕರಣದ ವಿವಿಧ ಮಜಲುಗಳು ಸುವ್ಯಕ್ತವಾದವು. ಇಂಥ ಸುದೀರ್ಘವಾದ, ನವರಸದಿಂದ ಕೂಡಿದ ವಿವಿಧ ಭಾವಗಳನ್ನು ಸ್ಫುರಿಸುವ ಒಂದು ‘ವರ್ಣ’ ಸಾಕು ಕಲಾವಿದರ ಸಾಧನೆ ಮತ್ತು ಪ್ರತಿಭೆಯ ಉತ್ಕೃಷ್ಠತೆಯನ್ನು ನಿರೂಪಿಸಲು ಎಂದರೆ ಅತಿಶಯೋಕ್ತಿಯಲ್ಲ. ನೃತ್ಯ ಪ್ರದರ್ಶನಕ್ಕೆ ಉತ್ತಮ ಸಂಗೀತ ಸಾಂಗತ್ಯ ನೀಡಿದ ನುರಿತ ಕಲಾವಿದರೆಂದರೆ, ಸ್ಫುಟವಾದ ಪರಿಣಾಮಕಾರಿ ನಟುವಾಂಗದಲ್ಲಿ ಡಿ.ವಿ. ಪ್ರಸನ್ನ ಕುಮಾರ್, ವೇಣುನಿನಾದದಲ್ಲಿ ವೇಣುಗೋಪಾಲ್, ವಯೊಲಿನ್ ನಲ್ಲಿ ಅರ್ಜುನ್ ಮತ್ತು ಮೃದಂಗದಲ್ಲಿ ವಿದ್ಯಾಶಂಕರ್ ತಮ್ಮ ಅನುಪಮ ಕೊಡುಗೆ ನೀಡಿದರು.

ವಿಮರ್ಶಕಿ : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
