ಬೆಂಗಳೂರು: 2023ನೆಯ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡುವ ಕಾರ್ಯಕ್ರಮ ದಿನಾಂಕ 21 ಮಾರ್ಚ್ 2025 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ಕನ್ನಡ ಸಾಹಿತ್ಯ ಪರಿಷತ್ತು ಅಕ್ಷರ ಸಂಸ್ಕೃತಿಯನ್ನು ಉಳಿಸಿ ಬೆಳಸಲು ಶ್ರೊಮಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ದತ್ತಿ ಪುರಸ್ಕಾರಗಳು ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವವೆಂದರೆ ಅದರ ದತ್ತಿನಿಧಿಗಳು. ಹಿತೈಷಿಗಳು, ಗಣ್ಯರು, ಸಂಸ್ಥೆಗಳು ತಮ್ಮ ಕನ್ನಡ ಪ್ರೀತಿಯನ್ನು ದತ್ತಿ ಇಡುವ ಮೂಲಕ ವ್ಯಕ್ತ ಪಡಿಸಿದ್ದಾರೆ. ದತ್ತಿಗಳು ವೈವಿಧ್ಯಮಯ ಆಶಯಗಳನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತು 2023ರ ಜನವರಿಯಿಂದ ಡಿಸಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ವಿವಿಧ ಪುಸ್ತಕ ದತ್ತಿ ಪುರಸ್ಕಾರಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿತ್ತು. ಇದಕ್ಕೆ ರಾಜ್ಯ ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ 12 ಜನ ಪರಿಣಿತರ ಸಮಿತಿ ಪ್ರಾಥಮಿಕವಾಗಿ ಆಯ್ಕೆ ಮಾಡಿತ್ತು. ಪಾರದರ್ಶಕವಾಗಿ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಿದ್ದು, ಅವರೆಲ್ಲರೂ ಇಂದು ಬಹಮಾನ ಸ್ವೀಕರಿಸುತ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳು. ಇದು ಒಂದು ಉನ್ನತ ಪರಂಪರೆಯನ್ನು ರೂಪಿಸಿದೆ ಎನ್ನುವ ಹೆಮ್ಮೆ ನಮ್ಮದು. ಸಾಮಾಜಿಕ ನ್ಯಾಯ, ಪ್ರತಿಭಾ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಲಿಂಗಾಧಾರಿತ ನ್ಯಾಯದ ವಿಶಾಲ ತಳಹದಿಯ ಮೇಲೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಸರ್ಕಾರದಿಂದ ಅನುದಾನ ಪಡೆಯುವ ಒಟ್ಟು 59 ಸಂಸ್ಥೆಗಳಿವೆ. ಇವುಗಳ ನಡುವೆ ಹೊಂದಾಣಿಕೆ ಹೆಚ್ಚಾಗ ಬೇಕಾದ ಅಗತ್ಯ ಈಗ ಉಂಟಾಗಿದ್ದು, ಕನ್ನಡ ಸೇವೆಯಲ್ಲಿ ಸಹಯೋಗ ಹಾಗೂ ಸಮಾಲೋಚನೆಯ ಮಹತ್ವ ಈಗ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರೆಲ್ಲರ ಮಾತೃಸಂಸ್ಥೆಯಾಗಿ ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಮಾಡಿದೆ. ಈ ಪ್ರಯತ್ನದ ಫಲವಾಗಿಯೇ ಇಂದು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಎಲ್. ಎನ್. ಮುಕುಂದ ರಾಜ್ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ” ಎಂದರು.
ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಡಾ. ಎಲ್. ಎನ್. ಮುಕುಂದ ರಾಜ್ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತಿಗೆ ಉನ್ನತ ಪರಂಪರೆ ಇದೆ. ಹಲವು ಸಾಧಕರು ಇದನ್ನು ಕಟ್ಟಿ ಬೆಳೆಸಿದ್ದಾರೆ. ಇಲ್ಲಿಂದ ಪಡೆಯುವ ಪುರಸ್ಕಾರಕ್ಕೆ ಮಹತ್ವವಿದೆ. ಸಮರ್ಥ ಬರಹಗಾರ ಭಾಷೆಯ ಶಕ್ತಿಯನ್ನು ಬೆಳೆಸುತ್ತಾರೆ, ಪಂಪ-ಕುಮಾರ, ವ್ಯಾಸರು ಕನ್ನಡಕ್ಕೆ ನೀಡಿದ ಸಾರ್ವತ್ರಿಕ ನೆಲೆಗಳನ್ನು ನಾವೆಲ್ಲರೂ ಸ್ಮರಿಸ ಬೇಕು. ಪುರಸ್ಕಾರ ಪಡೆದವರ ಮೇಲೆ ಈ ಶ್ರೀಮಂತ ಪರಂಪರೆಯನ್ನು ಮುಂದುವರೆಸುವ ಹೊಣೆ ಇರುತ್ತದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಜಾವಾಣಿ ದಿನ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಮಾತನಾಡಿ “ಓದುವ ಪರಂಪರೆ ನಿಂತು ಹೋಗುತ್ತಿದೆ. ಹೊಸ ಪೀಳಿಗೆಯವರಿಗೆ ಪುಸ್ತಕಗಳನ್ನು ಓದುವುದನ್ನು ಕೂಡ ನಾವು ಕಲಿಸ ಬೇಕು ಆಗ ಮಾತ್ರ ಅಕ್ಷರ ಪರಂಪರೆ ಉಳಿದು ಕೊಳ್ಳುತ್ತದೆ. ಬರಹ ಮಾನವೀಯತೆಯನ್ನು ಕಲಿಸುತ್ತದೆ. ಇಂದಿನ ಜಗತ್ತಿಗೆ ಅದರ ಅಗತ್ಯ ಇನ್ನಷ್ಟು ಹೆಚ್ಚಾಗಿದೆ” ಎಂದರು.
ಇನ್ನೊಬ್ಬ ಮುಖ್ಯ ಅತಿಥಿಗಳಾದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸಾ ಮಾತನಾಡಿ ಗೊ. ರು. ಚನ್ನಬಸಪ್ಪನವರು ಅಧ್ಯಕ್ಷರಾಗಿದ್ದಾಗ ತಾವು ಅವರೊಡನೆ ದತ್ತಿ ಹೆಚ್ಚಿಸಲು ಮಾಡಿದ ಪ್ರಯತ್ನಗಳನ್ನು ಸ್ಮರಿಸಿ ಕೊಂಡರು.
ಕಾರ್ಯಕ್ರಮದಲ್ಲಿ ಪುಸ್ತಕ ದತ್ತಿ ವಿಜೇತರಿಗೆ ಪುರಸ್ಕಾರಗಳನ್ನು ನೀಡಲಾಯಿತು. ಅವರ ಕುಟುಂಬ ವರ್ಗದವರು ಅಪಾರ ಸಂಖ್ಯೆ ಅಭಿಮಾನಿಗಳು ಕಾರ್ಯಕ್ರಮದಲ್ಲಿ ನೆರೆದಿದ್ದರು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಅವರು ಸ್ವಾಗತಿಸಿ,
ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಅವರು ನಿರೂಪಿಸಿ, ನೇ.ಭ.ರಾಮಲಿಂಗ ಶೆಟ್ಟಿಯವರು ವಂದನೆಗಳನ್ನು ಸಲ್ಲಿಸಿದರು.