ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ಇದರ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ತಿಂಗಳಿಗೊಂದು ಕಾರ್ಯಕ್ರಮದಡಿ ಮಿಡಿದ ಪೊಲೀಸ್ ಹೃದಯಗಳಿಂದ ಘೋಷವಾಕ್ಯದ ‘ಪ್ರತಿಭೋತ್ಸವ’ ಕಾರ್ಯಕ್ರಮವು ದಿನಾಂಕ 24 ಫೆಬ್ರವರಿ 2025ರಂದು ಮಡಿಕೇರಿಯ ಗಾಂಧಿ ಭವನದಲ್ಲಿ ನಡೆಯಿತು.
ಜನಪದ ಗೀತೆ ಮತ್ತು ಭಾವಗೀತೆಗಳ ಸಂಗಮದ ‘ಪ್ರತಿಭೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ಮಾತನಾಡಿ “ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಕ್ಕಳಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಅನಾವರಣಗೊಳಿಸಲು ಪೊಲೀಸ್ ಸಾಂಸ್ಕೃತಿಕ ವೇದಿಕೆ ಸದ್ಬಳಕೆಯಾಗಬೇಕು. ಕಾನೂನನ್ನು ಕಾಪಾಡುವ ಪೊಲೀಸರಲ್ಲಿ ಕೂಡ ಕಲಾವಿದನಿರುತ್ತಾನೆ. ಈ ಕಲಾವಿದನ ಪ್ರತಿಭೆಯನ್ನು ಪ್ರತಿಬಿಂಬಿಸಲು ಪೊಲೀಸ್ ಸಾಂಸ್ಕೃತಿಕ ವೇದಿಕೆ ಹೆಚ್ಚು ಉಪಯುಕ್ತವಾಗಿದೆ. ಇದೇ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಕ್ಕಳ ಪ್ರತಿಭೆ ಕೂಡ ಅನಾವರಣಗೊಳ್ಳಬೇಕು. ಇದರಿಂದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಮತ್ತು ಶಾಲಾ, ಕಾಲೇಜುಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸ್ಫೂರ್ತಿ ದೊರೆತಂತಾಗುತ್ತದೆ.
ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಸಂಪೂರ್ಣ ಸಹಕಾರ ನೀಡಲಿದ್ದು, ಪೊಲೀಸರು ಕ. ಸಾ. ಪ. ಇದರ ಸದಸ್ಯತ್ವ ಪಡೆದುಕೊಳ್ಳಬೇಕು” ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ಅಧ್ಯಕ್ಷರಾದ ಟಿ. ಪಿ. ರಮೇಶ್ ಮಾತನಾಡಿ “ಪೊಲೀಸ್ ಸಾಂಸ್ಕೃತಿಕ ವೇದಿಕೆ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಂಗಾವಲಾಗಿ ನಿಲ್ಲಲಿದೆ. ನಿತ್ಯ ಖಾಕಿ ಸಮವಸ್ತ್ರ ಧರಿಸಿ ಕರ್ತವ್ಯದಲ್ಲೇ ನಿರತರಾಗಿರುವ ಪೊಲೀಸರಿಗೆ ತಿಂಗಳಿಗೊಮ್ಮೆ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಈ ವೇದಿಕೆಯಡಿ ಕಲಾ ಪ್ರತಿಭೆಯನ್ನು ಪ್ರದರ್ಶಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾಷ್ಟ್ರ ಮಟ್ಟದಲ್ಲೂ ಮಿಂಚಬೇಕು. ಪೊಲೀನ್ ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸೋಣ” ಎಂದರು.
ಜಾನಪದ ಪರಿಷತ್ತಿನ ಕೊಡರು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ. ಜಿ. ಅನಂತಶಯನ ಮಾತನಾಡಿ “ಬದುಕಿನ ಜಂಜಾಟದಿಂದ ಹೊರ ಬಂದು ಕೊಂಚ ಕಾಲ ಸಾಂಸ್ಕೃತಿಕ ಸಂಭ್ರಮದಲ್ಲಿ ಮನಸ್ಸನ್ನು ಹಗುರವಾಗಿಸಿಕೊಳ್ಳಲು ರಚನೆಯಾಗಿರುವ ಪೊಲೀಸ್ ಸಾಂಸ್ಕೃತಿಕ ವೇದಿಕೆ ಒಂದು ವಿಭಿನ್ನ ಪ್ರಯತ್ನವಾಗಿದೆ. ಪ್ರತಿ ತಿಂಗಳು ಕಾರ್ಯಕ್ರಮ ಆಯೋಜಿಸುವ ಚಿಂತನೆ ಮತ್ತು ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವಂತಾಗಲಿ” ಎಂದು ಸಲಹೆ ನೀಡಿದರು.
ಕ. ಸಾ. ಪ ಇದರ ಗೌರವ ಕಾರ್ಯದರ್ಶಿ ಎಸ್. ಐ. ಮುನೀರ್ ಅಹ್ಮದ್ ಮಾತನಾಡಿ “ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಸಂಗೀತದ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಪೊಲೀಸ್ ಸಾಂಸ್ಕೃತಿಕ ವೇದಿಕೆಯ ರಚನೆ ಅದ್ಭುತ ಚಿಂತನೆಯಾಗಿದೆ. ಇದು ಬದುಕಿನ ಜಂಜಾಟವನ್ನು ಮರೆತು ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಒಂದೆಡೆ ಸೇರಿ ಪ್ರತಿಭೆಯನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ” ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ಪರಿಷ್ಠಾಧಿಕಾರಿ ಕೆ. ಎಸ್. ಸುಂದರ್ ರಾಜ್, ಡಿ. ವೈ. ಎಸ್. ಪಿ. ಗಳಾದ ಮಡಿಕೇರಿಯ ಪಿ. ಎ. ಸೊರಲ್, ಸೋಮವಾರಪೇಟೆಯ ಗಂಗಾಧರಪ್ಪ ಆರ್. ವಿ., ವಿರಾಜಪೇಟೆಯ ಮಹೇಶ್ ಕುಮಾರ್, ಸೆನ್ ಡಿ. ವೈ. ಎಸ್. ಪಿ. ರವಿ, ವೃತ್ತ ನಿರೀಕ್ಷಕರಾದ ಐ. ಪಿ. ಮೇದಪ್ಪ, ಅನೂಪ್ ಮಾಡಪ್ಪ, ಆರ್. ಪಿ. ಚಿನ್ನ ನಾಯಕ, ಠಾಣಾಧಿಕಾರಿಗಳಾದ ತಮ್ಮಯ್ಯ, ಲತಾ, ನವೀನ್, ಮಂಜುನಾಥ್, ಗೀತಾ ಹೆಚ್. ಟಿ. ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಮೂಡಿ ಬಂದ ಜನಪದ ಗೀತೆ ಮತ್ತು ಭಾವಗೀತೆ ಕಲಾಭಿಮಾನಿಗಳ ಮನಸೂರೆಗೊಂಡಿತು.
ಪ್ರತಿಭೆಯನ್ನು ಅನಾವರಣಗೊಳಿಸಿದ ಪೊಲೀಸರಿಗೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಮಹಿಳಾ ಸಿಬ್ಬಂದಿ ಕಾವೇರಮ್ಮ ಪ್ರಾರ್ಥಿಸಿ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್ ಸ್ವಾಗತಿಸಿ, ಮಡಿಕೇರಿ ನಗರ ವೃತ್ತ ನಿರೀಕ್ಷಕ ರಾಜು ಹಾಗೂ ಕಂಟ್ರೋಲ್ ರೂಮ್ ಠಾಣಾಧಿಕಾರಿ ಧನಂಜಯ ನಿರೂಪಿಸಿದರು. ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ಪ್ರತಿ ತಿಂಗಳ 4ನೇ ಶನಿವಾರದಂದು ಪ್ರತಿಭೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.