ರಂಗಭೂಮಿ ಉಡುಪಿಯ ವಾರ್ಷಿಕ ನಾಟಕ ಸ್ಪರ್ಧೆ, ಕರ್ನಾಟಕದ ಹಳೆಯ ಮತ್ತು ಇಂದಿಗೂ ಯಶಸ್ಸಿಯಾಗಿ ಮುನ್ನಡೆಯುತ್ತಿರುವ ಒಂದು ವಿದ್ಯಮಾನ. ಬಹುಶಃ ಸಾಂಪ್ರದಾಯಿಕ ಅಥವ ಪರದೆ ನಾಟಕಗಳ ಕಾಲದಿಂದ ಆರಂಭಗೊಂಡು ಮುಂದುವರಿಯುತ್ತ ಆಧುನಿಕ ರಂಗಭೂಮಿಯ ಇಂದಿನವರೆಗೂ ಸತತ ಆರ್ಕಷಣೆಯನ್ನು ಉಳಿಸಿಕೊಂಡಿರುವ ಸ್ಪರ್ಧೆ, ಸಹಜವಾಗಿ ಒಂದಿಷ್ಟು ಏರಿಳಿತಗಳ ನಡುವೆಯೂ. ಈ ನಿಟ್ಟಿನಲ್ಲಿ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಾಟಕಗಳೆಂದರೆ ಅವುಗಳಿಗೆ ಒಂದು ಹಂತದ ವಿಶೇಷ ಸ್ಥಾನಮಾನ ಇದ್ದೇ ಇದೆ, ನೀರ್ದಿಷ್ಟ ಮಾನದಂಡಗಳ ಜತೆಗೆ.
ಈ ಹಿನ್ನೆಲೆಯಲ್ಲಿ ಈ ಬಾರಿಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರು ರಂಗರಥ ಟ್ರಸ್ಟಿನ ‘ಧರ್ಮನಟಿ’ ನಾಟಕ ಪೌರಾಣಿಕ ಮತ್ತು ಐತಿಹಾಸಿಕ ನೆಲೆಗಳೊಂದಿಗೆ ಆಧುನಿಕ ರಂಗಭೂಮಿ ಆಧಾರಿತ ಪ್ರಯೋಗದ ಮೂಲಕ, ಆಧುನಿಕ ಜೀವನದ ಅದರಲ್ಲೂ ವೈವಾಹಿಕ ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟಿದೆ ಹೆಚ್ಚು ಕಡಿಮೆ ಉತ್ತಮ ಎನ್ನಬಹುದಾದ ರೀತಿಯಲ್ಲಿ.
ರಾಜಮನೆತನ ಅವುಗಳ ನೀತಿ ನಿಯಮ ಕಟ್ಟುಪಾಡುಗಳ ಆಧಾರದ ಅರಮನೆಯೊಳಗಿನ ಜೀವನದ ವಿಭಿನ್ನ ಮುಖಗಳು, ಸಮಾಜದ ಬಡತನ, ಗಂಡು ಹೆಣ್ಣಿನ ಪ್ರೇಮ, ಕಾಮ ಮತ್ತು ಇದರೊಂದಿಗೆ ಬೆಸೆದಿರುವ ಸತ್ಯ, ಹೀಗೆ ಒಂದಾರ್ಥದಲ್ಲಿ ಲೈಂಗಿಕತೆಯ ಸುತ್ತ ಗಿರಕಿ ಹೊಡೆಯುವ ಈ ನಾಟಕ ಇನ್ನೊಂದು ಕಡೆ ಮಹಾಭಾರತವನ್ನೇ ಜಗತ್ತಿನಲ್ಲಿ ಸೃಷ್ಟಿಸಲು ಕಾರಣವಾದ ನಿಯೋಗ ಪದ್ದತಿಯ ಸಾಧ್ಯ ಸಾಧ್ಯತೆಯನ್ನು ಸುಪ್ತವಾಗಿ ಹೊರಚೆಲ್ಲುತ್ತದೆ, ಲೀವಿಂಗ್ ಟುಗೇದರ್ – ಮುಕ್ತ ಲೈಂಗಿಕತೆ- Extra marital affair – sex satisfaction.. ಇಂತಹ ಗಂಭೀರ ಚಿಂತನೆ /ಪ್ರಶ್ನೆಗಳನ್ನು ರಂಗದ ಮೂಲಕ hypocrisy ಮಾನಸಿಕತೆಯ ಸಮಾಜದೆದುರು ತೆರೆದಿಟ್ಟು!
ಬಹುತೇಕ ಎಲ್ಲರ ಉತ್ತಮ ಅಭಿನಯದ ಹೊರತಾಗಿಯೂ ಕೆಲವು ಪಾತ್ರಗಳಿಂದ ಮತ್ತೊಂದಿಷ್ಟು ಖಂಡಿತ ಸಾಧ್ಯ ಇತ್ತು. ನಾಟಕದುದ್ದಕ್ಕೂ ರಂಗದಲ್ಲಿ ವಿಪರೀತ ಚೆಲ್ಲಿದ ಬೆಳಕು ಅತೀ ಅನಿಸಿತ್ತು. ಹಾಡುಗಳನ್ನು ಮಾತ್ರ ಇನ್ನಷ್ಟು ನೆನಪಿನಲ್ಲಿ ಉಳಿಯುವಂತೆ ಗಟ್ಟಿ ಮಾಡಲೇಬೇಕಿತ್ತು. ಸಂಗೀತ ಹದ ಎನಿಸಿ ವಸ್ತ್ರ ಮತ್ತು ರಂಗ ವಿನ್ಯಾಸ ಮುದ ನೀಡಿತು. ಇಂತಹ ಪ್ರಯೋಗದ ಹಿಂದಿನ ಎಲ್ಲರಿಗೂ ಅಭಿನಂದನೆಗಳು.
ಕಲ್ಲಚ್ಚು ಮಹೇಶ ಆರ್. ನಾಯಕ್ ಮಂಗಳೂರು