ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಮತ್ತು ಯಕ್ಷಧ್ರುವ ಪಟ್ಲ ಫೌಂಡೇಷನ್ ದುಬೈ ಘಟಕದ ವತಿಯಿಂದ ‘ದುಬೈ ಯಕ್ಷೋತ್ಸವ- 2023 ವಿಶ್ವ ಪಟ್ಲ ಸಂಭ್ರಮ’ ಜೂನ್ 11ರಂದು ಮಧ್ಯಾಹ್ನ 2 ಗಂಟೆಗೆ ದುಬೈನ ಕರಾಮ ಇಂಡಿಯನ್ ಸ್ಕೂಲಿನ ಶೇಖ್ ರಷೀದ್ ಸಭಾಂಗಣದಲ್ಲಿ ವಿಶ್ವದಲ್ಲಿ ಇರುವ ಪಟ್ಲ ಫೌಂಡೇಷನ್ನಿನ 38 ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ಜರಗಲಿದೆ.
ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಇವರು ದುಬೈ ಮತ್ತು ತಾಯಿ ನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ ನೀಡುವ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಹಿರಿಯ ಕಲಾವಿದ ಪಟ್ಲಗುತ್ತು ಮಹಾಬಲ ಶೆಟ್ಟಿ ಅವರಿಗೆ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಪಟ್ಲ ಫೌಂಡೇಷನ್ನಿನ ಕೇಂದ್ರ ಘಟಕದ ಗೌರವಾಧ್ಯಕ್ಷರಾದ ಉದ್ದಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಘಟಕದ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ, ಐಕಳ ಹರೀಶ್ ಶೆಟ್ಟಿ, ಪಟ್ಲ ಘಟಕ ಯುಎಇಯ ಗೌರವಾಧ್ಯಕ್ಷ ಪುತ್ತಿಗೆ ವಾಸುದೇವ ಭಟ್, ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಭೀಮ್ ಜ್ಯುವೆಲ್ಲರ್ಸ್ ನ ಯು. ನಾಗರಾಜ ರಾವ್, ಉದ್ಯಮಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಹರೀಶ್ ಶೇರಿಗಾರ್, ಬಿಲ್ಲವಾಸ್ ದುಬೈಯ ಪ್ರಭಾಕರ್ ಸುವರ್ಣ ಭಾಗವಹಿಸುವರು.
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಆರು ವರ್ಷದ ಬಾಲ ಕಲಾವಿದರಿಂದ ಹಿಡಿದು ಅರುವತ್ತು ವರ್ಷದ ಕಲಾವಿದರು ಹಾಗೂ ಊರಿನ ಸುಪ್ರಸಿದ್ಧ ಹಿಮ್ಮೇಳ ಕಲಾವಿದರ ಕೂಡುವಿಕೆಯಿಂದ ‘ದಶಾವತಾರ’ ಯಕ್ಷಗಾನ ಪ್ರದರ್ಶನವಾಗಲಿದೆ. ದುಬೈಯ ಯಕ್ಷಗಾನದಲ್ಲೇ ದಾಖಲೆಯ 109 ಪಾತ್ರಗಳು, ವಿಶೇಷ ದೃಶ್ಯ – ಬೆಳಕಿನ ಸಂಯೋಜನೆ ಮತ್ತು ಏಕಕಾಲದಲ್ಲಿ ರಂಗದಲ್ಲಿ 10ರಿಂದ 20 ಪಾತ್ರಗಳ ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ಈ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪಟ್ಲ ಸತೀಶ್ ಶೆಟ್ಟಿ ಅವರ ಗಾನ ಸಾರಥ್ಯದಲ್ಲಿ ನಡೆಯಲಿರುವ ದಶಾವತಾರ ಯಕ್ಷಗಾನ ಪ್ರಸಂಗದಲ್ಲಿ ಮತ್ತೋರ್ವ ಭಾಗವತ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಕೂಡ ವಿಶೇಷ ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಚೆಂಡೆ ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ, ಚೈತನ ಕೃಷ್ಣ ಪದ್ಯಾಣ ಭಾಗವಹಿಸಲಿದ್ದಾರೆ. ಕೊಟ್ಟಿಂಜ ದಿನೇಶ್ ಶೆಟ್ಟಿ ಅವರ ಸಂಯೋಜನೆಯಲ್ಲಿ ಪ್ರಸಂಗದ ನಿರ್ದೇಶನವನ್ನು ಶೇಖರ್ ಡಿ. ಶೆಟ್ಟಿಗಾರ್ ಮತ್ತು ಶರತ್ ಕುಡ್ಲ ನಿರ್ವಹಿಸಿದ್ದಾರೆ.