ಬಂಟ್ವಾಳ: ಪಾವಂಜೆ ಮೇಳದ ಸಂಚಾಲಕರು ಹಾಗೂ ಪ್ರಧಾನ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರು ಕಲಾಸೇವೆಯಲ್ಲಿ 25 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಬಿ. ಸಿ. ರೋಡಿನ ಹೊಟೇಲ್ ರಂಗೋಲಿ ಸಹೋದರರು ವಿಶಿಷ್ಟ ರೀತಿಯ ಸಂಯೋಜನೆಯಿಂದ ಆಯೋಜಿಸಿದ ಯಕ್ಷಗಾನ ಬಯಲಾಟದ ರಂಗಸ್ಥಳದಲ್ಲಿ ಸನ್ಮಾನಿಸಲಾಯಿತು.
ದಿನಾಂಕ 03 ಜನವರಿ 2025ರಂದು ಬಂಟ್ವಾಳ ತಾಲೂಕಿನ ಕೂರಿಯಾಳ ಪಡುವಿನ ಚಂದ್ರತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಲ ಸತೀಶ್ ಶೆಟ್ಟಿ ಇವರನ್ನು ಸನ್ಮಾನಿಸಿ ಮಾತನಾಡಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ “ಯಕ್ಷಗಾನ ಕಲಾಭಿಮಾನಿಗಳ ಕಣ್ಮಣಿ, ಯಕ್ಷರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಖ್ಯಾತ ಭಾಗವತರಾದ ಇವರು ಯಕ್ಷಗಾನ ರಂಗದ ಸೆಲೆಬ್ರಿಟಿಯಾಗಿದ್ದಾರೆ. ಪ್ರಥಮ ಶ್ರೇಣಿಯ ಭಾಗವತಿಕೆಯ ಮೂಲಕ ಯಕ್ಷಗಾನದಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡಿರುವ ಇವರು ದೇಶ ಮಾತ್ರವಲ್ಲ ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಪಸರಿಸಿರುವ ಅದ್ಭುತ ಸಂಘಟಕರೂ ಆಗಿದ್ದಾರೆ. ಪಟ್ಲ ಫೌಂಡೇಶನ್ ಮೂಲಕ ಶಾಶ್ವತವಾದ ಯೋಜನೆಯನ್ನು ರೂಪಿಸಿ ಕಲಾವಿದರಿಗೆ ಮನೆ ಸಹಿತ ವಿವಿಧ ನೆರವು ನೀಡುತ್ತಿರುವ ಅವರ ಸೇವೆ ಅಪಾರವಾಗಿದೆ.” ಎಂದರು.
ಬೆಂಗಳೂರಿನ ಸಿ. ಎ. ಏರ್ಯ ಬಾಲಕೃಷ್ಣ ಹೆಗ್ಡೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಗವತ ಪಟ್ಲ ಸತೀಶ್ ಶೆಟ್ಟಿ “ಪಟ್ಲ ಫೌಂಡೇಶನ್ ಸ್ಥಾಪನೆಯಾಗಿ 10 ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ಸಿಹಿ-ಕಹಿಯನ್ನು ಅನುಭವಿಸಿದ್ದೆನೆ, ಇತ್ತೀಚೆಗೆ ರಸ್ತೆ ಅಪಘಾತದಿಂದ ಮೃತಪಟ್ಟ ಯುವ ಯಕ್ಷಗಾನ ಕಲಾವಿದ ಪ್ರವಿತ್ ಅವರ ಕುಟುಂಬಕ್ಕೆ ಪಟ್ಲ ಫೌಂಡೇಶನ್ ಇದರ ವಿಮಾ ಯೋಜನೆಯಡಿ ಹತ್ತು ಲಕ್ಷ ರೂಪಾಯಿಯ ನೆರವನ್ನು ನೀಡಲಾಗುವುದು. ತನ್ನ ಕಲಾಸೇವೆಯ ಆರಂಭಿಕ ಹಂತದಿಂದಲೂ ಬಿ. ಸಿ. ರೋಡಿನ ರಂಗೋಲಿ ಸಹೋದರರು ಯಕ್ಷಗಾನಕ್ಕೆ ನೀಡಿರುವ ಕೊಡುಗೆ ಆವಿಸ್ಮರಣೀಯ. ಕರಾವಳಿಯ ಸಂಸ್ಕೃತಿ, ಪರಂಪರೆಗೆ ಎಳ್ಳಷ್ಟೂ ಧಕ್ಕೆಯಾಗದಂತೆ ಅದನ್ನು ಪ್ರಸ್ತುತ ಪಡಿಸಿ ಇಡೀ ವಿಶ್ವಕ್ಕೆ ಪಸರಿಸಿರುವ ಡಾ. ಮೋಹನ್ ಆಳ್ವ ಅವರೋರ್ವ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ” ಎಂದರು.
ರಂಗೋಲಿ ಸಹೋದರರಾದ ಸದಾನಂದ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಸಾಹಿಲ್ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.