ಮಂಗಳೂರು : ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 16-06-2024ರಂದು ಡಾನ್ ಬಾಸ್ಕ್ ಹಾಲ್ ಇಲ್ಲಿ ಹಮ್ಮಿಕೊಂಡಿರುವ ‘ಪುರುಷ ನಾಟ್ಯ ವಿಲಾಸ’ ಹಾಗೂ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಸನ್ಮಾನ ಸಮಾರಂಭವು ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೃತ್ಯ ಗುರು ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯಾಯ ಮಾತನಾಡಿ “ನೃತ್ಯ ಗುರುಗಳು ಪರೀಕ್ಷೆಗಳನ್ನು ಪೂರೈಸಿಕೊಂಡರೆ ಸಾಲದು, ಆಳವಾದ ಅಧ್ಯಯನ ಜ್ಞಾನ ಸೃಜನಶೀಲತೆ ಬೆಳೆಸಿಕೊಳ್ಳಬೇಕು, ಹಾಗಾದಾಗ ಮಾತ್ರ ಸಮರ್ಥ ನೃತ್ಯ ಗುರು ಎನಿಸಿಕೊಳ್ಳಲು ಸಾಧ್ಯ. ಸಮರ್ಥ ನೃತ್ಯ ಗುರು ಅಥವಾ ನೃತ್ಯ ಕಲಾವಿದರು ಸತ್ಯ ಘಟನೆಗಳು ಮತ್ತು ಸಮಕಾಲೀನ ಸಂಗತಿಗಳನ್ನು ತಮ್ಮ ನೈಪುಣ್ಯತೆಯಿಂದ ಮಾತ್ರ ಪ್ರತಿಬಿಂಬಿಸಲು ಸಾಧ್ಯ. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಭರತಾಂಜಲಿ ನೃತ್ಯ ಸಂಸ್ಥೆಯ ನೃತ್ಯ ಗುರುಗಳು ಶ್ಲಾಘನೀಯರು” ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಗುರು ಮೋಹನ್ ಕುಮಾರ್ ಇವರನ್ನು ತುಳುನಾಡಿನ ಜನಪದೀಯ ಕಲೆಯಾದ ಯಕ್ಷಗಾನದ ರಾಜ ಕಿರೀಟವನ್ನು ಹಾಕಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ “ಕರಾವಳಿ ಕಂಡಂತಹ ಸಮರ್ಥ ನೃತ್ಯ ಗುರುಗಳು ಉಳ್ಳಾಲ ಮೋಹನ್ ಕುಮಾರ್. ಇವರು ನಮ್ಮ ತುಳುನಾಡಿನ ಒಂದು ದೊಡ್ಡ ಆಸ್ತಿ” ಎಂದರು.
ವಾಗ್ಮಿ ಕಶೆಕೋಡಿ ಸೂರ್ಯನಾರಾಯಣ ಭಟ್ ಕಾರ್ಯಕ್ರಮದ ಅವಲೋಕನ ಮಾಡಿದರು. ವಿದ್ವಾನ್ ಶ್ರೀಧರ ಹೊಳ್ಳ ಅಭಿನಂದನಾ ನುಡಿಗಳನ್ನಾಡಿದರು. ವಿದುಷಿ ಪ್ರತಿಮಾ ಶ್ರೀಧರ್ ಸ್ವಾಗತಿಸಿ, ವಂದಿಸಿದರು. ನೃತ್ಯ ಶಿಕ್ಷಕಿ ವಿದುಷಿ ಪ್ರಕ್ಷಿಲಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಕಲಾಶ್ರೀ ಗುರು ಕಮಲಾ ಭಟ್, ಸಂಸ್ಥೆಯ ನೃತ್ಯ ಶಿಕ್ಷಕಿ ಮಾನಸ ಕುಲಾಲ್, ಅದಿತಿ, ಆಕಾಶ್ ಎಸ್. ಹೊಳ್ಳ, ಅಂಕಿತಾ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಕೊನೆಯಲ್ಲಿ ಹಾಸನದ ಉನ್ನತ್ತ್ ಜೈನ್ ಇವರ ಶಿಷ್ಯ ಸುಮಂತ್ ಎಸ್., ಬೆಂಗಳೂರಿನ ಪಾರ್ಶ್ವನಾಥ ಉಪಾಧ್ಯೆ ಇವರ ಶಿಷ್ಯ ಶೋಭಿತ್ ರಮೇಶ್ ಇವರುಗಳು ಭರತನಾಟ್ಯ ಪ್ರದರ್ಶನವನ್ನು ಪ್ರದರ್ಶಿಸಿದರೆ ಹುಬ್ಬಳ್ಳಿಯ ವಿದ್ವಾನ್ ಸುಜಯ್ ಶಾನುಭಾಗ್ ಇವರಿಂದ ಭಕ್ತಿ ಪ್ರಧಾನವಾದ ರಂಗ ಎನ್ನುವ ಪ್ರಸ್ತುತಿಯು ಮನೋಜ್ಞವಾಗಿ ಪ್ರದರ್ಶನಗೊಂಡು ಶೋತ್ರಗಳ ಮನರಂಜಿಸಿತು.