ಮಂಗಳೂರು : ಮಂಗಳೂರು ಸಂಸ್ಕಾರ ಭಾರತೀಯು ಕಳೆದ 20 ವರ್ಷಗಳಿಂದ ಗುರುಪೂರ್ಣಿಮೆಯoದು ನಾಡಿನ ಹಲವಾರು ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದೆ. ಈ ವರ್ಷ 21 ಜುಲೈ 2024ನೇ ಭಾನುವಾರ ಬೆಳಿಗ್ಗೆ ಹಿರಿಯ ಸಾಧಕರ ನಿವಾಸಕ್ಕೆ ತೆರಳಿ ಗುರುನಮನ ಸಲ್ಲಿಸಲಾಯಿತು. ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಜ್ಞಾತ ಕಲಾವಿದರು, ಶ್ರೇಷ್ಠ ಕಲಾಗುರುಗಳನ್ನು ಗುರುತಿಸಿ, ಅವರು ಇರುವಲ್ಲಿಗೇ ತೆರಳಿ, ಫಲ, ಹಾರ, ಸ್ಮರಣಿಕೆ ಹಾಗೂ ನಿಟ್ಟೆ ಸಂಸ್ಥೆ ನೀಡಿದ ರೂ.10,000/- ನಗದು ಪುರಸ್ಕಾರದೊಂದಿಗೆ ಸತ್ಕರಿಸಿ ಅಭಿನಂದಿಸಲಾಯಿತು. ಪ್ರತಿಯೊಬ್ಬರ ಗುರುನಮನದಲ್ಲಿ ಕಾರ್ಯಕ್ರಮವನ್ನು ಧ್ಯೇಯ ಗೀತೆಯೊಂದಿಗೆ ಆರಂಭಿಸಲಾಯಿತು. ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಮೈಗೂಡಿಸಿರುವ ಬಿ. ಭೋಜ ಸುವರ್ಣ ಬರ್ಕೆ, ಚಿತ್ರಕಲೆಯಲ್ಲಿ ಅಪೂರ್ವ ಸಾಧನೆಗೈದ ಕೆ. ಚಂದ್ರಯ್ಯ ಆಚಾರ್ಯ ಹಾಗೂ ಯಕ್ಷಗಾನ ಪ್ರಸಾಧನದಲ್ಲಿ ಮಹತ್ತರ ಸಾಧನೆಗೈದಿರುವ ಜಿ. ನಾರಾಯಣ ಹೊಳ್ಳ ಇವರುಗಳಿಗೆ ಶ್ರದ್ಧಾ ಗೌರವ ಪೂರ್ವಕವಾಗಿ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಅನನ್ಯ ಸೇವೆ ಗೈದ ಪಂಡಿತ್ ರಾಮ ರಾವ್ ಮತ್ತು ನಾಟಿ ವೈದ್ಯೆಯಾಗಿ ಅಪೂರ್ವ ಸಾಧನೆ ಮಾಡಿದ ಶ್ರೀಮತಿ ಗಿರಿಜಾ ನಾಟಿ ವೈದ್ಯೆ ಇವರಿಗೂ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು.
ಸಂಸ್ಕಾರ ಭಾರತೀಯ ಪ್ರಾಂತ ಉಪಾಧ್ಯಕ್ಷರಾದ ಚಂದ್ರಶೇಖರ್ ಕೆ. ಶೆಟ್ಟಿ, ಪ್ರಾಂತ ಕೋಶಾಧಿಕಾರಿ ರಘುವೀರ್ ಗಟ್ಟಿ, ಪ್ರಾಂತ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಮಂಗಳೂರು ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಕೆ. ಭಂಡಾರಿ ಉಪಾಧ್ಯಕ್ಷ ಧನಪಾಲ್ ಎಚ್. ಶೆಟ್ಟಿಗಾರ್, ಕಾರ್ಯದರ್ಶಿ ಗಣೇಶ ಬೋಳೂರು, ಸಹ ಕಾರ್ಯದರ್ಶಿ ಹರ್ಷಿತ ಕೊಟ್ಟಾರಿ, ಜಾನಪದ ವಿದ್ವಾಂಸರೂ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್, ವಿಭಾಗ ಸಂಚಾಲಕರಾದ ಮಾಧವ ಭಂಡಾರಿ, ತುಳು ಲಿಪಿ ಶಿಕ್ಷಕಿ ಮತ್ತು ಸಾಹಿತಿ ಗೀತಾ ಲಕ್ಷ್ಮೀಶ್, ನೃತ್ಯ ವಿಧಾ ಪ್ರಮುಖ್ ವಿದುಷಿ ಶ್ರೀಲತಾ ನಾಗರಾಜ್, ಮಂಗಳೂರು ಸಮಿತಿಯ ಕೋಶಾಧಿಕಾರಿ ಚಂದ್ರಪ್ರಭಾ ಕುಲಾಲ್, ಸಂಗೀತ ವಿಧಾ ಪ್ರಮುಖ್ ಡಾ. ಪ್ರತಿಭಾ ರೈ, ಕಾರ್ಯಕರ್ತರಾದ ಚಂದ್ರಕಾಂತ್, ವೈಭವ ಶೆಟ್ಟಿಗಾರ್, ಕೀರ್ತಿಪ್ರಸಾದ್ ಕೈಯ್ಯ, ಹರಿಪ್ರಸಾದ್ ರೈ, ಗಣೇಶ ಆಚಾರ್ಯ, ಶ್ರೀಪತಿ ಆಚಾರ್ಯ, ಮ. ಯೋಗೀಶ್, ರತ್ನಾವತಿ ಜೆ. ಬೈಕಾಡಿ, ಜಯಲಕ್ಷ್ಮೀ ಬಾಲಕೃಷ್ಣ, ರಾಜೇಶ್ವರಿ, ಜಯಶ್ರೀ ಶೆಟ್ಟಿ ಉಪಸ್ಥಿತರಿದ್ದರು.
ಬಿ. ಭೋಜ ಸುವರ್ಣ – ಸಂಗೀತ, ಸಾಹಿತ್ಯ
ಕಾಯಕದಲ್ಲಿ ಮೆಕ್ಯಾನಿಕ್ ಹುದ್ದೆಯನ್ನು ಆಶ್ರಯಿಸಿ, ಗಾಯನ-ಭಜನಾ ಸಂಕೀರ್ತನದಲ್ಲಿ ಭಾಗಿಯಾಗಿ, ನಾಟಕ ರಚನಾಕಾರರಾಗಿ, ಸಾಹಿತ್ಯ, ಹಿನ್ನೆಲೆ ಗಾಯನ ಹಾಗೂ ನಿರ್ದೇಶನದೊಂದಿಗೆ ನಟನಾ ಚಾತುರ್ಯವನ್ನು ಹೊಂದಿ, ಓದುವ ಹವ್ಯಾಸವನ್ನು ಮೈಗೂಡಿಸಿ ಪ್ರಸ್ತುತ ನಿವೃತ್ತಿಯ ಈ ಹೊತ್ತಿನಲ್ಲಿ ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ತರಬೇತಿಯನ್ನು ನೀಡಿ, ಯಾವುದೇ ಫಲಾಪೇಕ್ಷೆಯನ್ನು ಬಯಸದೆ ನಿಷ್ಠೆ- ಶ್ರದ್ಧಾ-ಭಕ್ತಿಯನ್ನು ಬಿ. ಭೋಜ ಸುವರ್ಣ ಬರ್ಕೆ (84) ಮೈಗೂಡಿಸಿದ್ದಾರೆ.
ಕೆ. ಚಂದ್ರಯ್ಯ ಆಚಾರ್ಯ – ಚಿತ್ರಕಲೆ
ಬಾಲ್ಯದಲ್ಲಿಯೇ ಚಿತ್ರಕಲೆಯಲ್ಲಿ ಆಸಕ್ತರಾಗಿ ಉಡುಪಿಯ ಚಿತ್ರಕಲಾ ಮಂದಿರದಲ್ಲಿ ಚಿತ್ರಕಲೆಯನ್ನು ಕರಗತೊಳಿಸಿ ಎಂ. ಸಿ. ಎಫ್. ಭಾರತ್ ಬೀಡೀಸ್ ಮುಂತಾದೆಡೆ ಚಿತ್ರಕಲಾ ಪ್ರದರ್ಶನವನ್ನು ಕೈಗೊಂಡು ಕೆ. ಎಂ. ಸಿ., ಕಂಕನಾಡಿ ‘ಫಾದರ್ ಮುಲ್ಲರ್ಸ್’ ಮುಂತಾದ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಸ್ತ್ರ ಚಿಕಿತ್ಸೆಗೆ ಸಂಬಂಧಿತ ಚಿತ್ರಗಳನ್ನು ಬಿಡಿಸಿ ಮೆಡಿಕಲ್ ಚಾರ್ಟನ್ನು ತಯಾರಿಸುವ ನೈಪುಣ್ಯತೆಯನ್ನು ಹೊಂದಿರುವದಲ್ಲದೆ, ತಮ್ಮ ಮೂವರು ಮಕ್ಕಳಿಗೂ ಚಿತ್ರಕಲೆಯ ಮಜಲುಗಳನ್ನು ಪರಿಚಯಿಸಿ. ಲೇಡಿಗೋಷನ್, ಬೇರೀಸ್ ಪಬ್ಲಿಕ್ ಶಾಲೆ, ಬೋಳೂರಿನ ಅಮೃತ ವಿದ್ಯಾಯಲಯ, ಜಪ್ಪುವಿನ ಸಂತ ಜೆರೋಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿತ್ರಕಲಾ ತರಬೇತುದಾರರಾಗಿ ಕೆ. ಚಂದ್ರಯ್ಯ ಆಚಾರ್ಯ ಇವರು (81) ಕಾರ್ಯ ನಿರ್ವಹಿಸಿದ್ದರು.
ಜಿ. ನಾರಾಯಣ ಹೊಳ್ಳ- ಕಲಾ ಕ್ಷೇತ್ರ
ಯಕ್ಷಗಾನ ಕ್ಷೇತ್ರದ ಹವ್ಯಾಸಿ ವೇಷಧಾರಿ ಹಾಗೂ ಭಾಗವತರಾಗಿ, ನಾಟಕ ಪ್ರಸಾಧನ ಕಲಾವಿದರಾಗಿ, ನಟರಾಗಿ, ಹುಲಿವೇಷದ ಬಣ್ಣಗಾರಿಕೆ ಕಲಾ ವಿದರಾಗಿ ವಿವಿಧ ಮೃಗಗಳ ಮುಖವಾಡ ತಯಾರಿಕೆಯಲ್ಲಿ ತೊಡಗಿ, ಸಿಂಹನೃತ್ಯದ ವೇಷ ಭೂಷಣ ತಯಾರಿಕೆಯಲ್ಲಿ ನಿಷ್ಣಾತರಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ನಾರಾಯಣ ಹೊಳ್ಳ (74) ಜನಮನ್ನಣೆ ಗಳಿಸಿದ್ದಾರೆ.