ಮಂಗಳೂರು : ಅರೆಹೊಳೆ ಪ್ರತಿಷ್ಠಾನ ಹಾಗೂ ಕಲಾಭಿ (ರಿ.) ಮಂಗಳೂರು ಆಯೋಜಿಸುವ ಕಲಾಗ್ರಾಮ ಉದ್ಘಾಟನೆ, ವಿಶ್ವರಂಗಭೂಮಿ ದಿನಾಚರಣೆ, ಅರೆಹೊಳೆ ರಂಗಭೂಮಿ ಪ್ರಶಸ್ತಿ ಪ್ರದಾನ ಹಾಗೂ ಅರೆಹೊಳೆ ನಾಟಕೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 27 ಮಾರ್ಚ್ 2025 ರಂದು ನಡೆಯಲಿರುವುದು. ಅರೆಹೊಳೆ ನಾಟಕೋತ್ಸವವು ದಿನಾಂಕ ಮಾರ್ಚ್ 27 ರಿಂದ 31, 2025 ರ ವರೆಗೆ ಐದು ದಿನಗಳ ಪರ್ಯಂತ ಮಂಗಳೂರಿನ ಬೊಂದೆಲ್ – ಮೂಡುಶೆಡ್ಡೆ ರಸ್ತೆಯಲ್ಲಿರುವ ಕಲಾಗ್ರಾಮದಲ್ಲಿ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡಬಿದಿರೆ ಇದರ ಮ್ಯಾನೇಜಿಂಗ್ ಟ್ರಸ್ಟಿಯಾದ ವಿವೇಕ್ ಎಮ್. ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ತಾರನಾಥ್ ಗಟ್ಟಿ ಕಾಪಿಕಾಡ್, ರಂಗಭೂಮಿ ಹಾಗೂ ಸಿನೆಮಾ ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಬಿ. ರಾಜೇಶ್, ನಾಟಕಕಾರರಾದ ಫಾದರ್ ಅಲ್ವಿನ್ ಸೇರಾವೋ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಕಲಾಭಿ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಸುರೇಶ್ ವರ್ಕಾಡಿ ಹಾಗೂ ಸ್ವಸ್ತಿಕ್ ನ್ಯಾಶನಲ್ ಬಿಸ್ ನೆಸ್ ಸ್ಕೂಲ್ ಇದರ ಡಾ. ರಾಘವೇಂದ್ರ ಹೊಳ್ಳ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಬೆಂಗಳೂರಿನ ಖ್ಯಾತ ರಂಗ ನಿರ್ದೇಶಕರಾದ ಆಸಿಫ್ ಕ್ಷತ್ರಿಯ ಇವರಿಗೆ ‘ಅರೆಹೊಳೆ ರಂಗಭೂಮಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ದಿನಾಂಕ 27 ಮಾರ್ಚ್ 2025ರಂದು ‘ಕಲಾಭಿ ಥಿಯೇಟರ್’ (ರಿ.) ಮಂಗಳೂರು ಪ್ರಸ್ತುತಪಡಿಸುವ, ಶ್ರವಣ್ ಹೆಗ್ಗೋಡು ಇವರ ರಂಗರೂಪ ಹಾಗೂ ನಿರ್ದೇಶನದ ‘ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್‘ ನಾಟಕ ಪ್ರದರ್ಶನಗೊಳ್ಳಲಿದ್ದು, ದಿನಾಂಕ 28 ಮಾರ್ಚ್ 2025ರಂದು ‘ಆಯನ ನಾಟಕದ ಮನೆ’ ಪ್ರಸ್ತುತಪಡಿಸುವ, ಮೋಹನ್ ಚಂದ್ರ ಯು. ಇವರ ರಂಗರೂಪ ಹಾಗೂ ನಿರ್ದೇಶನದ ‘ಅಶ್ವತ್ಥಾಮ NOT OUT’ ಪ್ರದರ್ಶನಗೊಳ್ಳಲಿದೆ. ದಿನಾಂಕ 29 ಮಾರ್ಚ್ 2025ರಂದು ‘ರಂಗರಥ’ ಟ್ರಸ್ಟ್ (ರಿ.) ಬೆಂಗಳೂರು ಪ್ರಸ್ತುತಪಡಿಸುವ, ಕೆ. ವಿ. ಅಕ್ಷರ ರಚನೆಯ, ಆಸಿಫ್ ಕ್ಷತ್ರಿಯ ಹಾಗೂ ಶ್ವೇತಾ ಶ್ರೀನಿವಾಸ್ ನಿರ್ದೇಶನದ ‘ಇದ್ದಾಗ ನಿಮ್ದು, ಕದ್ದಾಗ ನಮ್ದು’ ನಾಟಕ ಪ್ರದರ್ಶನಗೊಳ್ಳಲಿದ್ದು, ದಿನಾಂಕ 30 ಮಾರ್ಚ್ 2025ರಂದು ಮಂದಾರ (ರಿ.) ಬ್ರಹ್ಮಾವರ ಪ್ರಸ್ತುತಪಡಿಸುವ ಮೂಲ ದಾರಿಯೋ ಪೊ ರಚನೆಯ, ಪ್ರಕಾಶ್ ಗರುಡ ಕನ್ನಡಕ್ಕೆ ಅನುವಾದಿಸಿ, ರೋಹಿತ್ ಎಸ್. ಬೈಕಾಡಿ ವಿನ್ಯಾಸ ಮತ್ತು ನಿರ್ದೇಶನದ ‘ಬೆತ್ತಲಾಟ’ ನಾಟಕ ಹಾಗೂ ದಿನಾಂಕ 31 ಮಾರ್ಚ್ 2025ರಂದು ‘ಪ್ರಜ್ಞಾನಂ ಟ್ರಸ್ಟ್’ ಉಡುಪಿ ಪ್ರಸ್ತುತಪಡಿಸುವ, ಸುಧಾ ಆಡುಕಳ ರಂಗ ಪಠ್ಯದ ಗಣೇಶ ರಾವ್ ಎಲ್ಲೂರು ರಂಗವಿನ್ಯಾಸ, ಸಂಗೀತ ಹಾಗೂ ನಿರ್ದೇಶನದಲ್ಲಿ ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸುವ ಏಕವ್ಯಕ್ತಿ ನಾಟಕ ‘ಹೆಜ್ಜೆಗೊಲಿದ ಬೆಳಕು’ ಪ್ರದರ್ಶನಗೊಳ್ಳಲಿದೆ.
ನಾಟಕವು ಪ್ರತಿದಿನ ಸಂಜೆ 6.45ಕ್ಕೆ ಪ್ರಾರಂಭವಾಗಲಿದ್ದು, ಪ್ರವೇಶವು ಉಚಿತವಾಗಿರಲಿದೆ.