ತಾವರಗೇರಾ: ಮೇ ಸಾಹಿತ್ಯ ಮೇಳದ ಅಂಗವಾಗಿ ಆಯೋಜಿಸಿದ ಚಿತ್ರಕಲಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 18-05-2024 ರಂದು ಕೊಪ್ಪಳದ ತಾವರಗೇರಾ ಬುದ್ಧ ವಿಹಾರದ ಮಾನವ ಬಂಧುತ್ವ ವೇದಿಕೆಯ ಬುದ್ಧ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ “ಸಾಹಿತ್ಯ ಜನರ ನಾಡಿ ಮಿಡಿತವಾಗಬೇಕು. ಸಾಹಿತ್ಯ ಖಡ್ಗವಾಗಬೇಕು. ಸಂವಿಧಾನ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಸಂವಿಧಾನದ ಮೂಲಕ ನ್ಯಾಯದ ಧ್ವನಿಯನ್ನು ಎತ್ತಿ ಹಿಡಿದಿದೆ. ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದ ಸಂವಿಧಾನವನ್ನು ಬದಲಾಯಿಸುವ ಹಂತದಲ್ಲಿ ಇರುವುದು ವಿಪರ್ಯಾಸ. ಇಂತಹ ವಿಷಯಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ. ಆದ್ದರಿಂದ ಮೇ 18, 19,20 ಮೂರು ದಿನ ಶಿಬಿರ ಏರ್ಪಡಿಸಲಾಗಿದೆ.” ಎಂದು ಹೇಳಿದರು.
ಶಿಬಿರವನ್ನು ಉದ್ಘಾಟಿಸಿದ ಹಿರಿಯ ಚಿತ್ರ ಕಲಾವಿದ ಬಿ. ಎಲ್. ಚವ್ಹಾಣ್ ಮಾತನಾಡಿ “ಎಲ್ಲ ಸಮುದಾಯವು ಒಂದಾಗಬೇಕು ಎನ್ನುವುದು ನಮ್ಮ ಕಲ್ಪನೆ. ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಗಳನ್ನು ಶಾಲಾ ಕಾಲೇಜುಗಳಲ್ಲಿ ನಮ್ಮ ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ. ಲಲಿತ ಕಲೆಯಿಂದ ನಾವು ಸಮಾಜದಳಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತೇವೆ. ಅದಕ್ಕೆ ಕೈಜೋಡಿಸೋಣ.” ಎಂದರು.
ಸಾಹಿತಿ ಎಂ. ಎಂ. ಮದರಿ, ನಾಗೇಶನಹಳ್ಳಿಯ ಯುವ ಚಿಂತಕ ಎಂ. ಕೆ. ಸಾಹೇಬ, ಸಮಾಜ ಸೇವಕ ರವಿ ಪಾಟೀಲ್, ಬಿ. ಮಾರುತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಮಾನವ ಬಂಧುತ್ವ ವೇದಿಕೆಯ ಟಿ. ರತ್ನಾಕರ, ಶುಕ್ರರಾಜ ತಾಳಕೇರಿ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಪಿ. ಎಸ್. ಐ. ಸುಜಾತ ನಾಯಕ, ಬಿ. ಮಾರುತಿ, ಎಂ. ಕೆ. ಸಾಹೇಬ, ರವಿ ಪಾಟೀಲ್, ಆದೇಶ ನಾಯಕ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ, ಶರಣಪ್ಪ ತುಮರಿಕೊಪ್ಪ ರಾಮಣ್ಣ ಬೆರ್ಗಿ, ಮಂಜುನಾಥ ನಾಯಕ, ಸಾಹಿತಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.