ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 21 ನವೆಂಬರ್ 2024ರಂದು ರಂಗ ಮಾಂತ್ರಿಕ ಡಾ. ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ, ನಾಡೋಜ ಹಂಪನಾ ವಿರಚಿತ ದೇಸೀ ಮಹಾ ಕಾವ್ಯವನ್ನು ರಂಗರೂಪಕ್ಕೆ ತಂದ ಡಾ. ನಾ.ದಾ. ಶೆಟ್ಟಿಯವರ ‘ಚಾರುವಸಂತ’ ನಾಟಕದ ಪ್ರದರ್ಶನ, ರಂಗಪಯಣ ಉದ್ಘಾಟನೆ ಮತ್ತು ನಾಟಕ ಕೃತಿ ಬಿಡುಗಡೆ ಸಮಾರಂಭ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಇವರು ಮಾತನಾಡಿ ‘ಬರಹ ಅಥವಾ ಕಾವ್ಯವನ್ನು ರಂಗರೂಪಕ್ಕೆ ತರುವುದು ಒಂದು ಸಾಹಸ. ‘ಚಾರುವಸಂತ’ದ ಮೂಲಕ ಹಂಪನಾ ಅವರ ಕನಸು ಈಡೇರಿದೆ’ ಎನ್ನುತ್ತಾ ಬರಹದಿಂದ ರಂಗರೂಪಕ್ಕೆ ಕತೆಯನ್ನು ತರುವ ಅನುಭವಗಳನ್ನು ಹಂಚಿಕೊಳ್ಳುತ್ತಾ ‘ಕಾವ್ಯ ಭಾಷೆಯನ್ನೇ ಹೆಚ್ಚಾಗಿ ರಂಗರೂಪಕ್ಕೆ ಬಳಸಲಾಗಿದೆ’ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ‘ಚಾರುವಸಂತ’ ನಾಟಕಕ್ಕೆ ಜೈನ ಸಿದ್ಧಾಂತ ಮೂಲವಾಗಿದ್ದು, ಜೈನ ಕಾಶಿಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಹಂಪನಾ ಅವರು ನೀಡಿದ ಸಹಕಾರ ಅವಿಸ್ಮರಣೀಯ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಣುವ ಕನಸುಗಳನ್ನು ನನಸು ಮಾಡಲು ದೀರ್ಘವಾದ ಅಭ್ಯಾಸ ಮತ್ತು ಧೈರ್ಯ ಅಗತ್ಯ” ಎಂದರು.
‘ಚಾರುವಸಂತ’ವನ್ನು ರಂಗರೂಪಕ್ಕೆ ತಂದ ರಂಗಕರ್ಮಿ ಡಾ. ನಾ. ದಾಮೋದರ ಶೆಟ್ಟಿ ಮಾತನಾಡಿ, “ಕನ್ನಡ ಕಲಿಯಲು ಮತ್ತು ಉಳಿಸಲು ಆಳ್ವಾಸ್ ಮಾಡುತ್ತಿರುವ ಕೆಲಸ ಶ್ಲಾಘನೀಯ. ಈ ನಾಟಕವೂ ಕನ್ನಡ ಕಲಿಕೆಗೆ ಮತ್ತು ನೈತಿಕ ಮೌಲ್ಯಗಳನ್ನು ಕಲಿಯಲು ಅನುವು ಮಾಡಿಕೊಡುತ್ತದೆ” ಎಂದರು.
‘ಚಾರುವಸಂತ’ ನಾಟಕ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯದ ವಿವಿಧೆಡೆ ತಂಡದ ರಂಗಪಯಣ ನಡೆಯಲಿದೆ. ನಾಟಕದ ನಿರ್ದೇಶಕ, ರಂಗ ಮಾಂತ್ರಿಕ ಜೀವನ್‌ರಾಂ ಸುಳ್ಯ ಮತ್ತು ಯಕ್ಷ ರಂಗಾಯಣದ ನಿರ್ದೇಶಕರಾದ ವೆಂಕಟರಮಣ ಐತಾಳ್ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ‘ಚಾರುವಸಂತ’ ನಾಟಕದ ಪ್ರದರ್ಶನಗೊಂಡಿತು.