ಉಪ್ಪಿನಂಗಡಿ : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸ್ಥಾಪಕಗುರು, ಸಂಗೀತರತ್ನ ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಕಾಂಚನದಲ್ಲಿ ನಿರ್ಮಾಣವಾಗಿರುವ ನೂತನ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆಯ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ದಿನಾಂಕ 05 ಫೆಬ್ರವರಿ 2026ರಂದು ಪ್ರಾರಂಭವಾಗಿದ್ದು, 72ನೇ ವರ್ಷದ ‘ಕಾಂಚನೋತ್ಸವ 2026’ ಚಾಲನೆ ಪಡೆಯಿತು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ವೇದ ಬ್ರಹ್ಮ ನಾರಾಯಣ ಬಡಿಕಿಲ್ಲಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.
72ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನ ಮಹೋತ್ಸವ, ಸ್ಥಾಪಕ ಗುರು, ಸಂಗೀತ ರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂರವರ ಪುಣ್ಯ ಸ್ಮರಣೆಯ ಅಂಗವಾಗಿ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ಅವರು ತಬಲ ಹಾಗೂ ಕೆ.ಜೆ. ಋತ ವಯಲಿನ್ ನುಡಿಸಿದರು. ಸ್ವರ ಲಯ ಲಹರಿಯಲ್ಲಿ ಕೆ.ಜೆ. ಋತ, ಅಭಯ್ ಸಂಪಿಗೆತ್ತಾಯ, ಶ್ರೀಕೃಷ್ಣ ಭಟ್, ತೇಜಸ್ವಿ ಸಂಜಯ್, ವರ್ಚಸ್ ವಿ., ಅಪ್ರಮೇಯ ಹೊಸಹಳ್ಳಿ, ಸಂವಿತ್ ಆರ್.ಎಸ್., ಶಮಿತ್ ಕಲ್ಕೂರ್, ಸಾಕೇತ ರಾಮ್ ಫಣಿ ವೇದಾಲ ಅವರು ಸಂಗೀತ ವಾದ್ಯಗಳನ್ನು ನುಡಿಸಿ ಸಂಗೀತ ಪ್ರೇಮಿಗಳ ಮನಗೆದ್ದರು. ರಾತ್ರಿ ಕಾಂಚನ ಶ್ರೀ ಮ್ಯೂಸಿಕ್ ಅಕಾಡೆಮಿ ಅವರಿಂದ ಹಾಗೂ ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಿತು.
ಈ ಸಂಧರ್ಭದಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ. ರೋಹಿಣಿ ಸುಬ್ಬರತ್ನಂ, ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜಿನಿ ಮತ್ತು ಕಾಂಚನ ಶ್ರುತಿರಂಜಿನಿ, ಸುಮನಸರಂಜಿನಿ, ರಾಜಶೇಖರ್ ಹೀಲ್ಯಾರು, ಪ್ರದೀಪ್ ಕುಮಾರ್ ಕಲ್ಕೂರ, ಕೆ.ಯು. ಜಯಚಂದ್ರ ರಾವ್, ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶ್ರೀಧರ ಗೌಡ ನಡ್ಪ ಮೋಹನಚಂದ್ರ ಕಾಂಚನ, ಕೃಷ್ಣಪ್ರಸಾದ್, ಮುಕುಂದ ಗೌಡ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
